ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಕೇಂದ್ರ ಸರ್ಕಾರ ವಿರುದ್ಧ ರೈತರು ಸಿಡಿದೆದ್ದಿದ್ದಾರೆ. ಫೆಬ್ರವರಿ 13ರಿಂದ ದೆಹಲಿ ಚಲೋಗೆ ಕರೆ ಕೊಟ್ಟಿದ್ದು, ಪಂಜಾಬ್ ರೈತರು ದೆಹಲಿಯತ್ತ ಟ್ರ್ಯಾಕ್ಟರ್‌ಗಳಲ್ಲಿ ಪ್ರತಿಭಟನಾ ರ್‍ಯಾಲಿ ಹೊರಟಿದ್ದಾರೆ. ರೈತರ ಹೋರಾಟವನ್ನು ಹತ್ತಿಕ್ಕಲು ಹರಿಯಾಣ ಪೊಲೀಸರು ಪಂಜಾಬ್-ಹರಿಯಣ ಗಡಿ ಅಂಬಾಲಾ ಬಳಿಯ ಹೆದ್ದಾರಿಯಲ್ಲಿ ಸಿಮೆಂಟ್ ಬ್ಲಾಕ್‌ಗಳನ್ನು ಹಾಕಿದ್ದು, ಅವುಗಳನ್ನು ರೈತರು ಘಗ್ಗರ್ ನದಿಗೆ ಉರಿಳಿಸಿದ್ದಾರೆ. ದೆಹಲಿಯತ್ತ ಹೊರಟಿದ್ದಾರೆ.
ಫೆಬವರಿ 13ರ ಮಂಗಳವಾರ ಮುಂಜಾನೆ ಪಂಜಾಬ್ ರೈತರು ದೆಹಲಿಯತ್ತ ಹೊರಟ್ಟಿದ್ದರು. ಅವರನ್ನು ತಡೆಯಲು ಹರಿಯಾಣದ ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಅಂಬಾಲಾ ಬಳಿ ದೊಡ್ಡ ದೊಡ್ಡ ಸಿಮೆಂಟ್ ಬ್ಲಾಕ್‌ಗಳನ್ನು ಹಾಕಿದೆ. ಅವುಗಳನ್ನು ರೈತರೊಂದಿಗೆ ಸೇರಿದ ಸ್ಥಳೀಯ ಗ್ರಾಮಸ್ಥರು ನದಿಗೆ ಎದೆಸಿದ್ದಾರೆ. ಹರಿಯಾಣವನ್ನು ದಾಟಿ, ದೆಹಲಿ ಗಡಿಗೆ ಬರುವುದು ರೈತರಿಗೆ ಸವಾಲಾಗಿದೆ. ಆದರೂ, 2020ರಲ್ಲಿ ಸರ್ಕಾರದ ದಮನಕ್ಕೆ ಬಗ್ಗದೆ ದೆಹಲಿ ತಲುಪಿದ್ದ ರೈತರು, ಅದೇ ಉತ್ಸಾಹ ಮತ್ತು ಹೋರಾಟದ ಕಿಚ್ಚಿನೊಂದಿಗೆ ಮತ್ತೆ ದೆಹಲಿಯತ್ತ ಹೊರಟಿದ್ದಾರೆ.
ಇನ್ನು, ದೆಹಲಿ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿ ಭಾನುವಾರದಿಂದಲೇ ದೆಹಲಿ ಪೊಲೀಸರು 144 ಸೆಕ್ಷನ್ ಜಾರಿ ಮಾಡಿದ್ದಾರೆ. ದೆಹಲಿಯ ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಕೆಲವು ಗಡಿ ಪ್ರದೇಶಗಳಲ್ಲಿ ರೈತರ ಟ್ರ್ಯಾಕ್ಟರ್‌ಗಳನ್ನು ತಡೆಯಲು ರಸ್ತೆಗಳ ಮೇಲೆ ದೊಡ್ಡ ಮೊಳೆಗಳನ್ನು ಹಾಕಿದ್ದಾರೆ.
#WATCH | Delhi: Security heightened at Ghazipur border ahead of farmers’ ‘Delhi Chalo’ march today; traffic snarl also witnessed. pic.twitter.com/sSfTN7Zsbp
— ANI (@ANI) February 13, 2024
2020ರಲ್ಲಿ ನಡೆದ ಒಂದು ವರ್ಷಗಳ ನಿರಂತರ ಹೋರಾಟಕ್ಕೆ ಮಣಿಸಿದ್ದ ಕೇಂದ್ರ ಸರ್ಕಾರ, ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಂಡಿತ್ತು. ಜೊತೆಗೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಜಾರಿ ಮತ್ತು ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ, ಮೂರು ವರ್ಷ ಕಳೆದರೂ, ಭರವಸೆಗಳು ಭರವಸೆಯಾಗಿಯೇ ಉಳಿದಿವೆ.
ತನ್ನ ಭರವಸೆಗಳನ್ನು ಮರೆತಿರುವ ಸರ್ಕಾರಕ್ಕೆ ಆ ಭರವಸೆಗಳನ್ನು ನೆನಪಿಸಲು ಪಂಜಾಬ್ ಮತ್ತು ಹರಿಯಾಣ ರೈತರು ದೆಹಲಿ ಚಲೋಗೆ ಕರೆಕೊಟ್ಟಿದ್ದಾರೆ. ಸುಮಾರು 200 ರೈತ ಸಂಘಟನೆಗಳು ಒಗ್ಗೂಡಿ ದೆಹಲಿಯತ್ತ ಹೊರಟಿದ್ದಾರೆ.