ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದಾಗಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಬೆದರಿಕೆ ಹಾಕುತ್ತಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆರೋಪಿಸಿದ್ದಾರೆ. ಆದರೆ, ಬಿಜೆಪಿ ಅಧಿಕಾರದಲ್ಲಿರುವ ಮಣಿಪುರ ಮತ್ತು ಹರಿಯಾಣದಲ್ಲಿ ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಅಲ್ಲಿನ ರಾಜ್ಯಪಾಲರು ಮೌನ ವಹಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವುದಾಗಿ ಮತ್ತು ತಮ್ಮ ಪತ್ರಗಳಿಗೆ ಉತ್ತರಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಂದು ರಾಜ್ಯಪಾಲ ಪುರೋಹಿತ್ ಶುಕ್ರವಾರ ಮಾನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಪುರೋಹಿತ್ ಅವರು ತಾವು ಕಳುಹಿಸಿದ ಪತ್ರಗಳಿಗೆ ಮಾನ್ ಅವರು ಪ್ರತಿಕ್ರಿಯಿಸಲಿಲ್ಲ ಎಂದು ಆರೋಪಿಸಿದ್ದಾರೆ. ಆದರೆ, ತಾವು ಸ್ವೀಕರಿಸಿದ ಪತ್ರಗಳಿಗೆ ಉತ್ತರಿಸಿದ್ದೇವೆ. ರಾಜ್ಯಪಾಲರು 16 ಪತ್ರಗಳನ್ನು ಬರೆದಿದ್ದರು. ಅವುಗಳಲ್ಲಿ ಏಳಕ್ಕೆ ಮಾತ್ರ ಉತ್ತರಿಸಿಲ್ಲ. ರಾಜ್ಯಪಾಲರು ಆತುರದಿಂದ ಪತ್ರ ಬರೆದು ತಕ್ಷಣ ಉತ್ತರ ನಿರೀಕ್ಷಿಸುವುದು ಬೇಡ ಎಂದು ಮಾನ್ ಪ್ರತಿಕ್ರಿಯಿಸಿದ್ದಾರೆ.
“ರಾಜ್ಯಪಾಲರು ಪಂಜಾಬ್‌ನ ಶಾಂತಿಪ್ರಿಯ ಜನರಿಗೆ ರಾಷ್ಟ್ರಪತಿ ಆಳ್ವಿಕೆ ಹೇರುವ ಬೆದರಿಕೆ ಹಾಕುತ್ತಿದ್ದಾರೆ. ಅವರು 356ನೇ ವಿಧಿಯಡಿ ರಾಷ್ಟ್ರಪತಿ ಮೂಲಕ ರಾಜ್ಯಪಾಲರ ಆಳ್ವಿಕೆಗೆ ಶಿಫಾರಸು ಮಾಡುವುದಾಗಿ ಹೇಳುತ್ತಿದ್ದಾರೆ” ಎಂದು ಮಾನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
“ತಮ್ಮ ಸರ್ಕಾರವು ಡ್ರಗ್ಸ್ ಹಾವಳಿಯನ್ನು ನಿಭಾಯಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕಳ್ಳಸಾಗಾಣಿಕೆದಾರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ದರೋಡೆಕೋರರ ವಿರುದ್ಧ ದಾಳಿ ಮಾಡುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೀಗಿರುವಾಗ, ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ” ಎಂದು ಕಿಡಿಕಾರಿದ್ದಾರೆ.
“ನಾನು ಗವರ್ನರ್ ಅವರನ್ನು ಕೇಳಲು ಬಯಸುತ್ತೇನೆ. ನುಹ್‌ನಲ್ಲಿನ ಕೋಮು ಘರ್ಷಣೆ ಮತ್ತು ಹಿಂಸಾಚಾರ ಸಂಬಂಧ ಕರ್ಫ್ಯೂ ವಿಧಿಸಬೇಕಾದ ಬಗ್ಗೆ ಹರಿಯಾಣ ರಾಜ್ಯಪಾಲರು ಹರಿಯಾಣ ಮುಖ್ಯಮಂತ್ರಿ ಖಟ್ಟರ್‌ಗೆ ಏನಾದರೂ ನೋಟಿಸ್ ನೀಡಿದ್ದಾರೆಯೇ? ಹರ್ಯಾಣ ರಾಜ್ಯಪಾಲರು ಖಟ್ಟರ್ ಅವರಿಗೆ ಪತ್ರ ಬರೆದಿದ್ದಾರೆಯೇ? ಇಲ್ಲ. ಏಕೆಂದರೆ ಕೇಂದ್ರದಲ್ಲೂ ಅವರ ಸರ್ಕಾರ ಆಡಳಿತ ನಡೆಸುತ್ತಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕಾವೇರಿ ನದಿ ವಿವಾದ : ವಾಸ್ತವ ಸ್ಥಿತಿ ಕುರಿತು ವರದಿಗೆ ಸೂಚಿಸಿ ಸೆ 1ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ
“ಪಂಜಾಬ್ ಗವರ್ನರ್ ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಕಾಳಜಿ ವಹಿಸಿದ್ದಾರೆ. ಆದರೆ, ಜನಾಂಗೀಯ ಹಿಂಸಾಚಾರದಿಂದ ಕೂಡಿದ ಮಣಿಪುರದ ಬಗ್ಗೆ ಎಂದಿಗೂ ಅವರು ಮಾತನಾಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಮಣಿಪುರಕ್ಕೆ ಸಂವಿಧಾನ ಅನ್ವಯಿಸುವುದಿಲ್ಲವೇ? ಉತ್ತರ ಪ್ರದೇಶದಲ್ಲಿ ಪತ್ರಕರ್ತರ ಮುಂದೆಯೇ ಕೊಲೆ ನಡೆಯುತ್ತದೆ. ಆದರೆ, ಅಲ್ಲಿನ ರಾಜ್ಯಪಾಲರು ಯೋಗಿ ಆದಿತ್ಯನಾಥ್ ಅವರಿಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರಶ್ನಿಸುವ ಯಾವುದೇ ಪತ್ರ ಬರೆಯುವ ಧೈರ್ಯ ಮಾಡುತ್ತಾರೆಯೇ” ಎಂದು ಕಿಡಿಕಾರಿದ್ದಾರೆ.
“ಪಂಜಾಬ್, ದೆಹಲಿ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಹೊರತುಪಡಿಸಿ ಹೆಚ್ಚಿನ ರಾಜ್ಯಗಳ ಜನರಿಗೆ ಅವರ ರಾಜ್ಯಪಾಲರ ಹೆಸರುಗಳು ತಿಳಿದಿರುವುದಿಲ್ಲ. ಏಕೆಂದರೆ, ಈ ಆರು ರಾಜ್ಯಗಳಲ್ಲಿ ಮಾತ್ರವೇ ಬಿಜೆಪಿಯೇತರ ಸರ್ಕಾರಗಳಿವೆ” ಎಂದು ಮಾನ್ ಹೇಳಿದ್ದಾರೆ.