ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಮ್ಯೂನಿಕ್ ವಿಮಾನ ನಿಲ್ದಾಣದಿಂದ ಬೆಂಗಳೂರಿನತ್ತ ಹೊರಟಿರುವುದಾಗಿ ತಿಳಿದುಬಂದಿದೆ.
ಭಾರತೀಯ ಕಾಲಮಾನ ಸಂಜೆ 4.09ಕ್ಕೆ ಮ್ಯೂನಿಕ್‌ನಿಂದ ಟೇಕಾಫ್ ಆಗಿರುವ ಲುಫ್ತಾನ್ಸಾ ಏರ್‌ಲೈನ್ಸ್‌ನ ಎಲ್‌ಎಚ್ 764 ವಿಮಾನದಲ್ಲಿ ಹತ್ತಿರುವುದಾಗಿ ತಿಳಿದುಬಂದಿದ್ದು, ಗುರುವಾರ ತಡರಾತ್ರಿ 12.40ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ ಎಂದು ವರದಿಯಾಗಿದೆ.
ವಿಮಾನದಲ್ಲಿ ಪ್ರಜ್ವಲ್ ರೇವಣ್ಣ ಇರುವ ಮಾಹಿತಿ ಎಸ್‌ಐಟಿಗೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ, ರಾತ್ರಿ ಪ್ರಜ್ವಲ್ ರೇವಣ್ಣ ಅವರು ಬೆಂಗಳೂರಿಗೆ ಬರುತ್ತಿದ್ದಂತೆ ವಶಕ್ಕೆ ಪಡೆಯಲು ಅಧಿಕಾರಿಗಳು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ.
ಮ್ಯೂನಿಕ್ ವಿಮಾನ ನಿಲ್ದಾಣದಿಂದ ಹೊರಟಿರುವ ವಿಮಾನವು, ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ಕ್ಕೆ ಬಂದಿಳಿಯಲಿದೆ. ಹೀಗಾಗಿ, ನಿಲ್ದಾಣದಲ್ಲಿಯೇ ಅಧಿಕಾರಿಗಳ ತಂಡ ಬೀಡು ಬಿಟ್ಟಿದೆ. ನಿಲ್ದಾಣದ ಅಧಿಕಾರಿಗಳ ಸಹಾಯದಿಂದ ಪ್ರಜ್ವಲ್ ಅವರನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿದುಬಂದಿದೆ. ಪ್ರಜ್ವಲ್ ಅವರು ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿಕೊಂಡೇ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಯಾಗಿದೆ.
ಎಸ್‌ಐಟಿ ಅಧಿಕಾರಿಗಳು ಕರೆದೊಯ್ಯಲಿರುವ ಬಳ್ಳಾರಿ ರಸ್ತೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಎಸ್‌ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್ ಅವರು ಸೂಕ್ತ ಬಂದೋಬಸ್ತ್ ಒದಗಿಸುವಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರಲ್ಲಿ ಮನವಿ ಮಾಡಿರುವುದಾಗಿ ತಿಳಿದುಬಂದಿದೆ.
ಸಿಎಂ, ಡಿಸಿಎಂ ಸಭೆ
ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಎಲ್ಲ ವಿವರಗಳನ್ನು ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಅಲ್ಲದೇ, ಪ್ರಕರಣದ ಬಗ್ಗೆ ಮುಂದಿನ ಕಾನೂನು ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಿರುವುದಾಗಿ ವರದಿಯಾಗಿದೆ.
ಮೇ 31ರಂದು ಎಸ್‌ಐಟಿ ಮುಂದೆ ಹಾಜರು
ವಿದೇಶದಲ್ಲಿದ್ದುಕೊಂಡೇ ಇತ್ತೀಚೆಗೆ ವಿಡಿಯೋವನ್ನು ಬಿಡುಗಡೆಗೊಳಿಸಿದ್ದ ಪ್ರಜ್ವಲ್ ರೇವಣ್ಣ, “ಮೇ 31 ರಂದು ಎಸ್‌ಐಟಿ ಪೊಲೀಸರೆದುರು ಹಾಜರಾಗಿ ತನಿಖೆಗೆ ಸಹಕರಿಸುತ್ತೇನೆ” ಎಂದು ತಿಳಿಸಿದ್ದ.
ಇದನ್ನು ಓದಿದ್ದೀರಾ? ಸಿಎಂ, ನನ್ನ ವಿರುದ್ಧ ಕೇರಳದ ದೇವಸ್ಥಾನದಲ್ಲಿ ಶತ್ರು ಸಂಹಾರ ಯಾಗ ನಡೀತಿದೆ: ಡಿ ಕೆ ಶಿವಕುಮಾರ್ ಆರೋಪ
ವಿಡಿಯೋದಲ್ಲಿ, “ನನ್ನನ್ನು ತಪ್ಪು ತಿಳಿಯಬೇಡಿ. ಮೇ 31 ರಂದು 10 ಗಂಟೆಗೆ ನಾನು ಎಸ್‌ಐಟಿ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುತ್ತೇನೆ. ನಾನು ನ್ಯಾಯಾಂಗವನ್ನು ನಂಬಲಿದ್ದು, ಇವೆಲ್ಲವು ನನ್ನ ವಿರುದ್ಧ ವಿರುವ ಸುಳ್ಳು ಪ್ರಕರಣಗಳಾಗಿವೆ. ನಾನು ಕಾನೂನನ್ನು ನಂಬುತ್ತೇನೆ” ಎಂದು ಪ್ರಜ್ವಲ್ ರೇವಣ್ಣ ತಿಳಿಸಿದ್ದ.
