ಇಂದು ಸಂಸತ್ತು ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದೆ. ಎನ್‌ಡಿಎ ಸಂಸದರ ಸಭೆ ನಡೆಸಿದ ಪ್ರಧಾನಿ ಮೋದಿ, ಸಂವಿಧಾನಕ್ಕೆ ನಮಸ್ಕರಿಸಿದ್ದಾರೆ. ಅಂತೂ, ತಾವು ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂಬುದನ್ನು ಮೋದಿ ಒಪ್ಪಿಕೊಂಡಂತಾಗಿದೆ.
ಮೋದಿ ಅವರ ಇಂದಿನ ನಡೆ ತಮ್ಮನ್ನು ಶ್ರೀರಾಮ, ಹನುಮಂತ ಕೊನೆವರೆಗೂ ಕೈಹಿಡಿಯುವುದಿಲ್ಲ. ಈ ಪ್ರಜಾಪ್ರಭುತ್ವದಲ್ಲಿ ಸಂವಿಧಾನವೇ ಅಂತಿಮ ಎಂಬುದನ್ನು ಅವರು ಅರಿತಂತೆ ಕಾಣುತ್ತಿದೆ.
2014ರಲ್ಲಿ ರಾಮಮಂದಿರ, ಶ್ರೀರಾಮನ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿ, 10 ವರ್ಷಗಳ ಕಾಲ ಸರ್ವಾಧಿಕಾರಿಯ ಶೈಲಿಯಲ್ಲಿ ಆಡಳಿತ ನಡೆಸಿದರು. ಅವರ ಆಡಳಿತದಲ್ಲಿ ದೇಶಾದ್ಯಂತ ಹನುಮಂತನ ಹೆಸರಿನಲ್ಲಿ ನಾನಾ ಗಲಾಟೆ, ಗಲಭೆ, ಹಿಂಸಾಚಾರಗಳು ನಡೆದವು. ರಾಮ ರಾಜ್ಯ ಕಟ್ಟುತ್ತೇವೆಂದು ಮುಸ್ಲಿಂ ವಿರೋಧಿ ದ್ವೇಷ ಹರಡಿ, ಭಾರತವನ್ನು ಧರ್ಮದ ಆಧಾರದ ವಿಭಜಿಸಲು ಯತ್ನಿಸಿದರು. ಅಸಹಿಷ್ಣುತೆಯನ್ನು ಬಿತ್ತಿದರು.
ಅವರ ರಾಮ, ಧರ್ಮ, ಭಜರಂಗಿ ಮಾತಿಗೆ ದೇಶದ ಕೆಲ ಯುವಜನರು ಬಲಿಯಾದರು. ಕೇಸರಿ ಧ್ವಜ ಹಿಡಿದು ದಾಂಧಲೆ ನಡೆಸಿದರು. ಮೋದಿಯೇ ವಿಶ್ವಗುರು – ಮೋದಿಯಿಂದ ಎಲ್ಲವೂ ಸಾಧ್ಯ ಎಂಬ ಭ್ರಮೆಯನ್ನು ಸಂಘಪರಿವಾರ ಯುವಜನರ ತಲೆಯಲ್ಲಿ ತುಂಬಿತು. ಈಗಲೂ, ಕೆಲ ಯುವಜನರು ಅದೇ ಗುಂಗಿನಲ್ಲಿದ್ದಾರೆ.
ಆದರೆ, ಆ ಭ್ರಮೆ ಮೋದಿಗೆ ಮತ್ತೆ ಪೂರ್ಣ ಪ್ರಮಾಣದ ಅಧಿಕಾರ ತಂದುಕೊಡಲಿಲ್ಲ. ಶ್ರೀರಾಮ, ಹನುಮಂತ, ಮಂದಿರ ಇದ್ಯಾವುದೂ ಮೋದಿ ಹಾಗೂ ಬಿಜೆಪಿಯ ಕೈಹಿಡಿಯಲಿಲ್ಲ. ಶ್ರೀರಾಮನ ರಾಮಮಂದಿರ ಇರುವ ಉತ್ತರ ಪ್ರದೇಶದ ಅಯೋಧ್ಯೆ(ಫೈಝಾಬಾದ್ ಲೋಕಸಭಾ ಕ್ಷೇತ್ರ) ಹಾಗೂ ಹನುಮಂತನ ಜನ್ಮಸ್ಥಳ, ಹಿಂದಿನ ಕಿಷ್ಕಿಂಧೆ ಎನ್ನಲಾದ ಕರ್ನಾಟಕದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ. ಉತ್ತರದಲ್ಲಿ ರಾಮ, ದಕ್ಷಿಣದಲ್ಲಿ ಹನುಮ ಬಿಜೆಪಿಯ ಕೈಬಿಟ್ಟಿದ್ದಾರೆ.
ರಾಮ-ಹನುಮಂತನದ್ದೂ ಎನ್ನಲಾದ ಕ್ಷೇತ್ರಗಳಲ್ಲಿ ಪ್ರೀತಿ-ಸೌಹಾರ್ದತೆಗೆ ಜನರು ಮತ ಹಾಕಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವವು ದೇಶದಲ್ಲಿ ಉಳಿಯಬೇಕು. ಸಮಾನತೆ, ಸಮಾಜವಾದದ ತತ್ವದೊಂದಿಗೆ ಭಾರತವು ಮುನ್ನಡೆಯಬೇಕು ಎಂಬುದನ್ನು ಸಾರಿದ್ದಾರೆ.
मेरे जीवन का हर पल डॉ. बाबासाहेब अम्बेडकर द्वारा दिए गए भारत के संविधान के महान मूल्यों के प्रति समर्पित है। यह हमारा संविधान ही है, जिससे एक गरीब और पिछड़े परिवार में पैदा हुए मुझ जैसे व्यक्ति को भी राष्ट्रसेवा का अवसर मिला है। ये हमारा संविधान ही है, जिसकी वजह से आज करोड़ों… pic.twitter.com/6TobT8MKHh
— Narendra Modi (@narendramodi) June 7, 2024
ಮತದಾರರು ದ್ವೇಷ, ವಿಭಜನೆಯ ವಿರುದ್ಧ ಮತ ಚಲಾಯಿಸಿದರೆ, ಮತ್ತೊಂದೆಡೆ, ಮೋದಿಯ ಸರ್ವಾಧಿಕಾರ ಅಡಗಿಹೋಗಿದೆ. ಮೋದಿ ಮತ್ತೆ ತನ್ನ ಸರ್ವಾಧಿಕಾರಿ ಧೋರಣೆಯನ್ನು ತೊಡೆದು, ಪ್ರಜಾಪ್ರಭುತ್ವದ ರಾಜಕಾರಣಕ್ಕೆ ಮರಳುತ್ತಿದ್ದಾರೆ. ಹೀಗಾಗಿಯೇ, ಸಂಸತ್‌ನಲ್ಲಿ ಸಂವಿಧಾನಕ್ಕೆ ನಮಿಸಿದ್ದಾರೆ. ಸಂವಿಧಾನವನ್ನು ತನ್ನ ಹಣೆಗೆ ಒತ್ತಿಕೊಂಡಿದ್ದಾರೆ.
ಚುನಾವಣೆಗೂ ಮುನ್ನ, ಬಿಜೆಪಿಯ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ, ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು. ಈ ಬಾರಿ ಬಿಜೆಪಿಗೆ 400 ಸ್ಥಾನಗಳನ್ನು ಕೊಟ್ಟರೆ, ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.
ಅಲ್ಲದೆ, ಅಯೋಧ್ಯೆಯ ಬಿಜೆಪಿ ಅಭ್ಯರ್ಥಿ ಲಲ್ಲುಸಿಂಗ್, ರಾಜಸ್ಥಾನದ ನಾಗೌರ್‌ನ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ ಸೇರಿದಂತೆ ಹಲವು ಬಿಜೆಪಿಗರು ಕೂಡ ಸಂವಿಧಾನ ಬದಲಿಸುವ ಹೇಳಿಕೆ ನೀಡಿದ್ದರು. ಆದರೆ, ಅವರೆಲ್ಲರನ್ನೂ ಸಂವಿಧಾನವೇ ಬದಲಿಸಿದೆ. ಎಲ್ಲರೂ ಸೋತು ಸುಣ್ಣವಾಗಿದ್ದಾರೆ. ಈ ದೇಶದ ಪರಮಶ್ರೇಷ್ಠ ಗ್ರಂಥವಾದ ಸಂವಿಧಾನವು ಬಿಜೆಪಿ ಅಹಂಕಾರದ ಬುಡಕ್ಕೆ ಕೊಡಲಿ ಏಟು ಕೊಟ್ಟಿದೆ.
ಅದಾಗ್ಯೂ, ಶ್ರೀರಾಮ-ಹನುಮಂತ ಕೈಬಿಟ್ಟ ಮೋದಿಯನ್ನು ಸಂವಿಧಾನವೇ ಮತ್ತೊಮ್ಮೆ ಪ್ರಧಾನಿಯಾಗಿ ಮಾಡುತ್ತಿದೆ. ಸಂವಿಧಾನ ಮೋದಿಯ ಕೈಹಿಡಿದಿದೆ. ಇನ್ನಾದರೂ, ಮೋದಿ-ಶಾ ತಮ್ಮ ಅಹಂಕಾರ, ಸರ್ವಾಧಿಕಾರ, ಏಕ ವ್ಯಕ್ತಿ ಆಡಳಿತವೆಂಬ ಹುಂಬತನವನ್ನು ಬಿಟ್ಟು, ಪ್ರಜಾಪ್ರಭುತ್ವದ ಆಶಯಕ್ಕೆ ತಲೆ ಬಾಗಿ ಆಡಳಿತ ನಡೆಸಲಿ. ಸಂವಿಧಾನದ ಆಶಯಗಳನ್ನು ಹೊತ್ತುಕೊಂಡು ನಡೆಯಲಿ.
Dekh rahe ho Binod.. pic.twitter.com/xmy9NXLrM7
— Mohammed Zubair (@zoo_bear) June 7, 2024