ಕೇರಳ, ಗುಜರಾತ್, ಅಂಡಮಾನ್ ಮತ್ತು ನಿಕೋಬಾರ್ ಕರಾವಳಿಯಲ್ಲಿ ಆಳ ಸಮುದ್ರದ ಗಣಿಗಾರಿಕೆಗೆ ಅನುಮತಿ ನೀಡುವ ಟೆಂಡರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಇದರಿಂದಾಗಿ ಸಮುದ್ರ ಜೀವಿಗಳಿಗೆ ಆಗುವ ಸಮಸ್ಯೆಯನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕ, ಪರಿಣಾಮದ ಬಗ್ಗೆ ಯಾವುದೇ ಕಠಿಣ ಪರಿಶೀಲನೆ ನಡೆಸದೆ ಖಾಸಗಿ ಸಂಸ್ಥೆಗಳಿಗೆ ಆಳ ಸಮುದ್ರದ ಗಣಿಗಾರಿಕೆ ನಡೆಸಲು ಅವಕಾಶ ನೀಡುವುದು ಕಳವಳಕಾರಿ ಎಂದು ರಾಹುಲ್ ಗಾಂಧಿ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೇರಳ, ಗುಜರಾತ್ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಕರಾವಳಿಯಲ್ಲಿ ಆಳ ಸಮುದ್ರದ ಗಣಿಗಾರಿಕೆಗೆ ಅನುಮತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಬಲವಾಗಿ ಖಂಡಿಸಲು ಪತ್ರ ಬರೆಯುತ್ತಿರುವುದಾಗಿ ರಾಹುಲ್ ಗಾಂಧಿ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಹುಲ್ ಲೋಕಸಭೆ ಸದಸ್ಯತ್ವ ಅನರ್ಹತೆ | ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ಪ್ರತಿಪಕ್ಷಗಳು
“ಲಕ್ಷಾಂತರ ಮೀನುಗಾರರು ತಮ್ಮ ಜೀವನೋಪಾಯ ಮತ್ತು ಜೀವನ ವಿಧಾನದ ಮೇಲೆ ಅದರ ಪರಿಣಾಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸ್ಥಳೀಯರೊಂದಿಗೆ ಸಮಾಲೋಚಿಸದೆ ಅಥವಾ ಪರಿಸರ ಅಧ್ಯಯನಗಳನ್ನು ನಡೆಸದೆ ಆಳ ಸಮುದ್ರದ ಗಣಿಗಾರಿಕೆಗೆ ಅನುಮತಿ ನೀಡಿರುವುದು ಖಂಡನೀಯ” ಎಂದಿದ್ದಾರೆ.


“ಕಡಲಾಚೆಯ ಗಣಿಗಾರಿಕೆ ಲಕ್ಷಾಂತರ ಮೀನುಗಾರರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಮ್ಮ ಸಮುದ್ರ ಜೀವಿಗಳಿಗೆ ಹಾನಿಯಾಗಿತ್ತದೆ. ಸರ್ಕಾರ ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು” ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಇನ್ನು ಗಣಿ ಸಚಿವಾಲಯವು 13 ಆಳ ಸಮುದ್ರದ ಗಣಿಗಾರಿಕೆಗೆ ಪರವಾನಗಿ ನೀಡಲು ಟೆಂಡರ್‌ಗಳನ್ನು ಆಹ್ವಾನಿಸಿದಾಗ, ತೀವ್ರ ಪ್ರತಿಭಟನೆ ನಡೆದಿದೆ. 13 ಕಡೆಗಳ ಪೈಕಿ ಹಲವು ಮೀನು ಸಂತಾನೋತ್ಪತ್ತಿ ಆವಾಸಸ್ಥಾನವಾಗಿದೆ. ಇದರಿಂದಾಗಿ ಮೀನಿನ ಸಂತಾನ ನಾಶವಾಗುತ್ತದೆ ಎಂದು ಸ್ಥಳೀಯರು ಮತ್ತು ವಿಪಕ್ಷಗಳು ಆರೋಪಿಸಿದೆ.
ಕೇರಳದಲ್ಲಿ 11 ಲಕ್ಷಕ್ಕೂ ಹೆಚ್ಚು ಜನರು ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಇದು ಅವರ ಸಾಂಪ್ರದಾಯಿಕ ಉದ್ಯೋಗ. ಅವರ ಜೀವನ ವಿಧಾನದೊಂದಿಗೆ ನಿಕಟ ಸಂಬಂಧ ಹೊಂದಿದೆ. ನಿಕೋಬಾರ್ ವೈವಿಧ್ಯಮಯ ಪರಿಸರ ವ್ಯವಸ್ಥೆಗಳಿಗೆ ಆಶ್ರಯ ನೀಡುವಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಹಲವಾರು ಸ್ಥಳೀಯ ಜಾತಿಯ ವನ್ಯಜೀವಿಗಳಿಗೆ ನೆಲೆಯಾಗಿದೆ. ಆದರೆ ಕೇಂದ್ರ ಸರ್ಕಾರದ ಒಂದು ಕ್ರಮದಿಂದ ಎಲ್ಲವೂ ನಾಶವಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಆಳ ಸಮುದ್ರದ ಗಣಿಗಾರಿಕೆಯಿಂದ ಉಂಟಾಗುವ ಯಾವುದೇ ಹಾನಿಯನ್ನೂ ಸರಿಪಡಿಸಲಾಗದು. ನಮ್ಮ ಕರಾವಳಿ ಪರಿಸರ ಸವೆತದಿಂದಾಗಿ ಚಂಡಮಾರುತದಂತಹ ನೈಸರ್ಗಿಕ ವಿಕೋಪಗಳು ಉಂಟಾಗಬಹುದು. ಸರ್ಕಾರವು ವೈಜ್ಞಾನಿಕ ಮೌಲ್ಯಮಾಪನ ನಡೆಸದೆ ಇಂತಹ ಚಟುವಟಿಕೆಗಳಿಗೆ ಉದ್ದೇಶಪೂರ್ವಕವಾಗಿ ಹಸಿರು ನಿಶಾನೆ ನೀಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
