ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ | ಅನುಮಾನಗಳಿಗೆ ಎಡೆಮಾಡಿಕೊಟ್ಟ ಬಿಜೆಪಿ ಸಂಸದನ ಟ್ವೀಟ್!

Date:

Advertisements

ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಆರೋಪ ಪ್ರಕರಣ ಇನ್ನೂ ಚರ್ಚೆಯಲ್ಲಿರುವಾಗಲೇ ಬೆಂಗಳೂರಿನ ವೈಟ್‌ಫೀಲ್ಢ್‌ನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ 1ರ ಸುಮಾರಿಗೆ ಬಾಂಬ್ ಸ್ಫೋಟ ಸಂಭವಿಸಿತ್ತು.

ಈ ಘಟನೆ ನಡೆದಾಗ ಯಾರಿಗೂ ಸ್ಪಷ್ಟ ಮಾಹಿತಿ ಇರಲಿಲ್ಲ. ಇದೊಂದು ನಿಗೂಢ ಸ್ಫೋಟ ಎಂದೇ ಹೆಚ್ಚಿನ ಮಾಧ್ಯಮಗಳು ವರದಿ ಮಾಡಿತ್ತು.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಕುರಿತು ಪೊಲೀಸ್‌ ಅಧಿಕಾರಿಗಳಾಗಲೀ, ಗೃಹ ಸಚಿವರಾಗಲೀ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆ ನೀಡುವ ಮುನ್ನವೇ ‘ನಡೆದಿರುವುದು ಬಾಂಬ್‌ ಬ್ಲಾಸ್ಟ್‌’ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವುದು ಈಗ, ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಕಾರಣವಾಗುವುದರ ಜೊತೆಗೆ, ಅನುಮಾನಕ್ಕೂ ಎಡೆ ಮಾಡಿಕೊಟ್ಟಿದೆ.

Advertisements

ದೇಶದ ಭದ್ರತೆಯಂತಹ ಇಂತಹ ಗಂಭೀರ, ಸೂಕ್ಷ್ಮ ಪ್ರಕರಣಗಳು ನಡೆದಾಗ ಸರಿಯಾದ ಮಾಹಿತಿಯನ್ನು ಉನ್ನತ ಮಟ್ಟದ ಪೊಲೀಸ್‌ ಅಧಿಕಾರಿಗಳು ಅಥವಾ ಮುಖ್ಯಮಂತ್ರಿ, ಗೃಹಸಚಿವರು ಹೇಳಿಕೆ ನೀಡಿ, ಬಹಿರಂಗ ಪಡಿಸುತ್ತಾರೆ. ಆದರೆ ಇವರ ಹೇಳಿಕೆಗಳು ಬರುವ ಮುನ್ನವೇ ತೇಜಸ್ವಿ ಸೂರ್ಯ ನಡೆದಿರುವುದು ‘ಬಾಂಬ್‌ ಬ್ಲಾಸ್ಟ್‌’ ಎಂದು ಹೇಳಿರುವುದು ಆಶ್ಚರ್ಯ ಮೂಡಿಸಿದೆ.

ಶುಕ್ರವಾರ ಮಧ್ಯಾಹ್ನ 03:35ಕ್ಕೆ ಟ್ವೀಟ್ ಮಾಡಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, “ನಾನು ಈಗಷ್ಟೇ ಕೆಫೆ ಮಾಲೀಕ ನಾಗರಾಜ್ ಅವರೊಂದಿಗೆ ಮಾತಾಡಿದೆ. ಸಿಲಿಂಡರ್‌ ಸ್ಫೋಟಿಸಿಲ್ಲ, ಗ್ರಾಹಕನೊಬ್ಬ ಬಿಟ್ಟುಹೋದ ಬ್ಯಾಗ್‌ ಸ್ಫೋಟಿಸಿದೆ. ಇದು ಬಾಂಬ್‌ ಬ್ಲಾಸ್ಟ್‌ ಪ್ರಕರಣವಾಗಿದೆ. ಬೆಂಗಳೂರು ಜನತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಸ್ಪಷ್ಟ ಉತ್ತರ ನಿರೀಕ್ಷಿಸುತ್ತಿದೆ” ಎಂದು ಪೋಸ್ಟ್‌ ಮಾಡಿದ್ದರು.

ಈ ವೇಳೆಗೆ ಸರ್ಕಾರದ ಪ್ರತಿನಿಧಿಗಳು ಯಾರೂ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಮತ್ತೊಂದು ಮಹತ್ವದ ವಿಷಯವೆಂದರೆ ಸಿಲಿಂಡರ್‌ ಸ್ಫೋಟಿಸಿ ಅವಘಡ ನಡೆದಿದೆ ಎಂದು ಯಾವ ಅಧಿಕಾರಿಯೂ ಹೇಳಿಕೆ ನೀಡಿರಲಿಲ್ಲ. ಹಾಗಿದ್ದಾಗ್ಯೂ ಸೂರ್ಯ ಸಿಲಿಂಡರ್‌ ಸ್ಫೋಟ ಎಂದು ಹೇಳಿದ್ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ.

ಮೈಸೂರಿನ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಷಯ ಗೊತ್ತಾಗುತ್ತಿದ್ದಂತೆ, “ಸುಧಾರಿತ ಸ್ಫೋಟಕಗಳನ್ನು ಬಳಸಿ ಬಾಂಬ್ ಬ್ಲಾಸ್ಟ್‌ ನಡೆಸಲಾಗಿದೆ” ಎಂದು ಸ್ಪಷ್ಟವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಅದರ ಜೊತೆಗೆ ರಾಜ್ಯದ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಸಹ ನಡೆದಿರುವುದು ಬಾಂಬ್‌ ಬ್ಲಾಸ್ಟ್‌ ಪ್ರಕರಣ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಯಾರೂ ಸಹ ಬಾಂಬ್‌ ಬ್ಲಾಸ್ಟ್‌ ಆಗಿರುವುದನ್ನು ಮುಚ್ಚಿಡದೇ ಇದ್ದರೂ ತೇಜಸ್ವಿ ಸೂರ್ಯ ಊಹೆಯ ಮೇಲೆ ಹೇಳಿಕೆ ನೀಡಿದ್ದು ಯಾಕೆ ಎಂಬ ಪ್ರಶ್ನೆ ಮೂಡುತ್ತದೆ.

ಇಷ್ಟೇ ಅಲ್ಲದೆ, ಸಂಜೆ 7 ಗಂಟೆ ಸುಮಾರಿಗೆ ಎಕ್ಸ್‌ ನಲ್ಲಿ ಮತ್ತೊಂದು ಪೋಸ್ಟ್‌ ಮಾಡಿದ ತೇಜಸ್ವಿ ಸೂರ್ಯ, ಮೊದಲು ಸಿಲಿಂಡರ್‌ ಸ್ಫೋಟ ಎಂದರು, ಈಗ ವೃತ್ತಿ ವೈಷಮ್ಯಕ್ಕಾಗಿ ಘಟನೆ ನಡೆದಿದೆ ಎನ್ನುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ತನಿಖಾ ಸಂಸ್ಥೆಗಳಿಗೆ ಯಾಕೆ ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರಾದಿಯಾಗಿ ಸಚಿವ ಸಂಪುಟದ ಹಲವರು ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದರೂ ಯಾರೂ ಸಹ ವೃತ್ತಿವೈಷಮ್ಯದ ಕಾರಣಕ್ಕೆ ಘಟನೆ ನಡೆದಿದೆ ಎಂದು ಹೇಳಿರಲಿಲ್ಲ. ವೃತ್ತಿ ವೈಷಮ್ಯ ಸೇರಿ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುವುದಾಗಿ ಡಿ ಕೆ ಶಿವಕುಮಾರ್ ತಿಳಿಸಿದ್ದರು. ಇದನ್ನೇ ಬಳಸಿಕೊಂಡ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಬಾಂಬ್ ಬ್ಲಾಸ್ಟ್ ಘಟನೆಗೆ ವೃತ್ತಿ ವೈಷಮ್ಯದ ಆಯಾಮವನ್ನು ತಂದಿದ್ದು ಯಾಕೆ ಎಂಬ ಪ್ರಶ್ನೆಯೂ ಈಗ ಸಾರ್ವಜನಿಕರಲ್ಲಿ ಮೂಡಿದೆ.

ಬಾಂಬ್‌ ಬ್ಲಾಸ್ಟ್‌ ಪ್ರಕರಣದಂತಹಾ ಘಟನೆಗಳು ನಡೆದ ಕೂಡಲೇ ದೇಶದ ಹಿತಾಸಕ್ತಿಯಿಂದ ಒಂದಾಗಿ ನಿಲ್ಲುವ ಬದಲು, ರಾಜಕೀಯ ಕೆಸರೆರಚಾಟ ಮಾಡುವುದು ಈಗಿನ ಪರಿಸ್ಥಿತಿಯಲ್ಲಿ ಮಾಮೂಲಿಯಾಗಿ ಹೋಗಿದೆ. ರಾಜ್ಯ ಬಿಜೆಪಿ ಘಟಕ ಅತಿ ಉತ್ಸಾಹದಲ್ಲಿ ಬಾಂಬ್‌ ಬ್ಲಾಸ್ಟ್‌ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು, ಇಂದು ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.

ಇದನ್ನು ಓದಿದ್ದೀರಾ? ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಕೇಂದ್ರದ ವೈಫಲ್ಯ ಕಾರಣವಲ್ಲವೇ ?

ಬಿಜೆಪಿ ಕಚೇರಿಯಲ್ಲಿ ಸಂಜೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ವಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಮೇಶ್ವರಂ ಕೆಫೆ ಸ್ಫೋಟ ಘಟನೆಗೆ ಕಾಂಗ್ರೆಸ್‌ನ ಓಲೈಕೆ ರಾಜಕಾರಣವೇ ಕಾರಣ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಲೆಲ್ಲ ಪುಂಡು ಪೋಕರಿಗಳಿಗೆ ರೆಕ್ಕೆ ಬರುತ್ತದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟಿಸಿದವರನ್ನು ಬ್ರದರ್ ಎಂದಿದ್ದರು. ರಾಮೇಶ್ವರ ಕೆಫೆಯಲ್ಲಿ ಸ್ಫೋಟ ಮಾಡಿದವರನ್ನು ಅಂಕಲ್ ಎನ್ನಬಹುದು ಎನ್ನುವ ಮೂಲಕ ಈ ಘಟನೆಯ ಹಿಂದೆ ನಿರ್ದಿಷ್ಟ ಸಮುದಾಯದ ಅಂದರೆ ಪರೋಕ್ಷವಾಗಿ ಮುಸ್ಲಿಮರು ಇದ್ದಾರೆ ಎನ್ನುವಂತಹ ಮಾತುಗಳನ್ನು ಆಡುತ್ತಿದ್ದಾರೆ.

ಪೊಲೀಸರು ತನಿಖೆ ನಡೆಸಿ, ವಿವರಗಳನ್ನು ಬಹಿರಂಗಗೊಳಿಸುವುದಕ್ಕೂ ಮುನ್ನವೇ, ಬಿಜೆಪಿಯವರು ಈ ಘಟನೆಯನ್ನು ತಮ್ಮ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು ವಿಷಾದದ ಸಂಗತಿ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X