ಎನ್‌ಡಿಎ ಸರ್ಕಾರದ ಸಾಧನೆಗಳ ಪಟ್ಟಿ... ವಿಪಕ್ಷಗಳನ್ನು ತೆಗಳಿದ್ದು... ಸ್ವಯಂ ಹೊಗಳುವಿಕೆ... ರಾಹುಲ್ ಗಾಂಧಿಯವರ ವಿಡಿಯೋಗಳ ಬಗ್ಗೆ ಅಣಕ… ಮತ್ತೆ 2024ಕ್ಕೆ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ… 'ಇಂಡಿಯಾ' ಮೈತ್ರಿಕೂಟದ ಬಗ್ಗೆ ವ್ಯಂಗ್ಯ... ಆಡಳಿತ ಪಕ್ಷದ ಬೆಂಬಲಿಗರ ಮೇಜು ಕುಟ್ಟುವಿಕೆ…
ವಿಪಕ್ಷಗಳ ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಸಭೆಯಲ್ಲಿ ಆರಂಭಿಸಿರುವ ಭಾಷಣ ಒಂದು ಗಂಟೆಯಾದರೂ ಮಣಿಪುರದ ಬಗ್ಗೆ ಒಂದೇ ಒಂದು ಪದ ಮಾತನಾಡಿಲ್ಲ.
ಇಂದು ಸಂಜೆ 05:08ಕ್ಕೆ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಮಣಿಪುರ ಹಿಂಸಾಚಾರ ಸಂಬಂಧ ವಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ಮೋದಿ ಅವರು ಭಾಷಣ ಆರಂಭಿಸಿ, ಮಣಿಪುರ ಘಟನೆಯ ಬಗ್ಗೆ ಒಂದೂ ಮಾತನಾಡಲಿಲ್ಲ. ವಿಪಕ್ಷಗಳನ್ನು ಟೀಕಿಸುವುದರಲ್ಲೇ ಪ್ರಧಾನಿ ಮೋದಿ ತಮ್ಮ ಭಾಷಣ ಮುಗಿಸಿದರು.
‘ನನ್ನನ್ನು ಟೀಕಿಸಲು ವಿಪಕ್ಷ ನಾಯಕರು ಡಿಕ್ಷನರಿ ಹುಡುಕುತ್ತಾರೆ. ಅವರ ಮನಸ್ಥಿತಿ ಏನು ಅನ್ನೋದನ್ನ ನಾನು ವಿವರಿಸಬಲ್ಲೆ. ಪ್ರತಿ ದಿನ ಕೂಡ ಇಂತಹ ಜನರು ಟೀಕೆ ಮಾಡುತ್ತಾರೆ. ಮೋದಿಯವರೇ ನಿಮಗೆ ಸಮಾಧಿ ತೋಡುತ್ತಿದ್ದೇವೆ ಎಂದು ಹೇಳುತ್ತಾರೆ. ಈ ಶಬ್ದಗಳು, ಇವರ ಭಾಷೆ ನನಗೆ ಟಾನಿಕ್ ಆಗಿದೆ’ ಎಂದರು.
‘2024ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದ ಪ್ರಧಾನಿ ಮೋದಿ, ವಿಪಕ್ಷಗಳ ಆಡುವ ಒಂದೊಂದು ಮಾತನ್ನು ದೇಶದ ಜನರು ಗಮನಿಸುತ್ತಿದ್ದಾರೆ. ವಿಪಕ್ಷಗಳು ಯಾವಾಗಲೂ ನಿರಾಸೆಯಿಂದಲೇ ಮಾತನಾಡುತ್ತಿವೆ. ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ’ ಎಂದು ಟೀಕಿಸಿದರು.
ವಿಪಕ್ಷಗಳ ಅವಿಶ್ವಾಸ ನಿರ್ಣಯ ಯಾಚನೆಯು ನಮಗೆ ಶುಭ ಸೂಚನೆ ಎಂದ ಮೋದಿ, ವಿಪಕ್ಷಗಳ ಸದಸ್ಯರು ಬರೀ ನೋ ಬಾಲ್ ಎಸೆಯುತ್ತಿದ್ದಾರೆ. ನಮ್ಮ ಸದಸ್ಯರು ಸೆಂಚುರಿ ಬಾರಿಸುತ್ತಿದ್ದಾರೆ. ವಿಪಕ್ಷ ನಾಯಕರೇ ಫೀಲ್ಡಿಂಗ್ ಆರ್ಗನೈಸ್ ಮಾಡಿದ್ದರು. ಆದರೆ ಸಿಕ್ಸ್, ಫೋರ್ಗಳು ನಮ್ಮ ಕಡೆಯಿಂದ ಹೋದವು ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದರು.
ತಮ್ಮ ಭಾಷಣದುದ್ದಕ್ಕೂ ಕೇವಲ ಕಾಂಗ್ರೆಸ್‌ನ ಹೆಸರನ್ನು ಉಲ್ಲೇಖಿಸಿದ ಮೋದಿ, ಯಾವ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿತ್ತು ಎಂಬುದನ್ನು ಪಟ್ಟಿ ಮಾಡಿ ಓದಿದರು.
ಮಣಿಪುರದ ಬಗ್ಗೆ ಮಾತನಾಡದ್ದಕ್ಕೆ ಆಕ್ರೋಶಗೊಂಡ ಇಂಡಿಯಾ ಮೈತ್ರಿಕೂಟದ ಸದಸ್ಯರು, ಮಣಿಪುರದ ಬಗ್ಗೆ ಮಾತನಾಡುವಂತೆ ಪಟ್ಟು ಹಿಡಿದರು.