ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ ಬಿಟ್ಟು ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನ ಬಂಧಿಸಬೇಕೆಂದು ಆಗ್ರಹಿಸಿ ರಾಯಚೂರು ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಕಾರ್ಯಕರ್ತೆಯರು ಪೊರಕೆ ಹಿಡಿದು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತೆಯರು, ಪೊರಕೆ ಹಿಡಿದು ಪ್ರಜ್ವಲ್ ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರ ರಕ್ಷಣೆ ಪರವಾಗಿ ಮಾತನಾಡುವ ಬಿಜೆಪಿ ಪಕ್ಷ ಇದೀಗ ಪ್ರಜ್ವಲ್ ರೇವಣ್ಣ ಪ್ರಕರಣ ವಿರುದ್ಧ ಮಾತನಾಡದೇ ಮೌನವಹಿಸಿದೆ ಎಂದು ಖಂಡಿಸಿದರು.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಇದೀಗ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಿದ್ದು, ಭಾರತಕ್ಕೆ ವಾಪಸ್ ಕರೆಯಿಸಿದ ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಹೋರಾಟ ಮಾಡದೇ ಮೌನವಹಿಸಿರುವುದನ್ನು ಖಂಡಿಸಿದರು.
ಪ್ರಜ್ವಲ್ ರೇವಣ್ಣ ನಡೆಸಿರುವುದು ವಿಕೃತ ಘಟನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು ತನಿಖೆ ನಡೆಯುತ್ತಿದೆ. ಕೂಡಲೇ ಪ್ರಜ್ವಲ್ ರೇವಣ್ಣರನ್ನು ಬಂಧಿಸಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಯಲಕ್ಷ್ಮೀ, ವಿಜಯಲಕ್ಷ್ಮೀ, ಕೆಪಿಸಿಸಿ ಕಾರ್ಯದರ್ಶಿ ಶ್ರೀದೇವಿ ನಾಯಕ, ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಬೀಮರಾಯ, ರಾಣ ರಿಚರ್ಡ್, ನವನೀತ, ಮಂಜುಳಾ ಅಮರೇಶ, ಪಲ್ಲವಿ, ಪದ್ಮಾವತಿ, ರಾಜೇಶ್ವರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.