ರಾಯಕೀಯ ಯುವ ನಾಯಕನೊಬ್ಬರ ಕಾಮಕೃತ್ಯಗಳ ಪೆನ್‌ಡ್ರೈನ್ ಹಾಸನ ಜಿಲ್ಲೆಯಲ್ಲಿ ಅಂತಕ ಸೃಷ್ಟಿಸಿದೆ. ಈ ಅಶ್ಲೀಲ ಕೃತ್ಯಗಳಲ್ಲಿ ಸುದೀರ್ಘ ರಾಜಕೀಯ ಜೀವನ ನಡೆಸಿದ ಕುಟುಂಬವೊಂದರ ಕುಡಿ ಭಾಗಿಯಾಗಿದ್ದಾನೆ ಎಂದು ಹಾಸನದ ‘ಸತ್ಯದ ಹೊನಲು’ ಪತ್ರಿಕೆ ವರದಿ ಮಾಡಿದೆ. ಆತ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದಾನೆ ಎಂದೂ ಹೇಳಲಾಗಿದೆ. ಪೆನ್‌ಡ್ರೈವ್‌ನಲ್ಲಿದ್ದ ಅಶ್ಲೀಲ ವಿಡಿಯೋಗಳು ವಾಟ್ಸಾಪ್‌ನಲ್ಲಿಯೂ ಹರಿದಾಡುತ್ತಿದ್ದು, ಆತನ ಕಾಮವಾಂಚೆಗೆ ಬಲಿಯಾದ ನಾಲ್ವರು ಹೆಣ್ಣು ಮಕ್ಕಳು ಗುರುವಾರ ಆತ್ಮಹತ್ಯೆಗೂ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಯುವ ವಿಕೃತ ಕಾಮುಕ ನೂರಾರು ಹೆಣ್ಣು ಮಕ್ಕಳನ್ನು ಆಮಿಷವೊಡ್ಡಿ, ಬೆದರಿಸಿ ಅವರ ಮೇಲೆರಗಿ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ. ಕೆಲ ವರ್ಷಗಳಿಂದಲೇ ಆತ ತನ್ನ ಕಾಮವಾಂಚೆಯನ್ನು ಹಲವು ಮಹಿಳೆಯರ ಮೇಲೆ ಹೇರಿದ್ದಾನೆ. ತನ್ನ ಕೃತ್ಯಗಳನ್ನು ತಾನೇ ವಿಡಿಯೋ ಮಾಡಿಟ್ಟುಕೊಂಡಿದ್ದಾನೆ. ವಿಕೃತ ಕಾಮುಕನ ಕೃತ್ಯಗಳು ಬಯಲಾದರೂ ಜಿಲ್ಲೆಯವರೇ ಆದ ಮಾಜಿ ಪ್ರಧಾನಿ ದೇವೇಗೌಡರಾಗಲೀ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಾಗಲೀ, ಹೃದಯವಂತ ಡಾಕ್ಟರ್ ಎನಿಸಿಕೊಂಡ ವೈದ್ಯ ಮಂಜುನಾಥ್ ಆಗಲೀ ಬಾಯಿ ಬಿಟ್ಟಿಲ್ಲ. ಕೃತ್ಯವನ್ನು ಖಂಡಿಸಿಲ್ಲ. ತನಿಖೆಗೆ ಆಗ್ರಹಿಸಿಲ್ಲ. ಇದೆಲ್ಲವೂ ಅವರಿಗೆ ಕೆಲ ವರ್ಷಗಳ ಹಿಂದೆಯೇ ತಿಳಿದಿತ್ತು. ಆದರೂ, ಇವರೆಲ್ಲರೂ ಮೌನವಾಗಿದ್ದಾರೆ ಎಂಬ ಆರೋಪಗಳೂ ಇವೆ.
ಅಲ್ಲದೆ, ಕಾಮುಕನ ಹಿನ್ನೆಲೆಯೂ ದೊಡ್ಡಗೌಡರ ಕುಟುಂಬದೊಂದಿಗೆ ತಳಕು ಹಾಕಿಕೊಂಡಿದೆ. ಆತನಿಗೆ ದೊಡ್ಡಗೌಡರ ಕುಟುಂಬದ ನೇರ ನಂಟಿದೆ ಎಂದೂ ಹೇಳಲಾಗುತ್ತಿದೆ. ಅಂತಹ ವ್ಯಕ್ತಿಯನ್ನು ಈ ಕುಟುಂಬ ಹೇಗೆ ತನ್ನ ಸಮೀಪದಲ್ಲೇ ಇಟ್ಟುಕೊಂಡಿದೆ ಎಂಬ ಆಕ್ರೋಶದ ಪ್ರಶ್ನೆ ವ್ಯಕ್ತವಾಗುತ್ತಿದೆ.
ಹಲವಾರು ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಪ್ರಕರಣವನ್ನು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಪ್ರತಿಭಟನೆಗಳನ್ನು ನಡೆಸಿದ್ದಾರೆ. ಅಪರಾಧಿ ಕಾಮುಕನಿಗೆ ಶಿಕ್ಷೆಯಾಗಬೇಕೆಂಂದು ಒತ್ತಾಯಿಸಿದ್ದಾರೆ.
ವಿಡಿಯೋದಲ್ಲಿರುವ ಆ ಯುವನಾಯಕ ಹಾಸನ ಲೋಕಸಭೆಯ ಅಭ್ಯರ್ಥಿಯೂ ಆಗಿದ್ದಾನೆ ಎನ್ನಲಾಗಿದೆ. ಆತನಿಗೆ ‘ಬೇಟಿ ಬಚಾವೋ – ಬೇಟಿ ಪಡಾವೋ’ ಎಂದಿದ್ದ ಪ್ರಧಾನಿ ಮೋದಿ ಅವರ ಬಿಜೆಪಿ ಕೂಡ ಬೆಂಬಲಿಸಿದೆ ಎಂದು ಹೇಳಲಾಗಿದೆ. ಈ ವಿಕೃತ ಕಾಮಿಯನ್ನು ಸೋಲಿಸಬೇಕೆಂದು ಹಾಸನದ ಜನರು ನಿರ್ಧರಿಸಿದ್ದಾರೆ.
ಆದರೆ, ಇಂತಹ ಕೃತ್ಯವನ್ನು ಹಾಸನ ರಾಜಕೀಯಕ್ಕೆ ಮಾತ್ರವೇ ಸೀಮಿತಗೊಳಿಸಿ ನೋಡಲು ಸಾಧ್ಯವೇ? ಆತನ ಕೃತ್ಯಗಳು ಗೊತ್ತಿದ್ದೂ ಮೌನವಾಗಿದ್ದ, ಅತನ ಕೃತ್ಯಗಳನ್ನು ತಡೆಯದೆ, ಕೈಕಟ್ಟಿಕೊಂಡು ಕುಳಿತಿದ್ದ, ಆತನ ಕೃತ್ಯಗಳು ಜಗಜ್ಜಾಹೀರಾದ ಮೇಲೂ ಬಾಯಿ ಬಿಡದ ಆ ಕುಟುಂಬವೂ ಇದಕ್ಕೆ ನೇರ ಹೊಣೆಯಲ್ಲವೇ. ಕೃತ್ಯಗಳು ಬಯಲಾದ ಮೇಲೂ ಆತನಿಗೆ ನೀಡಲಾದ ಟಿಕೆಟ್‌ಅನ್ನು ರದ್ದು ಪಡಿಸದ, ರದ್ದು ಪಡಿಸುವಂತೆ ಒತ್ತಡ ಹಾಕದ ಬಿಜೆಪಿಯೂ ನೇರ ಹೊಣೆಯಲ್ಲವೇ? ಅಭ್ಯರ್ಥಿಯೊಬ್ಬನ ಮೇಲೆ ಮಹಿಳಾ ದೌರ್ಜನ್ಯದ ವಿಕೃತ ಪ್ರಕರಣ ಬಯಲಾದ ಮೇಲೂ ಆತನ ಸ್ಪರ್ಧೆಯನ್ನು ರದ್ದು ಮಾಡದೆ ಚುನಾವಣಾ ಆಯೋಗ ಸುಮ್ಮನಿರುವುದೇ ಎಂಬ ಪ್ರಶ್ನೆ ರಾಜ್ಯದ ಪ್ರತಿಯೊಬ್ಬ ಪ್ರಜೆಯಲ್ಲಿಯೂ ವ್ಯಕ್ತವಾಗಬೇಕಲ್ಲವೇ?
ಹೆಣ್ಣು ಮಕ್ಕಳ ಮೇಲಾದ ದೌರ್ಜನ್ಯಗಳ ವಿರುದ್ಧ, ವಿಕೃತ ಕಾಮುಕನ ಕೃತ್ಯಗಳ ವಿರುದ್ಧ ಮಾತನಾಡದ, ಖಂಡಿಸದ ಕುಮಾರಸ್ವಾಮಿ, ವೈದ್ಯ ಮಂಜುನಾಥ್‌ರನ್ನು ಸಂಸತ್‌ಗೆ ಕಳಿಸಿದರೆ ರಾಜ್ಯದ ಘನತೆ ಉಳಿಯುವುದೇ? ಈ ಇಬ್ಬರನ್ನೂ ಸೋಲಿಸಿ, ಹೆಣ್ಣು ಮಕ್ಕಳ ಮಾನ ಉಳಿಸುವ ಜವಾಬ್ದಾರಿ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತದಾರರ ಮೇಲಿದೆ.
ಅದೇ ರೀತಿ, ಓರ್ವ ಹೆಣ್ಣು ಮಗಳ ಮೇಲಾದ ಕೃತ್ಯಕ್ಕೆ ಮರುಗುವ ಕನ್ನಡ ನಾಡು, ನೂರಾರು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ಸಿಡಿದೇಳಬೇಕು. ರಾಜ್ಯದ ಎಲ್ಲ ಜವಾಬ್ದಾರಿಯುತ ಮತದಾರರು, ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ವಿಕೃತ ಕಾಮಿಯ ವಿರುದ್ಧ ಗಟ್ಟಿ ದನಿ ಎತ್ತಬೇಕು.
ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಮತ ಚಲಾಯಿಸುವ ಜವಾಬ್ದಾರಿ ರಾಜ್ಯದ ಎಲ್ಲ ಮತದಾರರ ಮೇಲಿದೆ. ವಿಕೃತ ಕಾಮಿಯನ್ನು ಅಭ್ಯರ್ಥಿಯನ್ನಾಗಿಸಿ, ಆತನಿಗೆ ಬೆಂಬಲ ನೀಡುತ್ತಿರುವ ಬಿಜೆಪಿ ಮತ್ತು ಬಿಜೆಪಿ ಅಭ್ಯರ್ಥಿಗಳನ್ನೂ ಹಿಮ್ಮೆಟ್ಟುವ ಹೊಣೆ ರಾಜ್ಯದ ಪ್ರತಿಯೊಬ್ಬ ಮತದಾರರದ್ದಾಗಿದೆ. ಕಾಮುಕರನ್ನು ಬೆಂಬಲಿಸುತ್ತಿರುವ ಹಾಗೂ ಕಾಮುಕನ ಬಗ್ಗೆ ತುಟಿಬಿಚ್ಚದ ಜೆಡಿಎಸ್‌ಅನ್ನು ಸೋಲಿಸಿ, ಮಹಿಳೆಯರು ನಿರ್ಭೀತಿಯಲ್ಲಿ ಬದುಕುವ ವಾತಾವರಣವನ್ನು ಸೃಷ್ಟಿಸುವ ಜವಬ್ದಾರಿ ರಾಜ್ಯದ ಜನರದ್ದು…. ಮತದಾನಕ್ಕೂ ಮುನ್ನ ಒಮ್ಮೆ ಯೋಚಿಸಿ, ಮತ ಚಲಾಯಿಸಿ…