‘ಈ ದಿನ’ ಸಂಪಾದಕೀಯ | ಒಡಿಶಾ ಎದುರಿಸುತ್ತಿರುವ ಮಾಸಾಶನ ಸಮಸ್ಯೆ ಕರ್ನಾಟಕವನ್ನು ಕಾಡದಿರಲಿ

Date:

ತಾನು ಚುನಾವಣೆ ವೇಳೆ ನೀಡಿದ ‘ಗ್ಯಾರಂಟಿ’ಗಳನ್ನು ಈಡೇರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗುತ್ತಿರುವ ಈ ಹೊತ್ತಿನಲ್ಲಿ, ಇಂತಹ ಪ್ರಾಥಮಿಕ ಸಂಗತಿಗಳನ್ನು ಸಮಗ್ರವಾಗಿ ಪರಿಶೀಲಿಸಿ ಸರಿಪಡಿಸಬೇಕಾದ್ದು ಅನಿವಾರ್ಯ. ಇಲ್ಲದಿದ್ದಲ್ಲಿ, ಅಸಹಾಯಕರು ಪರದಾಡಬೇಕಾದೀತು

ಎಪ್ಪತ್ತು ವರ್ಷ ವಯಸ್ಸಿನ ಹೆಳವ ಮಹಿಳೆಯೊಬ್ಬರು ಮಾಸಾಶನ ಪಡೆಯಲು ಬರಿಗಾಲಿನಲ್ಲಿ ಹಲವು ಕಿಲೋಮೀಟರು ಸಾಗುವ ಸಂಕಟಮಯ ವಿಡಿಯೊವೊಂದು ಒಡಿಶಾದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಇದಾದ ಕೆಲವೇ ದಿನಗಳಲ್ಲಿ ಅಲ್ಲಿನ ಸರ್ಕಾರ, ಮಾಸಾಶನದ ಹಣವನ್ನು ಆಯಾ ಗ್ರಾಮ ಪಂಚಾಯತ್ ಕಚೇರಿಗಳಲ್ಲೇ ನಗದು ರೂಪದಲ್ಲಿ ವಿತರಿಸುವ ನಿರ್ಧಾರ ಕೈಗೊಂಡಿದೆ. ‘ಡಿಜಿಟಲ್ ಯುಗ’ ಎಂದೇ ಕರೆಯಲ್ಪಡುವ ಈ ಕಾಲಮಾನದಲ್ಲಿ ಇಂಥದ್ದೊಂದು ನಿರ್ಧಾರ ಮಾಡಿದ ಒಡಿಶಾ ಸರ್ಕಾರ ಸಹಜವಾಗಿಯೇ ಟೀಕೆಗೆ ತುತ್ತಾಗಿದೆ. ಆದರೆ, ಕೇವಲ ಮಾತಿನಲ್ಲಿ ಡಿಜಿಟಲೀಕರಣದ ತುತ್ತೂರಿ ಊದುತ್ತ, ಅದರಿಂದ ಸಮಸ್ಯೆಗೆ ಸಿಲುಕಬಹುದಾದ ಜನಸಾಮಾನ್ಯರ ಅಳಲು ಆಲಿಸಲು ಮರೆತವರಿಗೆ ಈ ಬೆಳವಣಿಗೆ ಸೂಕ್ತ ಗುಣಪಾಠವೇ ಸರಿ.

ಮಾಸಾಶನವನ್ನು ನಗದು ರೂಪದಲ್ಲಿ ಕೊಟ್ಟರೆ ಮಧ್ಯವರ್ತಿಗಳ ಕಾಟ ಶುರುವಾಗುತ್ತದೆ. ಅಲ್ಲದೆ, ಅನಿಯಂತ್ರಿತ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ ಎಂಬುದು ವಾಸ್ತವ. ಇದೇ ಸಂಗತಿಯನ್ನು ಮುಂದು ಮಾಡಿ, ಒಕ್ಕೂಟ ಸರ್ಕಾರದ ಸಚಿವ ಧರ್ಮೇಂದ್ರ ಪ್ರಧಾನ್, ಒಡಿಶಾ ಸರ್ಕಾರದ ಕ್ರಮವನ್ನು ‘ಭ್ರಷ್ಟಾಚಾರ ಮುಕ್ತ ಆಡಳಿತದಿಂದ ಹಿಂದಕ್ಕಿಟ್ಟ ಹೆಜ್ಜೆ’ ಎಂದು ಟೀಕಿಸಿದ್ದಾರೆ. ಆದರೆ, ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಸರ್ಕಾರ ಈ ವಿಷಯದಲ್ಲಿ ಎದುರಿಸುತ್ತಿರುವ ಸಮಸ್ಯೆ ಬೇರೆಯೇ ಇದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಈ ಸಂಪಾದಕೀಯ ಓದಿದ್ದೀರಾ?: ಬೆಂಗಳೂರು: ಅಂಡರ್‌ಪಾಸ್, ಫ್ಲೈಓವರ್, ರಸ್ತೆ ಗುಂಡಿ; ಹೆಜ್ಜೆ ಹೆಜ್ಜೆಗೂ ಕಾಡುವ ಸಾವು!

ಅಸಲಿಗೆ, ಒಡಿಶಾದ 6,798 ಗ್ರಾಮ ಪಂಚಾಯತ್‌ಗಳ ಪೈಕಿ, ಬರೋಬ್ಬರಿ ಅರ್ಧದಷ್ಟು ಪಂಚಾಯತ್‌ ವ್ಯಾಪ್ತಿಯಲ್ಲಿ ಬ್ಯಾಂಕುಗಳೇ ಇಲ್ಲ. ಹೀಗಾಗಿ, ಮಾಸಾಶನದ ಹಣವನ್ನು ಬ್ಯಾಂಕುಗಳಿಂದ ಪಡೆಯಬೇಕೆಂದರೆ ಜನ ಕಾಲು ಸವೆಸಲೇಬೇಕಾದ ಅನಿವಾರ್ಯತೆ ಇದೆ. ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಿಸಲು ಸಮಯ ತಗುಲುವುದರಿಂದ, ಅದುವರೆಗೂ ಮಾಸಾಶನದಿಂದ ಯಾರೂ ವಂಚಿತರಾಗಬಾರದು ಎಂಬುದು ಒಡಿಶಾ ಸರ್ಕಾರದ ಕಾಳಜಿ ಎಂಬಂತೆ ಬಿಂಬಿಸಲಾಗಿದೆ. ಸದ್ಯಕ್ಕೆ ‘ಮಧು ಬಾಬು ಮಾಸಾಶನ ಯೋಜನೆ’ಗೆ ಮಾತ್ರ ಅನ್ವಯವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ. ಒಕ್ಕೂಟ ಸರ್ಕಾರದ ವತಿಯಿಂದ ‘ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (ಎನ್‌ಎಸ್‌ಎಪಿ)’ ಯೋಜನೆಯಡಿ ಕೊಡಮಾಡುತ್ತಿರುವ ಮಾಸಾಶನ ಮಾತ್ರ ಎಂದಿನಂತೆ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಆಗುತ್ತಿದೆ. ಇದರರ್ಥ – ಬ್ಯಾಂಕ್ ಖಾತೆಗಳೇ ಇಲ್ಲದ ಒಡಿಶಾದ ಅರ್ಧ ಭಾಗಕ್ಕೆ ಒಕ್ಕೂಟ ಸರ್ಕಾರದ ಮಾಸಾಶನ ಯೋಜನೆ ತಲುಪುತ್ತಿಲ್ಲ. ಇದೇ ಕಾರಣಕ್ಕೆ ಸಚಿವ ಧರ್ಮೇಂದ್ರ ಪ್ರಧಾನ್ ಒಡಿಶಾ ಸರ್ಕಾರದ ಮೇಲೆ ಗರಂ ಆಗಿರುವುದು ಮೇಲ್ನೋಟಕ್ಕೇ ಕಾಣಿಸುತ್ತಿದೆ. ಆದರೆ, ಇದನ್ನು ನೇರವಾಗಿ ಹೇಳಿಕೊಂಡಿಲ್ಲವಷ್ಟೆ.

ಒಕ್ಕೂಟ ಸರ್ಕಾರದ ಸಚಿವರಿಗಾಗಲೀ ಅಥವಾ ಒಡಿಶಾ ಸರ್ಕಾರಕ್ಕಾಗಲೀ, ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಇಚ್ಛೆ ಇದ್ದಂತಿಲ್ಲ. ತನ್ನ ಯೋಜನೆಯ ಅಸಲಿಯತ್ತು ಎಲ್ಲರಿಗೂ ಗೊತ್ತಾಗಿಬಿಡುತ್ತದೆ ಎಂಬ ಕಾರಣಕ್ಕೆ ಒಕ್ಕೂಟ ಸರ್ಕಾರವು ಡಿಜಿಟಲೀಕರಣದ (ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ) ಪರ ನಿಂತರೆ; ಗ್ರಾಮೀಣ ಪ್ರದೇಶದಲ್ಲಿನ ಬ್ಯಾಂಕಿಂಗ್ ಸೇವಾ ಕೊರತೆಯನ್ನು ಮರೆಮಾಚುವ ಕ್ರಮವಾಗಿ ನವೀನ್ ಪಟ್ನಾಯಕ್ ಸರ್ಕಾರ ನಗದು ಮಾಸಾಶನ ವಿತರಣೆಗೆ ಮುಂದಾಗಿದೆ.

ಈ ಸಂಪಾದಕೀಯ ಓದಿದ್ದೀರಾ?: ₹2000 ನೋಟು ರದ್ದತಿಯು ಮತ್ತೊಂದು ದುರಂತ ಪ್ರಹಸನಕ್ಕೆ ನಾಂದಿ ಆಗದಿರಲಿ

ಕರ್ನಾಟಕದ ವಿಷಯಕ್ಕೆ ಬಂದರೆ, ಮಾಸಾಶನ ವಿತರಣೆಯಲ್ಲಿ ಬ್ಯಾಂಕಿಂಗ್ ಸೇವೆಯ ಸಮಸ್ಯೆಗಿಂತ, ನಕಲಿ ಫಲಾನುಭವಿಗಳ ಕಾಟ ತಾರಕಕ್ಕೇರಿದೆ. ಕಂದಾಯ ಇಲಾಖೆ ಅಂಕಿ-ಅಂಶಗಳ ಪ್ರಕಾರ, 2019ರಿಂದ 2022ರ ಆಗಸ್ಟ್‌ವರೆಗೆ 7.07 ಲಕ್ಷ ನಕಲಿ ಫಲಾನುಭವಿಗಳ ಅರ್ಜಿ ತಿರಸ್ಕರಿಸಲಾಗಿದೆ. ಸಾಮಾಜಿಕ ನೆರವಿನ ಯೋಜನೆಗಳು ಹಳ್ಳ ಹಿಡಿಯಲು ಇಷ್ಟು ಸಾಕಲ್ಲವೇ? ತಾನು ಚುನಾವಣೆ ವೇಳೆ ನೀಡಿದ ‘ಗ್ಯಾರಂಟಿ’ಗಳನ್ನು ಈಡೇರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗುತ್ತಿರುವ ಈ ಹೊತ್ತಿನಲ್ಲಿ, ಇಂತಹ ಪ್ರಾಥಮಿಕ ಸಂಗತಿಗಳನ್ನು ಸಮಗ್ರವಾಗಿ ಪರಿಶೀಲಿಸಿ ಸರಿಪಡಿಸಬೇಕಾದ್ದು ಅನಿವಾರ್ಯ. ಇಲ್ಲದಿದ್ದಲ್ಲಿ, ನಿಜವಾಗಿಯೂ ಅವಶ್ಯಕತೆ ಇದ್ದ ಅಸಹಾಯಕರು ಪರದಾಡಬೇಕಾದ ಸನ್ನಿವೇಶ ಕರ್ನಾಟಕದಲ್ಲೂ ನಿರ್ಮಾಣವಾಗುವುದು ನಿಶ್ಚಿತ.

ಚಿತ್ರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ದೇವೇಗೌಡರ ದೈತ್ಯಶಕ್ತಿ, ಮೋದಿಯ ಮೋಡಿ ಮತ್ತು ದಂಗಾದ ಜನ

ಮೇಲ್ನೋಟಕ್ಕಿದು ಕೊಡು-ಕೊಳ್ಳುವ ಮೈತ್ರಿಯಂತೆ ಕಂಡರೂ, ಗೆದ್ದರೆ ಮಾತ್ರ ಇಬ್ಬರಿಗೂ ಲಾಭವಿದೆ. ಸೋತರೆ,...

ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ

ಹತ್ತು ವರ್ಷಗಳ ಕಾಲ ದೇಶವನ್ನಾಳಿದ ಬಿಜೆಪಿ, ತನ್ನ ಆಡಳಿತವನ್ನು, ಅಭಿವೃದ್ಧಿಯನ್ನು ದೇಶದ...

ಈ ದಿನ ಸಂಪಾದಕೀಯ | ಬೆಲೆ ಏರಿಕೆ, ನಿರುದ್ಯೋಗವೇ ಚುನಾವಣೆ ವಿಷಯ; ಎಚ್ಚೆತ್ತ ಮತದಾರರು

ಅಚ್ಛೇ ದಿನಗಳು ಬರಲಿಲ್ಲ ಎಂಬುದು ಜನರ ಅಭಿಪ್ರಾಯಗಳಿಂದ ಸ್ಪಷ್ಟವಾಗುತ್ತದೆ. ದೇಶಭಕ್ತಿಯ ಹೆಸರಲ್ಲಿ...