ಚುನಾವಣಾ ವಸ್ತಿಲಿನಲ್ಲಿರುವ ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿರುದ್ಧ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ಪ್ರತಿಭಟನೆಯನ್ನು ಮುಂದವರೆಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಹಾರದಲ್ಲಿ ತಮ್ಮ 16 ದಿನಗಳ ‘ಮತದಾರರ ಅಧಿಕಾರ ಯಾತ್ರೆ’ಯನ್ನು ಮುಂದುವರೆಸಿದ್ದಾರೆ. ಇಂದು, (ಸೋಮವಾರ) ಮುಂಜಾನೆ ಔರಂಗಾಬಾದ್ ತಲುಪಿ ಎರಡನೇ ದಿನದ ರ್ಯಾಲಿಯನ್ನು ಪ್ರಾರಂಭಿಸಿದ್ದಾರೆ.
ಜನರಲ್ಲಿ ಮತದಾರರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು, ‘ಮತ ಕಳ್ಳತನ’ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಲ್ಲಿ ನಡೆದಿ ಎನ್ನಲಾದ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.
“’16 ದಿನಗಳು 20+ ಜಿಲ್ಲೆಗಳು, 1,300+ ಕಿ.ಮೀ., ನಾವು ಮತದಾರರ ಅಧಿಕಾರ ಯಾತ್ರೆ ಮೂಲಕ ಜನರ ನಡುವೆ ಬರುತ್ತಿದ್ದೇವೆ. ಇದು ಅತ್ಯಂತ ಮೂಲಭೂತ ಪ್ರಜಾಪ್ರಭುತ್ವದ ಹಕ್ಕನ್ನು ರಕ್ಷಿಸುವ ಹೋರಾಟ. ‘ಒಬ್ಬ ವ್ಯಕ್ತಿ, ಒಂದು ಮತ’. ಸಂವಿಧಾನವನ್ನು ಉಳಿಸಲು ಬಿಹಾರದಲ್ಲಿ ನಮ್ಮೊಂದಿಗೆ ಸೇರಿ” ಎಂದು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದ್ದಾರೆ.
ಇತ್ತ, ಸಂಸತ್ತಿನ ಆವರಣದಲ್ಲಿ ಪ್ರತಿಭಟನೆಯನ್ನು ಮುಂದುವರೆಸಿದೆ. ಬಿಜೆಪಿಗೆ ಜೊತೆಗೂಡಿ ಚುನಾವಣಾ ಆಯೋಗವು ಮತ ಕಳ್ಳತನದಲ್ಲಿ ತೊಡಗಿದೆ ಎಂದು ಆರೋಪಿಸಿದೆ.
ಸಂಸತ್ ಆವರಣದಲ್ಲಿ ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಯಾದವ್, ಅಭಿಷೇಕ್ ಬ್ಯಾನರ್ಜಿ, ಕನಿಮೋಳಿ ಸೇರಿದಂತೆ ವಿಪಕ್ಷಗಳ ಸಂಸದರು, ರಾಜ್ಯಸಭಾ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯು ಜುಲೈ 21ರಂದು ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದಲೂ ನಡೆಯುತ್ತಲೇ ಇದೆ.
ಪ್ರತಿಭಟನೆಯನ್ನು ವಿರೋಧಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸಂಸತ್ತಿನಲ್ಲಿ ಗದ್ದಲ ಸೃಷ್ಟಿಸುವುದನ್ನು ತಡೆಯಬೇಕು. ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳ ನಡುವಿನ ಯಾವುದೇ ವಿವಾದಗಳನ್ನು ಸಂಸತ್ತಿನಲ್ಲಿ ಅಲ್ಲ, ನೇರವಾಗಿ ಚುನಾವಣಾ ಆಯೋಗದೊಂದಿಗೆ ಚರ್ಚಿಸಬೇಕು” ಎಂದು ಹೇಳಿದ್ದಾರೆ.
ಭಾನುವಾರ, ಸುದ್ದಿಗೋಷ್ಠಿ ನಡೆಸಿದ ಚುನಾವಣಾ ಆಯೋಗವು ‘ಮತ ಕಳ್ಳತನ’ ಆರೋಪವನ್ನು ತಳ್ಳಿಹಾಕಿದೆ. ಅಲ್ಲದೆ, ಚುನಾವಣಾ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದ ಪುರಾವೆಗಳೊಂದಿಗೆ ಸಹಿ ಮಾಡಿದ ಅಫಿಡವಿಟ್ ಸಲ್ಲಿಸುವಂತೆ ರಾಹುಲ್ ಗಾಂಧಿ ಅವರನ್ನು ಮತ್ತೆ ಕೇಳಿದೆ. ಆದಾಗ್ಯೂ, ಚುನಾವಣಾ ಆಯೋಗವು ತನ್ನ ವಿರುದ್ಧದ ಆರೋಪಗಳಿಗೆ ಸ್ಪಷ್ಟ ಉತ್ತರಗಳನ್ನು ನೀಡಿಲ್ಲ ಎಂದು ಹೇಳಲಾಗಿದೆ.