ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಮತ್ತು ಎಸ್‌ಸಿ, ಎಸ್‌ಟಿ ಪಿಟಿಸಿಎಲ್ ಕಾಯ್ದೆ ಭೂ ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 208 ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಹೋರಾಟ ಅಂತ್ಯಗೊಂಡಿದೆ.
ಪ್ರತಿಭಟನಾ ಸ್ಥಳಕ್ಕೆ ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹದೇವಪ್ಪ ಭೇಟಿ ನೀಡಿ ಆದೇಶ ಪತ್ರ ನೀಡಿದರು. ಈ ಹಿನ್ನೆಲೆ ಹೋರಾಟಗಾರರು ಪ್ರತಿಭಟನೆ ಕೈಬಿಟ್ಟಿದ್ದಾರೆ.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಡಾ. ಎಚ್ ಸಿ ಮಹದೇವಪ್ಪ, ಸರ್ಕಾರ ದಲಿತ ಸಮುದಾಯದ ಹಿತ ರಕ್ಷಣೆಗೆ ಬದ್ಧವಾಗಿದ್ದು, ವಿಶೇಷವಾಗಿ ಭೂಮಿ ರಕ್ಷಣೆಗೆ ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ. ಮೊದಲ ಹಂತದಲ್ಲಿ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಸರ್ಕಾರ ಕೊಟ್ಟ ಮಾತಿನಂತೆ ನುಡಿದಂತೆ ನಡೆದಿದೆ. ಶತಶತಮಾನಗಳಿಂದ ಶೋಷಣೆಗೆ ಒಳಗಾದವರಿಗೆ ಮರು ಬದುಕು ಕಟ್ಟಿಕೊಳ್ಳಲು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. 2017 ರಲ್ಲಿ ಸುಪ್ರೀಂಕೋರ್ಟ್ ನೆಕ್ಕಂಟಿರಾಮಲಕ್ಷ್ಮಿ ಮತ್ತು ಕರ್ನಾಟಕ ಸರ್ಕಾರ ಪ್ರಕರಣದಲ್ಲಿ ನೀಡಿದ ತೀರ್ಪಿನಿಂದ ಲಕ್ಷಾಂತರ ಕುಟುಂಬಗಳ ಭೂಮಿ ಕೈ ತಪ್ಪಿದರಿಂದ ಇಡೀ ಸಮುದಾಯ ಭೂಮಿಗಳನ್ನು ಕಳೆದುಕೊಂಡು ಬೀದಿಪಾಲಾಗಿ ತಮ್ಮ ಜೀವನವನ್ನೇ ಕಳೆದುಕೊಂಡಿದ್ದರು. 6 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಬಿಜೆಪಿ ಸುಳ್ಳು ಭರವಸೆಗಳನ್ನು ನೀಡಿ ಸಮುದಾಯವನ್ನು ದಾರಿ ತಪ್ಪಿಸಿತ್ತು ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಹಾ ಸಂಸ್ಥಾನ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮರಾ ಅಳವಡಿಕೆ
ಎಸ್‌ಸಿ, ಎಸ್‌ಟಿ ಪಿಟಿಸಿಎಲ್ ಕಾಯ್ದೆ ಭೂ ವಂಚಿತರ ಹೋರಾಟ ಸಮಿತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಮಂಜುನಾಥ್ ಮಾತನಾಡಿ, ಚಿತ್ರದುರ್ಗದಲ್ಲಿ ನಾವು ಹೋರಾಟ ಆರಂಭಿಸಿದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ ಕೆ ಶಿವಕುಮಾರ್, ಎಚ್ ಸಿ ಮಹದೇವಪ್ಪ, ಸತೀಶ್ ಜಾರಕಿಹೋಳಿ ಹಲವು ಮುಖಂಡರು ನೀಡಿದ್ದ ಭರವಸೆ ಇದೀಗ ಈಡೇರಿದೆ. ಕಾಂಗ್ರೆಸ್ ಸರ್ಕಾರ ನಮಗೆ ಶಾಶ್ವತ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸಿದೆ ಎಂದರು.
ಈ ವೇಳೆ ದಲಿತ ಸಂಘಟನೆಗಳ ಮುಖಂಡರಾದ ರಾಮಣ್ಣ ಬಿ ಎಂ, ವೆಂಕಟೇಶ್, ಹೆಣ್ಣೂರು ಶ್ರೀನಿವಾಸ್, ಬಿ ಗೋಪಾಲ್, ಹರಿರಾಮ್, ಮೂರ್ತಿ ಭೀಮ್ ರಾವ್, ವೇಣುಗೋಪಾಲ್ ಮೌರ್ಯ, ಕವಿ ಕಡ್ಲ ಶಾಂತಕುಮಾರ್, ಚೆನ್ನಸ್ವಾಮಿ, ಈಶ್ವರ್ ಮುಂತಾದ ಗಣ್ಯರು ಭಾಗವಹಿಸಿದ್ದರು.