- 15 ವರ್ಷ ಪೂರೈಸಿರುವ 15 ಸಾವಿರ ಸರ್ಕಾರಿ ವಾಹನಗಳು ಗುಜರಿಗೆ: ಸಚಿವ ಎಚ್.ಕೆ ಪಾಟೀಲ್
- ನೀರಾವರಿ ಪಂಪ್ಸೆಟ್ಗೆ ಅಕ್ರಮವಾಗಿ ಐಪಿ ಸೆಟ್ ಅಳವಡಿಸುವುದಕ್ಕೆ ಇನ್ನು ಮುಂದೆ ನಿಷೇಧ
ಕರ್ನಾಟಕದ ಕುಂಚಿಟಿಗ ಜಾತಿಯನ್ನು ಮೈಸೂರು ವಿಶ್ವವಿದ್ಯಾಲಯ ಮಾಡಿರುವ ಕುಂಚಿಟಿಗರ ಕುಲಶಾಸ್ತ್ರೀಯ ಅಧ್ಯಯನ ವರದಿ ಆಧರಿಸಿ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಜಾತಿ ಪಟ್ಟಿಗೆ(ಒಬಿಸಿ) ಸೇರ್ಪಡೆ ಮಾಡುವಂತೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಶುಕ್ರವಾರ ರಾತ್ರಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಭೆಯ ನಂತರ ಕಾನೂನು ಸಚಿವ ಎಚ್.ಕೆ ಪಾಟೀಲ್ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡರು.
ರಾಜ್ಯದ 17 ಜಿಲ್ಲೆಗಳಲ್ಲಿ ಅದರಲ್ಲೂ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕುಂಚಿಟಿಗ ಸಮುದಾಯದ ಹಲವು ವರ್ಷಗಳ ಬೇಡಿಕೆಗೆ ಸಚಿವ ಸಂಪುಟದಲ್ಲಿ ಮನ್ನಣೆ ಸಿಕ್ಕಿದ್ದು, ಕೇಂದ್ರ ಸರ್ಕಾರವು ಹಿಂದುಳಿದ ವರ್ಗಗಳ ಜಾತಿ ಪಟ್ಟಿಗೆ(ಒಬಿಸಿ) ಸೇರ್ಪಡೆ ಮಾಡುವಂತೆ ಶಿಫಾರಸು ಮಾಡಿದೆ.
ರಾಜ್ಯದಲ್ಲಿ ನೋಂದಾಯಿತ ವಾಹನಗಳ ‘ಸ್ಕ್ರ್ಯಾಪಿಂಗ್ ಪಾಲಿಸಿ 2022ನ್ನು ಹಂತಹಂತವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆ, ನಿಗಮ, ಮಂಡಳಿಗಳಲ್ಲಿರುವ 15 ವರ್ಷ ಪೂರೈಸಿರುವ 15,295 ವಾಹನಗಳನ್ನು ಸರ್ಕಾರವು ಗುಜರಿಗೆ ನೀಡಲಿದೆ. ಮೊದಲ ಹಂತದಲ್ಲಿ ಐದು ಸಾವಿರ ವಾಹನಗಳನ್ನು ನಾಶಪಡಿಸಲು ಸಂಪುಟ ಸಭೆ ಅನುಮತಿ ನೀಡಿದೆ.
ಉಳಿದಂತೆ ಸಚಿವ ಸಭೆಯ ಪ್ರಮುಖ ನಿರ್ಣಯಗಳು ಹೀಗಿದೆ:
- ಕೊಡವ ಸಮಾಜದಲ್ಲಿ ಕೊಡಗರು ಎಂದಿತ್ತು, ಕೊಡವ ಎಂದು ಸರಿಪಡಿಸಲಾಗಿದೆ
- ಮಂಗಳೂರು ಮೀನುಗಾರಿಕೆ ಬಂದರಿನ 3ನೇ ಹಂತದ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸಲು 49.50 ಕೋಟಿ ರೂ.ಪರಿಷ್ಕೃತ ಅಂದಾಜಿಗೆ ಅನುಮೋದನೆ.
- ಕೆಎಸ್ಎಸ್ಐಡಿಸಿಯಿಂದ ಚಿತ್ತಾಪುರ, ಕೋಡ್ಕಣಿ, ಕಣಗಾಲ, ಬದನಗುಪ್ಪೆ, ಇಂಡಿಯಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ 144 ಎಕರೆ ಜಮೀನು ಸ್ವಾಧೀನಕ್ಕೆ 166 ಕೋಟಿ ರೂ. ವೆಚ್ಚಕ್ಕೆ ಮಂಜೂರು. ಹುಬ್ಬಳ್ಳಿ ಮತ್ತು ಕಲಬುರಗಿ, ಗದಗದಲ್ಲಿ ಸಹಿತ ಭೂ ಸ್ವಾಧೀನಕ್ಕೆ ಸಮ್ಮತಿ.
- ಲೋಕಾಯುಕ್ತದಲ್ಲಿ ಕೆಲಸ ನಿರ್ವಹಿಸುತ್ತಿರುವ 6 ಸರ್ಕಾರಿ ಅಭಿಯೋಜಕರ ಸೇವೆ ಒಂದು ವರ್ಷ ಮುಂದುವರಿಕೆ ಅನುಮೋದನೆ.
- ಕೆಪಿಎಸ್ಸಿ ಅಧ್ಯಕ್ಷ ಮತ್ತು ಸದಸ್ಯರಿಗೆ ನಿವೃತ್ತಿ ವೇತನ ಕುರಿತ ಕಾಯ್ದೆ ತಿದ್ದುಪಡಿ. ಆ ಹಿನ್ನೆಲೆ ಆರು ವರ್ಷ ಅವಧಿ ಪೂರೈಸಿದ ಅಧ್ಯಕ್ಷರಿಗೆ ಮಾಸಿಕ 67,500 ರೂ, ಸದಸ್ಯರಿಗೆ 61,500 ರೂ. ಪಿಂಚಣಿಯನ್ನು ನೀಡಲು ಒಪ್ಪಿಗೆ.
- ಕಾನೂನು ಮಾಪನ ಇಲಾಖೆಯ ನೇಮಕಾತಿ ನಿಯಮಗಳಿಗೆ ತಿದ್ದುಪಡಿ. ಮೊದಲಿದ್ದಂತಹ 513 ಹುದ್ದೆ 450ಕ್ಕೆ ಇಳಿಕೆಯಾಗಲಿದ್ದು, 40 ಹೊಸ ಹುದ್ದೆ ಸೃಷ್ಟಿಯಾಗಲಿದೆ. 93 ಹುದ್ದೆಗಳು ರದ್ದಾಗುತ್ತಿವೆ.
- ಆಶಾಕಿರಣ ಯೋಜನೆಯಲ್ಲಿ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆಗೆ ಚಿತ್ರದುರ್ಗ, ರಾಯಚೂರು, ಉತ್ತರ ಕನ್ನಡ, ಮಂಡ್ಯ ಜಿಲ್ಲೆಯಲ್ಲಿ ಜಾರಿಗೆ 29.14 ಕೋಟಿ ರೂ. ಯೋಜನೆ.
- ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ 2.17 ಎಕರೆಯಲ್ಲಿ ಪ್ರಯಾಣಿಕರ ತಂಗುದಾಣ 67.62 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.
- ಲೋಕಾಯುಕ್ತ ಸಂಸ್ಥೆಯಲ್ಲಿ ಅಪರನಿಬಂಧಕರು (ವಿಚಾರಣೆಗಳು) ಹುದ್ದೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮೂವರು ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರುಗಳ ಸೇವೆ ಇನ್ನೊಂದು ವರ್ಷದ ಅವಧಿಗೆ ಮುಂದುವರಿಕೆ.
- ನೀರಾವರಿ ಪಂಪ್ಸೆಟ್ಗೆ ಅಕ್ರಮವಾಗಿ ಐಪಿ ಸೆಟ್ ಅಳವಡಿಸುವುದಕ್ಕೆ ನಿಷೇಧ. 2015ರಿಂದ ಈ ವರೆಗೂ ಅಕ್ರಮ ಐಪಿ ಸೆಟ್ಗಳನ್ನು ಸಕ್ರಮ ಮಾಡಿರುವುದಕ್ಕೆ ಸಂಪುಟ ಘಟನೋತ್ತರ ಅನುಮತಿ ನೀಡುವ ಜತೆಗೆ ಇನ್ನು ಮುಂದೆ ಸಕ್ರಮ ಮಾಡುವುದಿಲ್ಲ ಎಂದು ಘೋಷಿಸಿದೆ.
- ಸೌರಶಕ್ತಿ ಚಾಲಿತ ನೀರಾವರಿ ಪಂಪ್ಸೆಟ್ಗಳನ್ನು ಅಳವಡಿಸಿಕೊಳ್ಳಲು ಮುಂದೆ ಬರುವ ರೈತರಿಗೆ ಪ್ರೋತ್ಸಾಹಿಸಲು ಸರ್ಕಾರ ತೀರ್ಮಾನಿಸಿದೆ. ವೈಯಕ್ತಿಕ ಸೌರಶಕ್ತಿ ಚಾಲಿತ ನೀರಾವರಿ ಪಂಪ್ಸೆಟ್ ಅಳವಡಿಸುವುದಕ್ಕೆ ಕೇಂದ್ರ ಸರ್ಕಾರದ ಪಿಎಂ ಕುಸುಮ್ ಬಿ ಯೋಜನೆಯಡಿ ನೆರವು ಒದಗಿಸಲಾಗುತ್ತದೆ. ಪ್ರತಿ ಸೌರಶಕ್ತಿ ಚಾಲಿತ ಪಂಪ್ಸೆಟ್ಗೆ ತಗಲುವ ವೆಚ್ಚದಲ್ಲಿ ಶೇ.50ರಷ್ಟು ಸಹಾಯಧನ ರಾಜ್ಯ ಸರ್ಕಾರ ಭರಿಸಲಿದೆ. ಶೇ.20ರಷ್ಟು ಬಂಡವಾಳವನ್ನು ಫಲಾನುಭವಿ ರೈತ ಭರಿಸಬೇಕು. ಬಾಕಿ ಶೇ.30 ಅನ್ನು ಕೇಂದ್ರ ಸರ್ಕಾರ ತುಂಬಿಕೊಡಲಿದೆ.