ಮುಸ್ಲಿಮರದ್ದು ಎಂದು ಭಾವಿಸಿ ಹಿಂದೂ ವ್ಯಕ್ತಿಯ ಬೇಕರಿಯನ್ನು ದುರುಳರ ಗುಂಪೊಂದು ಸುಟ್ಟು ಹಾಕಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಯಾವತ್ ಗ್ರಾಮದಲ್ಲಿ ನಡೆದಿದೆ. ಸದ್ಯ ಬೇಕರಿ ಮಾಲೀಕ ಸ್ವಪ್ನಿಲ್ ಆದಿನಾಥ್ ಕದಮ್ ಮಾಧ್ಯಮಕ್ಕೆ ನೀಡಿರುವ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೋಮುದ್ವೇಷ, ಇಸ್ಲಾಮೋಫೋಬಿಯಾದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮುಸ್ಲಿಂ ಯುವಕನೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾನೆ ಮತ್ತು ಛತ್ರಪತಿ ಶಿವಾಜಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂಬ ಸುದ್ದಿಗಳು ಹರಡುತ್ತಿರುವಂತೆ ಈ ಘಟನೆ ನಡೆದಿದೆ. ಶಿವಾಜಿ ಪ್ರತಿಮೆ ಧ್ವಂಸ ವಿರುದ್ಧ ಹಿಂಸಾತ್ಮಕ ಮೆರವಣಿಗೆ ನಡೆದಿದ್ದು, ಈ ವೇಳೆ ಬೇಕರಿ ಮುಸ್ಲಿಮರ ಒಡೆತನದಲ್ಲಿದೆ ಎಂದು ಭಾವಿಸಿ ಹಿಂದೂ ವ್ಯಕ್ತಿಯ ಬೇಕರಿಯನ್ನು ಸುಟ್ಟುಹಾಕಲಾಗಿದೆ.
ಇದನ್ನು ಓದಿದ್ದೀರಾ? ಮುಸ್ಲಿಮರು ವಾಚ್ ಕದ್ದರೆಂದು ಕೋಮುದ್ವೇಷದ ಸುಳ್ಳು ಕಥೆ ಹೆಣೆದ ವೈದ್ಯ; ಸಿಐಎಸ್‌ಎಫ್ ತನಿಖೆಯಲ್ಲಿ ಬಟಾಬಯಲು
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಬೇಕರಿ ಮಾಲೀಕ ಸ್ವಪ್ನಿಲ್, “ನನ್ನ ಕೆಲವು ಕೆಲಸಗಾರರು ಮುಸ್ಲಿಮರು. ಅವರು ಉತ್ತರ ಪ್ರದೇಶ ಮೂಲದವರು. ಯಾವುದೋ ಮುಸ್ಲಿಂ ವ್ಯಕ್ತಿಯೋರ್ವ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಒಂದನ್ನು ಮಾಡಿದ್ದ ಎನ್ನಲಾಗಿದೆ. ಇಲ್ಲಿ 150-200 ದೂರದಲ್ಲಿ ಮಸೀದಿಯಿದೆ. ಗುಂಪು ಮಸೀದಿಯೆಡೆ ಹೋಗುತ್ತಿತ್ತು. ಈ ವೇಳೆ ಯಾರೋ ನನ್ನ ಬೇಕರಿಯನ್ನು ಮುಸ್ಲಿಮರದ್ದು ಎಂದು ಹೇಳಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
#WATCH | Pune tension | Pune, Maharashtra: Swapnil Adinath Kadam, a bakery owner whose shop was vandalised and burned, says, "Some of my workers are Muslims and they have come from UP. A social media post surfaced in the morning, it was said that Muslims had posted an… pic.twitter.com/QXvCUSX5S0
— ANI (@ANI) August 1, 2025
“ನಮ್ಮ ಬೇಕರಿಯನ್ನು ಮುಸ್ಲಿಮರದ್ದು ಎಂದು ತಪ್ಪಾಗಿ ಭಾವಿಸಿ ಗುಂಪು ಬೇಕರಿ ಮೇಲೆ ಕಲ್ಲು ತೂರಾಟ ನಡೆಸಿದೆ. ಬೇಕರಿಯನ್ನು ಸಂಪೂರ್ಣವಾಗಿ ಸುಟ್ಟು ಹಾಕಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾಗಿದೆ ಎನ್ನಲಾದ ಪೋಸ್ಟ್‌ಗೂ ನಮ್ಮ ಕೆಲಸಗಾರರಿಗೂ ಯಾವುದೇ ಸಂಬಂಧವಿಲ್ಲ” ಎಂದೂ ಸ್ವಪ್ನಿಲ್ ತಿಳಿಸಿದ್ದಾರೆ.
ಸದ್ಯ ಈ ಘಟನೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೇಶದಲ್ಲಿ ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ಹಗೆತನದ ಮತ್ತೊಂದು ಆತಂಕಕಾರಿ ಸಂಕೇತ. ಇಂತಹ ಕೃತ್ಯಗಳಿಂದಾಗಿ ಈಗಾಗಲೇ ಮುಸ್ಲಿಮರು ಮತ್ತು ಮುಸ್ಲಿಮೇತರರು ತಮ್ಮ ವ್ಯಾಪಾರವನ್ನೇ ಕಳೆದುಕೊಳ್ಳುವ ಆತಂಕದಲ್ಲೇ ಬದುಕುತ್ತಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, “ದೇಶವನ್ನು ಈ ಹಂತಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ತಂದು ನಿಲ್ಲಿಸಿದೆ” ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕೇಸರಿ ಭಯೋತ್ಪಾದನೆ ಎಂದೂ ದೂರಿದ್ದಾರೆ.
