ಮಂಹತ ಲಾಲ್ ದಾಸ್ ಅವರ ಅನುಮಾನಾಸ್ಪದ ಕೊಲೆಯೂ ಸೇರಿದಂತೆ, ಅವರ ಅಲ್ಪಾವಧಿಯ ಜೀವನವನ್ನು ಇಂದು ಅಯೋಧ್ಯೆಯಲ್ಲಿ ಬಹುತೇಕರು ಮರೆತುಹೋಗಿದ್ದಾರೆ. ಆದರೆ ಅವರು ಭಾರತದಲ್ಲಿ ಸೃಷ್ಟಿಯಾಗುತ್ತಿರುವ ಧಾರ್ಮಿಕ ಸಂಘರ್ಷವನ್ನು ನೆಲಮೂಲದಿಂದ ಅರ್ಥ ಮಾಡಿಕೊಂಡು ಜನರನ್ನು ಎಚ್ಚರಿಸಲು ನೋಡಿದರು. ಇಂದು ಅವರ ಕೋಮುಏಕತೆ ಮತ್ತು ಸೌಹಾರ್ದತೆಯ ಸಂದೇಶವು ಅಯೋಧ್ಯೆ ಮತ್ತು ದೇಶ ಎರಡಕ್ಕೂ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಿದೆ.
ಕೆಲವು ದಿನಗಳ ಹಿಂದೆಯಷ್ಟೆ ಅಯೋದ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಅದ್ದೂರಿಯಿಂದ ಜರುಗಿದೆ. ದೇಶದಾದ್ಯಂತ ಹಲವಾರು ಜನರು ತಮ್ಮ ಐನೂರು ವರ್ಷಗಳ ಕನಸು ನನಸಾಯಿತು ಎಂದು ಸಂಭ್ರಮಿಸಿದ್ದಾರೆ. ಇನ್ನೂ ಹಲವರು ಸದ್ಯ ಯಾವುದೇ ಗಲಭೆ, ಸಾವು-ನೋವು ಸಂಭವಿಸದೆ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಶಾಂತಿಯುತವಾಗಿ ಜರುಗಿತಲ್ಲ ಎಂದು ನಿಟ್ಟುಸಿರಿಡುವ ಹೊತ್ತಲ್ಲೇ ಮುಂಬೈನ ಮೀರಾ ರಸ್ತೆಯಲ್ಲಿ ಮತಾಂಧರು ದಾಂದಲೆ ನಡೆಸಿದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಂತಹ ಸಂದರ್ಭದಲ್ಲಿ ಬಾಬರಿ ಮಸೀದಿಯ ಆವರಣದಲ್ಲಿದ್ದ ವಿವಾದಿತ ರಾಮ ಜನ್ಮಭೂಮಿ ದೇವಾಲಯದ ಮೊದಲ ಪ್ರಧಾನ ಅರ್ಚಕರಾಗಿದ್ದ ಮಹಂತ್ ಲಾಲ್ ದಾಸ್ ಅವರನ್ನು ಬಹುತೇಕರು ಮರೆತಿದ್ದಾರೆ ಮತ್ತು ಈ ದೇಶದ ನೆನಪಿನಿಂದ ಅವರನ್ನು ಅಳಿಸಲಾಗಿದೆ.
ಆದರೆ ಪ್ರಜ್ಞಾವಂತರಾದ ಕೆಲವರಾದರೂ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಸಂದರ್ಭದಲ್ಲಿ ಖ್ಯಾತ ಸಾಕ್ಷ್ಯಚಿತ್ರ ನಿರ್ದೇಶಕರಾದ ಆನಂದ್ ಪಟವರ್ಧನ್ ಅವರು ನಿರ್ಮಿಸಿದ ‘ರಾಮ್ ಕೆ ನಾಮ್’ ಎಂಬ ಐತಿಹಾಸಿಕ ಸಾಕ್ಷ್ಯ ಚಿತ್ರವನ್ನು ಹಂಚಿಕೊಂಡ ಸಂದರ್ಭದಲ್ಲಿ ಮಹಂತ್ ಲಾಲ್ ದಾಸ್ ಅವರ ಮಾತುಗಳು ಮತ್ತೆ ಕೇಳಿಸಿಕೊಳ್ಳುವಂತಾಗಿದೆ. ಬಹುಶಃ ಈ ಸಾಕ್ಷ್ಯಚಿತ್ರವಿಲ್ಲದಿದ್ದರೆ ಬಾಬಾ ಲಾಲ್ ದಾಸ್ ಅವರ ಮುಖವನ್ನೂ ಸಹ ನೋಡುವ ಅವಕಾಶ ನಮಗೆ ಸಿಗುತ್ತಿರಲಿಲ್ಲವೇನೋ!?
ಬಾಬಾ ಲಾಲ್ ದಾಸ್ 1981ರಲ್ಲಿ ರಾಮಜನ್ಮಭೂಮಿಯ ಕುರಿತು ವಿವಾದ ಸೃಷ್ಟಿಯಾದಾಗ ಲಕ್ನೌ ಹೈಕೋರ್ಟ್ ನೇಮಿಸಲ್ಪಟ್ಟ ಮೊದಲ ಪ್ರಧಾನ ಅರ್ಚಕರಾಗಿದ್ದರು. ಒಲವಿನಿಂದ ಎಡಪಂಥೀಯರಾಗಿದ್ದ ಅವರು ಅಯೋಧ್ಯೆಯ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಸಾಮರಸ್ಯವನ್ನು ಬಿತ್ತಲು ಪ್ರಯತ್ನಿಸುತ್ತಿದ್ದರು. ”ರಾಮ ಮಂದಿರದ ಸಮಸ್ಯೆಯನ್ನು ರಾಷ್ಟ್ರದ ರಾಜಕೀಯ ವಿಷಯವನ್ನಾಗಿ ಮಾಡುವ ಬದಲು ಸ್ಥಳೀಯವಾಗಿಯೇ ಇತ್ಯರ್ಥ ಪಡಿಸಬೇಕು” ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದರು. ಹಾಗೂ ರಾಮ ಮಂದಿರದ ಸಂಘರ್ಷದ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದ ವಿಶ್ವ ಹಿಂದು ಪರಿಷತ್(ವಿಎಚ್ಪಿ)ನ ‘ರಾಮ ಜನ್ಮಭೂಮಿ ಅಭಿಯಾನ’ವನ್ನು 1984 ರಲ್ಲಿ ಮೊದಲು ಪ್ರಾರಂಭಿಸಿದಾಗಿನಿಂದಲೇ ವಿರೋಧಿಸಿದ್ದರು.

ಉತ್ತರ ಪ್ರದೇಶದ ಅವಧ್ ಪ್ರಾಂತ್ಯದ ಬಹುತ್ವದ ಗಂಗಾ-ಜಮುನಿ ಸಿಂಕ್ರೆಟಿಕ್ ಸಾಂಸ್ಕೃತಿಕ ಸಂಪ್ರದಾಯಗಳ ಆಳವಾದ ಅರಿವಿದ್ದ ಲಾಲ್ ದಾಸ್, ರಾಮ ಮಂದಿರ ಚಳವಳಿಯನ್ನು ಹಿಂದೂ ಮತಗಳನ್ನು ಗಳಿಸಲು ಹುಟ್ಟು ಹಾಕಿದ ಕಲಹ ಮತ್ತು ಭಾವನೆಗಳ ರಾಜಕೀಯವಲ್ಲದೆ ಬೇರೇನೂ ಅಲ್ಲ ಎಂದು ಟೀಕಿಸಿದ್ದರು. ಹಿಂದೆ ಹೇಗೆ ಅವಧ್ನ ಮುಸ್ಲಿಂ ಆಡಳಿತಗಾರರ ಸಹಾಯದಿಂದ ಅಯೋಧ್ಯೆಯ ಹೆಚ್ಚಿನ ದೇವಾಲಯಗಳನ್ನು ನಿರ್ಮಿಸಲಾಯಿತು ಮತ್ತು 1855 ರಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ನಂತರ ಹಿಂದೂ ಪುರೋಹಿತರು ಮತ್ತು ಮುಸ್ಲಿಂ ಪೀರ್ಗಳು ಹೇಗೆ ಸೌಹಾರ್ದಯುತವಾಗಿ ಬದುಕಲು ನಿರ್ಧರಿಸಿದರು ಎಂಬುದಕ್ಕೆ ಸಂಬಂಧಿಸಿದಂತೆ ಅವರು ಆಗಾಗ್ಗೆ ಉಪಾಖ್ಯಾನಗಳನ್ನು ನೀಡುತ್ತಿದ್ದರು
ಆನಂದ್ ಪಟವರ್ಧನ್ ರವರ ‘ರಾಮ್ ಕೆ ನಾಮ್’ ಸಾಕ್ಷ್ಯಚಿತ್ರದಲ್ಲಿ ವಿಶ್ವ ಹಿಂದು ಪರಿಷತ್ ರವರು ಮಂದಿರ ಕಟ್ಟಬೇಕೆಂದಿರುವ ಯೋಜನೆಯ ಕುರಿತು ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಸುದೀರ್ಘವಾಗಿ ಉತ್ತರಿಸಿರುವ ಲಾಲ್ ದಾಸ್ ಅವರು ”ಇದು ವಿಶ್ವ ಹಿಂದು ಪರಿಷತ್ ನಡೆಸುತ್ತಿರುವ ರಾಜಕೀಯದ ಆಟ. ದೇವಸ್ಥಾನ ಕಟ್ಟಲು ನಮ್ಮಲ್ಲಿ ಎಂದಿಗೂ ನಿಷೇಧ ಹೇರಿಲ್ಲ. ಅದಲ್ಲದೆ ನಮ್ಮ ಹಿಂದು ಸಂಪ್ರದಾಯದ ಪ್ರಕಾರ ದೇವರ ವಿಗ್ರಹಗಳನ್ನು ಇಡುವ ಯಾವುದೇ ಸ್ಥಳವನ್ನು, ಅಂತಹ ಕಟ್ಟಡವನ್ನು ದೇವಾಲಯವೆಂದು ಪರಿಗಣಿಸುತ್ತೇವೆ. ಇವರು ಪ್ರತ್ಯೇಕ ದೇವಸ್ಥಾನ ಕಟ್ಟಬೇಕು ಎಂದರೆ ಈಗಾಗಲೇ ವಿಗ್ರಹಗಳಿರುವ ಕಟ್ಟಡವನ್ನು ಏಕೆ ಕೆಡವಬೇಕು? ಯಾರು ಕೆಡವಲು ಬಯಸುತ್ತಾರೆ ಅವರು ಭಾರತದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಬಯಸುತ್ತಿದ್ದಾರೆ. ಇವರು ಹಿಂದೂ ಮತಗಳನ್ನು ಕಸಿಯುವ ಸಲುವಾಗಿ ಹೀಗೆ ಮಾಡುತ್ತಿದ್ದಾರೆ. ಇವರಿಗೆ ಮುಂದೆ ಸಂಭವಿಸುವ ನರಮೇಧ, ಎಷ್ಟು ಮಂದಿ ಕೊಲ್ಲಲ್ಪಡುತ್ತಾರೆ, ಎಷ್ಟು ನಷ್ಟವಾಗುತ್ತದೆ ಅಥವಾ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಹಿಂದೂಗಳಿಗೆ ಏನಾಗಬಹುದು ಎಂಬುದರ ಬಗ್ಗೆ ಕಾಳಜಿ ಇಲ್ಲ” ಎಂದಿದ್ದರು.
ಇದನ್ನು ಓದಿದ್ದೀರಾ?: ನೂರರ ನೆನಪು | ಕಾವಾಡಿಗರ ಹಟ್ಟಿಯಿಂದ ಹಾಲಿವುಡ್ ಅಂಗಳಕ್ಕೆ ಜಿಗಿದ ಮೈಸೂರ್ ಸಾಬು
”1949 ರಿಂದ ಇಲ್ಲಿ ಯಾವುದೇ ಮುಸಲ್ಮಾನರು ತೊಂದರೆಯನ್ನು ಸೃಷ್ಟಿಸಲಿಲ್ಲ. ಆದರೆ ಇವರು ‘ಬಾಬರ್ ನ ಪುತ್ರರು ತಮ್ಮ ರಕ್ತದಿಂದ ಪಾವತಿಸಬೇಕು’ ಎಂದು ಕೂಗಲು ಪ್ರಾರಂಭಿಸಿದಾಗ ಇಡೀ ರಾಷ್ಟ್ರವು ಗಲಭೆಯಲ್ಲಿ ಮುಳುಗಿತು ಮತ್ತು ಸಾವಿರಾರು ಜನರನ್ನು ಕೊಂದರು, ಅವರು ಸೃಷ್ಟಿಸಿದ ಉದ್ವಿಗ್ನತೆಯಿಂದಾಗಿ ಮುಗ್ಧ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ.
”ಇಲ್ಲಿಯವರೆಗೆ ನಮ್ಮ ದೇಶದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆ ಇತ್ತು, ಮುಸ್ಲಿಂ ಆಡಳಿತಗಾರರು ಜಾನಕಿ ಘಾಟ್ನಂತಹ ದೇವಾಲಯಗಳಿಗೆ ಭೂಮಿಯನ್ನು ನೀಡಿದ್ದಾರೆ ಮತ್ತು ಹನುಮಾನ್ ಗರ್ಹಿಯ ಒಂದು ಭಾಗವನ್ನು ಮುಸ್ಲಿಮರು ನಿರ್ಮಿಸಿದರು. ಮುಸ್ಲಿಂ ದೊರೆಗಳು ಈ ಎಲ್ಲಾ ಆಸ್ತಿಯನ್ನು ದೇವಾಲಯಗಳಿಗೆ ದಾನ ಮಾಡಿದರು. ಅಮೀರ್ ಅಲಿ ಮತ್ತು ಬಾಬಾ ರಾಮಚರಣ್ ದಾಸ್ ಅವರು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಸಾಮರಸ್ಯದ ಒಪ್ಪಂದವನ್ನು ಮಾಡಿ ರಾಮಜನ್ಮ ಭೂಮಿಯನ್ನು ವಿಭಜಿಸಿದರು, ಇದರಿಂದಾಗಿ ಮುಸ್ಲಿಮರು ಒಂದು ಭಾಗದಲ್ಲಿ ಮತ್ತು ಹಿಂದೂಗಳು ಇನ್ನೊಂದು ಭಾಗದಲ್ಲಿ ಪ್ರಾರ್ಥಿಸಬಹುದು. ಈಗ ಈ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿವೆ” ಎಂದು ಅವರು ಹತಾಶೆ ವ್ಯಕ್ತಪಡಿಸಿದ್ದರು.
ಮುಂದುವರಿದು ”ಇವರ ಎಲ್ಲಾ ಪ್ರಯತ್ನಗಳು ಆರ್ಥಿಕ ಮತ್ತು ರಾಜಕೀಯ ಲಾಭಕ್ಕಾಗಿ ನಡೆಯುತ್ತಿದೆ. ಇವರಿಗೂ ರಾಮನ ಜನ್ಮಸ್ಥಳಕ್ಕೂ ಯಾವುದೇ ಸಂಬಂಧವಿಲ್ಲ. ನಾನು ರಾಮ ಜನ್ಮಭೂಮಿ ದೇವಸ್ಥಾನದ ಅರ್ಚಕನಾಗಿ ಪ್ರಾಮಾಣಿಕವಾಗಿ ಹೇಳುತ್ತೇನೆ, ಇಂದಿನವರೆಗೂ ವಿಶ್ವ ಹಿಂದು ಪರಿಷತ್ ನ ಸದಸ್ಯರು ಒಂದೇ ಒಂದು ನೈವೇದ್ಯವನ್ನು ಮಾಡಿಸಿಲ್ಲ ಅಥವಾ ದೇವಸ್ಥಾನದಲ್ಲಿ ಪ್ರಾರ್ಥನೆಯನ್ನೂ ಮಾಡಿಲ್ಲ! ಬದಲಾಗಿ, ಅವರು ಅಡೆತಡೆಗಳನ್ನು ಸೃಷ್ಟಿಸಿದರು ಮತ್ತು ಪ್ರಾರ್ಥನೆಗಳನ್ನು ಪುನಃ ಪ್ರಾರಂಭಿಸಲು ರಿಟ್ ಅರ್ಜಿಯನ್ನು ತೆಗೆದುಕೊಂಡರು. ಆದ್ದರಿಂದಲೆ ಇದನ್ನು ಬಲ್ಲ ಸ್ಥಳೀಯ ಜನರು ಅವರನ್ನು ಎಂದಿಗೂ ಸ್ವೀಕರಿಸಲಿಲ್ಲ. ಆದರೆ ಅವರು ದುರಾಸೆಯಿಂದ ಕೆಲವು ಪುರೋಹಿತರನ್ನು ಕೊಂಡುಕೊಂಡಿದ್ದಾರೆ ಎಂದು ಆರೋಪಿಸಿದ್ದರು.
”ನಂತರ ವಿಎಚ್ಪಿಯವರ ರಾಮಮಂದಿರ ಇಟ್ಟಿಗೆ ಅಭಿಯಾನ ಪ್ರಾರಂಭವಾಯಿತು. ಬಂದ ಇಟ್ಟಿಗಳಿಂದ ಅವರು ತಮ್ಮ ಸ್ವಂತ ಕೊಠಡಿ ಮತ್ತು ಮನೆಗಳನ್ನು ನಿರ್ಮಿಸಿದರು. ಸಾರ್ವಜನಿಕರನ್ನು ಮೂರ್ಖರನ್ನಾಗಿಸಿ ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಿದರು. ಅವರು ಲಕ್ಷಾಂತರ ದೇಣಿಗೆಗಳನ್ನು ಸಂಗ್ರಹಿಸಿ ಅದನ್ನು ಅವರ ವಿವಿಧ ಬ್ಯಾಂಕ್ ಗಳಲ್ಲಿ ತಮ್ಮ ವೈಯಕ್ತಿಕ ಖಾತೆಗಳಿಗೆ ಜಮಾ ಮಾಡಿಕೊಂಡರು. ಆದ್ದರಿಂದ ಕೋಮುಗಲಭೆಯಿಂದ ಜನರು ಕೊಲ್ಲಲ್ಪಟ್ಟರೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಅವರೆಲ್ಲರ ಕಾಳಜಿ ಹಣ ಮತ್ತು ಅಧಿಕಾರ ಮಾತ್ರ. ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುವವರು ಮತ್ತು ರಾಮನ ಹೆಸರಿನಲ್ಲಿ ಕ್ರೌರ್ಯ ಎಸಗುವವರು ಬಹುತೇಕ ಮೇಲ್ಜಾತಿಯವರು ಮತ್ತು ಅವರೆಲ್ಲರೂ ಉತ್ತಮ ಜೀವನವನ್ನು ಬಯಸುವವರು. ಅವರಲ್ಲಿ ಯಾವುದೇ ತ್ಯಾಗ ಅಥವಾ ಸಾರ್ವಜನಿಕ ಕಾಳಜಿ ಇಲ್ಲ. ಅವರು ಕೇವಲ ತಮ್ಮ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಜನರ ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳುತ್ತಾರೆ. ಅವರು ಎಂದಿಗೂ ಸಾರ್ವಜನಿಕ ಹಿತಾಸಕ್ತಿಗಾಗಿ ಮಾತನಾಡಲು ಸಾಧ್ಯವಿಲ್ಲ” ಎಂದು ಬಾಬಾ ಲಾಲ್ ದಾಸ್ ರವರು ರಾಮ ಮಂದಿರ ವಿವಾದದ ನಿಜಕಾರಣಗಳನ್ನು ಬಯಲುಗೊಳಿಸಲು ಪ್ರಯತ್ನಿಸಿದ್ದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೂವರು ಮಾನಗೆಟ್ಟ ನಾಯಕರು ಮತ್ತು ರಾಜಕಾರಣ
ಡಿಸೆಂಬರ್ 6, 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಮತ್ತು ವಿಎಚ್ಪಿ ನಾಯಕರ ಪಾತ್ರದ ಕುರಿತು ಬಾಬಾ ಲಾಲ್ ದಾಸ್ ಸಿಬಿಐ ನ್ಯಾಯಾಲಯದಲ್ಲಿ ಸಾಕ್ಷಿಯಾಗಿದ್ದರು ಮತ್ತು ಆ ದಿನವೂ ಸಾರ್ವಜನಿಕವಾಗಿ ಧ್ವಂಸದ ವಿರುದ್ಧ ಮಾತನಾಡಿದ್ದರು. ಜೂನ್ 1993ರಲ್ಲಿ ಅವರು ತಮ್ಮ ಸಾಕ್ಷ್ಯಾಧಾರಗಳನ್ನು ದೆಹಲಿಯ ‘ಸಿಟಿಜನ್ ಟ್ರಿಬುನಲ್’ ಎಂಬ ತನಿಖಾ ತಂಡಕ್ಕೆ ಒಪ್ಪಿಸಿದ್ದರು. ಅವರು ಹತ್ಯೆಯಾಗುವ ಕೆಲವೇ ದಿನಗಳ ಹಿಂದೆ ‘ಕರೆಂಟ್’ ಎಂಬ ಸುದ್ದಿ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ “ಈ ಜನಗಳು ನನ್ನನ್ನು ಕೊಲ್ಲುತ್ತಾರೆ, ಏಕೆಂದರೆ ಯಾರು ಮೊದಲು ರಾಮಜನ್ಮಭೂಮಿ ಒಡೆಯಲು ಕರೆಕೊಟ್ಟರು ಎಂಬುದು ನನಗೆ ಗೊತ್ತು” ಎಂದು ಹೇಳಿದ್ದರು. ಅವರಿಗೆ ರಾಜಕಾರಣಿಗಳಿಂದ ತೀವ್ರ ಬೆದರಿಕೆ ಬಂದಾಗ ಅವರು ಕಲ್ಯಾಣ್ ಸಿಂಗ್ ಸರ್ಕಾರಕ್ಕೆ ಅಂಗರಕ್ಷಕರನ್ನು ನೇಮಿಸುವಂತೆ ಕೇಳಿಕೊಂಡರು. ಆದರೆ ಸರ್ಕಾರ ಸರಿಯಾಗಿ ಸ್ಪಂದಿಸಲಿಲ್ಲ.
ನವೆಂಬರ್ 16, 1993ರಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಇನ್ನು ಎರಡು ದಿನಗಳು ಬಾಕಿ ಇದ್ದ ಸಂದರ್ಭದಲ್ಲಿ ಅಯೋಧ್ಯೆಯಿಂದ 20 ಕಿಮೀ ದೂರದಲ್ಲಿರುವ ಬಸ್ತಿ ಜಿಲ್ಲೆಯ ಅವರ ಗ್ರಾಮ ರಾಣಿಪುರ ಚಲತಾರ್ ನಲ್ಲಿ ರಾತ್ರಿ 9:30ರ ಸುಮಾರಿಗೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಪೋಲಿಸರು ಈ ಪ್ರಕರಣವನ್ನು ಜಮೀನು ವ್ಯಾಜ್ಯಕ್ಕಾಗಿ ನಡೆದ ಕೊಲೆ ಎಂದು ವರದಿ ಮಾಡಿದರು. ಮಾರನೆ ದಿನ ದಿನಪತ್ರಿಕೆಗಳಲ್ಲಿ ಸಣ್ಣ ವರದಿಯು ಪ್ರಕಟವಾಯ್ತು. ಚುನಾವಣೆಯ ಕಾವಿನಲ್ಲಿದ್ದ ಜನ ಈ ಸಾವಿನ ಕುರಿತು ಹೆಚ್ಚೇನು ಗಮನ ಹರಿಸಲು ಹೋಗಲಿಲ್ಲ.
ಅಯೋಧ್ಯೆಯ ವಿಷಯದ ಒಳಗಿನ ಕಥೆಯನ್ನು ತಿಳಿದ ಕೆಲವೇ ಜನರಲ್ಲಿ ಮಹಂತ್ ಲಾಲ್ ದಾಸ್ ಒಬ್ಬರು. ರಾಮಜನ್ಮಭೂಮಿ ಪರವಾಗಿ ಸಂಗ್ರಹಿಸಲಾದ ದೊಡ್ಡ ಮೊತ್ತದ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು. ಹಾಗೆ ಹೇಳಿದವರು ಮಹಾಂತ ಲಾಲ್ ದಾಸ್ ಮಾತ್ರರಾಗಿರಲಿಲ್ಲ. ಜ್ಞಾನದಾಸ್, ಹನುಮಾನ್ ಗರ್ಹಿಯ ಮಹಂತ್ ಮತ್ತು ವಿಶ್ವನಾಥ ಪ್ರಸಾದ್ ಆಚಾರ್ಯ ಅವರಂತಹ ಇನ್ನೂ ಕೆಲವರು ವಿಎಚ್ಪಿ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಒಪ್ಪಿಕೊಂಡರು. ವಿವಾದಿತ 2.7 ಎಕರೆ ಭೂಮಿಯಲ್ಲಿ ನೆಲೆಗೊಂಡಿದ್ದ ಹಲವಾರು ದೇವಾಲಯಗಳನ್ನು ನಾಶಪಡಿಸಿದ್ದಕ್ಕಾಗಿ ವಿಎಚ್ಪಿಯನ್ನು ನ್ಯಾಯಾಲಯಕ್ಕೆ ಕೊಂಡೊಯ್ದ ಸಾಕ್ಷಿ ಗೋಪಾಲ್, ದೇವಸ್ಥಾನದ ಅರ್ಚಕ ರಾಮ್ ಕೃಪಾಲ್ ದಾಸ್ ಮತ್ತು ಸೀತಾ ರಸೋಯಿ, ದೇವಸ್ಥಾನದ ಮಹಂತ್ ಸುಖ್ ರಾಮ್ ದಾಸ್ ಅವರಿಗೂ ಸಹ ಲಾಲ್ ದಾಸ್ ಬೆಂಬಲವನ್ನು ನೀಡಿದ್ದರು.
ಲಾಲ್ ದಾಸ್ ಅವರ ಬಾಯಿ ಮುಚ್ಚಿಸಲು, ಅವರ ವಿರೋಧಿಗಳು ಅವರ ವಿರುದ್ಧ ಅನೇಕ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ದುರುಪಯೋಗದ ಪ್ರಕರಣಗಳನ್ನು ದಾಖಲಿಸಿದರು. ಆದರೆ ಅವರ ಮೇಲಿನ ಯಾವ ಆರೋಪವೂ ಸಾಬೀತಾಗಿಲ್ಲ.
ಜೂನ್ 1991 ರಲ್ಲಿ, ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 419 ಸ್ಥಾನಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದು ಕಲ್ಯಾಣ್ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ”ಭವ್ಯವಾದ ರಾಮಮಂದಿರವನ್ನು ನಿರ್ಮಿಸುವ ತಮ್ಮ ಯೋಜನೆಯ ಕಾರ್ಯ ಸಾಧನೆಗೆ ವಿಎಚ್ಪಿಯು ತಮಗಿರುವ ಅಡೆಚಣೆಗಳನ್ನು ಗುರುತಿಸಿದಾಗ ಅವರಿಗೆ ವಿವಾದಿತ ಸ್ಥಳದಲ್ಲಿ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ಲಾಲ್ ದಾಸ್ ಅವರು ಎರಡನೇ ಅಡಚಣೆಯಾಗಿ ಕಂಡರು. ಮತ್ತು ಬಾಬರಿ ಮಸೀದಿಯೇ ಕೊನೆಯ ಅಡಚಣೆ ಎಂದು ತೀರ್ಮಾನಿಸಿದರು” ಎಂದು ಫೈಜಾಬಾದ್ ಮೂಲದ ಹಿರಿಯ ಪತ್ರಕರ್ತ ಸುಮನ್ ಗುಪ್ತಾ ಹೇಳುತ್ತಾರೆ.
ಡಿಸೆಂಬರ್ 6, 1992 ರಂದು ಮಸೀದಿ ಧ್ವಂಸಗೊಳ್ಳುವ ಕೆಲವು ತಿಂಗಳ ಮೊದಲು, ಕಲ್ಯಾಣ್ ಸಿಂಗ್ ಸರ್ಕಾರವು ಮಾರ್ಚ್ 1992 ರಲ್ಲಿ ಲಾಲ್ ದಾಸ್ ಅವರನ್ನು ಭ್ರಷ್ಟಾಚಾರದ ಆರೋಪ, ಹೊರಿಸಿ ಮುಖ್ಯ ಅರ್ಚಕ ಹುದ್ದೆಯಿಂದ ತೆಗೆದುಹಾಕಿತ್ತು. ಮತ್ತು ಲಾಲ್ ದಾಸ್ ಅವರ ಸ್ಥಾನಕ್ಕೆ ಮಹಂತ್ ಸತ್ಯೇಂದ್ರ ದಾಸ್ ಅವರನ್ನು ದೇವಾಲಯದ ಪ್ರಧಾನ ಅರ್ಚಕರಾಗಿ ನೇಮಿಸಲಾಯಿತು.
ನ್ಯಾಯಾಲಯ ನೇಮಿಸಿದ್ದ ತನ್ನನ್ನು ಕೋರ್ಟ್ ಅನುಮತಿ ಇಲ್ಲದೆ ರಾಜ್ಯ ಸರ್ಕಾರಕ್ಕೆ ತೆಗೆಯುವ ಅಧಿಕಾರ ಇರುವುದಿಲ್ಲ ಎಂದು ಲಾಲ್ ದಾಸ್ ತಮ್ಮನ್ನು ಪದಚ್ಯುತಗೊಳಿಸುವುದರ ವಿರುದ್ಧ ನ್ಯಾಯಲಯದಲ್ಲಿ ಮೊಕದ್ದಮೆ ಹೂಡಿದ್ದರು, ಅದು ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠದ ಮುಂದೆ ಇನ್ನೂ ಇತ್ಯರ್ಥವಾಗದೆ ಬಾಕಿ ಉಳಿದಿದೆ.
1994ರಲ್ಲಿ ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅಯೋಧ್ಯೆಯ ಸ್ವಾಮೀಜಿಗಳೂ ಸೇರಿದಂತೆ ಅಲ್ಲಿನ ಜನಸಾಮಾನ್ಯರು ಲಾಲ್ ದಾಸ್ ಅವರ ಹತ್ಯೆಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಅಂದಿನ ಪ್ರಧಾನ ಮಂತ್ರಿ ಪಿ.ವಿ ನರಸಿಂಹ ರಾವ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರಿಗೆ ಒತ್ತಡ ತಂದರು. ಸಿಬಿಐ 1994 ರಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿತು. ಆದರೆ ಲಾಲ್ ದಾಸ್ ಅವರನ್ನು ಜಮೀನು ವ್ಯಾಜ್ಯಕ್ಕಾಗಿ ಹತ್ಯೆ ಮಾಡಲಾಗಿದೆ ಎಂದು ಪೋಲಿಸರ ವರದಿಯನ್ನೆ ಎತ್ತಿ ಹಿಡಿಯಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಾಬಾ ಲಾಲ್ ದಾಸ್ ಅವರ ಪಕ್ಕದ ಹಳ್ಳಿಯವರಾದ ಶಿವದಾಸ್ ಚೌದರಿ ಮತ್ತು ರಾಮ್ ಸುಮೇರನ್ ಚೌದರಿ ಎಂಬ ಇಬ್ಬರು ಆರೋಪಿಗಳ ಮೇಲೆ ಚಾರ್ಜ್ಶೀಟ್ ಸಲ್ಲಿಸಿತು ಮತ್ತು ಶಿವದಾಸ್ ಚೌದರಿ ಅವರಿಗೆ ನ್ಯಾಯಲಯವು ಜೀವಾವದಿ ಶಿಕ್ಷೆಯನ್ನು ವಿಧಿಸಿತು.
”ಪೊಲೀಸ್ ದಾಖಲೆಗಳ ಪ್ರಕಾರ ಈ ಪ್ರಕರಣದಲ್ಲಿ ಬಾಬಾ ಲಾಲ್ ದಾಸ್ ಅವರ ಪುತ್ರನ ಕೈವಾಡವನ್ನು ಸಹ ಕಂಡುಹಿಡಿದಿದ್ದಾರೆ. ಆದರೆ ದಾಸ್ ಅವರ ಮಗನೇ ಮೊದಲು ಎಫ್ಐಆರ್ ದಾಖಲಿಸಿದವರು ಮತ್ತು ಕೊಲೆಯ ಆರೋಪಿಯನ್ನು ಹೆಸರಿಸಿದ್ದರು, ಆದರೆ ಅವರನ್ನೂ ಸಿಬಿಐ ತನಿಖೆಗೆ ಒಳಪಡಿಸಲಾಯಿತು” ಎಂದು ಪ್ರಕರಣದ ಗೌಪ್ಯ ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಆದರೆ ಲಾಲ್ ದಾಸ್ ಅವರ ಹತ್ಯೆ ನಿಜಕ್ಕೂ ಜಮೀನು ವ್ಯಾಜ್ಯಕ್ಕಾಗಿ ಜರುಗಿತೇ? ಅಥವಾ ಅವರ ಸಾವು ಕೂಡ ಒಂದು ರಾಜಕೀಯದಾಟವೇ ಎಂದು ಲಾಲ್ ದಾಸ್ ತೀರಿಕೊಂಡು 31 ವರ್ಷಗಳ ನಂತರವೂ ಹಲವು ಪ್ರಶ್ನೆಗಳು, ಸಂಶಯಗಳು ಮೂಡಿಸುತ್ತಿದೆ.
ಮಂಹತ ಲಾಲ್ ದಾಸ್ ಅವರ ಅನುಮಾನಾಸ್ಪದ ಕೊಲೆಯೂ ಸೇರಿದಂತೆ, ಅವರ ಅಲ್ಪಾವಧಿಯ ಜೀವನವನ್ನು ಇಂದು ಅಯೋಧ್ಯೆಯಲ್ಲಿ ಬಹುತೇಕರು ಮರೆತುಹೋಗಿದ್ದಾರೆ. ಆದರೆ ಅವರು ಭಾರತದಲ್ಲಿ ಸೃಷ್ಟಿಯಾಗುತ್ತಿರುವ ಧಾರ್ಮಿಕ ಸಂಘರ್ಷವನ್ನು ನೆಲಮೂಲದಿಂದ ಅರ್ಥ ಮಾಡಿಕೊಂಡು ಜನರನ್ನು ಎಚ್ಚರಿಸಲು ನೋಡಿದರು. ಇಂದು ಅವರ ಕೋಮುಏಕತೆ ಮತ್ತು ಸೌಹಾರ್ದತೆಯ ಸಂದೇಶವು ಅಯೋಧ್ಯೆ ಮತ್ತು ದೇಶ ಎರಡಕ್ಕೂ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಿದೆ.
(ಅಯೋಧ್ಯೆಯಲ್ಲಿ ದೇವಸ್ಥಾನದ ಮಾಜಿ ಅರ್ಚಕನ ಹತ್ಯೆ: ಸತ್ಯಶೋಧನಾ ತಂಡದ ವರದಿ (ಎಕನಾಮಿಕ್ ಅಂಡ್ ಪೊಲಿಟಿಕಲ್ ವಿಕ್ಲಿ, ಪೆಬ್ರವರಿ 5, 1994), ಟೈಮ್ಸ್ ಆಫ್ ಇಂಡಿಯಾ ಮತ್ತು ದ ವೈರ್ ವರದಿಗಳನ್ನು ಆಧರಿಸಿದೆ.)

ಪ್ರಮೋದ್ ಬೆಳಗೋಡ್
ಮೂಲತಃ ಹಾಸನದ ಸಕಲೇಶಪುರದವರು. ರಾಜಸ್ಥಾನದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತಿ ಮತ್ತು ಮಾಧ್ಯಮ (Culture and Media Studies) ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಕನ್ನಡ ಫ್ಯಾಕ್ಟ್ ಚೆಕ್ ಸುದ್ದಿ ಮಾಧ್ಯಮದ ಸಹ ಸಂಪಾದಕರು. ಮೈಸೂರಿನ ನಿರಂತರ ಫೌಂಡೇಷನ್ ರಂಗತಂಡದಲ್ಲಿ ಸಕ್ರಿಯರಾಗಿದ್ದು, ಸಾಹಿತ್ಯ, ರಂಗಭೂಮಿ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದಾರೆ.