ಸಣ್ಣ ಪ್ರಮಾಣದಲ್ಲಿ ಸಾಲ ಪಡೆದವರಿಗೆ ಕಿರುಕುಳ ನೀಡುವುದನ್ನು ತಪ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಸುಗ್ರೀವಾಜ್ಞೆ 2025 (ಮೈಕ್ರೋ ಫೈನಾನ್ಸ್) ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ವಜಾಗೊಂಡಿದೆ.
ಕರ್ನಾಟಕ ಹೈರ್ ಪರ್ಚೇಸ್ ಅಸೋಸಿಯೇಷನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಇಂದು (ಮಾರ್ಚ್ 17) ವಜಾಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದ್ದು, ಇದರಿಂದ ಸರ್ಕಾರ ಮೇಲುಗೈ ಸಾಧಿಸಿದಂತಾಗಿದೆ.
ಸುಗ್ರೀವಾಜ್ಞೆಯ ಸಿಂಧುತ್ವವನ್ನು ಪ್ರಶ್ನಿಸಿ ಹಾಗೂ ಮೋಟಾರು ವಾಹನ/ಆಸ್ತಿಗೆ ಹಣಕಾಸು ಸೌಲಭ್ಯ ಒದಗಿಸುವ ಉದ್ಯಮವು ಸುಗ್ರೀವಾಜ್ಞೆಯಿಂದ ಹೊರಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲು ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಕರ್ನಾಟಕ ಹೈರ್ ಪರ್ಚೇಸ್ ಅಸೋಶಿಯೇಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ಸೋಮವಾರ ವಜಾಗೊಳಿಸಿತು. ಅಲ್ಲದೇ, ಸುಗ್ರೀವಾಜ್ಞೆ ಕುರಿತಂತೆ ನ್ಯಾಯಾಲಯ ಪರಾಮರ್ಶಿಸಿ ಸ್ಪಷ್ಟೀಕರಣ ನೀಡುವ ಅಗತ್ಯವಿದೆ ಎಂದು ಪೀಠ ತಿಳಿಸಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು “ಸಂಕಷ್ಟದಲ್ಲಿರುವ ಕುಟುಂಬಗಳನ್ನು ರಕ್ಷಿಸುವ ಉದ್ದೇಶ ಸರ್ಕಾರದ್ದಾಗಿದ್ದರೆ ಸಾಲ ನೀಡುವವರು, ಸಂಸ್ಥೆಗಳು ಮತ್ತು ಸಂಘಗಳನ್ನು ಏಕೆ ಸೇರಿಸಲಾಗಿದೆ. ಸುಗ್ರೀವಾಜ್ಞೆಯಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ವಿವೇಚನಾರಹಿತವಾಗಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಆರ್ಬಿಐ ನಿರ್ದೇಶನ ಪಾಲಿಸಲಾಗಿದೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಆರ್ಬಿಐ ನಿರ್ದೇಶನವು ನಿಯಮ ಅಥವಾ ಶಾಸನವಲ್ಲ. ನಾವು ಖರೀದಿ ಉದ್ಯಮದಲ್ಲಿದ್ದು, ವಾಹನಗಳನ್ನೇ ಭದ್ರತೆಯನ್ನಾಗಿ ಇಟ್ಟುಕೊಳ್ಳುತ್ತೇವೆ. ಸುಗ್ರೀವಾಜ್ಞೆಯ ಸೆಕ್ಷನ್ 6 ಬಾಧಕವಾಗಿದೆ” ಎಂದು ವಾದಿಸಿದ್ದರು.
ಸರ್ಕಾರದ ಪರ ವಾದ ಹೇಗಿತ್ತು?
ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, “ಈ ಹಿಂದೆ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಸದನದಲ್ಲಿ ಮಂಡಿಸಲಾಗಿದ್ದು, ವಿಧಾನ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದ್ದರು. ಜತೆಗೆ, ಮೈಕ್ರೋ ಫೈನಾನ್ಸ್ಗಳ ವ್ಯಾಖ್ಯಾನ ಕುರಿತಂತೆ ಆರ್ಬಿಐ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಂತೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಕಳೆದ ಕೆಲವು ದಿನಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ 17 ಮಂದಿ ಸಾವನ್ನಪ್ಪಿದ್ದಾರೆ. ಬಡ ವರ್ಗಗಳು ಮತ್ತು ದುರ್ಬಲ ವರ್ಗಗಳ ರಕ್ಷಣೆ ಮಾಡುವುದಕ್ಕಾಗಿ ಸುಗ್ರೀವಾಜ್ಞೆ ಜಾರಿ ಮಾಡಲಾಗಿದೆ” ಎಂದು ವಿವರಿಸಿದ್ದರು.
“ಮೂರು ಲಕ್ಷಕ್ಕಿಂತ ಕಡಿಮೆ ವರಮಾನವಿರುವವರಿಗೆ ಶ್ಯೂರಿಟಿ ಪಡೆಯದೆ ಸಾಲ ನೀಡುವ ಮೈಕ್ರೋ ಫೈನಾನ್ಸ್ಗೆ ಮಾತ್ರ ಇದು ಅನ್ವಯವಾಗಲಿದೆ. ಸಾಲ ಪಡೆದವರಿಗೆ ಕಿರುಕುಳ ನೀಡಬಾರದು ಎಂಬ ಕಾರಣದಿಂದ ಸುಗ್ರೀವಾಜ್ಞೆ ಜಾರಿ ಮಾಡಲಾಗಿದೆ” ಎಂದು ವಾದ ಮಂಡನೆ ಮಾಡಿದ್ದರು.