ಇಲ್ಲಿರುವುದು ಮತದ ಪ್ರಶ್ನೆಯಲ್ಲ, ವಕ್ಫ್ ವಿರುದ್ಧ ಎತ್ತಬೇಕಾದ ಧ್ವನಿಯ ಪಶ್ನೆ. ರಾಹುಲ್, ಪ್ರಿಯಾಂಕಾ ಈ ಹಿಂದಿನಿಂದಲೂ ಸದನದಲ್ಲಿ ಗಟ್ಟಿಯಾಗಿ ಮಾತನಾಡಿದವರು. ವಕ್ಫ್ ತಿದ್ದುಪಡಿ ಮಸೂದೆಯಲ್ಲಿರುವ ಸಮಸ್ಯೆಯ ಬಗ್ಗೆ ತೀಕ್ಷ್ಣವಾಗಿ ಎತ್ತುವ ಧ್ವನಿ ಇವರಿಬ್ಬರದ್ದಾಗಿರಬೇಕಿತ್ತು ಎಂಬ ನಿರೀಕ್ಷೆ ನಮ್ಮದು.
ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ 12 ಗಂಟೆಗಳ ಚರ್ಚೆಯ ನಂತರ ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆ 2024 ಅಂಗೀಕಾರಗೊಂಡಿದೆ. ನಿರೀಕ್ಷೆಯಂತೆ 288 ಮತಗಳು ಮಸೂದೆ ಪರವಾಗಿ, 232 ಮತಗಳು ಮಸೂದೆ ವಿರುದ್ಧವಾಗಿ ಚಲಾವಣೆಯಾದವು. ರಾಜ್ಯಸಭೆಯಲ್ಲಿ, ಮಸೂದೆ ಪರವಾಗಿ 128 ಸದಸ್ಯರು ಮತ್ತು ವಿರುದ್ಧವಾಗಿ 95 ಸದಸ್ಯರು ಮತ ಚಲಾಯಿಸಿದರು. ಈ ಮಸೂದೆಗೆ ರಾಷ್ಟ್ರಪತಿ ಸಹಿ ಹಾಕಬೇಕಿದೆ. ಮಸೂದೆ ಪರ ಮತ್ತು ವಿರುದ್ಧ ತೀವ್ರ ಚರ್ಚೆ ನಡೆದಿದೆ. ಇವೆಲ್ಲವುದರ ನಡುವೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಡವಾಗಿ ಸದನಕ್ಕೆ ಬಂದಿರುವುದು, ವಕ್ಫ್ ವಿರುದ್ಧವಾಗಿ ಮಾತನಾಡದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಮಸೂದೆ ಚರ್ಚೆ ವೇಳೆ ಸದನದಲ್ಲಿ ಹಾಜರಾಗದಿದ್ದ ರಾಹುಲ್ ಗಾಂಧಿ, ಕೇವಲ ಮತ ಚಲಾಯಿಸುವ ವೇಳೆ ಬಂದಿದ್ದಾರೆ. ವಿಪಕ್ಷ ನಾಯಕರಾಗಿದ್ದುಕೊಂಡು ವಕ್ಫ್ ಬಗ್ಗೆ ಮಾತೂ ಆಡಿಲ್ಲ ಎಂಬುದು ಈಗ ಚರ್ಚೆಗೆ ಎಡೆಮಾಡಿಕೊಟ್ಟಿದೆ. ರಾಹುಲ್ ಮಾತ್ರವಲ್ಲ ಪ್ರಿಯಾಂಕಾ ಗಾಂಧಿ ವಿರುದ್ಧವೂ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನು ಓದಿದ್ದೀರಾ? ಹಾಸನ | ವಕ್ಫ್ ತಿದ್ದುಪಡಿ ಮಸೂದೆ ಪ್ರತಿ ಹರಿದು ಎಸ್‌ಡಿಪಿಐ ಪ್ರತಿಭಟನೆ
ಯಾವುದೇ ಪ್ರಮುಖ ಅಥವಾ ಗಂಭೀರ ಮಸೂದೆಗಳ ಮಂಡನೆ, ಚರ್ಚೆ, ಮತದಾನ ಇದ್ದಾಗ ರಾಜಕೀಯ ಪಕ್ಷಗಳು ತಮ್ಮ ಜನಪ್ರತಿನಿಧಿಗಳಿಗೆ ವಿಪ್ ಜಾರಿ ಮಾಡುವುದು ಸಾಮಾನ್ಯ. ಕೇಂದ್ರ ಸರ್ಕಾರ ವಕ್ಫ್ ಮಸೂದೆ ಮಂಡಿಸುವ ಕಾರಣದಿಂದಾಗಿ ಗುರುವಾರದಿಂದ ಮೂರು ದಿನಗಳ ಕಾಲ ಸಂಸತ್ತಿಗೆ ಗೈರಾಗಬಾರದು ಎಂದು ಕಾಂಗ್ರೆಸ್ ವಿಪ್ ಜಾರಿ ಮಾಡಿತ್ತು. ಆದರೆ ಪ್ರಿಯಾಂಕಾ ಗಾಂಧಿ ಅವರು ಸಂಸತ್ತಿಗೆ ಹಾಜರಾಗಿಲ್ಲ. ಅವರ ಆಪ್ತ ಕುಟುಂಬಸ್ಥರು ಆಸ್ಪತ್ರೆಯಲ್ಲಿರುವ ಕಾರಣ ವಿದೇಶಕ್ಕೆ ತೆರಳಿದ್ದಾರೆ ಎಂದು ಹೇಳಲಾಗಿದೆ. ರಾಹುಲ್ ಗಾಂಧಿ ಸಂಸತ್ತಿಗೆ ಬಂದರೂ ತಡವಾಗಿ ಬಂದಿದ್ದಾರೆ, ಚರ್ಚೆಯಲ್ಲಿ ಭಾಗಿಯಾಗಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಇತರೆ ನಾಯಕರುಗಳಿಗೂ ಮಾತನಾಡಲು ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮಾತನಾಡಿಲ್ಲ ಎಂಬ ವಾದ ಕಾಂಗ್ರೆಸಿಗರದ್ದು. ಆದರೆ, ವಿಪಕ್ಷ ನಾಯಕರಾಗಿ ಪ್ರಮುಖ ದಿನದಂದು ಸಂಸತ್ತಿನಲ್ಲಿ ಉಪಸ್ಥಿತಿ ಇರದಿರುವುದನ್ನು ಸರಿಯೆಂದು ಸಮರ್ಥಿಸಲಾಗದು. ಹಾಗಿದ್ದರೆ ಆಡಳಿತ ಪಕ್ಷಕ್ಕೂ ವಿಪಕ್ಷಕ್ಕೂ ಏನಿದೆ ವ್ಯತ್ಯಾಸ ಎಂಬ ಪ್ರಶ್ನೆಗಳು ಮುನ್ನೆಲೆಯಲ್ಲಿವೆ.
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯೆ ನೀಡಿರುವ ಚಿಂತಕ ಪ್ರೊ. ನಾಗೇಗೌಡ (ನಾಗೇಗೌಡ ಕೀಲಾರ ಶಿವಲಿಂಗಯ್ಯ), “ರಾಹುಲ್ ಗಾಂಧಿ ಟ್ವಿಟ್ಟರ್‌ನಲ್ಲಿ ವಕ್ಫ್ ಮಸೂದೆ ಖಂಡಿಸಿ ಪೋಸ್ಟ್‌ಗಳನ್ನು ಮಾಡಿದ್ದಾರೆ. ಆದರೆ, ರಾಜಕಾರಣಿ ಟ್ವಿಟ್ಟರ್‌ನಲ್ಲಿ ನಿಲುವು ಹೇಳುವುದು ಬೇರೆ, ಸಂಸತ್ತಿನಲ್ಲಿ ಮಾತನಾಡುವುದು ಬೇರೆ. ಇವೆರಡರ ನಡುವೆ ವ್ಯತ್ಯಾಸವಿದೆ. ಸಂಸದರ ಎಲ್ಲ ಮಾತುಗಳು ಲಿಖಿತವಾಗಿ ದಾಖಲಾಗುವ ಕಾರಣ ಓರ್ವ ಉತ್ತಮ ಸಂಸದ ತನ್ನ ನಿಲುವನ್ನು, ತನ್ನ ವಿರೋಧವನ್ನು ಸಂಸತ್ತಿನಲ್ಲೇ ತಿಳಿಸುವುದು ಮುಖ್ಯ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ ಅಧಿವೇಶನ | ವಕ್ಫ್ ಸೇರಿ ಒಟ್ಟು 16 ಮಸೂದೆ ಮಂಡನೆ ಸಾಧ್ಯತೆ
“ರಾಹುಲ್ ಸಂಸತ್ತಿನಲ್ಲಿ ಮಾತನಾಡಬೇಕಿತ್ತು. ಅದೂ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಕಾರಣ ಅವರ ಪ್ರತಿಕ್ರಿಯೆ ಮುಖ್ಯ. ಅಷ್ಟು ಮಾತ್ರವಲ್ಲದೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಇಲ್ಲದೆಯೇ ಒಂದು ವಿವಾದಾತ್ಮಕ ಮಸೂದೆಯನ್ನು ಮಂಡಿಸಿ, ಅಂಗೀಕರಿಸಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಅಗೌರವ ತಂದಂತೆ” ಎಂದು ಅಭಿಪ್ರಾಯಿಸಿದ್ದಾರೆ.
The Waqf (Amendment) Bill is a weapon aimed at marginalising Muslims and usurping their personal laws and property rights.
— Rahul Gandhi (@RahulGandhi) April 2, 2025
This attack on the Constitution by the RSS, BJP and their allies is aimed at Muslims today but sets a precedent to target other communities in the future.…
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬಗ್ಗೆ ಈಗಾಗಲೇ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಹೇಳಿಕೆ ಬಿಡುಗಡೆ ಮಾಡಿದೆ. ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, “ರಾಹುಲ್ ಗಾಂಧಿ ಅವರು ಮಾತನಾಡದಿರುವುದು ನಿರಾಶೆ ತಂದಿದೆ. ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರೆಂದರೆ ಛಾಯಾ ಪ್ರಧಾನಿ (ಪ್ರಧಾನಿಯಷ್ಟೇ ಮಹತ್ವದ ಸ್ಥಾನ ಹೊಂದಿರುವವರು). ವಿಪಕ್ಷ ನಾಯಕರಿಗೆ ಸಂಸತ್ತಿನಲ್ಲಿ ಮಾತನಾಡುವುದಕ್ಕೆ ಯಾವುದೇ ಮಿತಿಯಿಲ್ಲ, ಇತರರು ಮಾತನಾಡುವಾಗ ಮಧ್ಯಪ್ರವೇಶಿಸುವ ಅವಕಾಶವೂ ಇದೆ. ಈ ಅವಕಾಶವನ್ನು ಬಳಸದಿರುವುದು ತುಂಬಾ ನಿರಾಶೆ ಹುಟ್ಟಿಸಿದೆ” ಎಂದಿದ್ದಾರೆ.
“ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ಕಾಂಗ್ರೆಸ್ ಈಗಾಗಲೇ ತನ್ನ ನಿಲುವು ಸ್ಪಷ್ಟಪಡಿಸಿದೆ. ಆದರೂ ಅಲ್ಪಸಂಖ್ಯಾತರು ನಿರೀಕ್ಷೆಯಂತೆ ವಿಪಕ್ಷ ನಾಯಕರೂ ಮಾತನಾಡಬೇಕಿತ್ತು. ವಿಪ್ ಜಾರಿಯಾಗಿದ್ದರೂ ಪ್ರಿಯಾಂಕಾ ಗಾಂಧಿ ಗೈರಾಗಿದ್ದರು. ಕಾರಣಗಳು ಏನೇ ಇದ್ದರೂ ಗೈರಾಗಿರುವುದು ವಿಷಾದನೀಯ. ರಾಹುಲ್ ಗಾಂಧಿ ಯಾಕೆ ಮಾತನಾಡಿಲ್ಲ ಎಂಬ ಸತ್ಯವನ್ನು ಕಾಂಗ್ರೆಸ್ ಬಹಿರಂಗವಾಗಿ ಹೇಳಬೇಕು. ಪ್ರಿಯಾಂಕಾ ಗಾಂಧಿ ಅಧಿಕ ಮುಸ್ಲಿಮ್ ಮತದಾರರು ಇರುವ ವಯನಾಡನ್ನು ಪ್ರತಿನಿಧಿಸುವವರು. ಹಾಗಿರುವಾಗ ಗೈರು ಹಾಜರಾಗಿರುವುದಕ್ಕೆ ಸ್ಪಷ್ಟನೆ ನೀಡಬೇಕು. ಏನೇ ಕಾರಣವಿದ್ದರೂ ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ವಕ್ಫ್ ಮಸೂದೆ ವಿರುದ್ಧ ಮತ ಚಲಾಯಿಸಲಿರುವ ‘ಇಂಡಿಯಾ ಒಕ್ಕೂಟ’
ಇವೆಲ್ಲವುದರ ನಡುವೆ ಇಬ್ಬರು ಹಾಜರಿದ್ದರೂ ಕೂಡಾ ವಕ್ಫ್ ಮಸೂದೆ ಅಂಗೀಕಾರವಾಗುವುದು ತಪ್ಪುತ್ತಿರಲಿಲ್ಲ. ಅಧಿಕ ಸಂಸದರು ವಕ್ಫ್ ಪರವಾಗಿದ್ದಾರೆ ಎಂಬುದು ಕೆಲ ಕಾಂಗ್ರೆಸಿಗರ ವಾದ. ಈ ವಾದಕ್ಕೆ ತಿರುಳಿಲ್ಲ. ಇತರರಿಗೆ ಮಾತನಾಡಲು ಅವಕಾಶ ನೀಡುವ ಸಲುವಾಗಿ ರಾಹುಲ್ ಮಾತನಾಡಲಿಲ್ಲ. ತಾನು ಮಾತನಾಡಿದರೆ ಬಿಜೆಪಿ ಗದ್ದಲ ಎಬ್ಬಿಸುತ್ತದೆ ಎಂಬ ಕಾರಣ ರಾಹುಲ್ ಮಾತನಾಡಲಿಲ್ಲ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದು ಸತ್ಯವೋ ವದಂತಿಯೋ ನಾಯಕರುಗಳೇ ಸ್ಪಷ್ಟಪಡಿಸಬೇಕು. ಈ ವಿಚಾರವನ್ನೇ ಪರೋಕ್ಷವಾಗಿ ವಿವಾದಕ್ಕೆ ಎಳೆದು ತಂದು ನಾಟಕ ನೋಡುತ್ತಿರುವ ಬಿಜೆಪಿಗರ ತಂತ್ರವನ್ನು ವಿಫಲಗೊಳಿಸಬೇಕಿದೆ. ಹಾಗೆಯೇ ಈ ಹಿಂದೆ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಗಂಭೀರ ವಿಚಾರಗಳತ್ತ ಗಮನಹರಿಸಿ, ಮಾತನಾಡಲು ಎದ್ದು ನಿಂತಾಗ ಮೈಕ್ ಸಂಪರ್ಕ ಕಿತ್ತುಹಾಕಿದ್ದು ಏಕೆಂದು ಪ್ರಶ್ನೆಗಳನ್ನೂ ಕೇಳಿಕೊಳ್ಳಬೇಕಾಗಿದೆ.
ಇಲ್ಲಿರುವುದು ಮತದ ಪ್ರಶ್ನೆಯಲ್ಲ, ವಕ್ಫ್ ವಿರುದ್ಧ ಎತ್ತಬೇಕಾದ ಧ್ವನಿಯ ಪಶ್ನೆ. ಇಬ್ಬರೂ ಕೂಡಾ ಈ ಹಿಂದಿನಿಂದಲೂ ಸದನದಲ್ಲಿ ಗಟ್ಟಿಯಾಗಿ ಮಾತನಾಡಿದವರು. ಸರ್ಕಾರಕ್ಕೆ ಉತ್ತರ ನೀಡಲಾಗದಂತಹ ಪ್ರಶ್ನೆಗಳನ್ನು ಇಟ್ಟ ಕೆಲವೇ ಕೆಲವು ವಿಪಕ್ಷ ನಾಯಕರುಗಳಲ್ಲಿ ರಾಹುಲ್, ಪ್ರಿಯಾಂಕಾ ಕೂಡಾ ಸೇರಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆಯಲ್ಲಿರುವ ಸಮಸ್ಯೆಯ ಬಗ್ಗೆ ತೀಕ್ಷ್ಣವಾಗಿ ಎತ್ತುವ ಧ್ವನಿ ಇವರಿಬ್ಬರದ್ದಾಗಿರಬೇಕಿತ್ತು ಎಂಬ ನಿರೀಕ್ಷೆ ನಮ್ಮದು. ವಿಪ್ ಉಲ್ಲಂಘಿಸಿದ ಇಬ್ಬರಿಂದಲೂ ಕಾಂಗ್ರೆಸ್ ಕಾರಣ ಕೇಳಬಹುದು, ಈ ಕಾರಣ ಬಹಿರಂಗವೂ ಆಗಬಹುದು, ಜನರಿಗೆ ಸ್ಪಷ್ಟಣೆ ದೊರೆಯಬಹುದು ಎಂಬ ನಿರೀಕ್ಷೆಯಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.