ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಹಾಗೂ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಡುವಿನ ರಾಜಕೀಯ ಸಂಘರ್ಷ ತೀವ್ರಗೊಂಡಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದಾಗಿ ರಾಜ್ಯಪಾಲರು ಸಿಎಂ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಶುಕ್ರವಾರ ಎಎಪಿ ನಾಯಕ ಮತ್ತು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಪತ್ರ ಬರೆದು ತಮ್ಮ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದಿದ್ದರೆ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡುವುದರ ಜೊತೆಗೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದಾರೆ.
ರಾಜ್ಯಪಾಲ ಪುರೋಹಿತ್ ಅವರು ಸಂವಿಧಾನದ 356 ನೇ ವಿಧಿ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ರ ಅಡಿಯಲ್ಲಿ “ಅಂತಿಮ ನಿರ್ಧಾರ” ತೆಗೆದುಕೊಳ್ಳುವ ಮೊದಲು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿ ಮಾನ್ ಅವರಿಗೆ ಸಲಹೆ ನೀಡಿದ್ದಾರೆ.
ರಾಜ್ಯಪಾಲ ಬನ್ವಾರಿಲಾಲ್ ಇತ್ತೀಚಿಗೆ ರಾಜ್ಯದಲ್ಲಿ ಮಾದಕವಸ್ತು ಕಳ್ಳಸಾಗಣೆ ಕುರಿತು ಸಿಎಂ ಅವರಿಗೆ ಪತ್ರ ಬರೆದಿದ್ದು, ಮಾದಕ ಕಳ್ಳ ಸಾಗಣೆಯ ಕುರಿತು ಸರ್ಕಾರವು ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ರಾಜ್ಯಪಾಲರು ಬರೆದ ಪತ್ರಕ್ಕೆ ಮುಖ್ಯಮಂತ್ರಿ ಭಗವಂತ್ ಮಾನ್ ಯಾವುದೇ ಉತ್ತರವನ್ನು ನೀಡದಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಚೀನಾ ವಶದಲ್ಲಿ ಭಾರತದ ಭೂಮಿ, ಸುಳ್ಳು ಹೇಳುತ್ತಿರುವ ಪ್ರಧಾನಿ: ರಾಹುಲ್ ಗಾಂಧಿ
“ಸಾಂವಿಧಾನಿಕ ಕಾರ್ಯವಿಧಾನದ ವೈಫಲ್ಯದ ಹಿನ್ನೆಲೆಯಲ್ಲಿ, ಸಂವಿಧಾನ ವಿಧಿ 356ರ ಅಡಿಯಲ್ಲಿ ಭಾರತದ ರಾಷ್ಟ್ರಪತಿಗಳಿಗೆ ವರದಿಯನ್ನು ಕಳುಹಿಸುವ ಬಗ್ಗೆ ಮತ್ತು ಐಪಿಸಿ ಸೆಕ್ಷನ್ 124ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡುವ ಬಗ್ಗೆ ನಾನು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನಾನು ನಿಮಗೆ ತಿಳಿಸುತ್ತಿದ್ದೇನೆ. ಮೇಲೆ ಉಲ್ಲೇಖಿಸಿದಂತೆ ನಾನು ನೀಡಿರುವ ಪತ್ರಕ್ಕೆ ಉತ್ತರ ನೀಡಲು ನಿಮ್ಮನ್ನು ಕೇಳುತ್ತಿದ್ದು, ಅಗತ್ಯ ಮಾಹಿತಿಗಳನ್ನು ಕೋರಲಾಗಿದೆ. ಹಾಗೆಯೇ ರಾಜ್ಯದಲ್ಲಿನ ಡ್ರಗ್ಸ್ ಸಮಸ್ಯೆಗೆ ಸಂಬಂಧಿಸಿದಂತೆ ನೀವು ತೆಗೆದುಕೊಂಡ ಕ್ರಮಗಳ ವಿಷಯದಲ್ಲೂ ಸಹ, ವಿಫಲವಾದರೆ ಕಾನೂನು ಮತ್ತು ಸಂವಿಧಾನದ ಪ್ರಕಾರ ಕ್ರಮ ಕೈಗೊಳ್ಳುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆಯಿಲ್ಲ” ಎಂದು ಎಂದು ರಾಜ್ಯಪಾಲರು ಪತ್ರದಲ್ಲಿ ತಿಳಿಸಿದ್ದಾರೆ.
ಪಂಜಾಬ್‌ನಲ್ಲಿ ಐದು ಜನರಲ್ಲಿ ಒಬ್ಬರು ಮಾದಕ ವ್ಯಸನಿಯಾಗಿದ್ದಾರೆ ಎಂದು ಸಂಸದೀಯ ಸ್ಥಾಯಿ ಸಮಿತಿಯ ಇತ್ತೀಚಿನ ವರದಿಯನ್ನು ರಾಜ್ಯಪಾಲರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಾಮಾನ್ಯವಾಗಿ ರಾಜ್ಯಪಾಲರು ವರದಿ ಕಳುಹಿಸಿದ ನಂತರ ರಾಜ್ಯದಲ್ಲಿ 356ನೇ ವಿಧಿ ಮೂಲಕ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಲಾಗುತ್ತದೆ.
ರಾಜ್ಯಪಾಲರ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಎಎಪಿ ನಾಯಕ ಮಲ್ವಿಂದರ್ ಸಿಂಗ್ ಕಾಂಗ್, ರಾಜ್ಯಪಾಲರು ಶಿಷ್ಟಾಚಾರವನ್ನು ಕಾಪಾಡಬೇಕು. ಭಾರತದ ಸಂವಿಧಾನವು ಚುನಾಯಿತ ಜನರಿಗೆ ಅಧಿಕಾರ ನೀಡುತ್ತದೆ. ರಾಷ್ಟ್ರಪತಿ ಆಳ್ವಿಕೆ ಹೇರುವುದಾಗಿ ಬೆದರಿಕೆ ಹಾಕುತ್ತಿರುವುದು ಬಿಜೆಪಿಯ ಕಾರ್ಯಸೂಚಿಯನ್ನು ಬಾಯಲ್ಲಿ ಹೇಳುತ್ತಿರುವುದಲ್ಲದೆ ಮತ್ತೇನಿಲ್ಲ. ರಾಜ್ಯಪಾಲರಿಗೆ ರಾಷ್ಟ್ರಪತಿ ಆಳ್ವಿಕೆ ಹೇರಲು ಬಯಸಿದರೆ, ಮಣಿಪುರದಲ್ಲಿ, ಹರಿಯಾಣದಲ್ಲಿ ಮಾಡಬೇಕು ಎಂದು ನಾನು ರಾಜ್ಯಪಾಲರಿಗೆ ಹೇಳಲು ಬಯಸುತ್ತೇನೆ. ಪಂಜಾಬ್ ಸರ್ಕಾರವು ಸಾಂವಿಧಾನಿಕ ಚೌಕಟ್ಟಿನೊಳಗೆ ಕೆಲಸ ಮಾಡುತ್ತಿದೆ. ನಿಮ್ಮ ಅಜೆಂಡಾವನ್ನು ನಮ್ಮಲ್ಲಿ ತರಲು ಪ್ರಯತ್ನಿಸಬೇಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ಆಡಳಿತವಿರುವ ಇತರ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಕೂಡ ರಾಜ್ಯ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ರಾಜ್ಯಪಾಲರ ಹಸ್ತಕ್ಷೇಪವನ್ನು ಎದುರಿಸುತ್ತಿವೆ.
ಈ ರಾಜ್ಯಪಾಲರನು ಆದಷ್ಟು ಬೇಗ ಮಣಿಪುರಕೆ ಕಳುಹಿಸಿದರೆ ಉತ್ತಮ.