ಮತಗಳ್ಳತನ ಮತ್ತು ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಹೋರಾಡುತ್ತಿವೆ. ಈ ಮಧ್ಯೆ ಕಾಂಗ್ರೆಸ್ ಮುಖಂಡ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮತಗಳ್ಳತನದ ಬಗ್ಗೆ ಮಾಡಿರುವ ಕಿರುಚಿತ್ರವೊಂದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಮಾಡಿದ್ದಾರೆ.
ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಕೇಸರಿ ಶಾಲು ಹಾಕಿಕೊಂಡಿರುವ ಇಬ್ಬರು ಮತ ಹಾಕಿ ಹೊರ ಬರುವಾಗ, ಮತದಾನಕ್ಕೆಂದು ಸರದಿಯಲ್ಲಿ ಕಾಯುತ್ತಿರುವ ದಂಪತಿಗಳನ್ನು ತಡೆದು ನಿಲ್ಲಿಸಿ, ‘ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಪ್ರಶ್ನಿಸುತ್ತಾರೆ. ಈ ವೇಳೆ ಉತ್ತರಿಸುವ ಹಿರಿಯ ವ್ಯಕ್ತಿ, ಮತ ಹಾಕಲು ಬಂದಿದ್ದೇನೆ, ನನ್ನ ಹೆಸರು ಗರೀಬ್ ದಾಸ್, 50 ವರ್ಷ. ನನ್ನ ಬಳಿ ಚುನಾವಣಾ ಗುರುತಿನ ಚೀಟಿ ಇದೆ’ ಎನ್ನುತ್ತಾರೆ.
ಈ ವೇಳೆ ಪಕ್ಕದಲ್ಲಿ ಕೇಸರಿ ಶಾಲು ಹಾಕಿಕೊಂಡಿರುವ ವ್ಯಕ್ತಿಯನ್ನು ತೋರಿಸುವ ಇನ್ನೋರ್ವ, ಈತ ಗರೀಬ್ ದಾಸ್. ಈಗಾಗಲೇ ವೋಟ್ ಹಾಕಿ ಬಂದಿದ್ದಾನೆ ಎನ್ನುವ ಮೂಲಕ ಮತಗಳ್ಳತನ ಸಂಭಾಷಣೆ ನಡೆಯುತ್ತಿದೆ.
ಈ ವಿಡಿಯೋ ಮೂಲಕ ಪರೋಕ್ಷವಾಗಿ ಬಿಜೆಪಿ ಹಾಗೂ ಚುನಾವಣಾ ಆಯೋಗವನ್ನು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದು, ಮತಗಳ್ಳತನದಲ್ಲಿ ಪೋಲಿಂಗ್ ಬೂತ್‌ನ ಅಧಿಕಾರಿಯ ಪಾತ್ರವೂ ಇದೆ ಎಂಬುದಾಗಿ ತೋರಿಸಲಾಗಿದೆ. ಸದ್ಯ ಒಂದು ನಿಮಿಷದ ಈ ಕಿರುಚಿತ್ರ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಒಟ್ಟಿನಲ್ಲಿ ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮತಗಳ್ಳತನವನ್ನು ವಿರೋಧಿಸಿ ಇಂಡಿಯಾ ಮೈತ್ರಿಕೂಟದ ಪ್ರತಿಭಟನೆಯು ದಿನನಿತ್ಯ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಚುನಾವಣಾ ಆಯೋಗ ಹಾಗೂ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ನಿರಂತರವಾಗಿ ಆಕ್ರೋಶ ಹೊರಹಾಕುತ್ತಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?
ದೆಹಲಿಯಲ್ಲಿ ಕಳೆದ ಆಗಸ್ಟ್ 7ರಂದು ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1,00,250 ಮತಗಳಲ್ಲಿ ಅಕ್ರಮ ನಡೆದಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಈ ಚುನಾವಣೆಯಲ್ಲಿ ಐದು ವಿಧದ ಅಕ್ರಮಗಳನ್ನು ಗುರುತಿಸಿರುವುದಾಗಿ ಅವರು ತಿಳಿಸಿದ್ದರು. ಆ ಬಳಿಕ ಆ.8ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕೆಪಿಸಿಸಿ ನೇತೃತ್ವದಲ್ಲಿ ರಾಹುಲ್ ಗಾಂಧಿ ಬೃಹತ್ ಪ್ರತಿಭಟನೆಯನ್ನೂ ಆಯೋಜಿಸಿದ್ದರು. ಆ ಬಳಿಕ ದೇಶದ ರಾಜಕೀಯದಲ್ಲಿ ನಾನಾ ಬೆಳವಣಿಗೆಗೆಳು ನಡೆಯುತ್ತಿದೆ.
