ಏಪ್ರಿಲ್ 26ರಂದು ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆದಿದ್ದು, ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7, ಮಂಗಳವಾರ ಮತದಾನ ನಡೆಯಲಿದೆ.
ಕಳೆದ ಒಂದು ವಾರದಲ್ಲಿ ಸಾಕಷ್ಟು ವಿದ್ಯಮಾನಗಳು ರಾಜ್ಯದಲ್ಲಿ ನಡೆದಿದ್ದು, ಅದರಲ್ಲಿ ಮುಖ್ಯವಾಗಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಆತನ ತಂದೆ ಎಚ್ ಡಿ ರೇವಣ್ಣ ಮೇಲೆ ಕೇಳಿಬಂದಿರುವ ಲೈಂಗಿಕ ಹಗರಣ ದೇಶಾದ್ಯಂತ ಚರ್ಚೆಯಾಗುತ್ತಿದೆ. ಇದು ಸಹಜವಾಗಿಯೇ ರಾಜ್ಯದ ಎರಡನೇ ಹಂತದ ಮತದಾನ ಪ್ರಕ್ರಿಯೆ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಗೆ ತಂದೆ-ಮಗನ ಲೈಂಗಿಕ ಹಗರಣ ನುಂಗಲಾರದ ತುತ್ತಾಗಿದೆ. ನೂರಾರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು, ಅದನ್ನು ವಿಡಿಯೊ ಮಾಡಿ ಅವರನ್ನು ಹೆದರಿಸಿರುವ ಆರೋಪ ಪ್ರಜ್ವಲ್ ಮೇಲಿದೆ. ಪ್ರಜ್ವಲ್ ಸಂಗ್ರಹಿಸಿ ವಿಡಿಯೋಗಳು ಪೆನ್‌ಡ್ರೈವ್ ಮೂಲಕ ಬಹಿರಂಗವಾಗಿವೆ. ರಾಜ್ಯದ ಮಹಿಳಾ ಮತದಾರರ ಮನದಾಳದಲ್ಲಿ ಈ ಆಕ್ರೋಶ ಮಡುಗಟ್ಟಿದಂತೆ ಕಾಣುತ್ತಿದೆ.
ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮಹಿಳಾ ಮತದಾರರು ಕೈಕೊಡುವ ಸಾಧ್ಯತೆ ಹೆಚ್ಚು ಕಂಡುಬರುತ್ತಿದೆ. ಜೊತೆಗೆ ಕಾಂಗ್ರೆಸ್ ಗ್ಯಾರಂಟಿಗಳು ಮಹಿಳಾ ಮತದಾರರನ್ನು ಸೆಳೆಯುತ್ತಿವೆ. ಇದೆಲ್ಲದರ ಪರಿಣಾಮ ಒಟ್ಟು ಬೆಳವಣಿಗೆ ಸಹಜವಾಗಿಯೇ ಕಾಂಗ್ರೆಸ್‌ಗೆ ನೆರವಾಗಲಿದೆ.
14 ಲೋಕಸಭಾ ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮತದಾರರು ಕಾಂಗ್ರೆಸ್ ಗ್ಯಾರಂಟಿಗಳಿಗೆ ಮಾರು ಹೋಗಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ನೋಡಿಕೊಂಡೇ ಕಾಂಗ್ರೆಸ್‌ಗೆ ಮತಹಾಕುತ್ತೇವೆ ಎಂದು ಶೇ. 53.95 ರಷ್ಟು ಮತದಾರರು ಹೇಳಿರುವ ಈ ದಿನ.ಕಾಮ್ ಸಮೀಕ್ಷೆಯಿಂದ ಬಹಿರಂಗವಾಗಿದೆ.
ಶೇ.32.66 ರಷ್ಟು ಗ್ಯಾರಂಟಿ ನೋಡಿ ಮತ ಹಾಕುವುದಿಲ್ಲ ಎಂದಿದ್ದರೆ ಶೇ. 13.04ರಷ್ಟು ಮತದಾರರು ಈ ಬಗ್ಗೆ ಮೌನವಾಗಿದ್ದಾರೆ. ‘ಮೋದಿ ಗ್ಯಾರಂಟಿ’ ಹೆಸರಲ್ಲಿ ಮತ ಕೇಳುತ್ತಿರುವ ಬಿಜೆಪಿ-ಜೆಡಿಎಸ್ ಮೈತ್ರಿಗೆ ಉಳಿದ 14 ಕ್ಷೇತ್ರಗಳಲ್ಲಿ ಸ್ವಲ್ಪ ಹಿನ್ನಡೆ ಕಂಡುಬರುತ್ತಿದೆ. ನರೇಂದ್ರ ಮೋದಿ ಅವರು ಇಷ್ಟವಿಲ್ಲ ಎಂದು ಶೇ.43.09ರಷ್ಟು ಮತದಾರರು ಹೇಳಿದ್ದಾರೆ. ಅವರೆಲ್ಲರೂ ಸಿಎಂ ಸಿದ್ದರಾಮಯ್ಯ ಅವರಿಗೆ ಜೈ ಎಂದಿದ್ದಾರೆ.
ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನೆಲೆಸಿದ್ದಾರೆ. ಬಿಜೆಪಿಯ ಓಟ್ ಬ್ಯಾಂಕ್ ಕೂಡ ಅವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಉತ್ತರ ಕರ್ನಾಟಕದಲ್ಲಿ ಶೇ.40.21 ರಷ್ಟು ಮತದಾರರು ಮಾತ್ರ ಮೋದಿಯನ್ನು ಮೆಚ್ಚಿದ್ದಾರೆ. ಶೇ.7.86 ಮತದಾರರು ಸಿದ್ದರಾಮಯ್ಯ ಮತ್ತು ಮೋದಿ ಅವರನ್ನು ಇಷ್ಟಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷದ ಆಡಳಿತದಲ್ಲಿ ಬೆಲೆ ಏರಿಕೆ, ಆರ್ಥಿಕ ಅಸಮಾನತೆ, ನಿರುದ್ಯೋಗ ನಿರಾಶೆಗಳೇ ತುಂಬಿಕೊಂಡಿವೆ. ಪ್ರಧಾನಿ ಮೋದಿ ಅವರ ಆಡಳಿತದಿಂದ ಬಸವಳಿದ ಜನರ ಬದುಕಿಗೆ ಆಧಾರ ಕೊಡಬಲ್ಲ ಗ್ಯಾರಂಟಿಗಳನ್ನು ದೇಶದಲ್ಲಿ ಕಾಂಗ್ರೆಸ್ ಘೋಷಿಸಿದೆ.
ಕಾಂಗ್ರೆಸ್ ಗ್ಯಾರಂಟಿಗಳ ಶಕ್ತಿ ಏನೆಂಬುದು ಈಗಾಗಲೇ ಕರ್ನಾಟಕದ ಮೂಲಕ ದೇಶಕ್ಕೆ ತಿಳಿದ ಸಂಗತಿ. ಐದು ಗ್ಯಾರಂಟಿಗಳಾದ ಗೃಹ ಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ, ಯುವನಿಧಿ ಹಾಗೂ ಅನ್ನಭಾಗ್ಯ ಗ್ಯಾರಂಟಿ ಘೋಷಣೆಗಳ ಬಲದಿಂದಲೇ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೇರಿದೆ. ಒಂದೇ ವರ್ಷದ ಅವಧಿಯಲ್ಲಿ ಐದೂ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ.
ಕರ್ನಾಟದಲ್ಲಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ ಕೊಡುವ ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಯಂತೆಯೇ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 1 ಲಕ್ಷ ರೂ. ಕೊಡುವ ‘ಮಹಾಲಕ್ಷ್ಮೀ’ ಗ್ಯಾರಂಟಿಯನ್ನು ಕಾಂಗ್ರೆಸ್ ಘೋಷಿಸಿದೆ.
‘ನಾರಿ ನ್ಯಾಯ’ದ ಅಡಿಯಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿದ್ದು, ಅದರಲ್ಲಿ ‘ಮಹಾಲಕ್ಷ್ಮಿ’ ಗ್ಯಾರಂಟಿ ಯೋಜನೆ ಪ್ರಮುಖವಾದುದು. ಈ ಯೋಜನೆಯಡಿ ದೇಶದ ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕವಾಗಿ 1 ಲಕ್ಷ ರೂ. ವರ್ಗಾವಣೆ ಮಾಡುವ ಸ್ಕೀಮ್ ಇದಾಗಿದೆ.
ಹಾಗೆಯೇ ಎರಡನೇ ಗ್ಯಾರಂಟಿಯಾದ ಆದಿ ಆಬಾದಿ, ಪೂರಾ ಹಕ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಎಲ್ಲಾ ಹೊಸ ನೇಮಕಾತಿಗಳಲ್ಲಿ ಶೇ.50ರಷ್ಟನ್ನು ಮಹಿಳೆಯರಿಗೆ ಮೀಸಲಿಡಲಾಗುವುದು. ಮೂರನೇ ಗ್ಯಾರಂಟಿಯಾದ ಶಕ್ತಿ ಕಾ ಸಮ್ಮಾನ್ ಅಡಿ ಆಶಾ, ಅಂಗನವಾಡಿ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ಡಬಲ್ ಮಾಡಲಾಗುವುದು.
ನಾಲ್ಕನೇ ಗ್ಯಾರಂಟಿಯಡಿ ಅಧಿಕಾರ ಮೈತ್ರಿ. ಅಂದ್ರೆ ಮಹಿಳೆಯರಿಗೆ ಅವರ ಕಾನೂನು ಹಕ್ಕುಗಳ ಬಗ್ಗೆ ತಿಳಿಸಿಕೊಡಲು ಪ್ರತಿ ಪಂಚಾಯತ್ ಮಟ್ಟದಲ್ಲಿ ಕಾನೂನು ಸಹಾಯಕರ ನೇಮಕದ ಭರವಸೆ. ಐದನೇ ಗ್ಯಾರಂಟಿಯಾದ ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್‌ಗಳು. ಈ ಯೋಜನೆಯಡಿ ದೇಶದಲ್ಲಿ ಉದ್ಯೋಗದಲ್ಲಿರುವ ಮಹಿಳೆಯರಿಗಾಗಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದಾದರೂ ಹಾಸ್ಟೆಲ್ ನಿರ್ಮಾಣ ಮತ್ತು ಇಂತಹ ಹಾಸ್ಟೆಲ್‌ಗಳ ಸಂಖ್ಯೆ ದ್ವಿಗುಣಗೊಳಿಸುವುದು.
ದೇಶದ ಮಹಿಳೆಯರಿಗೆ ದೊಡ್ಡ ಗ್ಯಾರಂಟಿಯಂತಿರುವ ಮನೆಯ ಮುಖ್ಯಸ್ಥೆಗೆ ವಾರ್ಷಿಕವಾಗಿ 1 ಲಕ್ಷ ನೀಡುವ ‘ಮಹಾಲಕ್ಷ್ಮಿ’ ಯೋಜನೆಯಂತೂ ಉತ್ತರ ಕರ್ನಾಟಕದ ಮತದಾರರನ್ನು ಇನ್ನಿಲ್ಲದಂತೆ ಸೆಳೆಯುತ್ತಿದೆ. ಅಭಿವೃದ್ಧಿಯಲ್ಲಿ ಹಿಂದಿರುವ ಉತ್ತರ ಕರ್ನಾಟಕ ಭಾಗಕ್ಕೆ ಕಾಂಗ್ರೆಸ್ ಗ್ಯಾರಂಟಿಗಳು ಆರ್ಥಿಕ ಸಬಲತೆಯನ್ನು ತಂದುಕೊಟ್ಟಿವೆ. ಕಳೆದ ಚುನಾವಣೆಗೆ ಹೋಲಿಸಿದರೆ ಮೋದಿ ಮೋಡಿ ಉತ್ತರ ಕರ್ನಾಟಕದಲ್ಲಿ ಕಡಿಮೆಯಾದಂತೆ ಕಾಣುತ್ತಿದೆ.
