- ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಯಾವುದೇ ಕಾಲಮಿತಿ ಇಲ್ಲ
- ನೋಂದಣಿಗೆ ಯಾವುದೇ ಹಣವನ್ನು ಪಾವತಿ ಮಾಡುವಂತಿಲ್ಲ
ಕಾಂಗ್ರೆಸ್‌ನ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಜುಲೈ 19 ರಿಂದ ನೋಂದಣಿ ಆರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವೆ, ಪಡಿತರ ಚೀಟಿಯಲ್ಲಿ ಗುರುತಿಸಿರುವ ಮನೆ ಯಜಮಾನಿಗೆ ಹಣ ಸಂದಾಯ ಆಗಲಿದೆ. ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಬಿಬಿಎಂಪಿ ಕಚೇರಿಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಆಧಾರ್ ಲಿಂಕ್ ಆಗದ ಪಾಸ್ ಬುಕ್ ಗೂ ಹಣ ನೀಡಲಾಗುತ್ತದೆ. ಇದಕ್ಕಾಗಿ ಪಾಸ್ ಬುಕ್ ವೆರಿಫಿಕೇಷನ್ ನಡೆಸಲಾಗುತ್ತದೆ. ತಹಶೀಲ್ದಾರ್ ಇದರ ಪರಿಶೀಲನೆ ನಡೆಸುತ್ತಾರೆ ಎಂದು ಮಾಹಿತಿ ನೀಡಿದರು.
1.28 ಕೋಟಿ ಕುಟುಂಬಗಳಿಗೆ ಹಣ ಸಂದಾಯವಾಗಲಿದೆ. ಎಸ್ ಎಂ ಎಸ್ ಮೂಲಕ ಹಣ ಸಂದಾಯಕ್ಕೂ ಮೊದಲು ಮಾಹಿತಿ ನೀಡಲಾಗುತ್ತದೆ. ನಿಗದಿತ ಸಮಯ ಮೀರಿದ ಫಲಾನುಭವಿಗಳು ಸಂಜೆ 5 ರ ಬಳಿಕ ಹಣ ಪಡೆದುಕೊಳ್ಳಬಹುದು. ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಯಾವುದೇ ಕಾಲಮಿತಿ ಇರುವುದಿಲ್ಲ ಎಂದು ಹೇಳಿದರು.
ಪ್ರತಿ ಫಲಾನುಭವಿಯ ನೋಂದಾವಣಿಗೆ ನಿಗದಿ ಮಾಡಿರುವ ದಿನಾಂಕ ಸಮಯ ಮತ್ತು ಸ್ಥಳದ ಮಾಹಿತಿ ಪಡೆಯಲು ಕ್ರಮ ವಹಿಸಲಾಗುವುದು. 1902 ಸಂಖ್ಯೆಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಎಸ್‌ಎಂಎಸ್ ಮಾಡಿ ಮಾಹಿತಿ ಪಡೆಯಬಹುದು ಎಂದರು.
ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ರಾಷ್ಟ್ರೀಯ ನಾಯಕರನ್ನು ಆಹ್ವಾನ ಮಾಡಲಾಗಿದೆ. ಈ ಸಂಬಂಧ ರಾಷ್ಟ್ರೀಯ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. ಆಗಸ್ಟ್ 16 ಅಥವಾ 17ರಂದು ಯಜಮಾನಿ ಖಾತೆಗೆ ಹಣ ಹಾಕುತ್ತೇವೆ ಎಂದು ತಿಳಿಸಿದರು.
ಆದಾಯ ತೆರಿಗೆ ಪಾವತಿ ವ್ಯಾಪ್ತಿ ಹೊರಗಿರುವ ಸರ್ಕಾರಿ ಪಿಂಚಣಿದಾರರು, ಕುಟುಂಬ ಸದಸ್ಯರಿಗೂ ಗೃಹಲಕ್ಷ್ಮಿ ಯೋಜನೆ ದೊರೆಯಲಿದೆ ಎಂದು ಹೇಳಿದರು.
ಪ್ರಜಾಪ್ರತಿನಿಧಿ (ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂಸೇವಕರು) ಸೇವಕರಿಂದಲೂ ನೋಂದಣಿ ಕಾರ್ಯ ನಡೆಯಲಿದೆ. ನೋಂದಣಿಗೆ ಯಾವುದೇ ಹಣ ಪಾವತಿ ಮಾಡುವಂತಿಲ್ಲ ಎಂದರು.
ಈ ಸುದ್ದಿಓದಿದ್ದೀರಾ? ಲೋಕಸಭಾ ಚುನಾವಣೆ | ಸಂಸದ ತೇಜಸ್ವಿ ಸೂರ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟ ಮಾಜಿ ಸಚಿವ ವಿ ಸೋಮಣ್ಣ
ತಪ್ಪಿತಸ್ಥರ ವಿರುದ್ಧ ಕ್ರಮ
ಕಳಪೆ ಮೊಟ್ಟೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಪರಿಶೀಲನೆ ತಂಡ ನೇಮಕ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಾತೃಪೂರ್ಣ, ಮಾತೃವಂದನಾ ಕಾರ್ಯಕ್ರಮಗಳು ಜಾರಿಯಲ್ಲಿದ್ದು, ಅವುಗಳನ್ನು ಬದಲಾದ ರೂಪದಲ್ಲಿ ಜಾರಿ ಮಾಡುವ ಬಗ್ಗೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.