ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ ಕಳೆದುಕೊಂಡಿದ್ದಾರೆ. ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ಅವರ ಸರ್ಕಾರವನ್ನು ಕಿತ್ತೊಗೆಯುವ ಸಮಯ ದೂರವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬನಿಹಾಲ್ ವಿಧಾನಸಭಾ ಕ್ಷೇತ್ರದ ಸಂಗಲ್ದನ್‌ನಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. “ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಕೇಂದ್ರ ಸರ್ಕಾರವನ್ನು ಅವರ ಕಾರ್ಪೊರೇಟ್ ಸ್ನೇಹಿತರಿಂದ ನಡೆಸುತ್ತಿದ್ದಾರೆ” ಎಂದು ಪ್ರತಿಪಾದಿಸಿದರು.
ನಿರುದ್ಯೋಗ ಸಮಸ್ಯೆಯ ವಿಚಾರವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, “ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣವು ಸಣ್ಣ ಉದ್ಯಮಗಳಿಗೆ ಹಾನಿಯನ್ನುಂಟುಮಾಡಿದೆ. ಏಕೆಂದರೆ, ಸರ್ಕಾರವು ಇಬ್ಬರು ಬಿಲಿಯನೇರ್‌ಗಳಿಗಾಗಿ ಕೆಲಸ ಮಾಡುತ್ತಿದೆ” ಎಂದು ಆರೋಪಿಸಿದರು.
“ಮೋದಿಯವರ ಕಾರ್ಪೊರೇಟ್ ಸ್ನೇಹಿತರನ್ನು ಅದಾನಿ ಮತ್ತು ಅಂಬಾನಿ ಹೆಸರಿಸಬೇಡಿ ಎಂದು ನನಗೆ ಹೇಳಲಾಗಿದೆ. ಆದ್ದರಿಂದ ನಾನು ಅವರಿಗೆ ಎ1 ಮತ್ತು ಎ2 ಮುಂತಾದ ‘ಅಲಿಯಾಸ್’ ಹೆಸರುಗಳನ್ನು ಬಳಸುತ್ತಿದ್ದೇನೆ. ಈ ಸರ್ಕಾರವು ‘ನಾವಿಬ್ಬರು, ನಮ್ಮಿಬ್ಬರು’ ಎಂಬಂತಿದೆ (ಮೋದಿ ಮತ್ತು ಶಾ ಹಾಗೂ ಅಂಬಾನಿ ಮತ್ತು ಅದಾನಿ). ಈ ನಾಲ್ವರು ಸರ್ಕಾರವನ್ನು ನಡೆಸುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ವಿವರಿಸಿದರು.
“ಈ ಎ1 ಮತ್ತು ಎ2 ಶತಕೋಟ್ಯಾಧಿಪತಿಗಳಿಗೆ ಅನುಕೂಲ ಮಾಡಿಕೊಡಲು ಸಂವಿಧಾನದ 370ನೇ ವಿಧಿಯನ್ನು ಮೋದಿ ಸರ್ಕಾರ ರದ್ದುಗೊಳಿಸಿದೆ. 370ನೇ ವಿಧಿ ರದ್ದಾದ ಬಳಿಕ, ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು “ಕಿತ್ತುಕೊಳ್ಳಲಾಗಿದೆ” ಎಂದು ಲೋಕಸಭೆಯ ವಿಪಕ್ಷ ನಾಯಕ ಆರೋಪಿಸಿದ್ದಾರೆ.
“ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯು ದೇಶದ ಇತರ ಭಾಗಗಳಿಗಿಂತ ಕೆಟ್ಟದಾಗಿದೆ. ಜಮ್ಮು-ಕಾಶ್ಮೀರ ಅತ್ಯಧಿಕ ನಿರುದ್ಯೋಗ ದರವನ್ನು ಹೊಂದಿದೆ. ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ” ಎಂದು ರಾಹುಲ್ ಗಾಂಧಿ ಆರೋಪಿಸಿರದರು.
“ನಾವು ಮೋದಿಯನ್ನು ಮಾನಸಿಕವಾಗಿ ಕುಗ್ಗಿಸಿದ್ದೇವೆ. ನಾನು ಸಂಸತ್ತಿನಲ್ಲಿ ಅವರ ಮುಂದೆ ಕುಳಿತುಕೊಳ್ಳುತ್ತೇನೆ. ಮೋದಿ ಅವರಲ್ಲಿ ವಿಶ್ವಾಸ ಕಳೆದುಹೋಗಿದೆ ಎಂಬುದನ್ನು ನಾನು ಗಮನಿಸಿದ್ದೇನೆ. ಇನ್ನು ಸ್ವಲ್ಪ ಸಮಯ ಉಳಿದಿದೆ. ನಾವು ಮೋದಿ ಮತ್ತು ಅವರ ಬಿಜೆಪಿಯನ್ನು ಸರ್ಕಾರದಿಂದ ಹೊರಹಾಕುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು 90 ಸದಸ್ಯರನ್ನು ಹೊಂದಿದೆ. ವಿಧಾನಸಭೆಗೆ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಮತದಾನ ನಡೆಯಲಿದೆ.