ಗಣಪತಿ ಪೂಜೆಗಾಗಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರ ನಿವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಅವರ ಭೇಟಿಯ ಬಗ್ಗೆ ವಾಗ್ದಾಳಿ ನಡೆಸಿರುವ ವಿಪಕ್ಷಗಳು, ನ್ಯಾಯಾಂಗ ವ್ಯವಸ್ಥೆಯಲ್ಲಿನ ಪಾರದರ್ಶಕತೆಯನ್ನು ಪ್ರಶ್ನಿಸಿವೆ.
ಚಂದ್ರಚೂಡ್ ನಿವಾಸಕ್ಕೆ ಮೋದಿ ಭೇಟಿ ನೀಡಿರುವ ಫೋಟೋವನ್ನು ಹಂಚಿಕೊಂಡಿರುವ ಹಿರಿಯ ವಕೀಲೆ, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಇಂದಿರಾ ಜೈಸಿಂಗ್, “ಸಿಜೆಐ ನಿವಾಸಕ್ಕೆ ಪ್ರಧಾನಿ ಮೋದಿ ಭೇಟಿಯನ್ನು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಖಂಡಿಸಬೇಕು” ಎಂದಿದ್ದಾರೆ.
“ಭಾರತದ ಮುಖ್ಯ ನ್ಯಾಯಮೂರ್ತಿಗಳು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಅಧಿಕಾರವನ್ನು ಪ್ರತ್ಯೇಕಿಸುವಲ್ಲಿ ರಾಜಿ ಮಾಡಿಕೊಂಡಿದ್ದಾರೆ. ಸಿಜೆಐ ಅವರ ಸ್ವಾತಂತ್ರ್ಯ ಕಾರ್ಯನಿರ್ವಹಣೆ ಮೇಲಿನ ಎಲ್ಲ ವಿಶ್ವಾಸವನ್ನು ಕಳೆದುಕೊಂಡಿದ್ದೇವೆ” ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕೂಡ ಖಂಡಿಸಿದ್ದು, “ಖಾಸಗಿ ಭೇಟಿಗಾಗಿ ಮೋದಿ ಅವರಿಗೆ ಸಿಜೆಐ ಚಂದ್ರಚೂಡ್ ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವುದು ಆಘಾತಕಾರಿಯಾಗಿದೆ. ಇದು ಕಾರ್ಯಾಂಗದಿಂದ ನಾಗರಿಕರ ಮೂಲಭೂತ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುವ ನ್ಯಾಯಾಂಗಕ್ಕೆ ಕೆಟ್ಟ ಸಂದೇಶ ರವಾನಿಸುತ್ತದೆ. ಸರ್ಕಾರವು ಸಂವಿಧಾನದ ಮಿತಿಯಲ್ಲಿ ಕಾರ್ಯನಿರ್ವಹಿಸಬೇಕು. ಅದಕ್ಕಾಗಿಯೇ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಕಾರ್ಯನಿರ್ವಹಣೆಯ ಪ್ರತ್ಯೇಕತೆ ಇರಬೇಕು” ಎಂದಿದ್ದಾರೆ.
ಚಂದ್ರಚೂಡ್ ಮನೆಗೆ ಮೋದಿ ಭೇಟಿ ಬಗ್ಗೆ ವಾಗ್ದಾಳಿ ನಡೆಸಿರುವ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್, “ಸಂವಿಧಾನಕ್ಕೆ ಬೆಂಕಿ ಹಚ್ಚಲಾಗಿದೆ” ಎಂದು ಕಿಡಿಕಾರಿದ್ದಾರೆ.
“ನ್ಯಾಯಾಂಗವು ವಿರೋಧ ಪಕ್ಷದ ನಾಯಕರ ವಿರುದ್ಧ ತೀರ್ಪು ನೀಡಿದೆ. ಅಂತಹ ಎಲ್ಲ ಪ್ರಕರಣಗಳನ್ನು ಅರ್ಥಮಾಡಿಕೊಳ್ಳಲು ಈ ಒಂದು ಭೇಟಿ ಸಾಕು” ಎಂದಿದ್ದಾರೆ.
“ದೇಶದ ಹಲವು ಸ್ಥಳಗಳಲ್ಲಿ ಗಣಪತಿ ಪೂಜೆಯನ್ನು ಆಯೋಜಿಸಲಾಗಿತ್ತು. ಆದರೆ, ಪ್ರಧಾನಿ ಮೋದಿ ಅವರು ಮುಖ್ಯ ನ್ಯಾಯಾಧೀಶರ ನಿವಾಸಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಇದು ಇಡೀ ನ್ಯಾಯಾಂಗದ ಮೇಲೆ ಅನುಮಾನ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಾವು ಹೋರಾಡುತ್ತಿರುವ ಪ್ರಕರಣಗಳು ಮತ್ತು ಸಿಜೆಐ ಚಂದ್ರಚೂಡ್ ಅವರ ಪೀಠದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳಲ್ಲಿ ನಮಗೆ ನ್ಯಾಯ ಸಿಗುತ್ತದೆಯೇ ಎಂಬ ಅನುಮಾನವೂ ಇದೆ” ಎಂದು ರಾವತ್ ಆತಂಕ ವ್ಯಕ್ತಪಡಿಸಿದ್ದಾರೆ.
ಭೇಟಿಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, “ಪ್ರತಿಪಕ್ಷಗಳು ಪ್ರಧಾನಿ ಭೇಟಿಯ ಬಗ್ಗೆ ಹುಯಿಲೆಬ್ಬಿಸುತ್ತಿವೆ” ಎಂದಿದೆ.