ಪೊಲೀಸ್ ಠಾಣೆಯಲ್ಲಿ ಬಿಜೆಪಿ ನಾಯಕನೊಬ್ಬ ಮಹಿಳೆಯರ ಮೇಲೆ ಏಕಾಏಕಿ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಬುಲ್ಡಾನಾದಲ್ಲಿ ನಡೆದಿದೆ. ಬಿಜೆಪಿ ನಾಯಕ ಹಲ್ಲೆ ಮಾಡುತ್ತಿರುವ ದೃಶ್ಯಾವಳಿಗಳು ಪೊಲೀಸ್ ಠಾಣೆಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಬೇಟಿ ಬಚಾವೋ – ಬೇಟಿ ಪಡಾವೋ’ ಎಂದು ಮಹಿಳೆಯರ ಮೇಲೆಯೇ ಹಲ್ಲೆ ಎಸಗುತ್ತಿದ್ದಾರೆಂದು ಬಿಜೆಪಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕ, ಮಲ್ಕಾಪುರ ಕೃಷಿ ಸಮಿತಿ ಅಧ್ಯಕ್ಷ ಶಿವಚಂದ್ರ ತಾಯ್ಡೆ ಎಂಬುವವರು ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಬುಲ್ಡಾನಾದ ಮಲ್ಕಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ಘಟನೆ ನಡೆಸಿದ್ದು, ಇದೀಗ ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆಯ ಸೋದರ ಸಂಬಂಧಿಯಾಗಿರುವ ಶಿವಚಂದ್ರ ತಾಯ್ಡೆ ವಿರುದ್ಧ ಸಂತ್ರಸ್ತ ಮಹಿಳೆ, ಆಕೆಯ ಪತಿ ಹಾಗೂ ಅತ್ತ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ, ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡುವಾಗ ಮಹಿಳೆ ಬಿಜೆಪಿ ನಾಯಕನ ಮಾತುಗಳನ್ನು ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಇದರಿಂದ ಕೋಪಗೊಂಡ ತಾಯ್ಡೆ ಆಕೆಯ ಫೋನ್ ಕಿತ್ತುಕೊಂಡು, ಕಪಾಳೆಗೆ ಹೊಡೆದಿದ್ದಾರೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.
ಘಟನೆಯ ವಿಡಿಯೋವನ್ನು ಶಿವಸೇನಾ (ಯುಬಿಟಿ) ವಕ್ತಾರೆ ಸುಷ್ಮಾ ಅಂಧಾರೆ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದು, “ಬಿಜೆಪಿಯ ಸ್ಥಳೀಯ ಮುಖಂಡ ಶಿವ ತಾಯ್ಡೆ ಅವರು ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಗೃಹ ಸಚಿವರು ಮತ್ತು ಪೊಲೀಸ್ ಅಧಿಕಾರಿಗೆ ನಾಚಿಕೆಯಾಗುತ್ತಿಲ್ಲವೇ” ಎಂದು ಕಿಡಿಕಾರಿದ್ದಾರೆ.