ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ಮಹಾರಾಷ್ಟ್ರ ಸ್ಪೀಕರ್ ತೀರ್ಪು ನೀಡಿದ ನಂತರ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ‘ನಾಟಕವನ್ನು ಬಹಳ ಹಿಂದೆಯೇ ರಚಿಸಲಾಗಿತ್ತು’ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, “ಶಿಂಧೆ ಸೇನೆ ನಿಜವಾದ ಸೇನೆ. ಬಹಳ ಹಿಂದೆಯೇ ರಚಿತವಾಗಿರುವ ನಾಟಕವಿದು. ಪ್ರಹಸನ ಯಾವುದೇ ಸಹಾಯ ಪಡೆಯದೆ ನಡೆಯಿತು ಎಂಬುದನ್ನು ಎಲ್ಲರೂ ವೀಕ್ಷಿಸಿದರು. ಇದು ಪ್ರಜಾಪ್ರಭುತ್ವದ ತಾಯಿದ ನಿಜವಾದ ದುರಂತ” ಎಂದು ಕಪಿಲ್ ಸಿಬಲ್ ಬೇಸರ ವ್ಯಕ್ತಪಡಿಸಿದ್ದಾರೆ.
2022ರಲ್ಲಿ ವಿಭಜನೆಗೊಂಡ ಶಿವಸೇನಾ ಬಣಗಳ ಅನರ್ಹತೆಯ ವಿಚಾರವಾಗಿ ಸ್ಪೀಕರ್ ರಾಹುಲ್ ನರ್ವೇಕರ್ ತಮ್ಮ 105 ನಿಮಿಷಗಳ ಸುದೀರ್ಘ ಭಾಷಣದಲ್ಲಿ ಉದ್ಧವ್ ಠಾಕ್ರೆ ಬಣದ ಅರ್ಜಿಯನ್ನು ತಿರಸ್ಕರಿಸಿ ಏಕನಾಥ್ ಶಿಂಧೆ ಒಳಗೊಂಡಂತೆ 30 ಶಾಸಕರ ಬಣವೆ ನಿಜವಾದ ಶಿವಸೇನೆ ಎಂದು ತೀರ್ಪು ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಭಿಮಾನ ಅಂಧಾಭಿಮಾನವಾಗದಿರಲಿ; ಬಡವರ ಮಕ್ಕಳು ಬಲಿಯಾಗದಿರಲಿ
1999ರಲ್ಲಿ ರಚಿತಗೊಂಡ ಶಿವಸೇನೆ ಪಕ್ಷದ ಸಂವಿಧಾನವೇ ಅಧಿಕೃತ. ಉದ್ಧವ್ ಠಾಕ್ರೆಗೆ ಶಾಸಕರ ಬೆಂಬಲ ಇಲ್ಲ. 2018 ರ ಪಕ್ಷದ ಹೊಸ ಸಂವಿಧಾನ ಚುನಾವಣಾ ಆಯೋಗದಲ್ಲಿಲ್ಲ. ಹೀಗಾಗಿ ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ 1999 ಸಂವಿಧಾನವನ್ನು ಪರಿಗಣಿಸಲಾಗಿದೆ ಎಂದು ಸ್ಪೀಕರ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದರು.
ಜೂನ್ 2022ರಲ್ಲಿ ಶಿವಸೇನೆ ಶಾಸಕರು ವಿಭಜನೆಗೊಂಡು ಎರಡು ಬಣಗಳಾದ ನಂತರ ನಿಜವಾದ ಶಿವಸೇನೆ ತಮ್ಮದು ಎಂದು ಘೋಷಿಸಬೇಕು ಎಂದು ಎರಡು ಬಣಗಳು ಚುನಾವಣಾ ಆಯೋಗದ ಕದ ತಟ್ಟಿದ್ದವು. ಆಯೋಗ ಕೂಡ ಹೆಚ್ಚು ಶಾಸಕರಿರುವ ಏಕನಾಥ್ ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ತೀರ್ಪು ನೀಡಿತ್ತು.
ಈಗ ಸ್ಪೀಕರ್ ಕೂಡ 18 ತಿಂಗಳ ನಂತರ ತೀರ್ಪು ನೀಡಿದ್ದು, ಶೀವಸೇನಾ ಸಂವಿಧಾನದಂತೆ ಪಕ್ಷದ ಪ್ರಮುಖ ಉದ್ಧವ್ ಠಾಕ್ರೆಯವರಿಗೆ ಏಕನಾಥ್ ಶಿಂಧೆ ಬಣವನ್ನು ಉಚ್ಚಾಟಿಸುವ ಅಧಿಕಾರ ಇಲ್ಲವೆಂದು ತಿಳಿಸಿದ್ದಾರೆ.
ಸ್ಪೀಕರ್ ತೀರ್ಪಿನಿಂದ ಅಸಮಾಧಾನಗೊಂಡಿರುವ ಉದ್ಧವ್ ಠಾಕ್ರೆ ತಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.