ಕಳೆದ ತಿಂಗಳು ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿ ಅದನ್ನು “ಅಸಾಂವಿಧಾನಿಕ” ಎಂದು ಕರೆದಿದೆ. ಈ ಯೋಜನೆಯನ್ನೇ ಪ್ರಧಾನಿ ನರೇಂದ್ರ ಮೋದಿ ಈಗ ಸಮರ್ಥಿಸಿಕೊಂಡಿದ್ದಾರೆ. ಹಾಗೆಯೇ “ನಮ್ಮ ಸರ್ಕಾರ ತಂದ ಯೋಜನೆಯಿಂದಾಗಿ ರಾಜಕೀಯ ನಿಧಿಯ ಮೂಲ ಜನರಿಗೆ ತಿಳಿಯಲು ಸಾಧ್ಯವಾಯಿತು” ಎಂದು ಹೇಳಿಕೊಂಡಿದ್ದಾರೆ.
ತಮಿಳು ಸುದ್ದಿ ವಾಹಿನಿ ತಂತಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಚುನಾವಣಾ ಬಾಂಡ್‌ನಿಂದ ಬಿಜೆಪಿ ಸರ್ಕಾರಕ್ಕೆ ಹಿನ್ನೆಡೆಯಾಗಲಿದೆ ಎಂಬ ಅಭಿಪ್ರಾಯವನ್ನು ಅಲ್ಲಗಳೆದ ಪ್ರಧಾನಿ, “ಹಿನ್ನಡೆ ಉಂಟುಮಾಡಲು ನಾನೇನು ಮಾಡಿದೆ ಹೇಳಿ? ಇಂದು ಸಂತೋಷಪಡುವವರು ನಾಳೆ ಪಶ್ಚಾತ್ತಾಪ ಪಡುತ್ತಾರೆ. 2014 ರ ಮೊದಲು ಎಷ್ಟು ಚುನಾವಣೆ ನಡೆದಿದೆ ಎಂದು ನಾನು ಈ ತಜ್ಞರನ್ನು ಕೇಳುತ್ತೇನೆ. ಆ ಚುನಾವಣೆಗಳಲ್ಲಿ ಖರ್ಚು ಎಷ್ಟಾಗಿದೆ? ಹಣ ಎಲ್ಲಿಂದ ಬಂತು ಎಂದು ಹೇಳಲಾಗುತ್ತದೆಯೇ? ಆದರೆ ಈಗ ಆ ಎಲ್ಲ ಮಾಹಿತಿ ನಮಗೆ ಸಿಗುತ್ತದೆ” ಎಂದು ಚುನಾವಣಾ ಬಾಂಡ್ ಬೆಂಬಲಿಸಿ ಮಾತನಾಡಿದರು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಹಗರಣ | ದೇಣಿಗೆ ನೀಡಿ- ಗುತ್ತಿಗೆ ಪಡಿ; ಬಿಜೆಪಿಯ ದಂಧೆ ಜಗಜ್ಜಾಹೀರು
“ಇಂದು ಮೋದಿ ಚುನಾವಣಾ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ನೀವು ಎಲ್ಲ ಮಾಹಿತಿಯನ್ನು ಈ ದಾಖಲೆಯಲ್ಲಿ ಪಡೆಯಬಹುದು. ಹಣ ಕೊಟ್ಟವರು ಯಾರು, ಪಡೆದವರು ಯಾರು ಎಂಬುದನ್ನು ಪತ್ತೆ ಹಚ್ಚಬಹುದು. ಇಲ್ಲದಿದ್ದರೆ, ಹಣ ಎಲ್ಲಿಂದ ಬಂತು ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ಪ್ರತಿಯೊಂದರಲ್ಲೂ ಕೆಲವು ನ್ಯೂನತೆಗಳು ಇರಬಹುದು. ಆದರೆ ಈ ನ್ಯೂನತೆಗಳನ್ನು ಸರಿಪಡಿಸಿದರೆ ಎಲ್ಲವೂ ಸರಿಯಾಗುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದರು.
2017-18ರ ಕೇಂದ್ರ ಬಜೆಟ್‌ನಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2017 ರ ಹಣಕಾಸು ಮಸೂದೆಯಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಮಂಡಿಸಿದರು. “ಚುನಾವಣಾ ಬಾಂಡ್‌ಗಳು ಅನಾಮಧೇಯವಾಗಿರುತ್ತದೆ. ದೇಣಿಗೆ ನೀಡಿದವರು ಮತ್ತು ದೇಣಿಗೆ ಪಡೆದ ಪಕ್ಷದ ಮಾಹಿತಿ ಎಲ್ಲಿಯೂ ಬಹಿರಂಗವಾಗುವುದಿಲ್ಲ. ಈ ಮಾಹಿತಿ ಗೌಪ್ಯವಾಗಿರುತ್ತದೆ” ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿತ್ತು.
ಇದನ್ನು ಓದಿದ್ದೀರಾ? ಬಾಂಡ್ ದಂಧೆ | ಬಿಜೆಪಿಗೆ 12,930 ಕೋಟಿ ರೂ ದೇಣಿಗೆ, ಕೇಸರಿ ಪಕ್ಷದ ಚಂದಾ ಅಭಿಯಾನಗಳ ಪಟ್ಟಿ!
ಆದರೆ “ದಾನಿಗಳ ಗುರುತು ಅನಾಮಧೇಯ ಆಗಿರುವುದರಿಂದ ಕಪ್ಪು ಹಣದ ಒಳಹರಿವಿಗೆ ಕಾರಣವಾಗಬಹುದು” ಎಂದು ಎಡಪಕ್ಷಗಳು ವಾದಿಸಿತ್ತು. “ಚುನಾವಣಾ ಬಾಂಡ್‌ಗಳ ಮೂಲಕ ನೀಡಲಾಗುವ ದೇಣಿಗೆಗಳು ಅಕ್ರಮ ಹಣ ವರ್ಗಾವಣೆಗೆ ಸಮ” ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಆದರೆ ಈಗ ಪ್ರಧಾನಿ ಮೋದಿ, “ಮೋದಿ ಸರ್ಕಾರ ಚುನಾವಣಾ ದಾಖಲೆಗಳನ್ನು ಸೃಷ್ಟಿಸಿದೆ” ಎಂದು ಹೇಳಿರುವುದು ನಗೆಪಾಟಲಿಗೀಡಾಗಿದೆ.