ಮೋದಿ ಪರ್ವದಲ್ಲಿ ಮೇಯುವವರಿಗೆ ಮಣೆ: ಅಪ್ಪಿತಪ್ಪಿ ಸಿಕ್ಕಿಬಿದ್ದ ಸಿಜಾರಿಯಾ  

Date:

Advertisements
ಸಂಘಪರಿವಾರ ಮತ್ತು ಬಿಜೆಪಿಯ ಜೊತೆ ಗುರುತಿಸಿಕೊಂಡವರು ಪ್ರತಿಷ್ಠಿತ ಸಂಸ್ಥೆಗಳ ಹುದ್ದೆಗಳಲ್ಲಿ ವಿರಾಜಮಾನರಾಗಿ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಜಗತ್ತನ್ನು ಯಾವ ರೀತಿ ಕುಲಗೆಡಿಸುತ್ತಾರೆ ಎನ್ನುವುದಕ್ಕೆ ಸಿಜಾರಿಯಾ ಕೇಸ್ ಒಂದು ಉತ್ತಮ ಉದಾಹರಣೆ.

ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಕೋನೇರು ಲಕ್ಷ್ಮಯ್ಯ ಎಜುಕೇಷನ್‌ ಫೌಂಡೇಷನ್‌ಗೆ (ಕೆಎಲ್‌ಇಎಫ್‌) ‘ಎ++ ಗ್ರೇಡ್‌’ ಅಗತ್ಯವಿತ್ತು. ಅದಕ್ಕಾಗಿ ಅವರು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್(ನ್ಯಾಕ್‌)ಗೆ ಅರ್ಜಿ ಹಾಕಿಕೊಂಡಿದ್ದರು.

ಸುಮ್ಮನೆ ಅರ್ಜಿ ಹಾಕಿಕೊಂಡರೆ ನ್ಯಾಕ್ ಗ್ರೇಡ್ ಸಿಗುತ್ತದೆಯೇ? ಅದಕ್ಕಾಗಿ ಅವರು ಸುಲಭದ ಮಾರ್ಗ ಹುಡುಕಿಕೊಂಡಿದ್ದರು. ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಜೀವ್ ಸಿಜಾರಿಯಾ ಅವರನ್ನು ಭೇಟಿ ಮಾಡಿ, ಅವರ ಮೂಲಕ 1.8 ಕೋಟಿಗೆ ಡೀಲ್ ಕುದುರಿಸಿದ್ದರು. ಅಷ್ಟು ಕೊಡಲು ಕಷ್ಟ ಎಂದಾಗ 1.3 ಕೋಟಿಗೆ ಇಳಿದರು. ಕೊನೆಗೆ 28 ಲಕ್ಷಕ್ಕೆ ಒಪ್ಪಿಕೊಂಡಿದ್ದರು. ಮುಂಗಡವಾಗಿ 10 ಲಕ್ಷವನ್ನು ಪಡೆದಿದ್ದರು.

ಈಗ ಲಂಚ ಪಡೆದ ಆರೋಪದ ಮೇರೆಗೆ ಸಿಬಿಐ ಸಿಜಾರಿಯಾ ಸೇರಿದಂತೆ 10 ಮಂದಿಯನ್ನು ಬಂಧಿಸಿದೆ. ಆ ತಕ್ಷಣವೇ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಜೀವ್‌ ಸಿಜಾರಿಯಾ ಅವರನ್ನು ಅಮಾನತುಗೊಳಿಸಿ ವಿ.ವಿಯ ಕುಲಪತಿ ಶಾಂತಿಶ್ರೀ ಪಂಡಿತ್‌ ಆದೇಶ ಹೊರಡಿಸಿದ್ದಾರೆ.

Advertisements

ಏನಿದು ನ್ಯಾಕ್

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್- NAAC) ಭಾರತದ ಸರಕಾರಿ ಮಂಡಳಿ ಆಗಿದ್ದು, ದೇಶದೊಳಗಿನ ಕಾಲೇಜು, ವಿಶ್ವವಿದ್ಯಾಲಯಗಳ ಶೈಕ್ಷಣಿಕ ವ್ಯವಸ್ಥೆಯ ಮೌಲ್ಯಮಾಪನವನ್ನು ನಡೆಸುತ್ತದೆ. ಗುಣಮಟ್ಟಕ್ಕೆ ಅನುಗುಣವಾಗಿ ಶ್ರೇಯಾಂಕವನ್ನು ನೀಡುತ್ತದೆ. ಈ ಸಂಸ್ಥೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಡಿಯಲ್ಲಿ ಬರುತ್ತದೆ. ಮೂಲಭೂತವಾಗಿ ಯಾವುದೇ ಶೈಕ್ಷಣಿಕ ಸಂಸ್ಥೆಯ ಗುಣಮಟ್ಟವನ್ನು ಅಳೆಯಲು, ಅರ್ಥಮಾಡಿಕೊಳ್ಳಲು ಈ ಶ್ರೇಯಾಂಕದ ಅಗತ್ಯವಿದೆ.

ಶೈಕ್ಷಣಿಕ ಸಂಸ್ಥೆಯ ಕಾರ್ಯನಿರ್ವಹಣಾ ವಿಧಾನಗಳು, ಆಯ್ಕೆ, ಪಠ್ಯಕ್ರಮ, ಬೋಧನೆ, ಕಲಿಕೆ, ಮೌಲ್ಯಮಾಪನ, ವಿದ್ಯಾರ್ಥಿಗಳ ಫಲಿತಾಂಶಗಳು, ಸಿಬ್ಬಂದಿ, ಸಂಶೋಧನಾ ಪ್ರಕಟಣೆಗಳು, ಮೂಲಸೌಕರ್ಯ ಪರಿಸ್ಥಿತಿಗಳು, ಸಂಪನ್ಮೂಲ, ಸಂಘಟನೆ, ಆಡಳಿತ, ಹಣಕಾಸು, ವಿದ್ಯಾರ್ಥಿ ಸೇವೆಗಳನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಅವುಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಶ್ರೇಯಾಂಕ ನೀಡಲಾಗುತ್ತದೆ.

ಇದನ್ನು ಓದಿದ್ದೀರಾ?: ಗುಜರಾತ್‌ ನರಮೇಧದ ಹಿಂದಿದ್ದವರು ಮೋದಿಯೇ ಎಂದು ನಿರಂತರ ಸಮರ ಸಾರಿದ್ದರು ಝಕಿಯಾ ಜಾಫ್ರಿ

ಸಾಮಾನ್ಯವಾಗಿ ಯಾವುದೇ ಶೈಕ್ಷಣಿಕ ಸಂಸ್ಥೆಯೂ ಈ ಎಲ್ಲ ಅಂಶಗಳನ್ನು ಅಳವಡಿಸಿಕೊಂಡಿರುವುದಿಲ್ಲ. ಹಾಗಾಗಿ ನ್ಯಾಕ್ ಮಾನ್ಯತೆ ದೊರಕುವುದಿಲ್ಲ. ಸಹಜವಾಗಿಯೇ ಆಡಳಿತ ಮಂಡಳಿ, ವಾಮಮಾರ್ಗ ಹಿಡಿಯುತ್ತದೆ. ಆ ಮಾರ್ಗದಲ್ಲಿ ಮಾನ್ಯತೆ ಗಿಟ್ಟಿಸಿಕೊಂಡವರು ಶಿಕ್ಷಣವನ್ನು ಮಾರುಕಟ್ಟೆಯಲ್ಲಿಟ್ಟು ವ್ಯಾಪಾರ ಮಾಡುತ್ತಾರೆ. ಹಣವಂತರು ಖರೀದಿಸುತ್ತಾರೆ, ಬಹುಸಂಖ್ಯಾತ ಬಡವರು ಕೊರಗಿಕೊಂಡೇ ಕರಗಿಹೋಗುತ್ತಾರೆ. ಶೈಕ್ಷಣಿಕ ವ್ಯವಸ್ಥೆಯನ್ನು ಕುಲಗೆಡಿಸಿರುವವರು ಯಾರು ಎನ್ನುವುದು ನಿಮಗೆ ಅರ್ಥವಾಗಿರಬಹುದು. ಅಂತಹ ‘ಕಿಡಿಗೇಡಿ’ಗಳು ಈಗ ಸಿಬಿಐ ಬಲೆಗೆ ಬಿದ್ದಿದ್ದಾರೆ. ಲಂಚ ಪಡೆದ ಆರೋಪದ ಮೇರೆಗೆ ಸಿಬಿಐ ಸಿಜಾರಿಯಾ ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಿದೆ.

ಯಾರು ಈ ಸಿಜಾರಿಯಾ?

ಉತ್ತರ ಪ್ರದೇಶದ ಮೀರತ್ ಮೂಲದ ರಾಜೀವ್ ಸಿಜಾರಿಯಾ ನಾಲ್ಕಾರು ಡಿಗ್ರಿ ಪಡೆದಿರುವ, ಹತ್ತಾರು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ, ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ವಿದ್ವಾಂಸ. ಪೇಪರ್ ಪ್ರಸಂಟೇಷನ್‌ನಲ್ಲಿ ಪಳಗಿರುವ, ಪೇಟೆಂಟ್ ಕೂಡ ಪಡೆದಿರುವ ಶೈಕ್ಷಣಿಕ ಅರ್ಹತೆ, ಯೋಗ್ಯತೆ ಇರುವ ವ್ಯಕ್ತಿ. 2009ರಿಂದ 2011ರವರೆಗೆ ಗ್ರೇಟರ್ ನೋಯ್ಡಾದಲ್ಲಿ, 2012ರಿಂದ 2016ರವರೆಗೆ ಘಾಜಿಯಾಬಾದ್‌ನಲ್ಲಿ, 2016ರಿಂದ 2020ರವರೆಗೆ ಮೀರತ್‌ನಲ್ಲಿ ಅಧ್ಯಾಪನ ವೃತ್ತಿಯಲ್ಲಿ ಸೇವೆ ಸಲ್ಲಿಸಿದವರು.  

2016ರವರೆಗೆ ಇವರು ಯಾರು ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಅದಕ್ಕೂ ಮುಂಚೆ ಇದೇ ಸಿಜಾರಿಯಾ ಶೈಕ್ಷಣಿಕ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಉತ್ತರ ಪ್ರದೇಶದ ಮೀರತ್‌ನ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷರಾಗಿದ್ದರು. ಎಬಿವಿಪಿಯ ನಾಯಕ ಸುನಿಲ್ ಅಂಬೇಕರ್ ಆಪ್ತ ಸ್ನೇಹಿತರು. ಎಬಿವಿಪಿಯ ಮುಖವಾಣಿ ರಾಷ್ಟ್ರೀಯ ಚಾತ್ರಶಕ್ತಿಗೆ ನಿಯಮಿತವಾಗಿ ‘ವಿದ್ವತ್ಪೂರ್ಣ’ ಲೇಖನಗಳನ್ನು ಬರೆದು ‘ದೇಶಪ್ರೇಮಿ’ಯಾಗಿದ್ದರು.

ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಆರ್‍ಎಸ್ಎಸ್ ಮತ್ತು ಬಿಜೆಪಿಯನ್ನು ಹಾಡಿ ಹೊಗಳುವ ಬರಹಗಳನ್ನು ಬರೆಯುವ ಮೂಲಕ ಸಂಘ ಪರಿವಾರದ ಸರ್ಕಲ್‌ಗಳಲ್ಲಿ ಗುರುತಿಸಿಕೊಂಡರು. ‘ಸಂಘಜೀವಿ’ಯಾದರು. ಬಿಜೆಪಿ ನಾಯಕರ ಕಣ್ಣಿಗೆ ಬಿದ್ದು ಆಪ್ತಕೂಟಗಳಲ್ಲಿ ಕಾಣಿಸಿಕೊಂಡರು. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗುತ್ತಿದ್ದಂತೆ, ರಾಜೀವ್ ಸಿಜಾರಿಯಾರವರ ಅದೃಷ್ಟ ಖುಲಾಯಿಸಿತು. ಭವಿಷ್ಯವೇ ಬದಲಾಗಿಹೋಯಿತು.

ಮೊದಲಿಗೆ ದೆಹಲಿಯ ಪ್ರತಿಷ್ಠಿತ ಜೆಎನ್‌ಯುನ ‘ಅಟಲ್ ಬಿಹಾರಿ ವಾಜಪೇಯಿ ಮ್ಯಾನೇಜ್ಮೆಂಟ್ ಮತ್ತು ಉದ್ಯಮಶೀಲತೆ’ಯ ಡೀನ್ ಪಟ್ಟಕ್ಕೆ ಏರುತ್ತಾರೆ. ನಂತರ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಾಧ್ಯಾಪಕರಾಗುತ್ತಾರೆ. ಅಲ್ಲಿದ್ದುಕೊಂಡೇ, ತಮಗಿರುವ ‘ಸಂಘಜೀವಿ’ಯ ಸಂಪರ್ಕ ಬಳಸಿ, ಎಐಸಿಟಿಇನ ಜಿಮಾಟ್ ಸಲಹಾ ಸಮಿತಿಯ ಸದಸ್ಯರಾಗುತ್ತಾರೆ. ನ್ಯಾಕ್ ಪರಿಶೀಲನಾ ಸಮಿತಿಯ ಸಂಯೋಜಕ ಸದಸ್ಯರಾಗುತ್ತಾರೆ.

ಆರ್‍ಎಸ್ಎಸ್ ಮತ್ತು ಬಿಜೆಪಿಯ ಭಾಗವಾದರೆ, ಮೋದಿಯನ್ನು ಮತ್ತು ಸರ್ಕಾರವನ್ನು ಪ್ರತಿಷ್ಠಿತ ವೇದಿಕೆಗಳಲ್ಲಿ ಯದ್ವಾ ತದ್ವಾ ಹಾಡಿ ಹೊಗಳಿ ಭಾಷಣ-ಬರೆಹ ಮಾಡಿದರೆ, ಅರ್ಹತೆ ಮತ್ತು ಯೋಗ್ಯತೆಗಳಿಲ್ಲದಿದ್ದರೂ ನಿಮಗೆ ಪ್ರತಿಷ್ಠಿತ ಹುದ್ದೆಗಳಲ್ಲಿ ಕೂರುವ ‘ಅದೃಷ್ಟ’ ಒಲಿದು ಬರುತ್ತದೆ. ಅದಕ್ಕೆ ಉತ್ತಮ ಉದಾಹರಣೆಯಾಗಿ ರಾಜೀವ್ ಸಿಜಾರಿಯಾರನ್ನು ನೋಡಬಹುದು.

ಈತ ನ್ಯಾಕ್ ಪರಿಶೀಲನಾ ಸಮಿತಿಯ ಸಂಯೋಜಕ ಸದಸ್ಯರಾಗಿರುವುದರಿಂದ, ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಕೋನೇರು ಲಕ್ಷ್ಮಯ್ಯ ಎಜುಕೇಷನ್‌ ಫೌಂಡೇಷನ್‌ಗೆ ನ್ಯಾಕ್‌ ‘ಎ++ ಗ್ರೇಡ್’ ಕೊಡಿಸಲು ವ್ಯವಹಾರ ಕುದುರಿಸಿದ್ದಾರೆ. ಮೊದಲಿಗೆ ಕೇಳಿರುವ ಮೊತ್ತ 1.8 ಕೋಟಿ. ಆ ನಂತರ 1.3 ಕೋಟಿ. ಆನಂತರ 28 ಲಕ್ಷ. ಮುಂಗಡವಾಗಿ 10 ಲಕ್ಷ ಪಡೆದಿದ್ದಾರೆ.

ಈತ ಮತ್ತು ಸಮಿತಿಯ ಹತ್ತು ಸದಸ್ಯರು ಈಗ ಸಿಬಿಐ ಬಲೆಗೆ ಬಿದ್ದಿದ್ದಾರೆ. ಬಂಧನಕ್ಕೊಳಗಾಗಿದ್ದಾರೆ. ಇಡಿ, ಐಟಿ, ಸಿಬಿಐಗಳು ಕೇಂದ್ರ ಸರ್ಕಾರದ ಅಧೀನದ ಸಂಸ್ಥೆಗಳು. ಮೋದಿ ಮತ್ತವರ ಆಪ್ತರಿಗೆ ಬೇಕಾದಂತೆ ಬಳಸಲ್ಪಡುವ ಅಸ್ತ್ರಗಳು. ಅಂದಮೇಲೆ ‘ಸಂಘಜೀವಿ’ ರಾಜೀವ್ ಸಿಜಾರಿಯಾ ಅವರ ಕೇಸ್ ಕೂಡ, ಕಾಲಾನಂತರ ಕಡತಗಳಲ್ಲಿ ಕಳೆದುಹೋಗಬಹುದು. ಪ್ರಯಾಗ್ ರಾಜ್ ಸಂಗಮದಲ್ಲಿ ಮಿಂದು ಪರಿಶುದ್ಧರಾಗಿ ಮೇಲೆದ್ದು ಬರಬಹುದು.

ಇದನ್ನು ಓದಿದ್ದೀರಾ?: ಭಾರತಕ್ಕೆ ಮುಳುವಾದ ಟ್ರಂಪ್ ನೀತಿಗಳು; ದೇಶದ ಆರ್ಥಿಕತೆಯ ಗತಿ ಏನು?

ಪ್ರಶ್ನೆ ಅದಲ್ಲ. ಸಂಘಪರಿವಾರ ಮತ್ತು ಬಿಜೆಪಿಯ ಜೊತೆ ಗುರುತಿಸಿಕೊಂಡವರು ಪ್ರತಿಷ್ಠಿತ ಸಂಸ್ಥೆಗಳ ಹುದ್ದೆಗಳಲ್ಲಿ ವಿರಾಜಮಾನರಾಗಿ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಜಗತ್ತನ್ನು ಯಾವ ರೀತಿ ಕುಲಗೆಡಿಸುತ್ತಾರೆ ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ. ನಮ್ಮ ರಾಜ್ಯದಲ್ಲಿಯೂ, ಬಿಜೆಪಿ ಸರ್ಕಾರವಿದ್ದಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೊಂಬೆಯಂತಾಗಿದ್ದಾಗ, ಸಂಘಿಜೀವಿಗಳು ಆಡಿದ ಆಟಗಳನ್ನು, ಕೆಡಿಸಿದ ಪಠ್ಯಗಳನ್ನು ಕಂಡಿದ್ದವರಿಗೆ ಇದು ತಕ್ಷಣ ಅರ್ಥವಾಗುತ್ತದೆ.

ಅಂದರೆ, ಸಂಘಪರಿವಾರ ಮತ್ತು ಬಿಜೆಪಿ ಧರ್ಮ, ರಾಷ್ಟ್ರೀಯತೆ, ದೇಶಪ್ರೇಮಗಳನ್ನು ಮುಂದೆ ಮಾಡುತ್ತಲೇ ಅಧಿಕಾರಕ್ಕೇರಿ ಏನು ಮಾಡುತ್ತದೆ ಹಾಗೂ ಅಚ್ಚೇ ದಿನ್, ಅಮೃತಕಾಲ್ ಎಂದು ಹೇಳುತ್ತಲೇ ಮೋದಿಯವರು ದೇಶವನ್ನು ಎಲ್ಲಿಗೆ ತಂದು ನಿಲ್ಲಿಸಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X