ದೇಶದಲ್ಲಿ ಬಿರುಗಾಳಿ ಎಬ್ಬಿಸಿರುವ ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣದಲ್ಲಿ ಹೊಸ ಆರೋಪದೊಂದಿಗೆ ಯೂ ಟರ್ನ್ ಹೊಡೆದಿರುವ ವಕೀಲ ದೇವರಾಜೇಗೌಡ, “ಈ ಪ್ರಕರಣದಲ್ಲಿ ಷಡ್ಯಂತ್ರ ಮಾಡಲಾಗಿದೆ. ಈ ಎಲ್ಲ ಬೆಳವಣಿಗೆಯ ರೂವಾರಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್” ಎಂದು ಗಂಭೀರ ಆರೋಪ ಹೊರಿಸಿದ್ದಾರೆ.
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಹೈಕಮಾಂಡ್‌ಗೆ ಪತ್ರ ಬರೆದು, “ಪ್ರಜ್ವಲ್ ರೇವಣ್ಣ ಅವರದ್ದು ಅಶ್ಲೀಲ ವಿಡಿಯೋ ಸಿಕ್ಕಿದೆ. ಹಾಗಾಗಿ ಜೆಡಿಎಸ್ ಜೊತೆಗೆ ಮೈತ್ರಿ ಬೇಡ. ಮುಂದೆ ಸಮಸ್ಯೆಯಾಗಬಹುದು” ಎಂದು ಇದೇ ದೇವರಾಜೇಗೌಡ ತಿಳಿಸಿದ್ದರು. ಅಲ್ಲದೇ, ಹಾಸನದಲ್ಲಿ ಕೆಲ ತಿಂಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ, “ತಡೆಯಾಜ್ಞೆ ತೆರವುಗೊಳಿಸದರೆ, ಎಲ್‌ಇಡಿ ಮೂಲಕ ಹಾಸನ ನಗರದಲ್ಲಿ ವಿಡಿಯೋ ಪ್ರದರ್ಶನ ಮಾಡುವೆ” ಎಂದಿದ್ದರು. ಈಗ ಪ್ರಕರಣ ದೇಶಾದ್ಯಂತ ಸುದ್ದಿಯಲ್ಲಿರುವ ಮಧ್ಯೆಯೇ ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ತುರ್ತು ಸುದ್ದಿಗೋಷ್ಠಿ ಕರೆದ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ, “ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಸಭೆಯನ್ನು ಗೌಪ್ಯವಾಗಿ ಮಾಡಲಾಗಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಯಾರನ್ನು ಆರೋಪಿಗಳಾಗಿ ಮಾಡಬೇಕು, ಬಿಡಬೇಕು ಅಂತ ಚರ್ಚೆಯಾಗಿದೆ. ಈ ಬಗ್ಗೆ ಬೇಕಾದರೆ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಸರ್ಕಾರ ಹೂಡಲಿ” ಎಂದು ಸವಾಲೆಸೆದಿದ್ದಾರೆ.
“ನನ್ನ ಜೀವನದ ಹೋರಾಟ ಇದ್ದದ್ದು ಎಚ್.ಡಿ ರೇವಣ್ಣ ವಿರುದ್ಧ ಆಗಿತ್ತು. ನನ್ನ ಹೋರಾಟದ ಪ್ರತಿಫಲ ನಿಜವಾದ ನ್ಯಾಯ ಸಿಕ್ಕಿದೆ ಅಂದು ಕೊಂಡಿದ್ದೆ. ಇದನ್ನೇ ಅಸ್ತ್ರವಾಗಿ ಇಟ್ಕೊಂಡು ಕೆಲ ಕಿಡಿಗೇಡಿ ರಾಜಕಾರಣಿಗಳು ಅಸ್ತ್ರವಾಗಿ ಇಟ್ಕೊಂಡಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಎಸ್‌ಐಟಿ ಮುಖ್ಯಸ್ಥರು ಹಾಗೂ ತನಿಖಾಧಿಕಾರಿಗಳನ್ನು ಎರಡು ಬಾರಿ ಭೇಟಿಯಾಗಿದ್ದೇನೆ. ಸಾಕ್ಷಿಯನ್ನಾಗಿ ನನ್ನ ಹೇಳಿಕೆ ಪಡೆದಿದ್ದಾರೆ. ಕೆಲವು ಕಹಿ ಸತ್ಯ ಹೇಳಬೇಕಿದೆ. ತಡೆಯಾಜ್ಞೆ ಇದ್ದರೂ ಸಹ ಅಶ್ಲೀಲ ವೀಡಿಯೋ ಪೆನ್ ಡ್ರೈವ್ ಹಂಚಿರುವ ಬಗ್ಗೆ ಹಾಸನದಲ್ಲಿ ಎಫ್‌ಐಆರ್ ಆಗಿದೆ. ಅಶ್ಲೀಲ ವೀಡಿಯೋ ಆಗಿದ್ರೂ ಹೆಣ್ಣು ಮಕ್ಕಳ ಮುಖವನ್ನು ಮರೆ ಮಾಚಿಲ್ಲ” ಎಂದು ದೇವರಾಜೇಗೌಡ ಹೇಳಿದರು.
“ಕಾರ್ತಿಕ್ ನನ್ನ ಕಚೇರಿಗೆ ಬಂದು ನನ್ನ ಕೈಗೆ ಈ ಕಾಪಿ ಕೊಡುತ್ತಾನೆ. ಇದರ ಜೊತೆಗೆ ಒಂದು ಪೆನ್‌ಡ್ರೈವ್ ಕೊಡ್ತಾನೆ. 88ನೇ ಪ್ರತಿವಾದಿಯಾಗಿ ಇದರಲ್ಲಿ ಕಾರ್ತಿಕ್ ಇದ್ದಾನೆ. ನಾನು ವಿಚಾರಣೆಗೆ ಹೋದಾಗ ನನ್ನ ಹೇಳಿಕೆ ಪಡೆದಿದ್ದಾರೆ, ದಾಖಲೆ ಕೊಟ್ಟಿದ್ದೇನೆ. ನಾನು ಹೇಳಿಕೆಯಲ್ಲಿ ಬಹಳ ಪ್ರಮುಖ ಅಂಶವನ್ನ ಉಲ್ಲೇಖ ಮಾಡಿದ್ದೇನೆ. ಕಾರ್ತಿಕ್ ನನ್ನ ಮನೆಗೆ ಬಂದಿರುವ ವೀಡಿಯೋ ಇದು” ಎಂದು ಹೇಳುತ್ತಾ ದೇವರಾಜೇಗೌಡ ಅವರು ತಮ್ಮ ಲ್ಯಾಪ್‌ಟಾಪ್ ನಲ್ಲಿ ಕಾರ್ತಿಕ್ ಮನೆಗೆ ಬಂದಿರುವ ವಿಡಿಯೋವನ್ನು ಮಾಧ್ಯಮದವರಿಗೆ ಪ್ರದರ್ಶಿಸಿದರು.
ಡಿ.ಕೆ. ಶಿವಕುಮಾರ್ ಅವರ ಪಾತ್ರ ಇದೆ ಎಂದ ದೇವರಾಜೇಗೌಡ
“ಇದಕ್ಕೆಲ್ಲಾ ಕಾರಣ ಸರ್ಕಾರದ ಮಹಾನ್ ನಾಯಕ ಎಂದು ಕಾರ್ತಿಕ್ ವಿಡಿಯೋದಲ್ಲಿ ಹೇಳಿದ್ದಾನೆ. ಪುಟ್ಟರಾಜು ಅನ್ನುವವರ ಮೂಲಕ ಪೆನ್‌ಡ್ರೈವ್ ಬೆಂಗಳೂರಿಗೆ ಬಂತು. ಮುಖ್ಯಮಂತ್ರಿಗಳು ರಹಸ್ಯ ಸ್ಥಳದಲ್ಲಿ ಸೀನಿಯರ್ ಅಧಿಕಾರಿಗಳ ಭೇಟಿ ಮಾಡಿದ್ದಾರೆ ಎಂದು ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.
“ಈ ಎಲ್ಲ ಘಟನೆಗಳ ಕಥಾನಾಯಕರೇ ಕಾಂಗ್ರೆಸ್ ಪಕ್ಷ. ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಹಾಗೂ ಮತ್ತೋರ್ವ ಮಧ್ಯವರ್ತಿ. ದೇವರಾಜೇಗೌಡನನ್ನ ಆರೋಪಿ ಮಾಡಬೇಕು, ಕೇಸ್ ಮುಗಿಸಬೇಕು ಅನ್ನುವುದು ಅವರ ಅಜೆಂಡಾ. ನನಗೆ ಕ್ಯಾಬಿನೆಟ್ ಪೋಸ್ಟ್ ಕೊಡುವ ಆಫರ್ ಮಾಡಿದ್ದಾರೆ. ಪೆನ್ ಡ್ರೈವ್ ವಿಚಾರವಾಗಿ ಹಾಸನ ಕಾಂಗ್ರೆಸ್ ಅಭ್ಯರ್ಥಿಗೆ ಪೆನ್‍ಡ್ರೈವ್ ಹೇಗೆ ತಲುಪಿತು” ಎಂದು ಪ್ರಶ್ನಿಸಿದರು.
ಈ ಎಲ್ಲ ಪ್ರಕರಣದ ಹಿಂದೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪಾತ್ರ ಇದೆ ಎಂಬ ಗಂಭೀರ ಆರೋಪ ಮಾಡಿರುವ ಅವರು, ಡಿಕೆಶಿಯದ್ದು ಎನ್ನಲಾದ ಆಡಿಯೊವನ್ನು ಮಾಧ್ಯಮದವರ ಮುಂದೆ ಪ್ಲೇ ಮಾಡಿದ್ದಾರೆ.
“ತಮಗೆ ಎಸ್‌ಐಟಿ ಮೇಲೆ ಯಾವುದೇ ನಂಬಿಕೆ ಇಲ್ಲ. ಹೀಗಾಗಿ ಈ ಎಲ್ಲ ಸಾಕ್ಷಿಗಳನ್ನು ನೇರವಾಗಿ ಸಿಬಿಐಗೆ ನೀಡುತ್ತೇನೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬುದು ನನ್ನ ಆಗ್ರಹ” ಎಂದರು.
‘ಶಿವರಾಮೇ ಗೌಡ ಮಧ್ಯವರ್ತಿ’ ಎಂದ ದೇವರಾಜೇಗೌಡ
“ಈ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ ಎಸ್‌ಐಟಿಯಲ್ಲಿರುವ ಎಸ್‍ಪಿ ಒಬ್ಬರು ಡಿಕೆ ಶಿವಕುಮಾರ್ ಅವರ ಹೆಸರು ವಾಪಸ್ ತೆಗೆಯಿರಿ ಅಂತ ಒತ್ತಡ ಹಾಕಿದ್ದಾರೆ. ಎಲ್ ಆರ್ ಶಿವರಾಮೇಗೌಡ, ಈ ಪ್ರಕರಣದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಡ. ಡಿಕೆಶಿ ಸಿದ್ದರಾಮಯ್ಯ ಅವರನ್ನು ಕೂಡ ಸಿಲುಕಿಸಬೇಡ ಅಂದಿದ್ದಾರೆ” ಎನ್ನುವ ಆಡಿಯೋ ಬಿಡುಗಡೆ ಮಾಡಿದ್ದು, ಎಲ್ಲದಕ್ಕೂ ‘ಶಿವರಾಮೇ ಗೌಡ ಮಧ್ಯವರ್ತಿ’ ಎಂದು ಆರೋಪ ಮಾಡಿದ್ದಾರೆ.
“ಶಿವರಾಮೇಗೌಡ ಮಧ್ಯವರ್ತಿಯಾಗಿ 10ಕ್ಕೂ ಹೆಚ್ಚು ಬಾರಿ ಫೈವ್‌ಸ್ಟಾರ್ ಹೊಟೇಲ್‌ಗಳಲ್ಲಿ ಭೇಟಿ ಮಾಡಿದ್ದಾರೆ. ಪೆನ್‌ಡ್ರೈವ್ ಹಂಚಿರುವ ವ್ಯಕ್ತಿಗಳನ್ನು ಎಸ್‌ಐಟಿ ಈವರೆಗೆ ಪತ್ತೆ ಮಾಡಿಲ್ಲ. ಅವರ ಲೊಕೇಷನ್, ಫೋನ್ ನಂಬರ್ ಕೊಟ್ಟರೂ ಪತ್ತೆ ಮಾಡಿಲ್ಲ. ಇದೆಲ್ಲದರ ಸೂತ್ರಧಾರ ರಾಜ್ಯ ಸರ್ಕಾರ” ಎಂದು ದೇವರಾಜೇಗೌಡ ನೇರವಾಗಿ ಆರೋಪ ಮಾಡಿದರು.
‘ನರೇಂದ್ರ ಮೋದಿಯೇ ಟಾರ್ಗೆಟ್’ ಎಂದ ವಕೀಲ ದೇವರಾಜೇಗೌಡ
“ನಿನ್ನೆ ಸಂಜೆವರೆಗೂ ನನ್ನ ಜೊತೆ ಸಂಧಾನ ಮಾತುಕತೆ ಮಾಡಿದ್ದಾರೆ. ನಾನು ಒಪ್ಪಲಿಲ್ಲ. ಹೀಗಾಗಿ ನಿನ್ನೆ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಮೂರು ದಿನದ ಹಿಂದೆ ರಾತ್ರಿ 12 .48 ಗಂಟೆಗೆ ಡಿಕೆಶಿಯವರು ನನಗೆ ಫೋನ್ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಿರುವುದರಿಂದ ಮೋದಿಯವರನ್ನ ಟಾರ್ಗೆಟ್ ಮಾಡಿ ಇಷ್ಟೆಲ್ಲ ಮಾಡಿದ್ದಾರೆ. ಮೈತ್ರಿ ಮಾಡಿಕೊಂಡಿರುವುದಕ್ಕೆ ಬಿಜೆಪಿ ಹಾಗೂ ನರೇಂದ್ರ ಮೋದಿಯವರನ್ನು ಗುರಿಯಾಗಿಸಲು ಈ ರೀತಿ ಮಾಡಿದ್ದಾರೆ” ಎಂದು ವಕೀಲ ದೇವರಾಜೇಗೌಡ ಆರೋಪಿಸಿದ್ದಾರೆ.
“ಎಸ್‍ಐಟಿಯ ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡುತ್ತಿಲ್ಲ. ಬದಲಾಗಿ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ಮೊಬೈಲ್‍ಗೆ ನಿತ್ಯ ಹತ್ತಾರು ಕರೆಗಳು ಬರ್ತಿವೆ. ಸಿಎಂ-ಡಿಸಿಎಂ ಹಾಗೂ ಸಚಿವರುಗಳಿಂದಲೂ ನಿರಂತರ ಕರೆ ಬರುತ್ತಿದೆ. ಆದ್ದರಿಂದ ಇವರಿಂದ ನ್ಯಾಯ ಸಿಗುವ ವಿಶ್ವಾಸವಿಲ್ಲ. ಮುಖ್ಯಮಂತ್ರಿಗಳು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲವಾದಲ್ಲಿ ನಾವೇ ವಕೀಲರು ಹೋರಾಟ ಮಾಡಿ ಸಿಬಿಐಗೆ ಕೊಡುವಂತೆ ಮಾಡುತ್ತೇವೆ. ಈ ಪ್ರಕರಣಕ್ಕೆ ಸಂಬಂಧಿಸಿ ನನಗೆ ಎಸ್‌ಐಟಿಯ ಮೇಲೆ ನಂಬಿಕೆ ಇಲ್ಲ. ಹಾಗಾಗಿ, ಸಿಬಿಐಗೆ ಕೊಟ್ಟರೆ ನನ್ನಲ್ಲಿರುವ ಎಲ್ಲ ದಾಖಲೆಗಳನ್ನು ಸಿಬಿಐಗೆ ನೀಡುತ್ತೇನೆ” ಎಂದು ದೇವರಾಜೇಗೌಡ ಹೇಳಿಕೆ ನೀಡಿದ್ದಾರೆ.
