ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ರಾಯ್ ಬರೇಲಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇದೇ ಹೊತ್ತಿನಲ್ಲಿ ಆ ವದಂತಿಗಳಿಗೆ ಪುಷ್ಟಿ ನೀಡುವಂತೆ, ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, ‘ರಾಯ್ ಬರೇಲಿ ಕ್ಷೇತ್ರವು ಗಾಂಧಿ ಕುಟುಂಬದ ಪಾಲಿಗೆ ಇರುತ್ತದೆ’ ಎಂದು ಹೇಳಿದ್ದಾರೆ.
ವಾರಣಾಸಿಯಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಮಾತನಾಡಿದ ರಮೇಶ್, “ರಾಯ್ ಬರೇಲಿ ಮತ್ತು ಗಾಂಧಿ ಕುಟುಂಬದ ನಡುವೆ ಅವಿನಾಭಾವ ಸಂಬಂಧವಿದೆ. ರಾಯ್ ಬರೇಲಿಯಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ” ಎಂದರು.
2004ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸೋನಿಯಾ ಗಾಂಧಿ ಅವರು ಕಳೆದ ಸೋಮವಾರ ರಾಯ್ ಬರೇಲಿಯ ಮತದಾರರಿಗೆ ಭಾವನಾತ್ಮಕವಾಗಿ ಪತ್ರ ಬರೆದಿದ್ದಾರೆ. ಆರೋಗ್ಯ ಮತ್ತು ವಯೋಸಹಜ ಸಮಸ್ಯೆಗಳಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಆದಾಗ್ಯೂ, ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಕಣಕ್ಕಿಳಿಸುತ್ತದೆ ಎಂಬ ಊಹಾಪೋಹಗಳು ಉತ್ತರ ಪ್ರದೇಶ ರಾಜಕೀಯ ವಲಯದಲ್ಲಿ ಗರಿಗೆದರಿವೆ.
ಇನ್ನು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿರುವ ಇಂಡಿಯಾ ಒಕ್ಕೂಟದ ಭಾಗವಾಗಿರುವ ಸಮಾಜವಾದಿ ಪಕ್ಷವು ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಶೀಘ್ರವೇ ಭಾಗವಹಿಸಲಿದೆ ಎಂದೂ ರಮೇಶ್ ಹೇಳಿದ್ದಾರೆ.