ಸ್ವಾಮೀಜಿಗಳ ಪರಿಷದ್ ಮೂಲಕ ಒಂದಾಗಿರುವ ಸ್ವಾಮೀಜಿಗಳು ಸೇರಿ 'ಭಾರತ ವಿಶ್ವಗುರು'ವಿನ ಪ್ರಚಾರದ ನೆಪದಲ್ಲಿ ಮಾಡಲು ಹೊರಟಿರುವುದೇನು? ಧಾರ್ಮಿಕ ಸುಧಾರಣೆಗಾಗಿ ಕಟ್ಟಲಾಗುವ ಸಂಘಟನೆ ಮುಂದೆ ತಲುಪುವುದು ಎಲ್ಲಿಗೆ? ಹಿಂದೆಯೂ ಹೀಗೆಯೇ ಆಗಿತ್ತು, ಅದೇನಾಯಿತು...?
ಕಳೆದ ಸೋಮವಾರ(ಜೂನ್ 16) ಬೆಂಗಳೂರು ನಗರದ ಕೋಣನಕುಂಟೆ ಬಳಿಯಿರುವ ಆರ್ಟ್ ಕನ್ವೆನ್ಶನ್ ಸೆಂಟರ್‌ನಲ್ಲಿ ಸ್ವಾಮೀಜಿಗಳ ಪರಿಷದ್ ಎಂದು ಕರೆಯಬಹುದಾದ ಭಾರತೀಯ ಸಂತ ಮಹಾ ಪರಿಷದ್(ಬಿಎಸ್‌ಎಂಪಿ) ಉದ್ಘಾಟನಾ ಸಮಾರಂಭ ನಡೆಯಿತು. ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಬಿಎಸ್‌ಎಂಪಿಯ ಉದ್ಘಾಟನೆ ನೆರವೇರಿಸಿದರು. ಈ ಸಮಾರಂಭದಲ್ಲಿ ಮೇಲ್ಜಾತಿಯಿಂದ ಹಿಡಿದು ಕೆಳಜಾತಿಗಳವರೆಗಿನ ಹಲವು ಮಠಗಳ ಸ್ವಾಮೀಜಿಗಳು ಭಾಗಿಯಾಗಿದ್ದರು.
ಇವಿಷ್ಟು ಘಟನೆ ನಡುವೆಯೇ ಕಂಚಿ ಕಾಮಕೋಟಿ ಸರ್ವಜ್ಞಪೀಠದ 70ನೇ ಪೀಠಾಧಿಪತಿ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮಿಗಳು ಜೂನ್ 12ರಿಂದ ಜೂನ್ 17ರವರೆಗೆ ಬೆಂಗಳೂರಿನಲ್ಲಿ ವಿಜಯ ಯಾತ್ರೆ ನಡೆಸಿದ್ದಾರೆ. ಬಳಿಕ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ವಿಜಯೇಂದ್ರ ಸರಸ್ವತಿ ಅವರು ಭಾರತವನ್ನು ವಿಶ್ವಗುರು ಮಾಡುವ ಪ್ರಸ್ತಾಪವನ್ನೂ ಮುಂದಿಟ್ಟಿದ್ದಾರೆ.
ಇದನ್ನು ಓದಿದ್ದೀರಾ? ರಾಮ ಮಂದಿರ ಉದ್ಘಾಟನೆಯಿಂದ ಕರಾವಳಿಯ ಶೂದ್ರ ಸ್ವಾಮೀಜಿಗಳು ಹೊರಕ್ಕೆ!
ಇವಿಷ್ಟು ಬೆಳವಣಿಗೆಗಳು ಸ್ವಾಮೀಜಿಗಳು ಸಂಸ್ಕೃತಿ, ಧರ್ಮ ಉಳಿಸಬೇಕು ಎಂಬ ನೆಪದಲ್ಲಿ ನಡೆಸುವ ಒಂದು ಕಾರ್ಯಕ್ರಮದಂತೆ ಕಂಡರೂ ಇದರ ಆಳ-ಅಗಲ ಅಳೆಯಲಾಗದು, ತರ್ಕಕ್ಕೆ ನಿಲುಕದ್ದು. ನೋಡುಗರಿಗೆ, ಓದುಗರಿಗೆ ಇದೊಂದು ಧಾರ್ಮಿಕ ಕಾರ್ಯಕ್ರಮವೇ ಸರಿ. ಆದರೆ ಕಣ್ಣೋಟ, ಮುಂದೆ ಏನಾಗಬಹುದು? ಎಂಬ ಚಿಂತನೆಗಳನ್ನು ನಾವು ಗಮನಿಸದಿರಲಾಗದು.
ಈ ಎಲ್ಲಾ ಬೆಳವಣಿಗೆಯ ನಡುವೆ ನಮ್ಮ ನೆನಪು ಜಾರುವುದು ಬಾಬರಿ ಮಸೀದಿ ಧ್ವಂಸ ಪ್ರಕರಣದತ್ತ. ಅದಕ್ಕೂ ಮುನ್ನ ಸ್ವಾಮೀಜಿಗಳು ಸೇರಿ ನಡೆಸಿದ ಸಭೆ, ಸಮಾರಂಭಗಳತ್ತ, ಹಲವು ನಿಗೂಢ ಸಭೆಗಳತ್ತ. ಬಾಬರಿ ಮಸೀದಿ ಧ್ವಂಸಕ್ಕೂ ಮುನ್ನವೇ ಸ್ವಾಮೀಜಿಗಳು, ಸಂಘಪರಿವಾರದ ಸಂಘಟನೆಗಳ ಮುಖಂಡರುಗಳು ಸಂಸ್ಕೃತಿ, ಧರ್ಮ ರಕ್ಷಣೆ ಹೆಸರಲ್ಲಿ ಅಲ್ಲಲ್ಲಿ ಸಭೆಗಳನ್ನು ನಡೆಸಿದ್ದರು. ಕೊನೆಗೆ ಈ ಸಭೆಯ ಪರಿಣಾಮವು ಮಸೀದಿ ಧ್ವಂಸದ ಹಂತಕ್ಕೆ ಬಂದು ನಿಂತಿತ್ತು.
ಬಾಬರಿ ಮಸೀದಿ ಧ್ವಂಸ ಮತ್ತು ಸ್ವಾಮೀಜಿಗಳು
ಮಸೀದಿ ಧ್ವಂಸ ವೇಳೆ ಉಡುಪಿ ಪೇಜಾವರ ಶ್ರೀಗಳೂ ಅಲ್ಲಿದ್ದರು. ಧ್ವಂಸಗೊಂಡ ನಂತರ ಆ ಸ್ಥಳದಲ್ಲಿ ಮೊದಲ ಪೂಜೆಯನ್ನು ನಡೆಸಿದವರು ಪೇಜಾವರ ಶ್ರೀಗಳು. ಅದಾದ ಬಳಿಕ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯಾಗಿ ನೇಮಕಗೊಂಡರು. ಹಾಗೆಯೇ ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಕೂಡಾ ಈ ಧ್ವಂಸ ಪ್ರಕರಣದಲ್ಲಿ ಭಾಗಿದಾರರು. ಧ್ವಂಸದಲ್ಲಿ ಭಾಗಿಯಾಗಿರುವವರ ವಿರುದ್ಧದ ಪ್ರಕರಣಗಳು ಹಿಂಪಡೆಯಬೇಕು, ಅವರಿಗೆ ಹುತಾತ್ಮ ಸ್ಥಾನಮಾನವನ್ನು ನೀಡಬೇಕು ಎಂದು ಕೋರಿದವರು.
ರಾಮಭದ್ರಾಚಾರ್ಯ ಧ್ವಂಸದಲ್ಲಿ ನೇರವಾಗಿ ಭಾಗಿಯಾಗದಿದ್ದರೂ, ರಾಮಜನ್ಮಭೂಮಿಯಲ್ಲಿ ರಾಮಮಂದಿರವೇ ನಿರ್ಮಾಣವಾಗಬೇಕು ಎಂದು ಬಹಿರಂಗ ಹೇಳಿಕೆಗಳನ್ನು ನೀಡಿ ಜನರನ್ನು ಎತ್ತಿಕಟ್ಟಿದವರು. ಜೊತೆಗೆ ಋಷಿಕುಮಾರ ಸ್ವಾಮೀಜಿ ಶ್ರೀರಂಗಪಟ್ಟಣದಲ್ಲಿ ಬಾಬರಿ ಮಸೀದಿಯ ಮಾದರಿಯಲ್ಲಿ ಮಸೀದಿಯನ್ನು ಕೆಡವಲು ಕರೆ ನೀಡಿ ಪ್ರಚೋದನಕಾರಿ ಹೇಳಿಕೆ ನೀಡಿದವರು. ಸಮಾಜವನ್ನು ಕಟ್ಟುವ, ಶಾಂತಿ ಮೂಡಿಸುವ ಹೊಣೆ ಹೊತ್ತವರೇ ಸಮಾಜ ಒಡೆಯಲು ಪ್ರೇರೇಪಿಸಿರುವುದನ್ನು ನಿರ್ಲಕ್ಷಿಸಲಾಗದು.
ಇದನ್ನು ಓದಿದ್ದೀರಾ? ಉಡುಪಿ | ಪೇಜಾವರ ಶ್ರೀಗಳ ಹೇಳಿಕೆಯನ್ನು ತಿರುಚಲಾಗಿದೆ: ವಿಹಿಂಪ ಆರೋಪ
ಇವಿಷ್ಟು ವಿವರಗಳ ಬಳಿಕ ಮತ್ತೆ ಸದ್ಯ ಆರಂಭವಾದ ಭಾರತೀಯ ಮಹಾ ಪರಿಷದ್ ಕಡೆ ಗಮನ ಹರಿಸೋಣ. ಇದೀಗ ಸ್ವಾಮೀಜಿಗಳು ಸೇರಿ ಮಾಡಲು ಹೊರಟಿರುವುದೇನು? ಕರಾವಳಿ ಭಾಗದಲ್ಲಿ ಭಜನೆ, ಸತ್ಯನಾರಾಯಣ ಪೂಜೆ ನೆಪದಲ್ಲಿ ಜನರನ್ನು ಸೇರಿಸಿ ಧಾರ್ಮಿಕವಾಗಿ ಎತ್ತಿಕಟ್ಟುವ ಪ್ರಯತ್ನವನ್ನು ಯಶಸ್ವಿಯಾಗಿ ಸಂಘಪರಿವಾರ ನಡೆಸಿದೆ. ಆ ದಾರಿಗೆ ಈ ಸ್ವಾಮೀಜಿಗಳ ಪರಿಷತ್ ನಿಧಾನವಾಗಿ ಇಳಿಯಬಹುದೇ? ಹಿಂದೂ ಸಮಾಜವೇ ಶಿಥಿಲಾವಸ್ಥೆಗೆ ತಲುಪುವ ಅಪಾಯವಿದೆ ಎಂದು ಹೇಳುವ ಮೂಲಕ ಆದಿಚುಂಚನಗಿರಿ ಮಠದ ಸ್ವಾಮೀಜಿ ಯಾವ ಸಮುದಾಯವನ್ನು ಎತ್ತಿಕಟ್ಟಲು ಅಣಿಯಾಗಿದ್ದಾರೆ? ಭಾರತೀಯ ಸಂತ ಮಹಾ ಪರಿಷದ್ ಎಂದು ಹೆಸರೇ ಹೇಳುವಂತೆ ‘ಸಂತರು’ ಎಂಬ ಹಣೆಪಟ್ಟಿ ಖಾವಿದಾರಿಗಳಿಗಷ್ಟೇ ಮುಡಿಪಾಯಿತೆ? -ಇಂತಹ ಪ್ರಶ್ನೆಗಳು ಹುಟ್ಟುತ್ತವೆ, ಆದರೆ ಉತ್ತರ?
ಈ ಸಂತ ಮಹಾ ಪರಿಷದ್ ಅನ್ನು ಬದಿಗಿಟ್ಟು ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮಿಗಳ ‘ವಿಶ್ವಗುರು’ ಹೇಳಿಕೆಯತ್ತ ಚಿತ್ತ ನೆಟ್ಟರೆ, ರಾಜಕೀಯದ ವಾಸನೆ ರಾಚುತ್ತದೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ವಾಮಿಗಳು, “ಧಾರ್ಮಿಕ ಸುಧಾರಣೆಗಳ ಅಗತ್ಯವಿದ್ದರೆ ಅದನ್ನು ಧಾರ್ಮಿಕ ಮುಖ್ಯಸ್ಥರು ಮಾಡಿಕೊಳ್ಳುತ್ತಾರೆ. ಅದನ್ನು ಬಿಟ್ಟು ರಾಜಕಾರಣಿಗಳಿಗೆ ಅದರಲ್ಲಿ ಯಾವುದೇ ಪಾತ್ರವಿಲ್ಲ” ಎಂದಿದ್ದಾರೆ. ಹೌದು ಶಂಕರ ವಿಜಯೇಂದ್ರ ಸ್ವಾಮಿಗಳು ಹೇಳುವುದನ್ನು ಒಪ್ಪತಕ್ಕದ್ದು. ಆದರೆ ಸ್ವಾಮಿಗಳು ಹೇಳಿರುವ ‘ವಿಶ್ವಗುರು’ ಯಾರು? ಇಲ್ಲಿ ಯಾವುದೇ ರಾಜಕೀಯದ ಹೊಲಸು ವಾಸನೆ ಇಲ್ಲ ಅನಿಸುತ್ತದೆಯೆ?
ವಿಶ್ವಗುರು ಎಂದಾಗ ಸ್ವಾಭಾವಿಕವಾಗಿಯೇ ನಮ್ಮ ಕಣ್ಣು ಯಾರತ್ತ ತಿರುಗುತ್ತದೆ? ಅರ್ಹರೋ ಅನರ್ಹರೋ ಎಂಬ ವಿಚಾರ ಪಕ್ಕಕ್ಕಿಡಿ. ಆದರೆ ತಮ್ಮನ್ನು ತಾವು ವಿಶ್ವಗುರು ಎಂದು ಕರೆಸಿಕೊಳ್ಳುವವರು ಯಾರೆಂಬುದು ಜಗಜ್ಜಾಹೀರು. ಈಗ ಸ್ವಾಮೀಜಿಗಳು ಸೇರಿ ಮಾಡಲು ಹೊರಟಿರುವುದೇನು? ಧಾರ್ಮಿಕ ಸುಧಾರಣೆಗಾಗಿ ಕಟ್ಟಲಾಗುವ ಸಂಘಟನೆ ಮುಂದೆ ತಲುಪುವುದು ಎಲ್ಲಿಗೆ ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟುತ್ತವೆ. ಈ ನಡುವೆ ‘ಭಾರತ ವಿಶ್ವಗುರು’ ಎಂಬುದನ್ನು ಪ್ರಚಾರ ಮಾಡಲು ಹೊರಟವರು ಮುಂದೊಂದು ದಿನ ‘ಪ್ರಧಾನಿ ಮೋದಿಯೇ ವಿಶ್ವಗುರು’ ಎಂದು ಸಾರಿದರೆ ಆಶ್ಚರ್ಯವೇನಿಲ್ಲ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.
ಸಂಘದ ಕೈಗೊಂಬೆಯಾಗಿ ಬಿಜೆಪಿ ಪರ ಪ್ರಚಾರ ಮಾಡಲು ಮುಂದಿನ ಚುನಾವಣೆ ತಯಾರಿ ಈಗಿನಿಂದಲೇ ನಡೆದಿದೆ,,, ಕಳೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕಸರತ್ತು ಮಾಡಿಯೂ ಸ್ವಂತ ಬಲದಿಂದ ಸರಕಾರ ಮಾಡುವಷ್ಟು ಸೀಟು ಗೆಲ್ಲಲಾಗದೇ,, ಅದಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷಗಳ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ,, ಸಂತರನ್ನು ಸ್ವಾಮಿಗಳನ್ನು ದಾಳವಾಗಿ ಬಳಸಿಕೊಳ್ಳುವ ತಂತ್ರಗಾರಿಕೆ ಸಹ ಇರಬಹುದು, ಅವೈದಿಕ ಸ್ವಾಮಿಗಳು ವೈದಿಕರ ನೇತೃತ್ವದಲ್ಲಿ ಕೊಚ್ಚಿಹೋಗುತ್ತಿರುವುದು ಆ ಸಮುದಾಯಗಳಿಗೆ ಮರಣಶಾಸನ, ಕೆಲವು ಮಿಲಿನೀಯರ್ ಸ್ವಾಮಿಗಳು ಅವರದೇ ಆದ ಕೆಲವು ಕಾರಣಗಳಿಗೆ ಅವರು ಹೇಳಿದಂತೆ ಕೇಳಲೇಬೇಕು