- ಆರ್ಎಸ್ಎಸ್ ಕಾರ್ಯಕರ್ತ ಕುಂಟೆಯಿಂದ ರಾಹುಲ್ ಗಾಂಧಿ ವಿರುದ್ದ ಪ್ರಕರಣ
- ಕಳೆದ ವರ್ಷ ವಿಚಾರಣೆಗೆ ಹಾಜರಾಗುವಲ್ಲಿ ವಿನಾಯತಿ ಕೋರಿದ್ದ ರಾಹುಲ್ ಗಾಂಧಿ
ಮಹಾರಾಷ್ಟ್ರದ ಠಾಣೆ ಜಿಲ್ಲಾ ನ್ಯಾಯಾಲಯವೊಂದು ಆರ್ಎಸ್ಎಸ್ ದಾಖಲಿಸಿದ ಮಾನಹಾನಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವುದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶಾಶ್ವತ ವಿನಾಯತಿ ನೀಡಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪದಾಧಿಕಾರಿಯೊಬ್ಬರು ರಾಹುಲ್ ಗಾಂಧಿ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು.
ವಕೀಲ ನಾರಾಯಣ ಅಯ್ಯರ್ ಅವರ ಮೂಲಕ ರಾಹುಲ್ ಗಾಂಧಿ ಅವರು ಆರ್ಎಸ್ಎಸ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾತಿಯ ವಿನಾಯತಿ ಕೋರಿದ್ದರು.
ಭಿವಾಂಡಿಯ ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಸಿ.ವಾಡಿಕರ್ ಅವರ ಪೀಠ ರಾಹುಲ್ ಗಾಂಧಿ ಅವರ ಅರ್ಜಿ ವಿಚಾರಣೆ ನಡೆಸಿತು.
ಮಾನಹಾನಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದಂತೆ ಶಾಶ್ವತ ಪರಿಹಾರ ಪಡೆಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅರ್ಹರು ಎಂದು ಪೀಠ ಹೇಳಿದೆ.
ಸ್ಥಳೀಯ ಆರ್ಎಸ್ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ರಾಹುಲ್ ಗಾಂಧಿ ವಿರುದ್ಧ ಸಲ್ಲಿಸಿರುವ ಮಾನಹಾನಿ ಮೊಕದ್ದಮೆಯಲ್ಲಿ ಸಾಕ್ಷ್ಯವನ್ನು ದಾಖಲಿಸಿಕೊಳ್ಳಲು ಮಹಾರಾಷ್ಟ್ರ ಮ್ಯಾಜಿಸ್ಟ್ರೇಟ್ ಅವರ ಪೀಠ ಜೂನ್ 3 ಅನ್ನು ನಿಗದಿಪಡಿಸಿದೆ.
“ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ ಪ್ರಕರಣದಲ್ಲಿ ಆರೋಪಿ ರಾಹುಲ್ ಗಾಂಧಿ ಅವರಿಗೆ ವಿಚಾರಣೆ ಹಾಜರಾತಿಯಿಂದ ಸಂಪೂರ್ಣ ವಿನಾಯತಿ ನೀಡಲಾಗಿದೆ” ಎಂದು ಮ್ಯಾಜಿಸ್ಟ್ರೇಟ್ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
“ಆರೋಪಿಯ ಅನುಪಸ್ಥಿತಿಯಲ್ಲಿ ನಿಗದಿತ ದಿನಾಂಕ, ಸಮಯದಲ್ಲಿ ಅವರ ವಕೀಲರು ಹಾಜರಾಗಬೇಕು. ಅಗತ್ಯವಿದ್ದಾಗ ಯಾವಾಗ ನಿರ್ದೇಶನ ನೀಡಿದರೂ ಆರೋಪಿಯು ವಿಚಾರಣೆಗೆ ಹಾಜರಾಗಬೇಕು” ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
2014ರಲ್ಲಿ ರಾಹುಲ್ ಗಾಂಧಿ ಅವರ ಭಾಷಣದ ವಿಡಿಯೋವನ್ನು ವೀಕ್ಷಿಸಿದ ನಂತರ ಆರ್ಎಸ್ಎಸ್ ಕಾರ್ಯಕರ್ತ ಕುಂಟೆ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ರಾಹುಲ್ ಅವರು ತಮ್ಮ ಭಾಷಣದಲ್ಲಿ ಮಹಾತ್ಮ ಗಾಂಧಿ ಅವರ ಹತ್ಯೆಗೆ ಆರ್ಎಸ್ಎಸ್ ಕಾರಣ ಆರೋಪಿಸಿದ್ದರು. ಈ ಹೇಳಿಕೆಯು ಸಂಘದ ಪ್ರತಿಷ್ಠೆಗೆ ಧಕ್ಕೆ ಉಂಟು ಮಾಡುತ್ತದೆ ಎಂದು ದೂರಿನಲ್ಲಿ ದಾಖಲಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ 2018ರ ಜೂನ್ನಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ರಾಹುಲ್ ಗಾಂಧಿ ತಮ್ಮ ಮೇಲಿನ ಆರೋಪ ನಿರಾಕರಿಸಿದ್ದರು.
ರಾಹುಲ್ ಗಾಂಧಿ ಅವರು ಸಂಸತ್ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ. ಆದ್ದರಿಂದ ಅವರಿಗೆ ವಿಚಾರಣೆಯ ಹಾಜರಾತಿಯಿಂದ ವಿನಾಯತಿ ನೀಡಬಾರದು ಎಂದು ಆರ್ಎಸ್ಎಸ್ ಕಾರ್ಯಕರ್ತ ಕುಂಟೆ ಇತ್ತೀಚೆಗೆ ಹೇಳಿದ್ದರು.
ರಾಹುಲ್ ಗಾಂಧಿ ಅವರು ಕಳೆದ ವರ್ಷ ಮಾನಹಾನಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾತಿ ವಿನಾಯತಿ ನೀಡುವಂತೆ ಭಿವಾಂಡಿ ನ್ಯಾಯಾಲಯಕ್ಕೆ ಕೋರಿದ್ದರು.
ತಾನು ಸಂಸದನಾಗಿರುವ ಕಾರಣ ತನ್ನ ಕ್ಷೇತ್ರಕ್ಕೆ ತೆರಳಲು, ಲೋಕಸಭೆಗೆ ಹಾಜರಾಗಲು ಮತ್ತು ಪಕ್ಷದ ಕಾರ್ಯದ ಹಿನ್ನೆಲೆ ಬಹಳಷ್ಟು ಪ್ರಯಾಣ ಮಾಡುವ ಕಾರಣದಿಂದ ತನ್ನ ಪರವಾಗಿ ವಕೀಲರು ವಿಚಾರಣೆಗೆ ಹಾಜರಾಗುತ್ತಾರೆ ಎಂದು ರಾಹುಲ್ ಮನವಿ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ದೆಹಲಿ | ತಿಹಾರ್ ಜೈಲಿನಲ್ಲಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಹಚರನ ಹತ್ಯೆ
‘ಮೋದಿ ಉಪನಾಮ’ ಟೀಕೆಗೆ ಸಂಬಂಧಿಸಿದ ಮಾನಹಾನಿ ಪ್ರಕರಣದಲ್ಲಿ ಮಾರ್ಚ್ 23 ರಂದು ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ಒಂದು ತಿಂಗಳು ಜಾಮೀನು ನೀಡಿತ್ತು. ಮಾನಹಾನಿ ಪ್ರಕರಣದಲ್ಲಿ ಜಾಮೀನು ಕೋರಿ ರಾಹುಲ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ಬಾಕಿ ಇದೆ.