ನವದೆಹಲಿಯ ಕರೋಲ್ ಬಾಗ್‌ನಲ್ಲಿ ಮೋಟರ್‌ಸೈಕಲ್ ಮೆಕ್ಯಾನಿಕ್‌ಗಳೊಂದಿಗೆ ಇತ್ತೀಚಿನ ನಡೆಸಿದ ಸಂವಾದದ ವಿಡಿಯೋವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ 12 ನಿಮಿಷಗಳ ವಿಡಿಯೋದಲ್ಲಿ, ರಾಹುಲ್ ಗಾಂಧಿ ಅವರು ಮೆಕ್ಯಾನಿಕ್‌ಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಅವರಲ್ಲಿ ಒಬ್ಬಾತ ನೀವು ಯಾವಾಗ ಮದುವೆಯಾಗುತ್ತೀರಿ ಎಂದು ಕೇಳಿದಾಗ, ಅದಕ್ಕೆ ರಾಹುಲ್ “ನೋಡೋಣ” ಎಂದಷ್ಟೆ ಉತ್ತರಿಸಿದರು.
ಬಳಿಕ ರಾಹುಲ್ ಮೆಕ್ಯಾನಿಕ್ ಕಡೆ ತಿರುಗಿ ನಿಮಗೆ ಮದುವೆ ಆಯ್ತೇ ಎಂದು ಮರು ಪ್ರಶ್ನಿಸಿದ್ದು, ಅದಕ್ಕೆ ಮೆಕ್ಯಾನಿಕ್, ಅಪ್ಪ ಹುಡುಗಿ ನೋಡು ಅಂದಿದ್ದಾರೆ, ಈಗ ಸಂಬಳ ಕಡಿಮೆ. ನಾವು ತಿಂಗಳಿಗೆ 14 ರಿಂದ 15 ಸಾವಿರ ಸಂಪಾದಿಸುತ್ತೇವೆ, ಈ ಮೊತ್ತದಲ್ಲಿ ನಾವು ನಮ್ಮ ಕುಟುಂಬವನ್ನು ಹೇಗೆ ನೆಡಸಲು ಸಾಧ್ಯ ಎಂದು ಹೇಳಿದ್ದಾರೆ.
ಸಂವಾದದಲ್ಲಿ ರಾಹುಲ್ ಗಾಂಧಿ ತಮ್ಮ ಬಳಿ ಕೆಟಿಎಂ 390 ಮೋಟಾರ್ ಸೈಕಲ್ ಇದೆ ಎಂದು ಹೇಳಿದ್ದು, ಅದನ್ನು ತಮ್ಮ ಭದ್ರತಾ ಸಿಬ್ಬಂದಿ ಭದ್ರತೆಯ ಕಾರಣದಿಂದ ಸವಾರಿ ಮಾಡಲು ಬಿಡದ ಕಾರಣ ಬಳಸದೆ ಮನೆಯಲ್ಲೇ ನಿಲ್ಲಿಸಲಾಗಿದೆ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚೆಕ್ ಬೌನ್ಸ್ ಪ್ರಕರಣ | ನಟ ನೀನಾಸಂ ಅಶ್ವಥ್ ಬಂಧನ; ಜಾಮೀನಿನ ಮೇಲೆ ಬಿಡುಗಡೆ
ರಾಹುಲ್ ಅವರು ಬೈಕರ್‌ಗಳ ಮಾರುಕಟ್ಟೆಯಲ್ಲಿ, ಉಮೇದ್ ಶಾ, ವಿಕ್ಕಿ ಸೇನ್ ಮತ್ತು ಮನೋಜ್ ಪಾಸ್ವಾನ್ ಅವರೊಂದಿಗೆ ಸಂವಾದ ನಡೆಸುವುದರ ಜೊತೆ ಬೈಕ್‌ಗಳನ್ನು ಕೂಡ ರಿಪೇರಿ ಮಾಡಿದರು.
“ಭಾರತದ ಆಟೋಮೊಬೈಲ್ ಉದ್ಯಮವನ್ನು ಬಲಪಡಿಸಲು, ಭಾರತದ ಮೆಕ್ಯಾನಿಕ್‌ಗಳನ್ನು ಸಬಲೀಕರಣಗೊಳಿಸುವ ಅಗತ್ಯವಿದೆ” ಎಂದು ತಾವು ವಿಡಿಯೋ ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
“ನಾನು ಭಾರತದಲ್ಲಿ ಮೆಕ್ಯಾನಿಕ್‌ಗಳ ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ಕನಸುಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿದೆ. ಹಿರಿಯ ಮೆಕ್ಯಾನಿಕ್ ಉಮೇದ್ ಷಾ ಅವರೊಂದಿಗೆ ಬೈಕ್ ಸರ್ವೀಸ್ ಮಾಡುವ ಸಂದರ್ಭದಲ್ಲಿ ಹಲವು ವರ್ಷಗಳ ಹಿಂದೆ ಬಡತನದಿಂದಾಗಿ ತಾವು ಶಿಕ್ಷಣವನ್ನು ಅರ್ಧಕ್ಕೆ ಕೈಬಿಟ್ಟು ತಮ್ಮ ಹಿರಿಯ ಸಹೋದರನಂತೆ ಮೆಕ್ಯಾನಿಕ್ ಆಗಬೇಕಾಯಿತು’ ಎಂದು ತಿಳಿಸಿರುವ ಮಾಹಿತಿಯನ್ನು ರಾಹುಲ್ ಉಲ್ಲೇಖಿಸಿದ್ದಾರೆ.
“ನಮ್ಮ ಮೆಕ್ಯಾನಿಕ್‌ಗಳು ಆಟೋಮೊಬೈಲ್ ಉದ್ಯಮವನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ಅವರು ಉತ್ತಮ ಸೌಲಭ್ಯಗಳು ಮತ್ತು ಉತ್ತಮ ಅವಕಾಶಗಳನ್ನು ಪಡೆಯಲು ಅರ್ಹರು. ಪ್ರತಿಯೊಬ್ಬ ವ್ಯಕ್ತಿಯ ಮತ್ತು ಪ್ರತಿ ವೃತ್ತಿಯ ಕಾರ್ಮಿಕರ ಸಮೃದ್ಧಿ ಮತ್ತು ಯೋಗಕ್ಷೇಮದಲ್ಲಿ ಭಾರತದ ನಿಜವಾದ ಪ್ರಗತಿ ಅಡಗಿದೆ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಗದ್ದೆ ನಾಟಿ ಮಾಡಿದ್ದ ರಾಹುಲ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಿನ್ನೆ (ಜುಲೈ 9) ಬೆಳಗ್ಗೆ ಹರಿಯಾಣದ ಸೋನಿಪತ್‌ನ ಮದೀನಾ ಗ್ರಾಮದಲ್ಲಿ ಭತ್ತ ನಾಟಿ ಮಾಡಲು ರೈತರಿಗೆ ಸಹಾಯ ಮಾಡಿದರು. ಅವರು ಹಿಮಾಚಲ ಪ್ರದೇಶಕ್ಕೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಭತ್ತದ ಗದ್ದೆಯೊಂದರ ಬಳಿ ಕಾರು ನಿಲ್ಲಿಸಿ, ರೈತರಿಗೆ ಸಹಾಯ ಮಾಡಿದರು.
ಗದ್ದೆಯೊಂದರಲ್ಲಿ ಭತ್ತದ ನಾಟಿಯಾಗುತ್ತಿರುವುದನ್ನು ಕಂಡ ರಾಹುಲ್ ಕಾರನ್ನು ನಿಲ್ಲಿಸಿದರು. ಹೊಲಕ್ಕೆ ತೆರಳಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ರೈತರೊಂದಿಗೆ ಸೇರಿ ಭತ್ತ ನಾಟಿ ಮಾಡಿದರು.