ಯುಪಿಎ ಸರ್ಕಾರ 2010ರಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಮಹಿಳೆಯರಿಗೆ ಪ್ರತ್ಯೇಕ ಕೋಟಾವನ್ನು ಸೇರಿಸದಿರುವುದಕ್ಕೆ ಕಾಂಗ್ರೆಸ್ ವಿಷಾದಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಎಐಸಿಸಿ ಮುಖ್ಯ ಕಚೇರಿಯಲ್ಲಿ ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಾತಿ ಆಧಾರಿತ ಜನಗಣತಿ ನಡೆಸಲಾಗುತ್ತದೆ. ನರೇಂದ್ರ ಮೋದಿ ಸರ್ಕಾರವು ಕ್ಷೇತ್ರ ಮರು ವಿಂಗಡಣೆಗೆ ಕಾಯದೆ ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
“ವಿಧೇಯಕವು ಗಮನ ಬೇರೆಡೆ ಸೆಳೆಯುವ ತಂತ್ರವಾಗಿದ್ದು, ಇದು ಜಾರಿಗೆ ಬರಲು 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೂ ಜಾರಿಯಾಗುತ್ತದೆ ಎಂಬುದಕ್ಕೆ ನಮಗೆ ನಂಬಿಕೆಯಿಲ್ಲ. ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡಣೆ ನಂತರ ಮಸೂದೆಯನ್ನು ಜಾರಿಗೊಳಿಸಲಾಗುವುದು ಎಂಬ ಅಡಿಬರಹಗಳಿವೆ. ವಿಧೇಯಕವು ಜಾತಿ ಗಣತಿ ಬೇಡಿಕೆಯಿಂದ ಅಡ್ಡಿಯಾಗಿದೆ. ಸಂಸದರು ಸದನದಲ್ಲಿ ಕೇವಲ ಪ್ರತಿಮೆಗಳಾಗಿದ್ದಾರೆ. ಅವರಿಗೆ ಕಾನೂನು ರಚನೆ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕಾರವಿಲ್ಲ. ಕೆಲವರು ಮಾತ್ರ ಎಲ್ಲವನ್ನು ನಿಯಂತ್ರಿಸುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಸನಾತನ ಧರ್ಮ ವಿವಾದ: ತಮಿಳುನಾಡು ಸರ್ಕಾರ, ಉದಯನಿಧಿ ಸ್ಟಾಲಿನ್‌ಗೆ ಸುಪ್ರೀಂ ನೋಟಿಸ್
“ಒಬಿಸಿ, ಆದಿವಾಸಿಗಳು ಮತ್ತು ದಲಿತರ ಅಧಿಕಾರಿಗಳು ಬಜೆಟ್‌ನ ಶೇ. 5 ರಷ್ಟನ್ನು ಮಾತ್ರ ನಿಯಂತ್ರಿಸುತ್ತಾರೆ. ಪ್ರಧಾನ ಮಂತ್ರಿ ಅವರು ಒಬಿಸಿ ನಾಯಕ ಎಂದು ಹೇಳುತ್ತಲೇ ಇರುತ್ತಾರೆ. ಆದ್ದರಿಂದ ಉನ್ನತ ಸ್ಥಾನದಲ್ಲಿ ಕೇವಲ ಮೂವರು ಅಧಿಕಾರಿಗಳು ಏಕೆ ಇದ್ದಾರೆ ಎಂಬುದನ್ನು ಅವರು ವಿವರಿಸಲು ನಾನು ಕೇಳ ಬಯಸುತ್ತೇನೆ. ಮೊದಲ ಹಂತವನ್ನು ಜಾತಿ ಜನಗಣತಿಯ ಮೂಲಕ ಒಬಿಸಿಗಳ ಸಂಖ್ಯೆ ಎಷ್ಟಿದೆ ಎಂಬುದನ್ನು ಕಂಡುಹಿಡಿಯಬಹುದು” ಎಂದು ರಾಹುಲ್ ಹೇಳಿದರು.
“ಭಾರತದ ಜನರಿಗೆ ಅಧಿಕಾರದ ಹಂಚಿಕೆ ಮತ್ತು ವರ್ಗಾವಣೆ ಮೊದಲ ಹೆಜ್ಜೆಯಾಗಿತ್ತು. ಜಾತಿ ಜನಗಣತಿಯ ಮಾಹಿತಿಯು ಜನರನ್ನು ಹೆಚ್ಚು ಸಬಲಗೊಳಿಸುತ್ತದೆ. ನಾವು ಅಧಿಕಾರಕ್ಕೆ ಬಂದಾಗ, ಜಾತಿ ಗಣತಿ ನಡೆಯುತ್ತದೆ ಮತ್ತು ಒಬಿಸಿ ಸಮುದಾಯವನ್ನು ಸಬಲೀಕರಣಗೊಳಿಸಲಾಗುತ್ತದೆ ಮತ್ತು ಅವರು ಆಡಳಿತದಲ್ಲಿ ಭಾಗವಹಿಸುತ್ತಾರೆ” ಎಂದು ಅವರು ಹೇಳಿದರು.
ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡುವ ಪ್ರಯತ್ನಗಳು 1996 ರಿಂದ ಹಲವಾರು ಸರ್ಕಾರಗಳಿಂದ ನಡೆಯುತ್ತಿವೆ. ಯುಪಿಎ ಸರ್ಕಾರವು 2010 ರಲ್ಲಿ ಮಸೂದೆಯನ್ನು ಮಡಿಸಿ ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು. ಆದರೆ, ಲೋಕಸಭೆಯಲ್ಲಿ ಮಂಡಿಸದ ಕಾರಣ ನನೆಗುದಿಗೆ ಬಿದ್ದಿತ್ತು.