ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರ ಪರ ಬಿಜೆಪಿ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ನಡೆದ ತಕ್ಷಣ ಹೆಚ್ಚಿನ ಆಸಕ್ತಿ ತೋರಿಸಿ ಚುನಾವಣೆ ನೀತಿ ಸಂಹಿತೆಯನ್ನು ಲೆಕ್ಕಿಸದೆ ಪ್ರತಿಭಟನೆ ಮಾಡಿದ್ದ ಬಿಜೆಪಿ ನಾಯಕರು ನೊಂದ ಮಹಿಳೆಯರ ಪರ ನ್ಯಾಯಕ್ಕಾಗಿ ಜೆಡಿಎಸ್ ವಿರುದ್ದ ಯಾವಾಗ ಪ್ರತಿಭಟನೆ ಮಾಡುತ್ತಾರೆ” ಎಂದು ಪ್ರಶ್ನಿಸಿದರು.
“ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದ್ದು, ಕಾನೂನು ಪ್ರಕಾರ ತನಿಖೆ ನಡೆಯಲಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೇಂದ್ರ ಸರ್ಕಾರವೇ ಪ್ರಜ್ವಲ್ ಅವರನ್ನು ವಿದೇಶಕ್ಕೆ ಕಳಿಸಿದೆ ಎನ್ನುವ ಮಾತುಗಳಿವೆ. ಈ ಬಗ್ಗೆ ಮೋದಿ ಸೇರಿದಂತೆ ಬಿಜೆಪಿ ನಾಯಕರು ಉತ್ತರಿಸಲಿ” ಎಂದು ಒತ್ತಾಯಿಸಿದರು.
“ಮಾಜಿ ಪ್ರಧಾನಿ ಸ್ಪರ್ಧಿಸಿದ್ದ ಹಾಸನದಂತಹ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣಗೆ ಟಿಕೇಟ್ ನೀಡಬಾರದು. ಅವರ ನಡುವಳಿಕೆ ಸರಿ ಇಲ. ಹಲವಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅಲ್ಲಿನ ಮಾಜಿ ಶಾಸಕರೊಬ್ಬರು ಅಮಿತ್ ಶಾ, ನಡ್ಡಾ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಅವರಿಗೆ ಪತ್ರ ಬರೆದಿದ್ದರು. ಟಿವಿ ಮಾಧ್ಯಮದ ಮುಂದೆ ಮಾತನಾಡುವಾಗಲೂ ಕೂಡಾ ಕುಮಾರಸ್ವಾಮಿ ಪ್ರಜ್ವಲ್ ಗೆ ಟಿಕೇಟ್ ನೀಡುವ ವಿಚಾರದಲ್ಲಿ ವಿರೋಧವಿರುವ ಬಗ್ಗೆ ಒಪ್ಪಿಕೊಂಡಿದ್ದರು. ಆದರೂ ಕೂಡಾ ದೇವೆಗೌಡ ಹಾಗೂ ಇಡೀ ಕುಟುಂಬ ಹೋಗಿ ಟಿಕೇಟ್ ಪಡೆದುಕೊಂಡು ಬಂದಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಾಟ್ಸ್ಯಾಪ್ ಯೂನಿವರ್ಸಿಟಿಯ ಭಕ್ತರೂ ಮತ್ತು ಮಹಾಪ್ರಭು ಮೋದಿಯೂ
“ಪ್ರಜ್ವಲ್ ಅವರ ಲೈಂಗಿಕ ಕಿರುಕುಳದಿಂದ ಸಾವಿರಾರು ಮಹಿಳೆಯರು ದೌರ್ಜನಕ್ಕೊಳಗಾಗಿದ್ದಾರೆ ಎಂಬ ಮಾಹಿತಿ ಇದೆ. ಅವರೆಲ್ಲರೂ ಹಿಂದೂ ಮಹಿಳೆಯರೇ ಆಗಿದ್ದಾರೆ. ಅವರಿಗೆ ನ್ಯಾಯ ಕೊಡಿಸಬೇಕೆಂದು ಬಿಜೆಪಿಯವರಿಗೆ ಅನಿಸುತ್ತಿಲ್ಲವೇ? ಬಿಜೆಪಿ ಅವರಿಂದ ಹುಬ್ಬಳಿಗೊಂದು ನ್ಯಾಯ, ಹಾಸನಕ್ಕೊಂದು ನ್ಯಾಯನಾ? ಎಂದು ಕುಟುಕಿದರು.