ಪ್ರಾಯೋಗಿಕವಾಗಿ ಆರಂಭವಾಗಿರುವ ರೈತ ಸಂತೆ ಹೇಗಿರಬೇಕು, ಯಾರಿಗೆಲ್ಲ ಅನುಕೂಲವಾಗಬೇಕು ಎಂಬುದರ ಕುರಿತು ಸಾರ್ವಜನಿಕರು, ರೈತಪರ ಕಾಳಜಿಯುಳ್ಳವರು ಮತ್ತು ಸರ್ಕಾರ ಯೋಜಿಸಬೇಕಾಗಿದೆ. ರೈತ ಬದುಕಿದರೆ, ನಾವೂ ಬದುಕಿದಂತೆ... ಹಾಗಾಗಿ ರೈತ ಸಂತೆಯನ್ನು ಬಳಸೋಣ, ಬೆಳೆಸೋಣ.
ಏಪ್ರಿಲ್ 12ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ಧಾನ್ಯ, ಹಣ್ಣು ಮತ್ತು ತರಕಾರಿಗಳನ್ನು ‘ನಮ್ಮ ಬೆಳೆ- ನಮ್ಮ ಬೆಲೆ’ ಘೋಷಣೆಯ ಅಡಿಯಲ್ಲಿ ಮಾರಾಟ ಮಾಡುವ ‘ರೈತ ಸಂತೆ’ಯನ್ನು ಕರ್ನಾಟಕ ರಾಜ್ಯ ರೈತ ಸಂಘ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಒಂದಿಷ್ಟು ವಿಷಯಗಳನ್ನು ಹಂಚಿಕೊಳ್ಳಬಹುದು.
ಹಿಂದೊಮ್ಮೆ ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮ್ಮ ಫ್ಲೈಟ್‌ಗಾಗಿ ಕಾಯುತ್ತಿರುತ್ತಾರೆ. ಅದೇ ಸಮಯದಲ್ಲಿ ಅದೇ ಜಾಗದಲ್ಲಿ ಚಿತ್ರನಟ ರಜನಿಕಾಂತ್ ಕೂಡ ಇರುತ್ತಾರೆ. ಅಂದು ಇವರಿಬ್ಬರ ನಡುವೆ ನಡೆದ ಸಂಭಾಷಣೆಯ ಸಾರಾಂಶ ಇಂತಿದೆ:
ಪ್ರೊ: ನಮ್ಮ ರೈತರು ಬೆಳೆದ ಬೆಳೆಗಳ ಬಹುತೇಕ ಭಾಗ ಜಿಲ್ಲಾ ಕೇಂದ್ರದ ಮುಖ್ಯ ಮಾರುಕಟ್ಟೆಗೆ ಸಂಚರಿಸಿದ ನಂತರ, ಬಹಳಷ್ಟು ಭಾಗ ಹಿಮ್ಮುಖವಾಗಿ ಸಂಚರಿಸುತ್ತಾ ತಾಲೂಕು, ಹೋಬಳಿಗಳಿಗೆ ಬರುತ್ತದೆ. ಇದರಿಂದ ಬೆಳೆಗಾರನಿಗಾಗಲಿ, ಗ್ರಾಹಕನಿಗಾಗಲಿ ಲಾಭವಿಲ್ಲ. ಹಾಗಾಗಿ ಬೆಳೆದ ಬೆಳೆಯನ್ನು ಸ್ಥಳೀಯವಾಗಿ ಮಾರಾಟ ಮಾಡಿ ಇನ್ನುಳಿದಿದ್ದನ್ನು ಹೊರಗೆ ಕಳುಹಿಸುವುದು ಸೂಕ್ತ. ಇದರಿಂದಾಗಿ ‘ಫುಡ್ ಮೈಲ್’ ಕಡಿಮೆ ಮಾಡಬಹುದು ಎಂದು ಪ್ರಸ್ತಾಪಿಸಿದ್ದರು. ಅಲ್ಲದೆ ಅದಕ್ಕಾಗಿ ರೈತರದ್ದೇ ಮಾರುಕಟ್ಟೆ ಮಾಡಬೇಕೆಂಬ ಉದ್ದೇಶವನ್ನೂ ಪ್ರಕಟಿಸಿದ್ದರು.
ರಜನಿಕಾಂತ್: ಸಾರ್, ನೀವು ಈ ಕೆಲಸಕ್ಕೆ ಚಾಲನೆ ನೀಡುವುದಾದರೆ ನಾನು ಐದು ಕೋಟಿ ರೂಪಾಯಿ ಕೊಡುವೆ.
ಪ್ರೊ: ನೀವು ಐದು ಕೋಟಿ ಕೊಟ್ಟರೆ, ಅದು ಉದ್ಯಮವಾಗಬಹುದು. ಚಳವಳಿಯಾಗಲಿ, ರೈತರ ಮಾರುಕಟ್ಟೆ ಆಗಲಿ ಆಗುವುದಿಲ್ಲ. ಅದರಲ್ಲೂ ರೈತರು ತಮ್ಮೂರಿನಲ್ಲಿ ಮಾಡಿಕೊಳ್ಳಬಹುದಾದ ಅವರದ್ದೇ ಆದ ‘ನಮ್ದು’ ಮಾರುಕಟ್ಟೆ ಉದಯಿಸುವುದಿಲ್ಲ ಎಂದು ನಿರಾಕರಿಸುತ್ತಾರೆ.
ಮೇಲೆ ಪ್ರಸ್ತಾಪಿಸಿರುವ ವಿಷಯದ ಮುಂದುವರಿಕೆಯ ಭಾಗವೆಂಬಂತೆ… ಇದೀಗ ಏಪ್ರಿಲ್ 12, 13 ಮತ್ತು 14ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆಯುತ್ತಿರುವ ‘ರೈತ ಸಂತೆ’ಯ ವಿಚಾರದ ಬಗ್ಗೆ ಮಾತನಾಡಬೇಕಿರುವ ತುರ್ತು ನಮ್ಮದಾಗಿದೆ.
ಏಕಿದು ರೈತರ ಸಂತೆ?
ತರಕಾರಿ ಬೆಲೆ ಕುಸಿದಿದೆ. ರೈತರು ಕಂಗಾಲಾಗಿದ್ದಾರೆ. ರೈತರಿಗೆ ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಅಥವಾ ನ್ಯಾಯಯುತ ಬೆಲೆ ಸಿಗಬೇಕು. ಅದು ಸಾಧ್ಯವಾಗಿಲ್ಲ. ಹಾಗಾಗಿ ರೈತರು ಬೆಳೆದ ಬೆಳೆಗಳನ್ನು ತಾವೇ ಖುದ್ದು ನೇರ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಿ ತನ್ಮೂಲಕ ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡುವುದು ರೈತ ಸಂಘದ ಉದ್ದೇಶ ಮತ್ತು ಧ್ಯೇಯ. ಇದು ಸ್ವಾಗತಾರ್ಹ ಬೆಳವಣಿಗೆ.
ಕಳಕಳಿ
ಬೆಂಗಳೂರನಂತಹ ನಗರಗಳಲ್ಲಿ ‘ಬ್ರಾಂಡೆಂಡ್ ಪ್ರಾಡಕ್ಟ್ಸ್’ಗೆ ಒಗ್ಗಿರುವ ಮಂದಿ ರೈತರ ಮಾರುಕಟ್ಟೆಗೆ ಬರುತ್ತಾರಾ, ಒಗ್ಗುತ್ತಾರಾ? ಒಗ್ಗುವುದಾದಲ್ಲಿ ಶೇಕಡಾ ಎಷ್ಟು? ಎಂಬಿತ್ಯಾದಿಗಳ ಬಗ್ಗೆಯೂ ಗಮನಹರಿಸಬೇಕಿದೆ. ಅಂತೆಯೇ ಮಾರುಕಟ್ಟೆಯ ಡೈನಮಿಕ್ಸ್ ಅರ್ಥಮಾಡಿಕೊಳ್ಳುವುದಾದರೆ ಇಂಥ ಸಂತೆಗಳ ದಿನದಂದೇ ಸೂಪರ್ ಮಾರ್ಕೆಟ್‌ನ ವ್ಯಾಪಾರಸ್ಥನೊಬ್ಬ ಅದೇ ಏರಿಯಾದಲ್ಲಿ ಸಂತೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಸಂತೆಗೆ ಪೆಟ್ಟು ಕೊಡುವುದಿಲ್ಲ ಎಂಬ ಅನುಮಾನವೂ ಸಂಘಟಕರಿಗೆ ಇರಬೇಕು. ಇಂತಹ ಮಾರುಕಟ್ಟೆಯ ಸ್ಟ್ರಾಟಜಿಗಳನ್ನು ತಪ್ಪಿಸುವುದಾದರೆ, ರೈತ ಸಂತೆಗಳು ವರ್ಷದ 365 ದಿನವೂ ಬೆಂಗಳೂರು ನಗರದ ಮತ್ತು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜರುಗಲು ಬೇಕಾದ ವ್ಯವಸ್ಥೆ ಮತ್ತು ರೂಪುರೇಷೆಗೆ ರೈತ ಸಂಘ ಮುಂದಾಗಬೇಕು. ಅದು ಈ ಕ್ಷಣದ ತುರ್ತು.
ಇದನ್ನು ಓದಿದ್ದೀರಾ?: ಸರ್ವೇ ಕೆಲಸಗಳಿಗೆ ರೋವರ್ ತಂತ್ರಜ್ಞಾನ, ಎಂಟು ದಿನಕ್ಕೆ ಹದ್ದುಬಸ್ತು: ಸಚಿವ ಕೃಷ್ಣ ಬೈರೇಗೌಡ
ದಲ್ಲಾಳಿ ಎಂಬ ಗುಮ್ಮ
ಹೌದು. ಬೆಳೆಗಾರ ಮತ್ತು ಗ್ರಾಹಕನ ನಡುವೆ ದೊಡ್ದ ಅಂತರವಿದೆ. ಬೆಳೆದವನಿಗೆ 1 ರೂ. ಸಿಕ್ಕರೆ ಕೊಳ್ಳುವವನು 10 ರೂ. ಕೊಡುತ್ತಿದ್ದಾನೆ. ಇನ್ನುಳಿದ ಎಂಟೊಂಬತ್ತು ರೂ. ದಲ್ಲಾಳಿಯ ಕೈ ಸೇರಿತು ಎಂಬುದು ಎಲ್ಲರ ಆರೋಪ. ಅದು ಸರಿ. ಈಗ ಯೋಚಿಸಬೇಕಾದ ವಿಷಯ ಇಷ್ಟೇ: ಫಾರ್ಮ್ ಗೇಟ್‌ನಿಂದ ಖರೀದಿಸಲಾದ ಹಣ್ಣು-ತರಕಾರಿ ಗ್ರಾಹಕನಿಗೆ ಮುಟ್ಟುವಷ್ಟರಲ್ಲಿ ಐದಾರು ಕೈ ಬದಲಾಗುತ್ತದೆ. ಎಲ್ಲರೂ ತಾವು ಕೊಳ್ಳುವ ಬೆಲೆ- ಕೊಳೆತು ಒಣಗಿ ನಷ್ಟವಾಗುವ ಶೇಕಡ ಮತ್ತು ಅದರ ಮೇಲೆ ಅವರ ಲಾಭ ಇಟ್ಟುಕೊಂಡು ಮಾರಾಟ ಮಾಡುತ್ತಾರೆ. ಇದರಿಂದಾಗಿ ಬೆಳೆಗಾರ ಮತ್ತು ಗ್ರಾಹಕರ ನಡುವಿನ ಐದಾರು ಕೈಗಳ ಅಂತರದಲ್ಲಿ ಗ್ರಾಹಕ ಹೆಚ್ಚು ಬೆಲೆ ನೀಡಬೇಕಾಗುತ್ತದೆ.

ಇದನ್ನು ತಪ್ಪಿಸುವುದು ಹೇಗೆ?
ಸರ್ಕಾರದ ಪಂಚಾಯಿತಿ ಲೆವೆಲ್‌ನಲ್ಲಿ ರೈತರು ಬೆಳೆದ ಪೆರಿಶಬಲ್ ಗೂಡ್ಸ್‌ಗೆ ಸ್ಥಳೀಯ ಮಾರುಕಟ್ಟೆ ಒದಗಿಸುವುದು ಮತ್ತು ದೂರದ ಮಾರುಕಟ್ಟೆಗೆ ತಲುಪಿಸುವ ಸರ್ಕಾರಿ ವ್ಯವಸ್ಥೆ ಮಾಡಬೇಕು. ಆಗ ಖಾಸಗಿ ದಳ್ಳಾಳಿಗಳ ಉಪಟಳ ಕೊಂಚ ಕಡಿಮೆ ಆದೀತು. (ಖಾಸಗಿ ದಳ್ಳಾಳಿಗಳೂ ಈ ರಾಜ್ಯದ ನಾಗರಿಕರೆ, ಅವರೇ ಖುದ್ದು ಉದ್ಯೋಗ ಕಂಡುಕೊಂಡಿದ್ದಾರೆ, ಸರ್ಕಾರದ ಯಾವುದೇ ಹಂಗಿಲ್ಲದೆ, ಅದನ್ನೂ ಮರೆಯುವು ಹಾಗಿಲ್ಲ.)
ಹೀಗಿರುವಾಗ ಪ್ರಾಯೋಗಿಕವಾಗಿ ಆರಂಭವಾಗಿರುವ ರೈತರ ಸಂತೆಗೆ ಒಂದಿಡೀ ಸಂವಿಧಾನವನ್ನು ಬರೆಯುವ ಒಂದು ವಿಶಿಷ್ಟ ಯೋಜನೆಯನ್ನು ಸೃಷ್ಟಿಸುವ ಅನಿವಾರ್ಯ ಅಗತ್ಯ ಸಾರ್ವಜನಿಕರ, ರೈತಪರ ಕಾಳಜಿಯುಳ್ಳ ಮಂದಿಯ ಮತ್ತು ಸರ್ಕಾರದ ಮೇಲಿದೆ. ರೈತ ಬದುಕಿದರೆ, ನಾವೂ ಬದುಕಿದಂತೆ… ಹಾಗಾಗಿ ರೈತ ಸಂತೆಯನ್ನು ಬಳಸೋಣ, ಬೆಳೆಸೋಣ.

ಕೆ. ಎನ್ ನಾಗೇಶ್
ಲೇಖಕ, ಪತ್ರಕರ್ತ, ಕೃಷಿ ವಿಶ್ಲೇಷಕ