ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನದ ಕಲಾಪಗಳಲ್ಲಿ ಪ್ರತಿಭಟನೆ, ಧರಣಿ, ಸಭಾತ್ಯಾಗ ಎನ್ನುವುದು ಸಂವಿಧಾನವೇ ಕಲ್ಪಿಸಿರುವ ಅವಕಾಶ. ವಿರೋಧ ಪಕ್ಷ ಸಭಾತ್ಯಾಗ ಮಾಡಿದಾಗ, ಆಡಳಿತಾರೂಢ ಬಿಜೆಪಿ ನಾಯಕರು ಅದನ್ನು ಸಂವಿಧಾನಕ್ಕೆ ಮಾಡಿದ ಅಪಚಾರ, ಅಪಾಯಕಾರಿ ನಡೆ ಎಂದು ಬಣ್ಣಿಸಿದರು. ಬಿಜೆಪಿ ವಿರೋಧ ಪಕ್ಷವಾಗಿದ್ದಾಗ ಸಭಾತ್ಯಾಗ ಮಾಡಿರಲಿಲ್ಲವೇ? ಅದು ಮರೆತರೆ, ದೇಶದ ಜನರೂ ಮರೆಯಬೇಕೇ?
ಜೂನ್ 3ರಂದು ಸಂಸತ್ ಕೆಲ ಮಹತ್ವದ ಘಟನಾವಳಿಗಳಿಗೆ ಕಾರಣವಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ಮಾತನಾಡಲು ಎದ್ದು ನಿಂತಾಗ, ವಿರೋಧ ಪಕ್ಷದವರು ಗದ್ದಲವೆಬ್ಬಿಸಿದರು.
ಹಾಗೆಯೇ ಪ್ರಧಾನಿ ಮೋದಿಯವರು ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದಾಗ, ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು, ನಡುವೆ ಮಾತನಾಡಲು ಎದ್ದು ನಿಂತರು. ಆದರೆ ಖರ್ಗೆಯವರು ಮಾತನಾಡಲು ಸಭಾಪತಿಯವರು ಅವಕಾಶ ಕೊಡಲಿಲ್ಲ. ಇದನ್ನು ಖಂಡಿಸಿ ಖರ್ಗೆಯವರು ಸದನದಿಂದ ಎದ್ದು ಹೊರನಡೆದರು. ಅವರ ಹಿಂದೆ ಪ್ರತಿಪಕ್ಷಗಳ ಸದಸ್ಯರು ಹೆಜ್ಜೆ ಹಾಕಿ, ಸಭಾತ್ಯಾಗ ಮಾಡಿದರು.
ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಈ ನಡೆಯನ್ನು ಭಾರತೀಯ ಜನತಾ ಪಕ್ಷದ ನಾಯಕರು, ‘ಸಂವಿಧಾನಕ್ಕೆ ಅಗೌರವ ತರುವಂಥದ್ದು, ಅತ್ಯಂತ ಅಪಾಯಕಾರಿ ನಡೆ’ ಎಂದು ಬಣ್ಣಿಸಿದರು.
ಅಷ್ಟೇ ಅಲ್ಲ, ರಾಜ್ಯಸಭೆಯ ಸಭಾಪತಿ ಮತ್ತು ಉಪ ರಾಷ್ಟ್ರಪತಿಯೂ ಆಗಿರುವ ಜಗದೀಪ್ ಧನಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ‘ನಾನು ಅವರ ವರ್ತನೆಯನ್ನು ಖಂಡಿಸುತ್ತೇನೆ. ಇದನ್ನು ಕಂಡ ದೇಶದ ಜನತೆ ಬೆಚ್ಚಿ ಬೀಳುತ್ತಾರೆ. ಅವರು ತೆಗೆದುಕೊಂಡ ಪ್ರಮಾಣವಚನಕ್ಕೂ, ಇಲ್ಲಿನ ವರ್ತನೆಗೂ ಅಜಗಜಾಂತರ ವ್ಯತ್ಯಾಸವಿದೆ. ಇದು ಸಂವಿಧಾನಕ್ಕೆ ಮಾಡುವ ದೊಡ್ಡ ಅಪಚಾರ’ ಎಂದರು.
ಇದು ಸಹಜವಾಗಿಯೇ ಮೋದಿಯನ್ನು ಓಲೈಸುವ ಗೋದಿ ಮೀಡಿಯಾಗಳಲ್ಲಿ ಬಹಳ ದೊಡ್ಡ ಸುದ್ದಿಯಾಯಿತು. ಚರ್ಚೆಯಾಯಿತು. ತೀವ್ರ ಟೀಕೆಗೆ ಗುರಿಯಾಯಿತು. ಕೊನೆಗೆ ವಿರೋಧ ಪಕ್ಷದ ನಡೆ ಅಪಾಯಕಾರಿ ನಡೆ ಎಂಬ ತೀರ್ಮಾನಕ್ಕೆ ಬರಲಾಯಿತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನದ ಕಲಾಪಗಳಲ್ಲಿ ಪ್ರತಿಭಟನೆ, ಧರಣಿ, ಸಭಾತ್ಯಾಗ ಎನ್ನುವುದು ಸಂವಿಧಾನವೇ ಕಲ್ಪಿಸಿರುವ ಅವಕಾಶ. ಆದರೆ, ಆಡಳಿತಾರೂಢ ಬಿಜೆಪಿ ನಾಯಕರು ಅದನ್ನು ಸಂವಿಧಾನಕ್ಕೆ ಎಸಗಿದ ಅಪಚಾರ, ಅಪಾಯಕಾರಿ ನಡೆ ಎಂದು ಬಣ್ಣಿಸಿದರು. ಅದನ್ನೇ ದೇಶದ ಜನತೆಯ ಮುಂದಿಟ್ಟು ವಿರೋಧ ಪಕ್ಷದ ನಾಯಕರನ್ನು ಖಳನಾಯಕರನ್ನಾಗಿ ಚಿತ್ರಿಸಿದರು.
ಹಾಗಾದರೆ, ಭಾರತೀಯ ಜನತಾ ಪಕ್ಷ ವಿರೋಧ ಪಕ್ಷವಾಗಿದ್ದಾಗ ಸಂಸತ್ತಿನಲ್ಲಿ ನಡೆದುಕೊಂಡ ರೀತಿಯನ್ನು ಮರೆತಿದೆಯೇ? ಬಿಜೆಪಿ ಪ್ರತಿಭಟನೆ ಹಾಗೂ ಸಭಾತ್ಯಾಗವನ್ನು ಮಾಡಿಲ್ಲವೇ? ಬಿಜೆಪಿ ಅಧಿಕಾರಕ್ಕೇರಿ ಮರೆತರೆ, ದೇಶದ ಜನರೂ ಮರೆಯಬೇಕೇ?
ಬಿಜೆಪಿ ವಿರೋಧ ಪಕ್ಷವಾಗಿದ್ದ ದಿನಗಳಲ್ಲಿ ಸದನವನ್ನು ಮುಂದೂಡಲು, ಸ್ಥಗಿತಗೊಳಿಸಲು ಕಾರಣವಾದ ನಿದರ್ಶನಗಳ ಪಟ್ಟಿಯನ್ನು ಒಮ್ಮೆ ನೋಡಿ…
2005ರಲ್ಲಿ
ಎಲ್.ಕೆ. ಅಡ್ವಾಣಿಯವರು ವಿರೋಧ ಪಕ್ಷದ ನಾಯಕರಾಗಿದ್ದರು. ಆಗ 11 ವಿರೋಧ ಪಕ್ಷದ ಸಂಸದರಲ್ಲಿ 10 ಮಂದಿ ಬಿಜೆಪಿಯವರು ‘ಪ್ರಶ್ನೆಗೆ ನಗದು’ ವಿಚಾರಕ್ಕೆ ಸಂಬಂಧಿಸಿದ ಆರೋಪಕ್ಕೆ ಒಳಗಾಗಿದ್ದರು. ಸದನದಿಂದ ಅವರನ್ನು ಹೊರಹಾಕಲಾಗಿತ್ತು.
ಆಗ ರಾಷ್ಟ್ರೀಯ ಜನತಾದಳದ ನಾಯಕರೊಂದಿಗೆ ಐದು ಗಂಟೆ ಚರ್ಚಿಸಿದ ಅಡ್ವಾಣಿಯವರು, ‘ಇದನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು. ಉಚ್ಚಾಟನೆಯ ಕ್ರಮವು ಅಪಾಯಕಾರಿ ನಡೆ. ರಾಜಕೀಯ ಪ್ರತಿಸ್ಪರ್ಧಿಗಳ ಸಣ್ಣ ತಪ್ಪನ್ನು ಕೂಡ ದೊಡ್ಡದು ಮಾಡಿ ಶಾಸನಸಭೆಯಿಂದ ಹೊರಹಾಕಲು ನೋಡುತ್ತವೆ’ ಎಂಬ ತೀರ್ಮಾನಕ್ಕೆ ಬಂದಿದ್ದರು. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸೇರಿ ಸಭಾತ್ಯಾಗ ಮಾಡಿದ್ದವು.
2006ರಲ್ಲಿ
ಆಗ ರಾಜನಾಥ್ ಸಿಂಗ್ ವಿರೋಧ ಪಕ್ಷದ ನಾಯಕರಾಗಿದ್ದರು. ಅವರನ್ನು ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಬಂಧಿಸಲಾಗಿತ್ತು. ಅದನ್ನು ವಿರೋಧಿಸಿದ ಬಿಜೆಪಿ ಸಂಸದರು ಸದನದ ಅಂಗಳಕ್ಕಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಸದನವನ್ನು ಮುಂದೂಡಲು ಉಪಸಭಾಪತಿ ನಿರಾಕರಿಸಿದಾಗ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ್ದರು.
2012ರಲ್ಲಿ
ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಚರ್ಚೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ಬಿಜೆಪಿ ನಾಯಕರು ಮುಂಗಾರು ಅಧಿವೇಶನದಲ್ಲಿ ಪದೇ ಪದೆ ಅಡ್ಡಿಪಡಿಸಿದರು. ಈ ವಿಷಯದ ಬಗ್ಗೆ ಯುಪಿಎ ಸರ್ಕಾರ ಚರ್ಚೆಗೆ ಸಿದ್ಧ ಎಂದು ಹೇಳಿದಾಗಲೂ ಆರು ದಿನಗಳ ಕಾಲ ಸಂಸತ್ತನ್ನು ಸ್ಥಗಿತಗೊಳಿಸಿದರು. ಕಲ್ಲಿದ್ದಲು ಹಂಚಿಕೆ ಕುರಿತು ಬಿಜೆಪಿಯ ಮುಖ್ಯಮಂತ್ರಿಯೇ ಪ್ರಧಾನಮಂತ್ರಿಗೆ ಬರೆದ ಶಿಫಾರಸು ಪತ್ರವನ್ನು ಮರೆಮಾಚಿದರು.
ಇದನ್ನು ಓದಿದ್ದೀರಾ?: ಸತ್ಯ, ಶಾಂತಿಗೆ ಹೆಸರಾದ ದೇಶಕ್ಕೆ ಎಂಥ ಪ್ರಧಾನಿ, ನಾಚಿಕೆಗೇಡು; ಮೋದಿ ವಿರುದ್ಧ ನಟ ಕಿಶೋರ್ ಕಿಡಿ
ಆನಂತರ, ಕಾಂಗ್ರೆಸ್ ಪಕ್ಷ ಮುಂಗಾರು ಅಧಿವೇಶನವನ್ನು ಹಾಳುಮಾಡಿತು. ಸಂಸತ್ ಕಾರ್ಯನಿರ್ವಹಿಸದಂತೆ ಸ್ಥಗಿತಗೊಳಿಸುವುದು ಕೂಡ ಸರ್ಕಾರದ ಭಾಗವಾಗಿದೆ ಎಂದು ಬಿಜೆಪಿಯ ಸುಷ್ಮಾ ಸ್ವರಾಜ್ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನೇ ದೂಷಿಸಿದರು.
ನಂತರ ಪ್ರಧಾನಿ ಮನಮೋಹನ್ ಸಿಂಗ್, ಸಂಸತ್ ಕಾರ್ಯನಿರ್ವಹಿಸದಂತೆ ಸ್ಥಗಿತಗೊಳಿಸುವುದು ಪ್ರಜಾಪ್ರಭುತ್ವದ ನಿರಾಕರಣೆ ಎಂದು ವಿರೋಧ ಪಕ್ಷಗಳ ಕುರಿತು ಹೇಳಿದರು.
2013ರಲ್ಲಿ
ಸದನದ ನಿಯಮಗಳನ್ನು ಪದೇ ಪದೆ ಉಲ್ಲಂಘಿಸಿದ ಮತ್ತು ಸದನದ ಕಲಾಪಕ್ಕೆ ಅಡ್ಡಿಪಡಿಸಿದ 20 ಬಿಜೆಪಿ ಸಂಸದರನ್ನು ಹೌಸ್ ಬುಲೆಟಿನ್ ಹೆಸರಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿ ಸಭಾತ್ಯಾಗ ಮಾಡಿತ್ತು.
‘ಕಳೆದ ಮೂರು ದಿನಗಳಲ್ಲಿ ಸ್ವೀಕಾರಾರ್ಹವಲ್ಲದ ರೀತಿಯಲ್ಲಿ ಬಿಜೆಪಿ ಮತ್ತು ಟಿಡಿಪಿ ಸದಸ್ಯರನ್ನು ಬುಲೆಟಿನ್ ಹೆಸರಿಸಿದೆ. ಕಾಂಗ್ರೆಸ್ ಸದಸ್ಯರು ಕೂಡ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ, ಆದರೆ ಅವರ ಹೆಸರನ್ನು ಉಲ್ಲೇಖಿಸಿಲ್ಲ’ ಎಂದು ರಾಜ್ಯಸಭೆಯ ಅಂದಿನ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಹೇಳಿದ್ದರು.
ಇದೆಲ್ಲವೂ ಸಂಸತ್ ಕಡತಗಳಲ್ಲಿ ದಾಖಲಾಗಿದೆ. ಅಧಿಕಾರಕ್ಕೇರಿದಾಕ್ಷಣ, ಎಲ್ಲವನ್ನು ಮರೆತು ಮಹಾನ್ ಸಾಚಾಗಳು ಎಂದು ಪೋಸು ಕೊಡುತ್ತಿರುವ ಬಿಜೆಪಿ ನಾಯಕರಿಗೆ, ಅವರ ಪುಸಲಾವಣೆಗೆ ನಿಂತಿರುವ ಗೋದಿ ಮೀಡಿಯಾದ ಪತ್ರಕರ್ತರಿಗೆ ತಿಳಿಹೇಳಬೇಕಾದ ತುರ್ತಿದೆ.
ಕೃಪೆ: ದಿ ವೈರ್

ಲೇಖಕ, ಪತ್ರಕರ್ತ