ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪದಡಿ ಬಂಧನಕ್ಕೆ ಒಳಗಾಗಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಅವರು ಬಚಾವ್ ಆಗಲು ಪ್ರಭಾವಿ ರಾಜಕಾರಣಿಗೆ ಫೋನ್ ಕರೆ ಮಾಡಿದ್ದಾರೆ ಎನ್ನಲಾಗಿರುವ ಸಂಗತಿಯನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅಲ್ಲಗಳೆದಿದ್ದಾರೆ.
ಬೆಂಗಳೂರನಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, “ನನಗೆ ಈ ಬಗ್ಗೆ ಮಾಹಿತಿ ಇಲ್ಲ. ನನಗೆ ಗೊತ್ತಿದ್ದ ಹಾಗೆ ಅವರು ಪ್ರಯತ್ನ ಮಾಡಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಏನು ಕ್ರಮ ತೆಗೆದುಕೊಳ್ಳಲು ಅವಕಾಶವಿದೆಯೋ ಪೊಲೀಸರು ಅದನ್ನು ತೆಗೆದುಕೊಳ್ಳುತ್ತಾರೆ” ಎಂದರು.
ದರ್ಶನ್ ಬಂಧನ ವಿಚಾರದಲ್ಲಿ ಸರ್ಕಾರದಿಂದ ನಾವ್ಯಾರು ಮಧ್ಯಪ್ರವೇಶ ಮಾಡಲ್ಲ. ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ.ಕೊಲೆಯಲ್ಲಿ ಭಾಗಿಯಾಗಿದ್ದಾರೆ ಅಂತ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಯಾವ ಯಾವ ವಿಚಾರ ಹೊರಗೆ ಬರುತ್ತೆ ಅದನ್ನಾದರಿಸಿ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ದರ್ಶನ್ ಅವರಿಗೂ ಕಾನೂನು ಒಂದೇ, ಪರಮೇಶ್ವರವರಿಗೂ ಕಾನೂನು ಒಂದೇ” ಎಂದರು.
“ಕೊಲೆಯಾದ ರೇಣುಕಾಸ್ವಾಮಿ ಕುಟುಂಬದ ಪರವಾಗಿ ಸರ್ಕಾರ ಏನು ಮಾಡಬಹುದು ಅನ್ನೋದನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.
“ಎಲ್ಲವನ್ನು ಸಿಬಿಐಗೆ ಕೊಡುವ ಅಗತ್ಯ. ಈಗ 13 ಮಂದಿಯನ್ನು ಅರೆಸ್ಟ್ ಮಾಡಿದ್ದೇವೆ. ಯಾರು ಮಾಡಿದ್ದಾರೆ? ಯಾಕೆ ಮಾಡಿದ್ದಾರೆ ಹೆಚ್ಚು ಕಡಿಮೆ ಎಲ್ಲ ವಿಚಾರಗಳು ಗೊತ್ತಾಗಿದೆ. ಹಾಗಾಗಿಬೇರೆ ಏಜೆನ್ಸಿಗಳಿಗೆ ತನಿಖೆಗೆ ಕೊಡುವ ಅಗತ್ಯ ಇಲ್ಲ” ಎಂದರು.
“ದರ್ಶನ್ ಮೇಲೆ ರೌಡಿ ಶೀಟ್ ಓಪನ್ ಮಾಡೋ ವಿಚಾರ ನಾನು ಮಾಧ್ಯಮಗಳಲ್ಲಿ ನೋಡಿದೆ. ದರ್ಶನ್ ಹಲವು ಪ್ರಕರಣಗಳಲ್ಲಿ ಅವರು ಭಾಗಿಯಾಗಿದ್ದಾರೆ ಅಂತ. ಇದನ್ನು ಪೊಲೀಸರು ತನಿಖೆ ಮಾಡುತ್ತಾರೆ. ಪೊಲೀಸರೇ ಸಮರ್ಥರು. ನಮ್ಮನ್ನು ಕೇಳಿ ಸೆಕ್ಷನ್ ಹಾಕೋದಿಲ್ಲ” ಎಂದು ಹೇಳಿದರು.
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ವಿಚಾರವಾಗಿ ಮಾತನಾಡಿ, “ಅದು ತನಿಖೆ ನಡೆಯುತ್ತಿದೆ. ಅಂತಿಮವಾಗಿ ಬೇಕಾಗಿರುವುದು ಎವಿಡೆನ್ಸ್. ಅದನ್ನೆಲ್ಲಾ ಮಾಡ್ತಾ ಇದ್ದಾರೆ” ಎಂದು ತಿಳಿಸಿದರು.
