ಮಂತ್ರಿಗಳು ಬಂದಾಗ ವಿಮಾನ ನಿಲ್ದಾಣಕ್ಕೆ ಬಂದು ಜೈಕಾರ ಕೂಗುವುದು, ಬ್ಯಾನರ್, ಪೋಸ್ಟರ್ ಹಾಕಿ ಪೋಸ್ ಕೊಡೋದ್ರಿಂದ ಲೀಡರ್ ಹಾಗೋದಿಲ್ಲ. ಪಕ್ಷಕ್ಕೂ ಪ್ರಯೋಜನ ಇಲ್ಲ. ಬೂತ್ ಮಟ್ಟದಲ್ಲಿ ಕೆಲಸ ಮಾಡಿ, ಬೂತ್ ಲೀಡರ್‌ಗಳನ್ನು ತಯಾರು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. “ಕೇವಲ ನಾಯಕರು ಬಂದಾಗ ಜೈಕಾರ ಹಾಕ್ತೀರಿ. ಆದರೆ ನೀವು ಮನೆ ಮನೆಗೆ ಹೋಗಿ ಪಕ್ಷದ ಸಾಧನೆ, ಸರ್ಕಾರದ ಸಾಧನೆಯ ಪ್ರಚಾರ ಮಾಡ್ತಾ ಇಲ್ಲ ಅನ್ನೋದು ನಮ್ಮ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಇನ್ನಾದರೂ ಫೀಲ್ಡಿಗೆ ಇಳಿಯಿರಿ” ಎಂದು ಖಡಕ್ಕಾಗಿ ಹೇಳಿದ್ದಾರೆ.
“ಪಕ್ಷದಿಂದ ಶಾಸಕರಾಗಿದ್ದೀರಿ, ಸಂಸದರಾಗಿದ್ದೀರಿ. ಪಕ್ಷ ನಿಮಗೆ ಎಲ್ಲವನ್ನೂ ಕೊಟ್ಟಿದೆ. ಪಕ್ಷಕ್ಕೆ ನೀವು ಕೂಡ ಕೊಡುಗೆ ನೀಡಬೇಕು. ನೀವು ಪಕ್ಷದ ತಳ ಮಟ್ಟದ ನಾಯಕನನ್ನು ತಯಾರು ಮಾಡಬೇಕು” ಎಂದು ಪಕ್ಷದ ಹಲವು ಮುಖಂಡರಿಗೆ ಸೂಚನೆ ನೀಡಿದರು.
“ಗ್ಯಾರಂಟಿಗಳ ಜಾರಿಗಾಗಿ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಸಮಿತಿ ರಚನೆಯಾಗುತ್ತದೆ. ಈ ಗ್ಯಾರಂಟಿ ಸಮಿತಿಗೆ ಮನೆ ಮನೆಗೆ ಹೋಗಿ ಪ್ರಚಾರ ಮಾಡಬಲ್ಲ ಕಾರ್ಯಕರ್ತರಿಗೆ ಮಾತ್ರ ಅವಕಾಶ ಕೊಡಿ. ಪಕ್ಷ ಸಂಘಟಿಸುವಾಗ ಸಣ್ಣ ಪುಟ್ಟ ಮನಸ್ತಾಪಕ್ಕಾಗಿ ಯಾರನ್ನು ಪಕ್ಷದಿಂದ ಉಚ್ಚಾಟಿಸುವುದು, ಹೊರ ಕಳಿಸುವ ಕೆಲಸ ಮಾಡಬೇಡಿ. ಸಾಧ್ಯವಾದರೆ ಹೊರಗಿನವರನ್ನು ಪಕ್ಷಕ್ಕೆ ಕರೆ ತನ್ನಿ” ಎಂದು ತಿಳಿಸಿದರು.
“ನಾವು ನಿರಂತರವಾಗಿ ಸೋಲುತ್ತಿದ್ದಚಿಕ್ಕಮಗಳೂರು, ಮಂಡ್ಯ, ಮಡಿಕೇರಿ, ರಾಮನಗರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದೇವೆ. ಅದು ನಮ್ಮ ಪರಿಶ್ರಮದ ಫಲ. ಕರಾವಳಿಯಲ್ಲೂ ಪರಿಶ್ರಮ ಪಟ್ಟರೆ ಪಾರ್ಲಿಮೆಂಟ್ ಚುನಾವಣೆ ಗೆಲ್ಲಬಹುದು. ನಮ್ಮ ಗ್ಯಾರಂಟಿ ಯೋಜನೆಗಳೇ ನಮಗೆ ಶ್ರೀರಕ್ಷೆ. ಪಕ್ಷದ ಕಾರ್ಯಕರ್ತರಿಗೂ ಹುದ್ದೆಗಳನ್ನು ಕೊಡ್ತೇವೆ. ಇನ್ನು ಸಮಯ ವ್ಯರ್ಥ ಮಾಡಬೇಡಿ” ಎಂದರು.
ಸಭೆಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮದ್, ಎಐಸಿಸಿ ಕಾರ್ಯದರ್ಶಿ ರೋಝಿ ಜಾನ್, ಮಾಜಿ ಸಚಿವ ಬಿ.ರಮಾನಾಥ ರೈ , ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ .ಹರೀಶ್ ಕುಮಾರ್, ಶಾಸಕರಾದ ಮಂಜುನಾಥ್ ಭಂಡಾರಿ, ಅಶೋಕ್ ಕುಮಾರ್ ರೈ, ಮಾಜಿ ಸಚಿವ ವಿನಯ ಕುಮಾರ್ ಸೊರೆಕೆ, ಅಭಯಚಂದ್ರ ಜೈನ್ , ಕಣಚೂರ್ ಮೋನು, ಮಾಜಿ ರಾಜ್ಯ ಸಭಾ ಸದಸ್ಯ ಬಿ. ಇಬ್ರಾಹಿಂ,ಮಾಜಿ ಶಾಶಕಿ ಶಕುಂತಲಾ ಶೆಟ್ಟಿ, ಉಡುಪಿ ಜಿಲ್ಲಾ ಅಧ್ಯಕ್ಷ ಅಶೋಕ್ ಕೊಡವೂರ್, ಮಿಥುನ್ ರೈ , ಮಾಜಿ ಶಾಸಕ ಐವಾನ್ ಡಿಸೋಜ, ಇನಾಯತ್ ಆಲಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ , ಜಿ.ಪಂ. ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಪದ್ಮರಾಜ್. ಆರ್, ಎಂ.ಎ.ಗಫೂರ್ ಮೊದಲಾದವರಿದ್ದರು.