- ಇದು ಬಿ. ಎಸ್. ವೈ ಕುತಂತ್ರ ಎಂದು ಆರೋಪಿಸಿದ ಯತ್ನಾಳ್!
- ನಮ್ಮ ವಿಚಾರದಲ್ಲಿ ಮೂಗು ತೂರಿಸಬೇಡಿ: ಮೃತ್ಯುಂಜಯ ಶ್ರೀ
ಉಪಜಾತಿ ಬರೆಸಬೇಡಿ ಎಂದು ವೀರಶೈವ ಮಹಾಸಭಾ ಅಧಿವೇಶನದ ನಿರ್ಣಯಕ್ಕೆ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಲಿಂಗಾಯತ ಒಳಪಂಗಡದವರು, ಉಪಜಾತಿ ಕಾಲಂನಲ್ಲಿ ತಮ್ಮ ಉಪಜಾತಿ ನಮೂದಿಸಬಾರದು ಎಂಬ ವೀರಶೈವ ಮಹಾಸಭಾ ಅಧಿವೇಶನದ ನಿರ್ಣಯಕ್ಕೆ ಪಂಚಮಸಾಲಿಗಳು ಒಪ್ಪಲಿಕ್ಕೆ ಸಾಧ್ಯವಿಲ್ಲ ಎಂಬುದನ್ನು ಬಹಿರಂಗವಾಗಿ ಹೇಳಿದ್ದಾರೆ.
“ಲಿಂಗಾಯತ ಒಳಪಂಗಡದವರು, ಉಪಜಾತಿ ಕಾಲಂನಲ್ಲಿ ತಮ್ಮ ಉಪಜಾತಿ ನಮೂದಿಸಬಾರದು ಎಂದು ನಿರ್ಣಯ ಮಾಡಿರುವುದನ್ನು ನಾವು ಪಂಚಮಸಾಲಿಗಳು ಒಪ್ಪಲಿಕ್ಕೆ ಸಾಧ್ಯವಿಲ್ಲ. ವೀರಶೈವ ಮಹಾಸಭಾದವರು ಆಯಾ ಉಪಜಾತಿಗಳ ಸಾಮಾಜಿಕ ಸೌಲಭ್ಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಮೂಗು ತೂರಿಸಬಾರದು” ಎಂದು ಬಸವಜಯಮೃತ್ಯುಂಜಯ ಸ್ವಾಮೀಜಿ ಅವರು ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಲೋಕಾಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ವೀರಶೈವ ಮಹಾಸಭಾ ಅಧಿವೇಶನ ನಿರ್ಣಯ ಸರಿಯಿಲ್ಲ. ಈ ನಿರ್ಣಯವನ್ನು ಪುನರ್ ಪರಿಶೀಲಿಸಬೇಕೆಂಬ ಸಲಹೆಯನ್ನು ಮಹಾಸಭೆಗೆ ಕೊಡಲು ಇಚ್ಛಿಸುತ್ತೇನೆ” ಎಂದರು.
“ಜಾತಿಗಣತಿ ವೇಳೆ ಉಪಜಾತಿ ಬರೆಸಬೇಕೆಂದು ಈಗಾಗಲೇ ನಮ್ಮ ಸಮಾಜ ಬಾಂಧವರಿಗೆ ನಾವು ಕರೆ ಕೊಟ್ಟಿದ್ದೇವೆ. ಉಪಜಾತಿ ಕಾಲಂನಲ್ಲಿ ಪಂಚಮಸಾಲಿ ಅಂತಾನೆ ಬರೆಸಿ ಅಂತ ಹೇಳಿದ್ದೇವೆ. ಕಾರಣ ಅನೇಕ ಒಳಪಂಗಡದವರು ಈಗಾಗಲೇ ಮೀಸಲಾತಿ ಪಡೆದುಕೊಂಡಿದ್ದಾರೆ” ಎಂದು ಹೇಳೀದರು.
“ಉಳಿದವರು ಏನು ಬರೆಸುತ್ತಾರೋ ಬಿಡ್ತಾರೊ ಅವರಿಗೆ ಬಿಟ್ಟಿದ್ದು. ಆದರೆ ನಾವು ಮಾತ್ರ (ಪಂಚಮಸಾಲಿಗಳು) ನಮ್ಮ ಸಮಾಜದವರಿಗೆ ಪಂಚಮಸಾಲಿ ಅಂತಾನೆ ಬರೆಸಲು ಸಂದೇಶ ಕೊಟ್ಟಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಲಿಷ್ಠರೇ ಜಾತಿಗಣತಿಯನ್ನು ವಿರೋಧಿಸಿದರೆ ಬಾಯಿಲ್ಲದವರ ಪಾಡೇನು?
ಇದು ಬಿ. ಎಸ್. ವೈ ಕುತಂತ್ರ: ಯತ್ನಾಳ್!
ಉಪಜಾತಿ ಬರೆಸಬೇಡಿ ಎಂಬ ವೀರಶೈವ ಮಹಾಸಭಾ ಅಧಿವೇಶನದ ನಿರ್ಣಯಕ್ಕೆ ನನ್ನ ವಿರೋಧವಿದೆ. ಅಧಿವೇಶನದಲ್ಲಿ ಯಾರು ಇದ್ದರು? ಅದೇ ಬಿಎಸ್‌ವೈ! ಅಂದರೆ, ಬಿ-ಭಿಮಣ್ಣ ಖಂಡ್ರೆ, ಎಸ್-ಶಾಮನೂರು, ವೈ-ಯಡಿಯೂರಪ್ಪ. ಇವರೆಲ್ಲ ಎಲ್ಲಿ ಉಪಜಾತಿ ಬರೆಸಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ” ಎಂದು ಬಸನಗೌಡ ಪಾಟೀಲ ಆಗ್ರಹಿಸಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, “ವೀರಶೈವ ಮಹಾಸಭಾ ಅಧಿವೇಶನ ನಿರ್ಣಯ ಪಾಲಿಸಿದರೆ ನಮ್ಮ ಸಮುದಾಯಕ್ಕೆ ಯಾವುದೇ ಯೋಜನೆಗಳು ಸಿಗುವುದಿಲ್ಲ. ಕೆಲವೇ ದಿನಗಳಲ್ಲಿ ನಮ್ಮ ಸ್ವಾಮೀಜಿ ನೇತೃತ್ವದಲ್ಲಿ ಸಭೆ ಕರೆದು ನಾವೂ ಕೂಡ ನಿರ್ಣಯ ಮಂಡಿಸುತ್ತೇವೆ. ಹಿಂದೂ ಗಾಣಿಗ, ಹಿಂದೂ ಪಂಚಮಸಾಲಿ, ಹಿಂದೂ ಬಣಜಿಗ… ಹೀಗೆ ಸೇರಿಸಿದರೆ ನಮಗೂ ಲಾಭ ಸಿಗುತ್ತದೆ. ಇವರ ಮಾತು ಕೇಳಿಕೊಂಡು ಸುಮ್ಮನೇ ಕೂರಲ್ಲ” ಎಂದು ಎಚ್ಚರಿಸಿದರು.