ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಪಟ್ಟಂತೆ ಪೆನ್‌ಡ್ರೈವ್ ಹಂಚಿಕೆ ಮತ್ತು ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಿಯೋಗವು ಇಂದು ರಾಜ್ಯಪಾಲರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿತು.
ರಾಜಭವನಕ್ಕೆ ತೆರಳಿ ಜೆಡಿಎಸ್ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯನವರ ಕಚೇರಿ, ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನೂ ಕೂಡ ಥಳುಕು ಹಾಕಿದ್ದಾರೆ. ಅವರ ಹುದ್ದೆಯ ಘನತೆಯನ್ನು ಹಾಳುಗೆಡವಲು ಯತ್ನಿಸಿದ್ದಾರೆ. ಹಾಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಿ” ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹಾಸನ ಪ್ರಕರಣ ಹಾಗೂ ಪೆನ್ ಡ್ರೈವ್ ಹಂಚಿಕೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ, ಮಾಜಿ ಮುಖ್ಯಮಂತ್ರಿಗಳು ಹಾಗು @JanataDal_S ರಾಜ್ಯಾಧ್ಯಕ್ಷರಾದ ಶ್ರೀ @hd_kumaraswamy ಅವರ ನೇತೃತ್ವದಲ್ಲಿ ಜೆಡಿಎಸ್ ನಿಯೋಗ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಲಾಯಿತು. pic.twitter.com/EaXfFL883Q
— Janata Dal Secular (@JanataDal_S) May 9, 2024
ಅಲ್ಲದೇ, ಮನವಿಯಲ್ಲಿ, “ರಾಜ್ಯ ಸರ್ಕಾರವು ಈ ಪ್ರಕರಣಕ್ಕೆ ಸಂಬಂಧಿಸಿ ರಚಿಸಿರುವ ವಿಶೇಷ ತನಿಖಾ ದಳದ ತನಿಖೆಯು ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ. ರಾಜ್ಯ ಸರ್ಕಾರದ ಹಸ್ತಕ್ಷೇಪಗಳು ಕೂಡ ಇರುವ ಬಗ್ಗೆ ತಿಳಿದುಬಂದಿದೆ. ಹಾಗಾಗಿ, ಪೆನ್‌ಡ್ರೈವ್ ಹಂಚಿಕೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ನಡೆಯಬೇಕಾದರೆ ಸಿಬಿಐಗೆ ವಹಿಸಬೇಕು. ಸಿಬಿಐಗೆ ವಹಿಸುವಂತೆ ತಮ್ಮಿಂದಾದ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಿಯೋಗ ಆಗ್ರಹಿಸಿದೆ.
“ಈ ಪ್ರಕರಣದ ಹಿಂದಿನ ಮಾಸ್ಟರ್‍ಮೈಂಡ್ ಡಿಸಿಎಂ ಡಿ ಕೆ ಶಿವಕುಮಾರ್. ಅವರನ್ನು ಸಂಪುಟದಿಂದ ಕೈಬಿಡಬೇಕು. ಪೆನ್‌ಡ್ರೈವ್ ಹಂಚಿರುವುದರಲ್ಲಿ ನೇರ ಆರೋಪ ಹೊತ್ತಿರುವ ಹಾಸನದ ಕಾಂಗ್ರೆಸ್ ಕಾರ್ಯಕರ್ತ ನವೀನ್ ಗೌಡ ಅವರನ್ನು ಪೊಲೀಸರು ಈವರೆಗೆ ಬಂಧಿಸಿಲ್ಲ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವಿದೆ. ಹಾಗಾಗಿ, ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸುತ್ತಿದ್ದೇವೆ” ಎಂದು ಮನವಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದಲ್ಲಿ ನಡೆದಿರುವ ಎಲ್ಲ ಬೆಳವಣಿಗೆಗಳನ್ನು ಉಲ್ಲೇಖಿಸಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿದೆ.
ಜೆಡಿಎಸ್‌ನ ಈ ನಿಯೋಗದಲ್ಲಿ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಸೇರಿದಂತೆ ಬಹುತೇಕ ಎಲ್ಲ ಜೆಡಿಎಸ್ ಶಾಸಕರು ಉಪಸ್ಥಿತರಿದ್ದರು.
ಜೆಡಿಎಸ್‌ಗೆ ಸಾಥ್ ನೀಡದ ಮೈತ್ರಿ ಪಕ್ಷ ಬಿಜೆಪಿ!
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆಗೆ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಮುಖಂಡರು, ರಾಜ್ಯಪಾಲರನ್ನು ಭೇಟಿಯ ವೇಳೆ ಜೆಡಿಎಸ್‌ಗೆ ಸಾಥ್ ನೀಡಿಲ್ಲ. ಚುನಾವಣೆ ಮುಗಿಯುವವರೆಗೂ ಒಟ್ಟಾಗಿ ಓಡಾಡಿದ್ದ ಬಿಜೆಪಿ ನಾಯಕರು, ಪ್ರಜ್ವಲ್ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದಾರೆ.
ರಾಜ್ಯಪಾಲರ ಇಂದಿನ ಭೇಟಿಯ ವೇಳೆ ತೆರಳಿದ ನಿಯೋಗದಲ್ಲಿ ಒಬ್ಬನೇ ಒಬ್ಬ ಬಿಜೆಪಿ ಮುಖಂಡ ಇರಲಿಲ್ಲ. ಲೋಕಸಭಾ ಚುನಾವಣೆಯ ಫಲಿತಾಂಶ ಬರುವುದಕ್ಕೂ ಮುನ್ನವೇ ಮೈತ್ರಿ ಮುರಿದು ಹೋಗಿದೆಯಾ ಎಂಬ ಅನುಮಾನ ಕಾಡತೊಡಗಿದೆ.
