“ಪೆನ್‌ಡ್ರೈವ್ ಪ್ರಕರಣದ ತನಿಖೆಯಲ್ಲಿ ಎಸ್‌ಐಟಿಯ ಇಷ್ಟು ದಿನದ ಸಾಧನೆ ಏನು? ಈ ಬಗ್ಗೆ ರಾಜ್ಯಪಾಲರಿಗೆ ಇಂದು ಮಧ್ಯಾಹ್ನ (ಏ.9) ದೂರು ಕೊಡುತ್ತಿರುವೆ. ಎಸ್‌ಐಟಿ ತನಿಖೆ ಹೇಗೆ ನಡೆಯುತ್ತಿದೆ ಎಂಬುದು ರಾಜ್ಯಪಾಲರ ಎದುರು ವಿವರಿಸುವೆ” ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಯಾರಿಗೆ ನಿಜವಾಗಿಯೂ ಶಿಕ್ಷೆಯಾಗಬೇಕು? ಈ ಬಗ್ಗೆ ಮೊದಲನೇ ದಿನದಿಂದಲೂ ಹೇಳುತ್ತ ಬಂದಿರುವೆ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಅನುಭವಿಸಲಿ. ಆದರೆ ಇಲ್ಲಿ ನಡೆಯುತ್ತಿರುವ ವಾತಾವರಣ ನೋಡಿದ್ರೆ, ಸರ್ಕಾರಕ್ಕೆ ಯಾರಿಗೂ ಶಿಕ್ಷೆ ಕೊಡಿಸುವುದು ಬೇಕಿಲ್ಲ, ಪ್ರಚಾರ ಬೇಕು. ಅದಕ್ಕಾಗಿ ಇದೆಲ್ಲ ನಡೆಯುತ್ತಿದೆ” ಎಂದು ಆರೋಪಿಸಿದರು.
“ಈಗ ಮಹಾನ್ ಕೃಷ್ಣ ಬೈರೇಗೌಡರು ಬೇರೆ ಪ್ರವೇಶಿಸಿದ್ದಾರೆ. ಮಂಡ್ಯ ಲೀಡರ್, (ಚಲುವರಾಯಸ್ವಾಮಿ) ರಾಮಲಿಂಗಾರೆಡ್ಡಿ ಹಾಗೂ ಸುಧಾಕರ್ ಅವರು ಒಕ್ಕಲಿಗ ಸಮುದಾಯದ ಮಂತ್ರಿಗಳು ಸೇರಿ ನನ್ನ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆ. ನಾನು ಈ ಹಿಂದೆ ಭ್ರಷ್ಟಾಚಾರದ ಹೋರಾಟ ಮಾಡಲು ಹೋದಾಗ ಆಗಲೂ ಒಕ್ಕಲಿಗ ನಾಯಕರನ್ನೇ ಮುಂದೆಬಿಟ್ಟು ನನ್ನ ಮೇಲೆ ಅಟ್ಯಾಕ್ ಮಾಡಿಸಿದರು. ಈಗ ಅದೇ ತಂತ್ರ ಇಲ್ಲಿ ಮುಂದುವರಿಸಿದ್ದಾರೆ” ಎಂದು ಕುಟುಕಿದರು.
“ಕಿಡ್ನಾಪ್ ಆದ ಮಹಿಳೆಯ ಕುಟುಂಬಸ್ಥರನ್ನು ಎಲ್ಲೋ ಕೂಡಿಹಾಕಿದ್ದಾರೆ ಎಂಬ ಮಾಹಿತಿ ಇದೆ. ಕಿಡ್ನಾಪ್ ಆದ ಮಹಿಳೆಯನ್ನು ಕರ್ಕೊಂಡು ಬಂದು ಎಷ್ಟು ದಿನ ಆಯ್ತು? 164 ಹೇಳಿಕೆ ತೆಗೆದುಕೊಂಡಿದ್ದರಾ? ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರಾ? ಐದು ದಿನ ಆದ್ರೂ ಯಾಕೆ ಕೋರ್ಟ್ ಮುಂದೆ ಹಾಜರು ಪಡಿಸಿಲ್ಲ? ನಿಜವಾಗಲೂ ತೋಟದ ಮನೆಯಿಂದಲೇ ಕರ್ಕೊಂಡು ಬಂದ್ರಾ? ಎಂಬುದು ಬಯಲಾಗಬೇಕು” ಎಂದು ಆಗ್ರಹಿಸಿದರು.
“ರೇವಣ್ಣ ಅವರೇ ಆ ಮಹಿಳೆಯನ್ನು ಕಿಡ್ನಾಪ್ ಮಾಡಿಸಿದ್ದಾರೋ ಇಲ್ಲವೋ ಎಂಬುದನ್ನು ಎಸ್‌ಐಟಿ ಹೇಳಬೇಕಲ್ವಾ? ಯಾಕೆ ಇಷ್ಟು ತಡವಾಗುತ್ತಿದೆ? ಕಾರಣ ರೇವಣ್ಣ ಅವರನ್ನು ಇನ್ನೂ ನಾಲ್ಕು ದಿನ ಜೈಲಿನಲ್ಲಿ ಇಡಬೇಕು ಎಂಬುದು ಕೆಲವರ ಆಸೆ. ಸತ್ಯಾಂಶ ಹೊರಗೆ ಬರುವುದು ಸರ್ಕಾರಕ್ಕೆ ಬೇಕಿಲ್ಲ. ಜೂನ್ 4ರಂದು ಎಲ್ಲ ವಿಷಯಗಳು ತೆರೆ ಬೀಳಲಿವೆ” ಎಂದು ಹೇಳಿದರು.
