- ನಮಗೆ ಅಕ್ಕಿ ಕೊಡುವುದಿಲ್ಲ ಎಂದಾದರೆ ನಿಮಗೆ ತೆರಿಗೆ ಕೊಡುವುದಿಲ್ಲ
- ಕೇಂದ್ರ ಸರ್ಕಾರ ತೋರುತ್ತಿರುವ ಮಲತಾಯಿ ಧೋರಣೆ ಸರಿಯಲ್ಲ
ನಿಮಗೆ ತಾಕತ್ ಇದ್ದರೆ ದೇಶದ ಒಕ್ಕೂಟ ವ್ಯವಸ್ಥೆಯಿಂದ ನಮ್ಮನ್ನ ತೆಗೆದು ಹಾಕಿ ನೋಡೋಣ ಎಂದು ಕಾಂಗ್ರೆಸ್ ನ ಶಾಸಕ ಶಿವಲಿಂಗೇಗೌಡ ಬಿಜೆಪಿಯವರನ್ನು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಕ್ಕಿ ಖರೀದಿ ವಿಚಾರದಲ್ಲಿ ರಾಜ್ಯ-ಕೇಂದ್ರ ಸರ್ಕಾರದ ನಡುವಿನ ಜಟಾಪಟಿ ಕುರಿತು ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಕೊಡುತ್ತಿರುವ ಅನ್ನಭಾಗ್ಯ ಜನಪರ ಕಾರ್ಯಕ್ರಮ. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಬಡವರ ಹೊಟ್ಟೆ ಮೇಲೆ ಹೊಡೆಯುವುದರಿಂದ ನಿಮಗೇನು ಸಿಗುತ್ತದೆ ಎಂದು ಕೇಂದ್ರ ಸರ್ಕಾರವನ್ನು ಶಿವಲಿಂಗೇಗೌಡ ಪ್ರಶ್ನಿಸಿದರು.
ಇದೇ ರೀತಿ ಬಿಜೆಪಿಯವರು ತಮ್ಮ ಚಾಳಿ ಮುಂದುವರೆಸಿಕೊಂಡು ಹೋದರೆ ಲೋಕಸಭಾ ಚುನಾವಣೆಯಲ್ಲಿ ಅವರು ಅನುಭವಿಸಬೇಕಾಗುತ್ತದೆ ಎಂದು ಶಿವಲಿಂಗೇಗೌಡ ಎಚ್ಚರಿಕೆ ನೀಡಿದರು.
ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾದವರೇ ನಾವು ಅಕ್ಕಿ ಕೊಡುತ್ತೇವೆ ಎಂದಿದ್ದರು. ನಾವು ಅವರ ಮಾತಿನಂತೆಯೇ ಅಕ್ಕಿ ಕೊಡುವ ಘೋಷಣೆ ಮಾಡಿದ್ದೆವು. ಈ ಹಿನ್ನೆಲೆಯಲ್ಲಿ ಸಂಸ್ಥೆ ನಿಗದಿ ಮಾಡಿದ ದರದಲ್ಲೇ ಅಕ್ಕಿ ಕೊಡಿ ಅಂತ ಕೇಳಿದ್ದೇವೆ. ಪುಕ್ಕಟ್ಟೆ ನಾವೇನು ಕೊಡಿ ಅಂತ ಕೇಳಿಲ್ಲಎಂದು ಶಿವಲಿಂಗೇಗೌಡರು ಹೇಳಿದರು.
ಕೆಲವೊಂದು ತಾಂತ್ರಿಕ ಸಮಸ್ಯೆ ಇದ್ದರೆ ಒಪ್ಪಿಕೊಳ್ಳುತ್ತೇವೆ. ಹಾಗೆಂದ ಮಾತ್ರಕ್ಕೆ ನೀವು ಅಕ್ಕಿ ಕೊಡುವುದೇ ಇಲ್ಲ ಎಂದರೆ ಹೇಗೆ? ಹಾಗಾದರೆ ನಿಮ್ಮ ಒಕ್ಕೂಟ ವ್ಯವಸ್ಥೆಯಿಂದ ಕರ್ನಾಟಕ ರಾಜ್ಯವನ್ನು ತೆಗೆದು ಹಾಕಿ ನೋಡೋಣ ಎಂದು ಶಿವಲಿಂಗೇಗೌಡ ಸವಾಲು ಹಾಕಿದರು.
ಕೇಂದ್ರ ಸರ್ಕಾರ ರಾಜ್ಯಗಳ ಕ್ಷೇಮಾಭಿವೃದ್ಧಿಗೆ ಸ್ಪಂದಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಅದನ್ನು ಬಿಟ್ಟು ಯೋಜನೆಗೆ ಅಗತ್ಯ ಅಕ್ಕಿಯನ್ನು ಕೊಡುವುದೇ ಇಲ್ಲ ಎಂದರೆ ಹೇಗೆ ಎಂದ ಶಿವಲಿಂಗೇಗೌಡರು, ಹಾಗಿದ್ದ ಮೇಲೆ ನಮ್ಮಿಂದ ನೀವು ತೆಗೆದುಕೊಳ್ಳುವ ತೆರಿಗೆಯನ್ನು ವಾಪಸ್ ಕೊಡಿ ನೋಡೋಣ ಎಂದರು.
ಈ ಸುದ್ದಿ ಓದಿದ್ದೀರಾ?:ಸಿ ಟಿ ರವಿ ಅವರೇ ಇಲ್ಲಿದೆ ನೋಡಿ ಎಫ್‌ಸಿಐ ಕಮಿಟ್‌ಮೆಂಟ್ ಪತ್ರ: ಸಿದ್ದರಾಮಯ್ಯ ಟ್ವೀಟ್
ಫುಡ್ ಸೆಕ್ಯೂರಿಟಿ ಆ್ಯಕ್ಟ್ ತಂದಿದ್ದು ನಮ್ಮ ಮನಮೋಹನ್ ಸಿಂಗ್, ಯಾರೂ ಹಸಿವಿನಿಂದ ಇರಬಾರದು ಎಂದು ತಂದಿರುವ ಫುಡ್ ಆ್ಯಕ್ಟ್ ಇದು. ಎಫ್‌ಸಿಐನಲ್ಲಿ 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇದೆ, ಆದರೂ ಈಗ ಅಕ್ಕಿ ಇಲ್ಲ ಎನ್ನುತ್ತಿದ್ದೀರಾ? ಹಾಗಿದ್ದ ಮೇಲೆ ಈ ಬಗ್ಗೆ ತನಿಖೆ ಮಾಡಿಸಿ ನೋಡೋಣ ಎಂದು ಶಿವಲಿಂಗೇಗೌಡರು ಕೇಳಿದರು.
ಅಕ್ಕಿ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಸರಿಯಲ್ಲ. ರಾತ್ರಿ ಅಕ್ಕಿ ಕೊಡುತ್ತೇವೆ ಎಂದವರು, ಬೆಳಗ್ಗೆ ಅಕ್ಕಿ ಇಲ್ಲ ಅಂದ್ರೆ ಹೇಗೆ? ಪುಡ್ ಸೆಕ್ಯುರಿಟಿ ಆ್ಯಕ್ಟ್ ತಂದಿದ್ದು ಯಾಕೆ? ಎಂದು ಪ್ರಶ್ನಿಸಿದರು.