’ಇದು ಶಮಿ ಫೈನಲ್’ ಆಗಿತ್ತೆಂದು ಕ್ರಿಕೆಟ್ ಪ್ರೇಮಿಗಳು ಪ್ರತಿಕ್ರಿಯಿಸಿದ ಬಳಿಕ ಜೋಶಿಯವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಎಡಿಟ್ ಮಾಡಿದ್ದರೂ ಎಕ್ಸ್ ಖಾತೆಯಲ್ಲಿ ತಪ್ಪು ಹಾಗೆಯೇ ಉಳಿದಿದೆ
ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್‌ನಲ್ಲಿ ಭಾರತ ಗೆದ್ದಿದೆ. ’ಇದು ಸಮಿಫೈನಲ್ ಆಗಿರಲಿಲ್ಲ’, ’ಶಮಿ ಫೈನಲ್’ ಆಗಿತ್ತು ಎಂದು ಕ್ರಿಕೆಟ್ ಪ್ರೇಮಿಗಳು ಸಹಜವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಬಿಜೆಪಿಯ ಪ್ರಭಾವಿ ನಾಯಕ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಬೌಲರ್ ಮೊಹಮ್ಮದ್ ಶಮಿಯವರ ಹೆಸರನ್ನು ಉಲ್ಲೇಖಿಸದೆ ’ಎಕ್ಸ್’ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವುದು ಭಾರೀ ಟೀಕೆಗೆ ಒಳಗಾಗಿದೆ.
“ಅಂದು ಇಂದು ಎಂದೆಂದೂ… ಟೀಂಭಾರತ ಜೈ ಹೋ. ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಮಾಂಚನಕಾರಿ ಆಟದ ಮೂಲಕ ಗೆಲುವಿನ ಕಿರೀಟವನ್ನು ಮುಡಿಗೇರಿಸಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಹಾಗೂ ಶತಕದ ಗಡಿ ದಾಟಿ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರಿಗೆ ಅಭಿನಂದನೆಗಳು. ಫೈನಲ್ ಪಂದ್ಯದಲ್ಲೂ ಗೆಲುವು ನಿಮ್ಮದಾಗಲಿ, ಅಂದರೆ ನಮ್ಮೆಲ್ಲರದ್ದಾಗಲಿ. ಶುಭವಾಗಲಿ” ಎಂದು ಟ್ವೀಟ್ ಮಾಡಿದ್ದಾರೆ.
ಅಂದು ಇಂದು ಎಂದೆಂದೂ… ಟೀಂಭಾರತ ಜೈ ಹೋ 🇮🇳
ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಮಾಂಚನಕಾರಿ ಆಟದ ಮೂಲಕ ಗೆಲುವಿನ ಕಿರೀಟವನ್ನು ಮುಡಿಗೇರಿಸಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಹಾಗೂ ಶತಕದ ಗಡಿ ದಾಟಿ ದಾಖಲೆ ನಿರ್ಮಿಸಿದ @imVkohli ಹಾಗೂ @ShreyasIyer15 ಅವರಿಗೆ ಅಭಿನಂದನೆಗಳು.
ಫೈನಲ್ ಪಂದ್ಯದಲ್ಲೂ…
— Pralhad Joshi (@JoshiPralhad) November 15, 2023
ಶ್ರೇಯಸ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿಯವರ ಹೆಸರನ್ನು ಮಾತ್ರ ಉಲ್ಲೇಖಿಸಿ, ಶಮಿಯವರನ್ನು ಕಡೆಗಣಿಸಿ ’ಎಕ್ಸ್’ನಲ್ಲಿ ಹಾಕಿರುವ ಪೋಸ್ಟ್‌ಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಫೇಸ್‌ಬುಕ್ ಖಾತೆಯಲ್ಲಿ ಪ್ರಲ್ಹಾದ್ ಜೋಶಿಯವರು ತಮ್ಮ ಪೋಸ್ಟ್‌ಅನ್ನು ಒಟ್ಟು ನಾಲ್ಕು ಬಾರಿ ಎಡಿಟ್ ಮಾಡಿರುವುದು ಕಂಡು ಬಂದಿದೆ.
ಫೇಸ್‌ಬುಕ್‌ನಲ್ಲಿ ನವೆಂಬರ್ 15ರ ರಾತ್ರಿ 10.30ಕ್ಕೆ ಪೋಸ್ಟ್ ಹಾಕಿದ್ದರು. ರಾತ್ರಿ 10.32ಕ್ಕೆ ಎರಡನೇ ಸಲ, 10.44ಕ್ಕೆ ಮೂರನೇ ಸಲ, 10.46ಕ್ಕೆ 4ನೇ ಸಲ ಪೋಸ್ಟ್ ಎಡಿಟ್ ಆಗಿರುವುದನ್ನು ಕಾಣಬಹುದು. ನಾಲ್ಕನೇ ಬಾರಿ ಎಡಿಟ್ ಮಾಡುವಾಗ ಶಮಿಯವರ ಸಾಧನೆಯನ್ನು ಉಲ್ಲೇಖಿಸಿದ್ದಾರೆ.
“ಅತ್ಯದ್ಭುತ ಬೌಲಿಂಗ್ ಮೂಲಕ ತಂಡದ ಗೆಲುವಿಗೆ ಕಾರಣರಾದ ಮೊಹಮ್ಮದ್ ಶಮಿ ಅವರಿಗೆ ಅಭಿನಂದನೆಗಳು” ಎಂಬ ಸಾಲನ್ನು ಫೇಸ್‌ಬುಕ್ ಪೋಸ್ಟ್‌ನಲ್ಲಿ ಸೇರಿಸಿದ್ದಾರೆ. ಆದರೆ ಕನ್ನಡದಲ್ಲಿ ಬರೆಯುವಾಗ ಶಮಿ ಹೆಸರು ಸೇರಿಸಿದ್ದರೂ ಇಂಗ್ಲಿಷ್‌ನಲ್ಲಿ ಬರೆಯುವಾಗ ಅವರ ಹೆಸರನ್ನು ಮರೆತಿದ್ದಾರೆ.
ಪ್ರಲ್ಹಾದ್ ಜೋಶಿಯವರ ಈ ನಡೆಯ ಕುರಿತು ಪ್ರತಿಕ್ರಿಯಿಸಿರುವ ಚಿಂತಕ ಪ್ರೊ.ಪುರುಷೋತ್ತಮ ಬಿಳಿಮಲೆಯವರು, “ನಿನ್ನೆಯ ಕ್ರಿಕೆಟ್ ಆಟದಲ್ಲಿ ಮಹಮ್ಮದ್ ಶಮಿ ಅವರು ವಿಲಿಯಂಸನ್ ಮತ್ತು ಮಿಚೆಲ್ ಅವರನ್ನು ಆಟದ ನಿರ್ಣಾಯಕ ಹಂತದಲ್ಲಿ ಪೆವಿಲಿಯನ್‌ಗೆ ಕಳಿಸದೇ ಇದ್ದಿದ್ದರೆ ಭಾರತದ ಗೆಲುವು ಕಷ್ಟವಿತ್ತು. ಇವರಿಬ್ಬರೂ ಔಟಾದಾಗ ನಮ್ಮ ಆಟಗಾರರ ಕಳೆಗುಂದಿದ್ದ ಮುಖದಲ್ಲಿ ಹೇಗೆ ಮತ್ತೆ ಉತ್ಸಾಹ ಮೂಡಿತು ಎಂಬುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಏಳು ವಿಕೆಟ್ ತಗೊಂಡ ಶಮಿ ಸಹಜವಾಗಿಯೇ ಮ್ಯಾನ್ ಆಫ್ ದಿ ಮ್ಯಾಚ್ ಆದರು. ಅದನ್ನು ನಮ್ಮ ಶತಕವೀರರಾದ ಕೊಹ್ಲಿ ಮತ್ತು ಅಯ್ಯರ್ ಸೇರಿದಂತೆ ಇಡೀ ಟೀಂ ಸಂಭ್ರಮಿಸಿತು ಕೂಡಾ. ಇದ್ಯಾವುದೂ ಶ್ರೀ ಪ್ರಲ್ಹಾದ್ ಜೋಶಿಯವರಿಗೆ ಅರ್ಥವಾಗಲೇ ಇಲ್ಲ. ಇಂಥವರೇ ನಮ್ಮ ನಾಡಿನ ಇತಿಹಾಸವನ್ನು ಹೀಗೆಯೇ ಬರೆದದ್ದು ಮತ್ತು ಬರೆಯ ಬಯಸುವುದು ಎಂಬುದನ್ನು ಮರೆಯದಿರೋಣ” ಎಂದಿದ್ದಾರೆ.
ಬರಹಗಾರ ಶರತ್ ಚಂದ್ರ ಅವರು ಪ್ರತಿಕ್ರಿಯಿಸಿ, “ಪಾಪ ನಮ್ಮ ಜೋಶಿ ಸಾಹೇಬರಿಗೆ ನಿನ್ನೆಯ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಮೊಹಮ್ಮದ್ ಶಮಿ ಅಂತ ಗೊತ್ತಾಗಿಲ್ಲ” ಎಂದು ಟೀಕಿಸಿದ್ದಾರೆ.
“ಶಮಿ ಫೈನಲ್, ನಿಮ್ಮ ಧರ್ಮ ದ್ವೇಷಕ್ಕೆ ಧಿಕ್ಕಾರವಿರಲಿ” ಎಂದು ಮಂಜುನಾಥ್ ಜವರನಹಳ್ಳಿ ಪ್ರತಿಕ್ರಿಯಿಸಿದ್ದಾರೆ.
ಶಮಿ ಫೈನಲ್
ನಿಮ್ಮ ಧರ್ಮ ದ್ವೇಷಕ್ಕೆ ಧಿಕ್ಕಾರವಿರಲಿ pic.twitter.com/8QhMIrw5RE
— ಮಂಜುನಾಥ್ ಜವರನಹಳ್ಳಿ (@manjujb1) November 16, 2023
ಫೇಸ್‌ಬುಕ್‌ನಲ್ಲಿ ಕ್ರೀಡೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಹರೀಶ್ ಗಂಗಾಧರ್ ಎಂಬುವವರು ಪ್ರಲ್ಹಾದ್ ಜೋಶಿಯವರ ಟ್ವಿಟ್ಟರ್ ಸ್ಕ್ರೀನ್‌ಶಾಟ್ ಹಂಚಿಕೊಳ್ಳುತ್ತಾ, ‘ಅಭಿನಂದನೆ ಸಲ್ಲಿಸಿದ ಘನತೆವೆತ್ತ ಮಂತ್ರಿಗಳು’ ಎಂದು ಆಕ್ರೋಶ ಹೊರಹಾಕಿದ್ದಾರೆ.
“ಶಮಿ ಇಲ್ಲದಿದ್ದರೆ ಎಲ್ಲ ಶತಕ ಶೂನ್ಯ ಆಗ್ತಿತ್ತು. ಈ ಟ್ವೀಟ್‌ನಿಂದ ಮತ್ತೊಮ್ಮೆ ನಿಮ್ಮ ಮಾನಸಿಕತೆ ಎಷ್ಟರ ಮಟ್ಟಿಗೆ ಅನ್ನೋದು ತೋರಿಸಿದ್ದೀರಿ. ನಮ್ಮ ದುರ್ಭಾಗ್ಯ, ನಿಮ್ಮಂಥವರು ನಮ್ಮ ದೇಶದ ಮಂತ್ರಿಗಳು. ಆಟದಲ್ಲೂ ಜಾತಿ ರಾಜಕಾರಣ” ಎಂದು ಶಮೀದ್ ಖಾದ್ರಿ ಎಂಬವರು ಬೇಸರ ವ್ಯಕ್ತಪಡಿಸಿದ್ದಾರೆ.
ಶಮ್ಮಿ ಇಲ್ಲದಿದ್ದರೆ ಎಲ್ಲ ಶತಕ ಶೂನ್ಯ ಆಗ್ತಿತ್ತು. ಈ ಟ್ವೀಟ್ ಇಂದ ಮತ್ತೊಮ್ಮೆ ನಿಮ್ಮ ಮನಿಸಕತೆ ಎಷ್ಟ್ಟರ ಮಟ್ಟಿಗೆ ಅನ್ನೋದು ತೋರಿಸಿದ್ದೀರಿ. ನಮ್ಮ ದುರ್ಭಾಗ್ಯ ನಿಮ್ಮಂತವರ ನಮ್ಮ ದೇಶದ ಮಂತ್ರಿಗಳು.
ಆಟದಲ್ಲೂ ಜಾತಿ ರಾಜಕಾರಣ— MD SHAMEED KHADRI (@KhadriShameed) November 16, 2023
“ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತ ಮೊಹಮ್ಮದ್ ಶಮಿಯ ಹೆಸರನ್ನು ನಮೂದಿಸಲು ನೀವು ವಿಫಲರಾಗಿರುವುದು, ನಿಮ್ಮ ನಿಜವಾದ ಸ್ವಭಾವವನ್ನು ನೀವು ಬಹಿರಂಗಪಡಿಸಿದ್ದೀರಿ. ಶಮಿ ಇಲ್ಲದಿದ್ದರೆ ನೀವು ಈ ಟ್ವೀಟ್ ಕೂಡ ಮಾಡಲು ಸಾಧ್ಯವಾಗುತ್ತಿರಲಿಲ್ಲ” ಎಂದು ಶಫಿ ಇಮ್ರಾನ್ ತಿಳಿಸಿದ್ದಾರೆ.