- ʼವಿದ್ಯೆಯ ಮೂಲಕ ನಮ್ಮ ಯೋಚನೆ ವೈಚಾರಿಕವಾಗಿರಬೇಕುʼ
- ‘ಕೆಲವರು ಮನುಷ್ಯರ ನಡುವೆ ಬೆಂಕಿ ಇಡುವ ಕೆಲಸ ಮಾಡುತ್ತಾರೆʼ
ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಸಂವಿಧಾನದ ಪೀಠಿಕೆಯನ್ನು ಓದಿಸುವ ಕೆಲಸ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಸಂವಿಧಾನವನ್ನು ಓದಿಕೊಳ್ಳಬೇಕು. ಸಂವಿಧಾನದ ಧ್ಯೇಯೋದ್ದೇಶಗಳನ್ನು ಜಾರಿ ಮಾಡುವ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಮೈಸೂರಿನಲ್ಲಿ ಆದಿಚುಂಚನಗಿರಿ ಶಾಖಾ ಮಠದ ನೂತನ ಕಟ್ಟಡ ಮತ್ತು ಬಿಜಿಎಸ್ ಸಾಂಸ್ಕೃತಿಕ ಭವನ ಉದ್ಘಾಟನೆ ಹಾಗೂ ಉಚಿತ ವಿದ್ಯಾರ್ಥಿ ನಿಲಯವನ್ನು ಸೋಮವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.
“ನೂತನ ವಿದ್ಯಾರ್ಥಿನಿಲಯದಲ್ಲಿ 200 ಜನ ವಿದ್ಯಾರ್ಥಿಗಳಿಗೆ ಓದಲು ಅವಕಾಶ ಕಲ್ಪಿಸಲಾಗಿದ್ದು, ಇನ್ನಷ್ಟು ಭಾಗದಲ್ಲಿ ವಿದ್ಯಾರ್ಥಿನಿಲಯಗಳಿವೆ. ವಿದ್ಯೆ ನೀಡುವುದು ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ. ಸಮಾಜದಲ್ಲಿ ಎಲ್ಲರಿಗೂ ಶಿಕ್ಷಣ ದೊರೆತರೆ ಮಾತ್ರ ಜ್ಞಾನ ಬೆಳೆಯಲು, ಎಲ್ಲರೂ ಸ್ವಾಭಿಮಾನದಿಂದ ಬದುಕಲು ಸಾಧ್ಯ” ಎಂದರು.
“ವಿದ್ಯೆ ಎಂದರೆ ನಮ್ಮ ಯೋಚನೆ, ನಿಲುವುಗಳು, ವೈಜ್ಞಾನಿಕವಾಗಿ, ವೈಚಾರಿಕವಾಗಿರಬೇಕು. ಆಗ ಮಾತ್ರ ವಿದ್ಯೆ ಕಲಿತದ್ದಕ್ಕೆ ಸಾರ್ಥಕವಾಗುತ್ತದೆ. ವಿದ್ಯೆ ಕಲಿತು ಜಾತ್ಯತೀತವಾಗಿ ಯೋಚಿಸುವುದನ್ನು ಬಿಟ್ಟು, ಜಾತಿವಾದಿಗಳಾದರೆ ಏನೂ ಪ್ರಯೋಜನವಿಲ್ಲ. ನಮ್ಮ ದೇಶ ಅನೇಕ ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳನ್ನು ಹೊಂದಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕು. ನಾವೆಲ್ಲರೂ ಆಕಸ್ಮಿಕವಾಗಿ ಯಾವುದೋ ಜಾತಿ, ಧರ್ಮಗಳಲ್ಲಿ ಹುಟ್ಟಿರುತ್ತೇವೆ. ಹಾಗೆಂದು ನಾವು ಮನುಷ್ಯತ್ವವನ್ನು ಮರೆಯಲು ಸಾಧ್ಯವಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಸಮಾಧಾನದ ಕಿಡಿ ಜ್ವಾಲೆಯಾಗಿ ಸರ್ಕಾರವನ್ನು ಸುಡದಿರಲಿ
ಧರ್ಮ ಅಂದರೆ ಬದುಕಿನ ಮಾರ್ಗ
“ಕೆಲವರು ಮನುಷ್ಯ, ಮನುಷ್ಯರಲ್ಲಿ ಬೆಂಕಿ ಇಡುವ ಕೆಲಸ ಮಾಡುತ್ತಾರೆ. ಅದಕ್ಕೆ ಬಲಿಯಾಗದೆ, ಮನುಷ್ಯ, ಮನುಷ್ಯನನ್ನು ಪ್ರೀತಿಸಬೇಕು. ಧರ್ಮ ಅಂದರೆ ಬದುಕಿನ ಮಾರ್ಗ. ಬಸವಾದಿ ಶರಣರು ದಯವೇ ಧರ್ಮದ ಮೂಲವಯ್ಯಾ ಎಂದಿದ್ದಾರೆ. ದಯೆ ಇಲ್ಲದ ಧರ್ಮ ಅದ್ಯಾವುದಯ್ಯ ಎಂದಿದ್ದಾರೆ. ಮನುಷ್ಯ, ಧರ್ಮವಿರುವುದು ಮನುಷ್ಯನ ಒಳಿತಿಗಾಗಿ, ಅವನ ಉತ್ತಮ ಬದುಕಿಗಾಗಿ. ಧರ್ಮಕ್ಕಾಗಿ ಮನುಷ್ಯ ಇಲ್ಲ. ಈ ಬಗ್ಗೆ ನಾವು ಸ್ಪಷ್ಟತೆ ಹೊಂದಬೇಕು” ಎಂದರು.
ಕೆಂಪೇಗೌಡರ ಜಯಂತಿ
“ಕೆಲವೇ ಧಾರ್ಮಿಕ ಕ್ಷೇತ್ರಗಳಲ್ಲಿ ಆದಿಚುಂಚನಗಿರಿ ಕ್ಷೇತ್ರ ಕೂಡ ಬಹಳ ಪ್ರಸಿದ್ಧವಾದ ಕ್ಷೇತ್ರ. ಆ ಜವಾಬ್ದಾರಿಯನ್ನು ಹೊತ್ತು ಧಾರ್ಮಿಕ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ನಿರ್ಮಲಾನಂದನಾಥ ಸ್ವಾಮಿಗಳು ಸಾಧನೆ ಮಾಡಿದ್ದಾರೆ. ನಮ್ಮ ಸರ್ಕಾರ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ತೀರ್ಮಾನ ಮಾಡಿದೆ. ಕೆಂಪೇಗೌಡ ಪ್ರಾಧಿಕಾರವನ್ನು ಕೂಡ ನಮ್ಮ ಸರ್ಕಾರವೇ ಸ್ಥಾಪಿಸಿತು. ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದು ಕೂಡ ನಮ್ಮ ಸರ್ಕಾರವೇ. ಕೆಂಪೇಗೌಡರ ಹೆಸರು ಚಿರಸ್ಥಾಯಿ ಎಂಬ ಕಾರಣದಿಂದ ಕೆಂಪೇಗೌಡ ಜಯಂತಿ ಆಚರಿಸಲು ತೀರ್ಮಾನ ಮಾಡಿದೆವು” ಎಂದರು.
ಎಲ್ಲರಿಗೂ ಶಿಕ್ಷಣದ ಹಕ್ಕು
“ನಾನು ವಕೀಲ ವೃತ್ತಿಯಲ್ಲಿದ್ದಾಗ ಬಾಲಗಂಗಾಧರ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದೆ. ಮಠವನ್ನು ಅಗಾಧವಾಗಿ ಬೆಳೆಸಲು ಶ್ರೀಗುರುಗಳು ಬಹಳ ಶ್ರಮ ವಹಿಸಿದ್ದಾರೆ. ಜನರನ್ನು ಧಾರ್ಮಿಕವಾಗಿ ಜಾಗೃತಗೊಳಿಸಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಶಕ್ತಿಯನ್ನು ತುಂಬಿದರು. 500ಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿ, 1.50 ಲಕ್ಷಕ್ಕೂ ಹೆಚ್ಚು ಮಕ್ಕಳು ಶ್ರೀಮಠದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ” ಎಂದು ಸ್ಮರಿಸಿದರು.