- ಪ್ರಾಣ ಪ್ರತಿಷ್ಠಾ ಶಾಸ್ತ್ರಕ್ಕೆ ವಿರುದ್ಧ, ಭಾಗವಹಿಸುವ ಎಲ್ಲರಿಗೂ ಶಾಪ ತಟ್ಟಲಿದೆ: ರಾಜೇಶ್ ಪವಿತ್ರನ್
- ರಾಮಮಂದಿರವನ್ನು ಚುನಾವಣಾ ಸರಕನ್ನಾಗಿ ಮಾಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ
ಜ.22ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಯ ವಿಚಾರದ ಬಗ್ಗೆ ಹಿಂದೂ ಮಹಾಸಭಾ ಕೂಡ ವಿರೋಧ ವ್ಯಕ್ತಪಡಿಸಿದ್ದು, “ಶ್ರೀರಾಮನ ಮಂದಿರವನ್ನು ಅಪೂರ್ಣಾವಸ್ಥೆಯಲ್ಲಿರುವಾಗ ಉದ್ಘಾಟನೆ ಮಾಡುತ್ತಿರುವುದು ಧರ್ಮಶಾಸ್ತ್ರಕ್ಕೆ ಮಾಡಿದ ಅಪಚಾರವಾಗಿದೆ” ಎಂದು ಹೇಳಿದೆ.
ಮಂಗಳೂರಿನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಮಹಾಸಭಾ ಕರ್ನಾಟಕದ ಸಂಸ್ಥಾಪಕ ರಾಜೇಶ್ ಪವಿತ್ರನ್, “ಶ್ರೀರಾಮನ ಮಂದಿರವನ್ನು ಅಪೂರ್ಣಾವಸ್ಥೆಯಲ್ಲಿರುವಾಗ ಉದ್ಘಾಟನೆ ಮಾಡುತ್ತಿರುವುದು ಧರ್ಮಶಾಸ್ತ್ರಕ್ಕೆ ಮಾಡುತ್ತಿರುವ ಅಪಚಾರ. ಹಾಗಾಗಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಶಾಪ ತಟ್ಟಲಿದೆ. ಹೋರಾಟ ಮಾಡಿದವರನ್ನೇ ಹೊರಗಿಟ್ಟು ತರಾತುರಿಯಲ್ಲಿ ಉದ್ಘಾಟಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
“ಪ್ರಭು ಶ್ರೀರಾಮಚಂದ್ರನನ್ನು ಚುನಾವಣಾ ಸರಕನ್ನಾಗಿ ಮಾಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶ್ರೀರಾಮನ ಶಾಪ ತಟ್ಟುತ್ತದೆ. ಕರ್ನಾಟಕದಲ್ಲಿ ಆದ ಸ್ಥಿತಿಯೇ ಕೇಂದ್ರದಲ್ಲೂ ಆಗಬಹುದು. ಮಂದಿರ ಪೂರ್ತಿಯಾಗುವ ಮುನ್ನವೇ ತರಾತುರಿಯಲ್ಲಿ ನಡೆಸುವುದರ ಉದ್ದೇಶ ಏನು” ಎಂದು ಪ್ರಶ್ನಿಸಿದ್ದಾರೆ.
“ರಾಮ ಜನ್ಮಭೂಮಿಯ ಮೂಲ ವಕಾಲತ್ತುದಾರರು ಹಿಂದೂ ಮಹಾಸಭಾ ಆಗಿದ್ದು, ರಾಮಮಂದಿರ ಉದ್ಘಾಟನೆಗೆ ಹಿಂದೂ ಮಹಾಸಭಾ ಹಾಗೂ ನಿರ್ಮೋಯಿ ಅಖಾರವನ್ನು ಆಹ್ವಾನಿಸಿಲ್ಲ. ಇದು ಕೇಂದ್ರ ಸರ್ಕಾರದ ಸ್ವಾರ್ಥ ರಾಜಕಾರಣವನ್ನು ತೋರಿಸುತ್ತದೆ” ಎಂದು ರಾಜೇಶ್ ಪವಿತ್ರನ್ ಆರೋಪಿಸಿದ್ದಾರೆ.
“ಹಿಂದೂ ಮಹಾಸಭಾ ರಾಮನ ವಿಚಾರದಲ್ಲಿ ಯಾವತ್ತಿಗೂ ರಾಜಕೀಯ ಮಾಡಿಲ್ಲ. ಬಿಜೆಪಿ ಶ್ರೀರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಅದನ್ನು ನಾವು ಒಪ್ಪುವುದಿಲ್ಲ. ರಾಮಮಂದಿರದ ಪೂರ್ಣ ಪ್ರಮಾಣದ ಕಾರ್ಯ ಇನ್ನೂ ಆಗಿಲ್ಲ. ಆದರೂ ಮುಂದಿನ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಉದ್ಘಾಟನೆ ಮಾಡಲಾಗುತ್ತಿದೆ. ಇದು ಶಾಸ್ತ್ರಕ್ಕೆ ವಿರುದ್ಧವಾದದ್ದು. ಇದೇ ಮಾತನ್ನು ಹೇಳಿರುವ ಶಂಕರಾಚಾರ್ಯ ಪೀಠದ ಸ್ವಾಮೀಜಿಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಬಿಜೆಪಿ ಬೆಂಬಲಿಗರು ಅವಹೇಳನ ಮಾಡುತ್ತಿದ್ದಾರೆ. ಇದು ಖಂಡನೀಯ” ಎಂದು ತಿಳಿಸಿದರು.
“ಹಿಂದುತ್ವವನ್ನು ಯಾರಿಗೂ ಯಾರೂ ಗುತ್ತಿಗೆ ಕೊಟ್ಟಿಲ್ಲ. ನಮ್ಮ ಹೋರಾಟದ ಫಲವಾಗಿ ಬಿಜೆಪಿ ಇಂದು ಅಧಿಕಾರದಲ್ಲಿದೆ. ರಾಮಮಂದಿರ ಹೋರಾಟದ ಹಿಂದಿನ ಟ್ರಸ್ಟ್ ಅನ್ನು ವಿಸರ್ಜಿಸಿ, ಬೇರೆಯದೇ ಒಂದು ಟ್ರಸ್ಟ್ ಮಾಡಿದ್ದಾರೆ. ಹೋರಾಟ ಮಾಡಿದವರನ್ನೇ ಹೊರಗಿಟ್ಟು ತರಾತುರಿಯಲ್ಲಿ ರಾಮಮಂದಿರವನ್ನು ಉದ್ಘಾಟಿಸಲಾಗುತ್ತಿದೆ. ನಾವೇನು ಬೇರೆ ದೇಶದಿಂದ ಬಂದವರೇ?” ಎಂದು ರಾಜೇಶ್ ಪವಿತ್ರನ್ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಲ್ಕಿಸ್ ಬಾನೊ ಪ್ರಕರಣ | ಅನಾರೋಗ್ಯ, ಬೆಳೆ ಕೊಯ್ಲು ನೆಪ: ಶರಣಾಗತಿಗೆ ಕಾಲಾವಕಾಶ ಕೋರಿದ ಅಪರಾಧಿಗಳು
“ನಿಮ್ಮದೇ ಸರ್ಕಾರವಿದ್ದರೂ ನಿಮಗೆ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಅನ್ನುವ ಭಯವೇ ಅಥವಾ ನಾವು ಇಷ್ಟು ವರ್ಷ ಏನೂ ಮಾಡಿಲ್ಲ ಕೊನೆಯ ಪಕ್ಷ ರಾಮನ ಹೆಸರಿನಲ್ಲಾದರೂ ಗೆಲ್ಲುವ ತಂತ್ರಗಾರಿಕೆಯೇ?” ಎಂದು ಕೇಳಿದ ಅವರು, “ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಏನೂ ವ್ಯತ್ಯಾಸವಿಲ್ಲ. ಕೇವಲ ಓಲೈಕೆಗಾಗಿ ಮತ್ತು ಚುನಾವಣೆಗಾಗಿ ಮಾಡುತ್ತಿದ್ದಾರೆ. ಇದನ್ನು ನಾವು ಪ್ರಶ್ನಿಸುತ್ತಿದ್ದೇವೆ” ಎಂದು ಹೇಳಿದರು.
ರಾಮ ಸೇತು ರಾಷ್ಟ್ರೀಯ ಸ್ಮಾರಕ ಎಂದು ಇನ್ನೂ ಯಾಕೆ ಘೋಷಿಸಿಲ್ಲ?
ಸುದ್ದಿಗೋಷ್ಠಿಯಲ್ಲಿ ಇದೇ ವೇಳೆ ರಾಮ ಸೇತು ವಿಚಾರವನ್ನು ಪ್ರಸ್ತಾಪಿಸಿದ ಹಿಂದೂ ಮಹಾಸಭಾ ನಾಯಕ, “ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲು ಬಿಜೆಪಿಯದ್ದೇ ಸಂಸದರಾಗಿರುವ ಡಾ. ಸುಬ್ರಮಣಿಯನ್ ಸ್ವಾಮಿಯವರು ಕಳೆದ ಐದು ವರ್ಷಗಳಿಂದ ಗೋಗರೆಯುತ್ತಿದ್ದಾರೆ. ಪ್ರಧಾನಿಯ ಬಳಿ ಈ ಬಗ್ಗೆ ಅವರು ಮನವಿ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಇನ್ನೂ ಯಾಕೆ ತೀರ್ಮಾನ ಕೈಗೊಂಡಿಲ್ಲ. ಅದು ಹಿಂದುತ್ವದ ವಿಚಾರ ಅಲ್ಲವೇ? ಅದರಲ್ಲಿ ಲಾಭವಿಲ್ಲವ, ಚುನಾವಣೆಯಲ್ಲಿ ಏನೂ ಪ್ರಯೋಜನವಿಲ್ಲವೆಂದು ಯೋಚಿಸಿದ್ದೀರಾ?” ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಜ.22ರಂದು ರಾಮ ಮಹೋತ್ಸವ
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮವನ್ನು ಸಂಭ್ರಮಿಸುವ ಸಲುವಾಗಿ ಜ.22ರಂದು ಮಂಗಳೂರಿನ ಪಿವಿಎಸ್ ವೃತ್ತದ ಬಳಿ ಇರುವ ಲಕ್ಷ್ಮೀ ನಾರಾಯಣ ದೇವಸ್ಥಾನದ ವಠಾರದಲ್ಲಿ ರಾಮ ಮಹೋತ್ಸವವನ್ನು ಆಚರಿಸಲಾಗುವುದು. ಮಂದಿರದ ಪುನರ್ ನಿರ್ಮಾಣಕ್ಕೆ ತ್ಯಾಗ ಬಲಿದಾನ ಮಾಡಿದವರನ್ನು ನೆನಪು ಮಾಡುವ ದೃಷ್ಟಿಯಿಂದ ಕರಸೇವಕರನ್ನು ಗೌರವಿಸಿ, ಸನ್ಮಾನಿಸಲಿದ್ದೇವೆ ಎಂದು ಇದೇ ವೇಳೆ ರಾಜೇಶ್ ಪವಿತ್ರನ್ ಮಾಹಿತಿ ನೀಡಿದರು.
ಹಿಂದೂ ಮಹಾಸಭಾ ಕರ್ನಾಟಕದ ರಾಜ್ಯಾಧ್ಯಕ್ಷ ಎಲ್.ಕೆ. ಸುವರ್ಣ, ಖಜಾಂಚಿ ಲೋಕೇಶ್ ಉಳ್ಳಾಲ್, ಹಿಮಾಂಶು ಶರ್ಮ, ಪ್ರವೀಣ್ ಚಂದ್ರರಾವ್ ಇದ್ದರು.
ಅಣ್ಣಾ ತರಾತುರಿಯಲ್ಲಿ ಮಂದಿರ ಉದ್ಘಾಟನೆ ಆಗುತ್ತಿರುವುದು ಲೋಕಸಭಾ ಚುನಾವಣೆಗಾಗಿ,,ರಾಮನ ಭಕ್ತಿಗಾಗಿ ಅಲ್ಲ,, ಮೇಲಾಗಿ ಒಂದು ವರ್ಗದ ಆದಾಯಕ್ಕಾಗಿ,, ಇನ್ನೂ ಮುಂದುವರಿದು ಮಂದಿರದ ಟ್ರಸ್ಟಿ ಸ್ಪಷ್ಟವಾಗಿ ಹೇಳಿದ್ದಾರೆ ಮಂದಿರ ರಾಮಾನಂದ ಪಂಥಕ್ಕೆ ಸೇರಿದ್ದು ಉಳಿದ ಬ್ರಾಹ್ಮಣ ಪಂಥದವರಿಗೆ ಸಂಬಂಧವಿಲ್ಲ,,,ಹಿಂಗಾದ ಮೇಲೆ ಅವೈದಿಕರಿಗೆ ಅಲ್ಲಿ ಯಾವುದೇ ಕೆಲಸ ಇಲ್ಲ,,,ಮುಂದಾದರೂ ಅವೈದಿಕರು ಬುದ್ಧಿವಂತರಾಗುವರೆಂದು ಆಶಿಸೋಣ