- ಜೂನ್ 11ರಿಂದ ತೀರ್ಥಯಾತ್ರೆ ಕೈಗೊಂಡಿರುವ ವಿಠಲ ಭಕ್ತರಾದ ವಾರಕರಿಗಳು
- ಸಂತ ಜ್ಞಾನೇಶ್ವರ ಮಹಾರಾಜರ ಮಂದಿರ ಪ್ರವೇಶ ವಿಚಾರಕ್ಕೆ ಗಲಾಟೆ
ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ವಿಠಲ ದೇವರ ಪಂಡರಾಪುರ ದೇವಾಲಯಕ್ಕೆ ಭಾನುವಾರ (ಜೂನ್ 11) ಆಗಮಿಸುವ ವೇಳೆ ಮಾರ್ಗಮಧ್ಯದಲ್ಲಿ ಭಕ್ತರಾದ ವಾರಕರಿ ಸಮುದಾಯ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಭಕ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ರಾಜ್ಯದಲ್ಲಿ ವಿಠಲನ ಭಕ್ತರಾದ ವಾರಕರಿಗಳ ಮೇಲೆ ಪೊಲೀಸರು ಕ್ರಮ ಕೈಗೊಂಡಿರುವುದು ಇದೇ ಮೊದಲು ಎಂದು ವರದಿಯಾಗಿದೆ.
ಆದರೆ ಲಾಠಿಚಾರ್ಜ್ ಆರೋಪವನ್ನು ಮಹಾರಾಷ್ಟ್ರ ಪೊಲೀಸರು ಅಲ್ಲಗಳೆದಿದ್ದಾರೆ. ಆದರೆ ಘಟನೆ ಈಗ ರಾಜಕೀಯ ಬಣ್ಣ ಪಡೆದುಕೊಂಡಿದ್ದು ವಿಠಲ ಭಕ್ತರ ವಿರುದ್ಧದ ಪೊಲೀಸರ ಕ್ರಮವನ್ನು ಟೀಕಿಸಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ.
ಮಹಾರಾಷ್ಟ್ರ ಸರ್ಕಾರ ವಿಠಲನ ಭಕ್ತರ ಮೇಲೆ ಲಾಠಿಚಾರ್ಜ್ ನಡೆಸಿದೆ ಎಂದು ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಆರೋಪಿಸಿದೆ.
ಪ್ರತಿವರ್ಷ ಪಂಡರಾಪುರಕ್ಕೆ ಆಷಾಢ ಏಕಾದಶಿ ಯಾತ್ರೆ ಹಮ್ಮಿಕೊಳ್ಳುವ ವಾರಕರಿಗಳು, ಅದರ ಭಾಗವಾಗಿ ಪುಣೆಯಿಂದ 22 ಕಿ.ಮೀ ದೂರವಿರುವ ಆಳಂದಿ ಪಟ್ಟಣದಲ್ಲಿರುವ ಸಂತ ಜ್ಞಾನೇಶ್ವರ ಮಹಾರಾಜರ ಮಂದಿರಕ್ಕೆ ಭೇಟಿ ನೀಡುತ್ತಾರೆ. ಈ ವೇಳೆ ಮಂದಿರಕ್ಕೆ ಪ್ರವೇಶ ಮಾಡುವಾಗ ವಾರಕರಿಗಳು ಮತ್ತು ಪೊಲೀಸರ ನಡುವೆ ಗಲಾಟೆ ನಡೆದಿದೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವುದು, ನೂಕಾಟ ತಳ್ಳಾಟ ನಡೆಯುವುದು, ಕೆಲವರ ಮೇಲೆ ಪೊಲೀಸ್ ಸಿಬ್ಬಂದಿ ಲಾಠಿ ಬೀಸಿರುವುದು ವಿಡಿಯೋಗಳಲ್ಲಿ ಕಂಡು ಬಂದಿದೆ.
ದೇವಸ್ಥಾನದ ಸಮಾರಂಭಕ್ಕೆ 75 ಜನರನ್ನು ಮಾತ್ರ ಬಿಡಲು ಅವಕಾಶವಿತ್ತು. ಆದರೆ ಸುಮಾರು 400 ಮಂದಿ ಬಲವಂತವಾಗಿ ದೇವಾಲಯದ ಒಳಗೆ ಪ್ರವೇಶಿಸಲು ಯತ್ನಿಸುತ್ತಿದ್ದರು. ಈ ವೇಳೆ ವಾರಕರಿಗಳು ಮತ್ತು ಪೊಲೀಸರ ನಡುವೆ ವಾಗ್ವಾದ ಮತ್ತು ತಳ್ಳಾಟ ಉಂಟಾಗಿದೆ ಎಂದು ವರದಿಯಾಗಿದೆ.
ಆದರೆ ವಿಠಲ ದೇವರ ಭಕ್ತರ ಮೇಲೆ ಲಾಠಿಚಾರ್ಜ್ ಆಗಿಲ್ಲ ಎಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಯಾವುದೇ ಅಹಿತಕರ ಘಟನೆ ನಡೆಯದಂತೆ ದೇವಸ್ಥಾನದ ಟ್ರಸ್ಟಿಗಳೊಂದಿಗೆ ಚರ್ಚಿಸಿ ಪೊಲೀಸರು ವ್ಯಾಪಕ ಬಂದೋಬಸ್ತ್ ಏರ್ಪಡಿಸಿದ್ದರು. ಒಂದು ಬಾರಿಗೆ 75 ಭಕ್ತರನ್ನು ಮಂದಿರದ ಒಳಗೆ ಕಳುಹಿಸಲಾಗುತ್ತಿತ್ತು. ಈ ವೇಳೆ ಕೆಲವರು ಬ್ಯಾರಿಕೇಡ್‌ಗಳನ್ನು ಮುರಿದು ದೇವಸ್ಥಾನಕ್ಕೆ ನುಗ್ಗಲು ಪ್ರಯತ್ನಿಸಿದರು. ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದಾಗ ವಾಗ್ವಾದ ನಡೆಯಿತು” ಎಂದು ಪಿಂಪ್ರಿ ಚಿಂಚ್ವಾಡದ ಪೊಲೀಸ್ ಆಯುಕ್ತ ವಿನಯ್ ಕುಮಾರ್ ಚೌಬೆ ತಿಳಿಸಿದ್ದಾರೆ.
ಪ್ರತಿಪಕ್ಷಗಳ ಲಾಠಿಜಾರ್ಜ್ ಆರೋಪವನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಿರಾಕರಿಸಿದ್ದಾರೆ. “ಇದೊಂದು ಸಣ್ಣ ಕಲಹ, ವಾರಕರಿ ಸಮುದಾಯದ ಮೇಲೆ ಯಾವುದೇ ರೀತಿಯ ಲಾಠಿಚಾರ್ಚ್ ಆಗಿಲ್ಲ” ಎಂದು ಫಡ್ನವಿಸ್ ನಾಗ್ಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
“ಸುಮಾರು 500 ವಾರಕರಿ ಸಮುದಾಯದ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ದೇವಾಲಯದ ನಿಯಮಗಳನ್ನು ಪಾಲಿಸಲಿಲ್ಲ. ಬ್ಯಾರಿಕೇಡ್‌ಗಳನ್ನು ಮುರಿದು ದೇವಾಲಯ ಪ್ರವೇಶಿಸಲು ಯತ್ನಿಸಿದರು. ಪೊಲೀಸರು ಅವರನ್ನು ತಡೆಯಲು ಯತ್ನಿಸಿದರು” ಎಂದು ಫಡ್ನವಿಸ್ ಹೇಳಿದರು.
ವಿಠಲ ಭಕ್ತರು ಮತ್ತು ಪೊಲೀಸರ ನಡುವಿನ ಕಲಹ ಈಗ ಪ್ರತಿಪಕ್ಷಗಳ ಅಸ್ತ್ರವಾಗಿದೆ.
ಪೊಲೀಸರು ವಾರಕರಿಗಳ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.
ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರು ರಾಜೀನಾಮೆ ನೀಡಬೇಕು ಎಂದು ಎನ್‌ಸಿಪಿ ಒತ್ತಾಯಿಸಿದೆ.
“ಮಾರ್ಚ್‌ನಿಂದ ರಾಜ್ಯದಲ್ಲಿ ಉದ್ವಿಗ್ನತೆ ಮತ್ತು ಹಿಂಸಾಚಾರದ ವಾತಾವರಣವಿದೆ. ಇಂದು ಅಳಂದಿಯಲ್ಲಿ ವಾರಕರಿಗಳ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ. ಇದು ನಾಚಿಕೆಗೇಡಿನ ಸಂಗತಿ. ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಬೇಕು” ಎಂದು ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಆಗ್ರಹಿಸಿದ್ದಾರೆ.
ವಿಠಲ ದೇವರ ಭಕ್ತರ ಮೇಲೆ ಪೊಲೀಸರ ಕ್ರಮವನ್ನು ಶಿವಸೇನಾ ನಾಯಕ ಸಂಜಯ್ ರಾವುತ್ ಖಂಡಿಸಿದ್ದಾರೆ.
“ಓಹೋ.. ಹಿಂದುತ್ವ ಸರ್ಕಾರದ ಆಡಂಬರ ಬಯಲಾಗಿದ್ದು ಮುಖವಾಡ ಕಳಚಿಬಿದ್ದಿದೆ. ಔರಂಗಜೇಬನ ವರ್ತನೆ ಹೇಗೆ ಭಿನ್ನವಾಗಿರಲು ಸಾಧ್ಯ? ಮೊಘಲರು ಮಹಾರಾಷ್ಟ್ರದಲ್ಲಿ ಪುಜರ್ನನ್ಮ ಪಡೆಯುತ್ತಿದ್ದಾರೆ” ಎಂದು ಸಂಜಯ್ ರಾವುತ್ ಟ್ವೀಟ್‌ನಲ್ಲಿ ಬಿಜೆಪಿ ಸರ್ಕಾರವನ್ನು ಕುಟುಕಿದ್ದಾರೆ.
ಈ ಸುದ್ದಿ ಓದಿದ್ದೀರಾ? 2024ರಲ್ಲಿ ಮೋದಿ ಗೆದ್ದರೆ ನರೇಂದ್ರ ಪುಟಿನ್ ಆಗುತ್ತಾರೆ; ಪಂಜಾಬ್ ಸಿಎಂ ಭಗವಂತ್ ಮಾನ್
ವಾರಕರಿಗಳು ಜೂನ್ 11 ರಿಂದ ತೀರ್ಥಯಾತ್ರೆ ಕೈಗೊಂಡಿದ್ದು ಆಳಂದಿಯಿಂದ ವಿಠಲ ದೇವರ ಆಯಲವಿರುವ ಪಂಡರಾಪುರಕ್ಕೆ ತೆರಳುತ್ತಾರೆ.
ಜೂನ್ 10 ರಂದು ಆಳಂದಿಯ ಸಂತ ಜ್ಞಾನೇಶ್ವರ ಮಹಾರಾಜ ಪಾಲ್ಖಿ ಮತ್ತು ದೇಹುವಿನ ಸಂತ ತುಕಾರಾಂ ಮಹಾರಾಜ ಪಾಲ್ಖಿ ದೇವಾಲಯಗಳಿಂದ ಹೊರಡುವುದು ಮಹಾ ಯಾತ್ರೆಯ ಆರಂಭ ಸೂಚಿಸುತ್ತದೆ ಎಂದು ವಾರಕರಿಗಳು ಹೇಳುತ್ತಾರೆ.