ಆರಂಭದಲ್ಲಿ ಸಾವರ್ಕರ್ ವಿಷಯವನ್ನು ಆಧುನಿಕ ಭಾರತೀಯ ರಾಜಕೀಯ ಚಿಂತಕರ ಒಂದು ಭಾಗವಾಗಿ ಸೇರಿಸಲಾಗಿತ್ತು. ಇದೀಗ ಮಹಾತ್ಮಾ ಗಾಂಧಿ ಚಿಂತನೆ ತೆಗೆದು ಸಾವರ್ಕರ್ ಪಠ್ಯ ಆರಂಭಿಸಲಾಗಿದೆ ಎಂದು ಅಧ್ಯಾಪಕರು ವಿರೋಧ ವ್ಯಕ್ತಪಡಿಸಿದ್ದಾರೆ.
ದೆಹಲಿ ವಿಶ್ವವಿದ್ಯಾಲಯ ನಾಲ್ಕು ವರ್ಷಗಳ ಪದವಿ ತರಗತಿಗಳಿಗೆ ಪಠ್ಯಗಳನ್ನು ಆರಿಸುವಾಗ ಮಹಾತ್ಮಾ ಗಾಂಧಿ ಕುರಿತ ಪಠ್ಯಕ್ಕೆ ಹೆಚ್ಚು ಮಹತ್ವ ನೀಡದೆ, ವಿದ್ಯಾರ್ಥಿಗಳಿಗೆ ಸಾವರ್ಕರ್ ಕುರಿತ ಪೇಪರ್ ಓದಿಸಲು ಒತ್ತು ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ದೆಹಲಿ ವಿವಿ ಗಾಂಧಿವಾದವನ್ನು ಬದಿಗೆ ತಳ್ಳಿ ಸಾವರ್ಕರ್‌ವಾದವನ್ನು ಮುಂದಕ್ಕೆ ಇಡುವ ಆರೋಪ ಕೇಳಿಬಂದಿದೆ.
ದೆಹಲಿ ವಿಶ್ವವಿದ್ಯಾಲಯ ಇತ್ತೀಚೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಕಲಾ ಪದವಿ ತರಗತಿಯ ಪಠ್ಯಗಳನ್ನು ಪರಿಷ್ಕರಿಸಿದೆ. ಈ ಪರಿಷ್ಕರಣೆಯ ಸಂದರ್ಭದಲ್ಲಿ ರಾಜಕೀಯ ವಿಜ್ಞಾನ ಪಠ್ಯದಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಮೇಲೆ ವಿವರವಾದ ಭಾಗವನ್ನು ಸೇರಿಸಿ ವಿವಾದ ಸೃಷ್ಟಿಸಿದೆ. ರಾಜಕೀಯ ವಿಜ್ಞಾನದ ಮೇಜರ್ ಓದುವ ವಿದ್ಯಾರ್ಥಿಗಳಿಗೆ ಸಾವರ್ಕರ್‌ಗೆ ಸಂಬಂಧಿಸಿದ ಕೋರ್ಸ್ ಅನ್ನು ಮೊದಲ ಮೂರು ವರ್ಷಗಳ ಅಧ್ಯಯನದ ಆಯ್ಕೆಯ ಪಟ್ಟಿಯಲ್ಲಿ ಇಟ್ಟಿರುವುದಕ್ಕೆ ಅಧ್ಯಾಪಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಸಾವರ್ಕರ್ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ತುಂಬಿ, ಗಾಂಧಿ ಚಿಂತನೆಯನ್ನು ಬದಿಗೆ ಸರಿಸಲಾಗಿದೆ ಎಂದು ಶಿಕ್ಷಣ ತಜ್ಞರು ಆರೋಪಿಸಿದ್ದಾರೆ. ಸಾವರ್ಕರ್ ಪಠ್ಯವನ್ನು ಮೂರನೇ ವರ್ಷದ ಓದಿಗೆ ಸೇರಿಸುವ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಪಠ್ಯವನ್ನು ನಾಲ್ಕನೇ ವರ್ಷಕ್ಕೆ ತಳ್ಳಲಾಗಿದೆ. ಮೂರು ವರ್ಷಗಳ ಪದವಿ ಆರಿಸಿಕೊಳ್ಳುವ ವಿದ್ಯಾರ್ಥಿಗಳು ಆರನೇ ಸೆಮಿಸ್ಟರ್‌ನಲ್ಲಿರುವ ಮಹಾತ್ಮಾ ಗಾಂಧಿ ಕುರಿತ ಪಠ್ಯವನ್ನು ಓದುವ ಅಗತ್ಯವಿರುವುದಿಲ್ಲ! ಗಾಂಧಿ ಚಿಂತನೆಯನ್ನು ಅಲಕ್ಷಿಸಿ ಸಾವರ್ಕರ್ ಓದಿಗೆ ಮಹತ್ವ ನೀಡುವ ಇಂತಹ ಬದಲಾವಣೆ ತೀವ್ರ ಟೀಕೆಗೆ ಕಾರಣವಾಗಿದೆ.
ಆರಂಭದಲ್ಲಿ ಸಾವರ್ಕರ್ ವಿಷಯವನ್ನು ಆಧುನಿಕ ಭಾರತೀಯ ರಾಜಕೀಯ ಚಿಂತಕರಲ್ಲಿ ಒಂದು ಭಾಗವಾಗಿ ಸೇರಿಸಲಾಗಿತ್ತು. ಇದೀಗ ಮಹಾತ್ಮಾ ಗಾಂಧಿ ಅವರ ಕುರಿತ ಪೇಪರ್ ತೆಗೆದು ಸಾವರ್ಕರ್ ಪೇಪರ್ ಸೇರಿಸಿದ್ದಾರೆ ಎಂದು ಅಧ್ಯಾಪಕರು ವಿರೋಧ ವ್ಯಕ್ತಪಡಿಸಿದ್ದಾರೆ.
“ಆರಂಭದಲ್ಲಿ ನಾಲ್ಕನೇ ಸೆಮಿಸ್ಟರ್‌ನಲ್ಲಿ ಮಹಾತ್ಮಾ ಗಾಂಧಿ ಕುರಿತ ಓದು ಇತ್ತು. ಸೆಮಿಸ್ಟರ್ 6ರಲ್ಲಿ ಅಂಬೇಡ್ಕರ್ ಕುರಿತ ಓದು ಸೇರಿಸಲಾಗಿತ್ತು. ಇದೀಗ ಸಾವರ್ಕರ್ ಬಗ್ಗೆ ಓದು ಮುಂದಕ್ಕೆ ತರಲಾಗಿದೆ. ಸಾವರ್ಕರ್ ಪಠ್ಯ ಸೇರಿಸಿರುವ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ ಗಾಂಧಿ ಓದು ತೆಗೆದು ಸಾವರ್ಕರ್ ಪೇಪರ್ ಸೇರಿಸಿರುವುದಕ್ಕೆ ನಮ್ಮ ವಿರೋಧವಿದೆ. ಗಾಂಧಿ ಪೇಪರ್ ಅನ್ನು ಏಳನೇ ಸೆಮಿಸ್ಟರ್‌ಗೆ ತಳ್ಳಿದ್ದಾರೆ. ವಿದ್ಯಾರ್ಥಿಗಳ ಪಠ್ಯದಿಂದಲೇ ಗಾಂಧಿಯನ್ನು ಹೊರಗಿಡುವ ಪಿತೂರಿ ಕಾಣಿಸುತ್ತಿದೆ. ಮೂರು ವರ್ಷದ ಪದವಿ ಓದುವ ವಿದ್ಯಾರ್ಥಿಗಳಿಗೆ ಗಾಂಧಿ ಪೇಪರ್ ಅಧ್ಯಯನ ಮಾಡುವ ಅಗತ್ಯ ಬರುವುದಿಲ್ಲ” ಎಂದು ವಿಶ್ವವಿದ್ಯಾಲಯದ ಶೈಕ್ಷಣಿಕ ಆಯೋಗದ ಸದಸ್ಯರಾದ ಅಲೋಕ್ ಪಾಂಡೆ ಹೇಳಿದ್ದಾರೆ.
ಸ್ಥಾಯಿ ಸಮಿತಿಯ ಸದಸ್ಯರೂ ಆಗಿರುವ ಪಾಂಡೆ ಪ್ರಕಾರ, ಪ್ರಸ್ತಾಪ ಮುಂದಿಟ್ಟಾಗ ಗಾಂಧಿ ಪೇಪರ್ ನಾಲ್ಕನೇ ಸೆಮಿಸ್ಟರ್, ಸಾವರ್ಕರ್ 6 ಮತ್ತು ಅಂಬೇಡ್ಕರ್ ಓದನ್ನು 7ನೇ ಸೆಮಿಸ್ಟರ್‌ನಲ್ಲಿ ಇಡಬೇಕು ಎಂದು ನಿರ್ಧಾರವಾಗಿತ್ತು. ಆದರೆ ವಯಸ್ಸಿಗೆ ಅನುಸಾರ ಬದಲಾವಣೆ ತರಲಾಗಿದೆ ಎಂದು ವಿವಿ ಸಮಜಾಯಿಷಿ ನೀಡಿದೆ.
ಈ ಸುದ್ದಿ ಓದಿದ್ದೀರಾ?: ‘ಈ ದಿನ’ ಸಂಪಾದಕೀಯ | ಒಡಿಶಾ ಎದುರಿಸುತ್ತಿರುವ ಮಾಸಾಶನ ಸಮಸ್ಯೆ ಕರ್ನಾಟಕವನ್ನು ಕಾಡದಿರಲಿ
ಕಾರ್ಯಕಾರಿ ಆಯೋಗದ ಮಾಜಿ ಸದಸ್ಯ ರಾಜೇಶ್ ಝಾ ಅವರು ಈ ಬದಲಾವಣೆಯನ್ನು ಟೀಕಿಸಿದ್ದು, ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆಯನ್ನು ಮೂಡಿಸಲು ಗಾಂಧಿ ಪೇಪರ್ ಅನ್ನು ಆರಂಭಿಕ ಸೆಮಿಸ್ಟರ್‌ನಲ್ಲಿ ಇಡುವುದು ಅಗತ್ಯ ಎಂದು ಹೇಳಿದ್ದಾರೆ.
“ಗಾಂಧಿ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಎರಡು ಪ್ರಮುಖ ವಿಷಯಗಳನ್ನು ಓದಲಿದ್ದಾರೆ. ಪಠ್ಯಗಳನ್ನು ಓದುವ ಕಲಿಕೆ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತದೆ. ಜತೆಗೆ ಓದಿನಲ್ಲಿರುವ ಕಾಲ್ಪನಿಕ, ಚರ್ಚಾತ್ಮಕ ರಚನೆಯನ್ನು ತಿಳಿದುಕೊಂಡು ವಿಸ್ತೃತವಾದ ಬೌದ್ಧಿಕ ಮತ್ತು ಸಾಮಾಜಿಕ- ಐತಿಹಾಸಿಕ ಸಂದರ್ಭದಲ್ಲಿಟ್ಟು ನೋಡುವ ಕೌಶಲ್ಯವನ್ನು ಬೆಳೆಸಿಕೊಳ್ಳಲು ಸಾಧ್ಯವಾಗಲಿದೆ. ಗಾಂಧಿವಾದಿ ಚಿಂತನೆಗಳು ನಮ್ಮ ಕಾಲಕ್ಕೆ ಪ್ರಸ್ತುತವೆನಿಸಿವೆ” ಎಂದು ರಾಜೇಶ್ ಹೇಳಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ಪಠ್ಯಗಳಲ್ಲಿ ಇನ್ನೂ ಅನೇಕ ಬದಲಾವಣೆಗಳನ್ನು ಮಾಡಲಾಗಿದ್ದು, ‘ಸಾರೇ ಜಹಾಂಸೆ ಅಚ್ಛಾ’ ಕವಿತೆ ಬರೆದ ಕವಿ ಇಕ್ಬಾಲ್ ಕುರಿತ ಅಧ್ಯಾಯವನ್ನು ಕೈಬಿಡಲಾಗಿದೆ. ಇಕ್ಬಾಲ್ ಅವರನ್ನು ಪಾಕಿಸ್ತಾನದ ರಾಷ್ಟ್ರಕವಿ ಎಂದು ಮನ್ನಣೆ ನೀಡಲಾಗಿರುವುದು ಇಲ್ಲಿ ನೆನಪಿಸಿಕೊಳ್ಳಬಹುದು.