- ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಘಟನೆ ಅಸ್ತಿತ್ವಕ್ಕೆ
- ತಾವೇ ನಿಜವಾದ ಹಿಂದುತ್ವ ಹೋರಾಟಗಾರರು ಎಂದ ಪುತ್ತಿಲ ಬೆಂಬಲಿಗರು
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಚುನಾವಣೆಗೂ ಮುನ್ನ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಬಿಜೆಪಿ ವಿರುದ್ಧ ಹಲವರು ಬಂಡಾಯವೆದ್ದಿದ್ದರು. ಅವರಲ್ಲಿ ಕೆಲವರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಮತ್ತೊಂದು ಪಕ್ಷ ಸೇರಿದರೆ, ಇನ್ನೂ ಕೆಲವರು ಬಿಜೆಪಿ ವಿರುದ್ಧ ಬಂಡಾಯದ ಬಾವುಟವನ್ನೇ ಬೀಸಿದ್ದಾರೆ. ಬಿಜೆಪಿಯ ಕೋಮು ಧ್ರುವೀಕರಣ ರಾಜಕಾರಣದ ಪ್ರಯೋಗಶಾಲೆಯಾಗಿದ್ದ ಕರಾವಳಿಯಲ್ಲಿ ಬಿಜೆಪಿಯ ಹಿಂದುತ್ವಕ್ಕೆ, ಪುತ್ತಿಲ ಪರಿವಾರದ ಹಿಂದುತ್ವ ಪೈಪೋಟಿ ನೀಡಲು ಮುಂದಾಗಿದೆ.
ಕರಾವಳಿಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಕೇಸರಿ ಪಕ್ಷ ಟಿಕೆಟ್ ನಿರಾಕರಿಸಿತು. ಹೀಗಾಗಿ, ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಬಿಜೆಪಿ ಹಿಂದುತ್ವದ ಮತಬ್ಯಾಂಕ್ ವಿಭಜನೆಯಾಗಿ ಕಾಂಗ್ರೆಸ್‌ನ ಅಶೋಕ್ ರೈ ಗೆಲುವು ಸಾಧಿಸಿದರು. ಸೋಲುಂಡ ಮೇಲೂ ಬಿಜೆಪಿ ವಿರುದ್ಧ ಕಿಡಿಕಾರುತ್ತಿರುವ ಪುತ್ತಿಲ ತಮ್ಮ ಬೆಂಬಲಿಗರನ್ನು ಸೇರಿಸಿಕೊಂಡು ‘ತುಳುನಾಡಿಗಾಗಿ ಪುತ್ತಿಲ ಪರಿವಾರ’ ಎಂಬ ಹೊಸ ಸಂಘಟನೆ ಹುಟ್ಟುಹಾಕಿದ್ದಾರೆ.
ಪುತ್ತೂರಿನಲ್ಲಿ ಸಂಘ ಪರಿವಾರದ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ ಪುತ್ತಿಲ ಈಗ ಸಂಘದ ವಿರುದ್ಧ ತಿರುಗಿಬಿದ್ದಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ರಾಜಕೀಯಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿವೆ. ತಾವೇ ನಿಜವಾದ ಹಿಂದುತ್ವ ಹೋರಾಟಗಾರರು ಎಂದು ಪುತ್ತಿಲ ಬೆಂಬಲಿಗರು ಹೇಳಿಕೊಂಡಿದ್ದಾರೆ.
ಚುನಾವಣೆ ಘೋಷಣೆಗೂ ಮುನ್ನ ಒಟ್ಟಿಗೆ ಇದ್ದ ಹಿಂದುತ್ವ ಕೋಮುವಾದಿ ಕಾರ್ಯಕರ್ತರು, ಈಗ ಪುತ್ತಿಲ ಬೆಂಬಲಿಗರು ಮತ್ತು ಬಿಜೆಪಿ ಬೆಂಬಲಿಗರೆಂದು ಒಡೆದು ಚೂರಾಗಿದ್ದಾರೆ. ಪರಸ್ಪರ ವೈರಿಗಳಾಗಿದ್ದಾರೆ. ಇದರ ಪರಿಣಾಮವು ಇತ್ತೀಚೆಗಷ್ಟೇ ಪುತ್ತೂರಿನಲ್ಲಿ ಕಂಡುಬಂದಿದೆ.
ಪುತ್ತೂರಿನ ಬಸ್ ನಿಲ್ಧಾಣದ ಬಳಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರ ಭಾವಚಿತ್ರವಿದ್ದ ಬ್ಯಾನರ್‌ನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದು, ಚಪ್ಪಲಿ ಹಾರ ಹಾಕಲಾಗಿತ್ತು. ಚಪ್ಪಲಿ ಹಾರ ಹಾಕಿದ್ದವರು ಪುತ್ತಿಲ ಬೆಂಬಲಿಗರು ಎನ್ನಲಾಗಿದೆ. ಅವರನ್ನು ಬಂಧಿಸಿದ್ದ ಪೊಲೀಸರು ಅಮಾನುಷವಾಗಿ ಹಿಗ್ಗಾಮುಗ್ಗಾ ಥಳಿಸಿದ್ದರು. ಅವರ ಮೇಲೆ ಆ ರೀತಿಯಲ್ಲಿ ಪೊಲೀಸರು ಥಳಿಸಿದ್ದರ ಹಿಂದೆ ಬಿಜೆಪಿ ನಾಯಕರ ಕುಮ್ಮಕ್ಕು ಇದೆ ಎಂದು ಆರೋಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ?: ಜಮ್ಮು-ಕಾಶ್ಮೀರ ಮಿಲಿಟರೀಕೃತ ರಾಜ್ಯವಾಗಿ ಮಾರ್ಪಟ್ಟಿದೆ: ಮೆಹಬೂಬಾ ಮುಫ್ತಿ
ಇಷ್ಟು ದಿನ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ, ಹಲ್ಲೆ ನಡೆಸುತ್ತಿದ್ದ ಹಿಂದುತ್ವ ಕೋಮು ಕಾರ್ಯಕರ್ತರು, ಈಗ ಪರಸ್ಪರರನ್ನೇ ಗುರಿಯಾಗಿಸಿಕೊಳ್ಳಲು ಆರಂಭಿಸಿದ್ದಾರೆ. ಈ ನಡುವೆ, ಪುತ್ತಿಲ ಅವರು ‘ಪುತ್ತಿಲ ಪರಿವಾರ’ ಸಂಘಟನೆ ಆರಂಭಿಸಿದ್ದಾರೆ. ಹಿಂದೂ ಸಂಘಟನೆ ಒಡೆದು ಹೋಗಬಾರದು ಎಂಬ ಕಾರಣಕ್ಕಾಗಿ ಸಂಘಟನೆ ಕಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಘಟನೆ ಅಸ್ತಿತ್ವಕ್ಕೆ ಬಂದಿದೆ ಎನ್ನಲಾಗಿದೆ. ಇದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ್ತಷ್ಟು ಸವಾಲು ಮತ್ತು ಹಾನಿ ಉಂಟುಮಾಡಲಿದೆ ಎಂದು ಹೇಳಲಾಗಿದೆ. ಸದ್ಯ, ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಹೊಸ ಸಂಘಟನೆ ಕರಾವಳಿಯಲ್ಲಿ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.