ಸಿಎಂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯನವರು ಮಾತನಾಡಿರುವ ವಿಡಿಯೋ ದಾಖಲೆ ಇಟ್ಟುಕೊಂಡು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾಡಿರುವ ‘ಹಣಕ್ಕಾಗಿ ವರ್ಗಾವಣೆ ದಂಧೆ’ ಆರೋಪಕ್ಕೆ ಸ್ಪಷ್ಟೀಕರಣ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಹಣಕ್ಕಾಗಿ ವರ್ಗಾವಣೆ ಮಾಡಿದ್ದು ಎಚ್‌ಡಿಕೆ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಸವಾಲೆಸೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋ, ವೀಡಿಯೊ ಕುರಿತಂತೆ ಮಾತನಾಡಿದ ಸಿಎಂ, ‘ಶಾಲಾ ಕಟ್ಟಡಗಳನ್ನು ಸಿಎಸ್ಆರ್ ನಿಧಿಯಿಂದ ನಿರ್ಮಿಸಲಾಗುತ್ತಿದೆ. ಸಚಿವ ಎಚ್.ಸಿ.ಮಹದೇವಪ್ಪ ಅವರು ಅದನ್ನು ಪಟ್ಟಿಯಲ್ಲಿ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಚಿವ ಮಹದೇವಪ್ಪ ಅವರು ಐದು ಹೆಸರುಗಳಿರುವ ಪಟ್ಟಿ ಕೊಡುತ್ತಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿ, ನನ್ನ ರಾಜಕೀಯ ಜೀವನದಲ್ಲಿ ಹಣಕ್ಕಾಗಿ ಒಂದೇ ಒಂದು ವರ್ಗಾವಣೆಯನ್ನು ಮಾಡಿರುವುದನ್ನು ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಸಿಎಸ್ಆರ್ ನಿಧಿಯಡಿ ಶಾಲೆಗಳ ನಿರ್ಮಾಣ ಪಟ್ಟಿಯಲ್ಲಿ ಐದು ಹೆಸರು ಇದ್ದರೆ ಅದು ವರ್ಗಾವಣೆಯೇ? ಎಂದು ಮುಖ್ಯಮಂತ್ರಿಗಳು, ಕುಮಾರಸ್ವಾಮಿಯವರ ಆರೋಪಕ್ಕೆ ಸಂಬಂಧಿಸಿ ಮರುಪ್ರಶ್ನೆ ಹಾಕಿದ್ದಾರೆ.
ಅಲ್ಲದೇ, ಈ ಬಗ್ಗೆ ಫೇಸ್‌ಬುಕ್‌ನಲ್ಲೂ ಪೋಸ್ಟ್ ಹಾಕಿರುವ ಸಿಎಂ ಸಿದ್ದರಾಮಯ್ಯ, ಅಧಿಕಾರ ಇದ್ದಾಗ ಲಂಚ-ಕಮಿಷನ್ ವ್ಯವಹಾರದಲ್ಲಿ ಮೂರುಹೊತ್ತು ಮುಳುಗೇಳುತ್ತಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಕಾಮಾಲೆ ಕಣ್ಣಿಗೆ ನೋಡಿದ್ದು, ಕೇಳಿದ್ದೆಲ್ಲದರಲ್ಲಿಯೂ ಲಂಚದ ವ್ಯವಹಾರಗಳೇ ಕಾಣಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ವರುಣ ಕ್ಷೇತ್ರದ ಶಾಲೆಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ನಡೆದಿರುವ ನನ್ನ ಮತ್ತು ನನ್ನ ಮಗನ ನಡುವಿನ ಪೋನ್ ಸಂಭಾಷಣೆಗೆ ವರ್ಗಾವಣೆಯಲ್ಲಿ ವಸೂಲಿಯ ಕತೆ ಕಟ್ಟಿ ಕುಮಾರಸ್ವಾಮಿ ಕುಣಿದಾಡುತ್ತಿದ್ದಾರೆ. ಕುಮಾರಸ್ವಾಮಿಯವರ ಈ ಕ್ಷುಲಕ ನಡವಳಿಕೆ ಬಗ್ಗೆ ನಾನು ಕನಿಕರವನ್ನಷ್ಟೇ ವ್ಯಕ್ತಪಡಿಸಬಲ್ಲೆ ಎಂದು ಸಿಎಂ ತಿಳಿಸಿದ್ದಾರೆ.
‘ವರುಣ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರು ಮತ್ತು ಕೆಡಿಪಿ ಸದಸ್ಯರಾಗಿರುವ ಮಾಜಿ ಶಾಸಕ ಡಾ.ಯತೀಂದ್ರ ಅವರು ಆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಸಿಎಸ್‌ಆರ್ ಹಣವನ್ನು ಬಳಸಿಕೊಂಡು ಕ್ಷೇತ್ರದಲ್ಲಿರುವ ಸರ್ಕಾರಿ ಶಾಲೆಗಳ ಸುಧಾರಣೆಗೆ ತೊಡಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ಫಲಾನುಭವಿ ಶಾಲೆಗಳ ಪಟ್ಟಿ ಬಗ್ಗೆ ನನ್ನ ಜೊತೆ ಮಾತನಾಡಿದ್ದರು. ಕ್ಷೇತ್ರದ ಜನರ ಎದುರಿನಲ್ಲಿಯೇ ನಡೆದಿರುವ ಈ ಸಂಭಾಷಣೆಯನ್ನು ವರ್ಗಾವಣೆಗಾಗಿ ವಸೂಲಿ ಎಂಬ ಅರ್ಥ ಬರುವ ಹಾಗೆ ತಿರುಚಿರುವ ಕುಮಾರಸ್ವಾಮಿ ಅವರು ತಮ್ಮ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ’ ಎಂದು ಕಿಡಿಕಾರಿದ್ದಾರೆ.
‘ಕುಮಾರಸ್ವಾಮಿಯವರು ರಾಜಕೀಯಕ್ಕೆ ಪ್ರವೇಶ ಮಾಡಿದ ದಿನದಿಂದ ನಿರಂತರವಾಗಿ ಕಪೋಲ ಕಲ್ಪಿತ ಆರೋಪಗಳ ಮೂಲಕ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ಬಾಯಿಗೆ ಬಂದಂತೆ ಮಾತನಾಡುತ್ತಾ ಬರುತ್ತಿದ್ದುದನ್ನು ರಾಜ್ಯದ ಜನ ಕಂಡಿದ್ದಾರೆ. ಈಗ ತಂದೆಯಾದ ನನಗೆ ನೋವು ಕೊಡಬೇಕೆಂಬ ಏಕೈಕ ದುರುದ್ದೇಶದಿಂದ ಡಾ.ಯತೀಂದ್ರ ಅವರನ್ನು ಗುರಿಯಾಗಿಸಿಕೊಂಡು ಪ್ರತಿನಿತ್ಯ ಸುಳ್ಳು ಆರೋಪಗಳನ್ನು ಹರಿಬಿಡುತ್ತಿರುವುದು ಕುಮಾರಸ್ವಾಮಿಯವರ ವಿಕೃತ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಶಾಸಕ ಸ್ಥಾನವನ್ನೇ ತ್ಯಾಗ ಮಾಡಿದರೂ ಜನಸೇವೆಯಿಂದ ಹಿಂದೆ ಸರಿಯದ ಡಾ.ಯತೀಂದ್ರ ಅವರು ವರುಣ ಕ್ಷೇತ್ರದ ಅಭಿವೃದ್ದಿಯಲ್ಲಿ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರನ್ನು ನೈತಿಕವಾಗಿ ಕುಗ್ಗಿಸುವ ದುರುದ್ದೇಶದಿಂದ ಕುಮಾರಸ್ವಾಮಿಯವರು ಪ್ರತಿನಿತ್ಯ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ.
ತಮ್ಮ ಪತ್ನಿ ಮತ್ತು ಮಗ ಕೂಡಾ ರಾಜಕೀಯ ಕ್ಷೇತ್ರದಲ್ಲಿದ್ದಾರೆ ಎನ್ನುವುದನ್ನು ಹೆಚ್.ಡಿ.ಕುಮಾರಸ್ವಾಮಿ ಮರೆತಂತಿದೆ. ನಾನು ಕುಮಾರಸ್ವಾಮಿಯವರ ಮಟ್ಟಕ್ಕೆ ಇಳಿದು ಅವರ ರೀತಿ ಅವರ ಪತ್ನಿ ಮತ್ತು ಮಗನ ಬಗ್ಗೆ ಮಾತನಾಡಲಾರೆ. ಕನಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಾದರೂ ಮಗನಿಗೆ ಬುದ್ಧಿ ಹೇಳಿ ರಾಜ್ಯದ ಜನರಿಂದ ಮಗ ಛೀಮಾರಿಗೆ ಈಡಾಗುತ್ತಿರುವುದನ್ನು ತಪ್ಪಿಸಬೇಕೆಂದು ಕೋರುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಹಾಕಿರುವ ಸುದೀರ್ಘವಾದ ಪೋಸ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.