- ‘ವಜಾಗೊಳಿಸುವ ಆದೇಶದಿಂದ ತಪ್ಪಿಸಿಕೊಂಡ ಅಡ್ಡಂಡ ಕಾರ್ಯಪ್ಪ’
- ‘ನಿಯಮಬಾಹಿರವಾಗಿ ಹಣಕಾಸು ಚಟುವಟಿಕೆ ಬಗ್ಗೆ ವಿಶೇಷ ತನಿಖೆ’
“ಬಿಜೆಪಿ ಸರ್ಕಾರದಲ್ಲಿ ರಾಜಕೀಯ ಕಾರಣಗಳಿಗಾಗಿ ಸರ್ಕಾರಿ, ಅರೆಸರ್ಕಾರಿ, ಅನುದಾನಿತ ಪ್ರಾಧಿಕಾರ ಹಾಗೂ ಸಾಂಸ್ಕೃತಿಕ ಸಂಘಟಣೆಗಳಿಗೆ ನೇಮಕವಾದ ಬಿಜೆಪಿ ಪ್ರೇರಿತ ಕಾರ್ಯಕರ್ತರು ಮತ್ತು ಬಿಜೆಪಿ ಪರವಾದ ಸ್ವಯಂ ಘೋಷಿತ ವಿಚಾರವಾದಿಗಳು ಕೂಡಲೇ ಆಯಾ ಸಂಸ್ಥೆಗಳ ಅಧ್ಯಕ್ಷರ ಮತ್ತು ಸದಸ್ಯ ಸ್ಥಾನಗಳಿಗೆ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು” ಎಂದು ಮಾಜಿ ಎಂಎಲ್ಸಿ ಮತ್ತು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಕರ್ನಾಟಕದಲ್ಲಿ ಜನಾದೇಶ ಕಾಂಗ್ರೆಸ್ ಪಕ್ಷದ ಪರವಾಗಿ ಬಂದಿದೆ. ಬಿಜೆಪಿ ಮೂಲಕ ನೇಮಕಗೊಂಡಿರುವ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದರ ಮೂಲಕ ಹೊಸ ಸರ್ಕಾರ ಹೊಸ ನೇಮಕಾತಿ ಮಾಡಲು ಅನುವು ಮಾಡಿಕೊಡಬೇಕು” ಎಂದಿದ್ದಾರೆ.
“ಕೆಲವು ಅರೆ ನ್ಯಾಯಿಕ ಆಯೋಗ ಮತ್ತು ಪ್ರಾಧಿಕಾರಗಳಿಗೆ ಹಿಂದಿನ ಬಿಜೆಪಿ ಸರ್ಕಾರ ರಾಜಕೀಯ ನೇಮಕಾತಿಗಳನ್ನು ಮಾಡಿದ್ದು, ಆ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರು ರಾಜೀನಾಮೆ ನೀಡದೇ ಹೋದಲ್ಲಿ, ಕಾಂಗ್ರೆಸ್ ಪಕ್ಷವು ನಿಯಮಾನುಸಾರ ಇಂತಹ ನೇಮಕಾತಿಗಳನ್ನು ರದ್ದುಪಡಿಸಿ ಹೊಸ ನೇಮಕಾತಿ ಮಾಡಲಿದೆ” ಎಂದು ತಿಳಿಸಿದ್ದಾರೆ.
ಕಿತ್ತಾಕುವುದನ್ನು ತಪ್ಪಿಸಿಕೊಂಡ ಅಡ್ಡಂಡ ಕಾರ್ಯಪ್ಪ
“ರಂಗಸಮಾಜದ ಶಿಫಾರಸ್ಸು ಇಲ್ಲದೆ ರಾಜಕೀಯ ಕಾರಣಕ್ಕಾಗಿ ಬಿಜೆಪಿ ಸರ್ಕಾರ ನೇಮಿಸಿದ್ದ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಾಜೀನಾಮೆ ನೀಡಿರುವುದು ಸರಿಯಿದೆ. ರಂಗಾಯಣ ಸಂಸ್ಥೆಯನ್ನು ಮಲಿನಗೊಳಿಸಿ ಈ ಸಂಸ್ಥೆಯ ಮೂಲಕ ರಾಜ್ಯದ ಸಾಂಸ್ಕೃತಿಕ ಹಿರಿಮೆಗೆ ಕಳಂಕ ತಂದ ಆರೋಪ ಹೊತ್ತಿರುವ ಅಡ್ಡಂಡ ಕಾರ್ಯಪ್ಪ ಪಾಪ ಪ್ರಜ್ಞೆಯ ಕಾರಣಕ್ಕಾಗಿ ರಂಗಾಯಣ ಸಂಸ್ಥೆಗೆ ರಾಜೀನಾಮೆ ನೀಡಿ ಅವರನ್ನು ವಜಾಗೊಳಿಸುವ ಆದೇಶದಿಂದ ಅವರು ತಪ್ಪಿಸಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
“ಸರ್ಕಾರದ ಅಥವಾ ಅರೆ ಸರ್ಕಾರದ ಸಂಸ್ಥೆಗಳು ಮತ್ತು ಪ್ರಾಧಿಕಾರಗಳು ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ನಂತರ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಮೇಲೂ ನಿಯಮ ಬಾಹಿರವಾಗಿ ಹಣಕಾಸು ಚಟುವಟಿಕೆ ನಿರ್ವಹಿಸಿದ್ದರೆ, ಇದರ ಮೇಲೆ ಹೊಸ ಸರ್ಕಾರವು ವಿಶೇಷ ತನಿಖೆ ನಡೆಸಲಿದೆ” ಎಂದು ಎಚ್ಚರಿಸಿದ್ದಾರೆ.
“ರಾಜ್ಯದಲ್ಲಿ ನೀತಿ ಸಂಹಿತೆ ಬಂದ ನಂತರ ಕೆಲವು ಪ್ರಾಧಿಕಾರಗಳು ಮತ್ತು ಅರೆ ನ್ಯಾಯಿಕ ಆಯೋಗಗಳು ನಿಯಮ ಮೀರಿ ಹಣಕಾಸು ನಿರ್ವಹಣೆ ಮಾಡಿರುವುದು ಕಾಂಗ್ರೆಸ್ ಪಕ್ಷದ ಗಮನಕ್ಕೆ ಬಂದಿರುತ್ತದೆ. ಇಂತಹ ಯಾವುದೇ ಅಕ್ರಮಗಳಲ್ಲಿ ಯಾವುದೇ ಅಧಿಕಾರಿ ಭಾಗಿಯಾಗಿದ್ದರೆ ಅವರ ಮೇಲೆ ನಿಯಮಾನುಸಾರ ನೂತನ ಸರ್ಕಾರ ಕ್ರಮ ಕೈಗೊಳ್ಳಲಿದೆ. ಕೆಲವು ಸಂಸ್ಥೆಗಳು ಹಿಂದಿನ ದಿನಾಂಕ ನಮೂದಿಸಿ ಬಿಲ್ಗಳನ್ನು ಪಾವತಿ ಮಾಡಿರುವುದು ಮತ್ತು ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇಂತಹ ಅಕ್ರಮ ಚಟುವಟಿಕೆಗಳ ಮೇಲೆ ಹೊಸ ಸರ್ಕಾರ ಕ್ರಮ ಕೈಗೊಳ್ಳಲಿದೆ” ಎಂದು ಹೇಳಿದ್ದಾರೆ.